ADVERTISEMENT

ಗ್ರಾಮೀಣ ಆರ್ಥಿಕತೆಗೆ ಚೈತನ್ಯ ದೀರ್ಘಾವಧಿ ಕ್ರಮಗಳನ್ನೂ ಯೋಜಿಸಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 20:01 IST
Last Updated 6 ಜುಲೈ 2018, 20:01 IST
   

ಮುಂಗಾರು ಹಂಗಾಮಿನ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವು ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ರೈತರಲ್ಲಿ ಹೊಸ ಭರವಸೆ ತುಂಬಲಿದೆ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (ಸಿಎಸಿಪಿ) ಉತ್ಪಾದನಾ ವೆಚ್ಚದ ಮಾಹಿತಿ ಆಧರಿಸಿ ಇದೇ ಮೊದಲ ಬಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ.

ಸಾಲದ ಸುಳಿಗೆ ಸಿಲುಕಿ ಹೊರ ಬರಲು ದಾರಿ ತೋರದೆ ಅನಿವಾರ್ಯವಾಗಿ ಆತ್ಮಹತ್ಯೆಗೆ ಶರಣಾಗುವ ರೈತರ ಹಿತ ಕಾಪಾಡುವ ಬಹುದೊಡ್ಡ ಪ್ರಯತ್ನ ಇದಾಗಿದೆ. ಬಿತ್ತನೆ ಸಂದರ್ಭದಲ್ಲಿಯೇ ಈ ನಿರ್ಧಾರ ಪ್ರಕಟವಾಗಿರುವುದರಿಂದ ಕೃಷಿ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಲಿದೆ ಎಂಬ ಆಶಯವಿದೆ.

ಗ್ರಾಮೀಣ ಆರ್ಥಿಕತೆಗೆ ಇದರಿಂದ ಖಂಡಿತವಾಗಿಯೂ ಚೇತರಿಕೆ ದೊರೆಯಲಿದೆ. ಕೃಷಿ ಉತ್ಪಾದನೆ ಮೇಲೆ ರೈತರು ಮಾಡುವ ಒಟ್ಟಾರೆ ವೆಚ್ಚ ಕಳೆದು ಶೇ 50ರಷ್ಟು ಲಾಭ ತಂದುಕೊಡುವ ಬಗ್ಗೆ ಈ ಹಿಂದೆ ನೀಡಲಾಗಿದ್ದ ಭರವಸೆ ಈಡೇರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ADVERTISEMENT

ಭತ್ತ, ಜೋಳ, ಶೇಂಗಾ, ಸಜ್ಜೆ, ಹತ್ತಿ ಒಳಗೊಂಡಂತೆ 14 ಬೆಳೆಗಳ ಎಂಎಸ್‌ಪಿಯನ್ನು ಉತ್ಪಾದನಾ ವೆಚ್ಚದ ಸರಾಸರಿ ಶೇ 50ರಷ್ಟು ಹೆಚ್ಚಿಸಲಾಗಿದೆ. ರೈತರ ಕೈಸೇರಲಿರುವ ₹ 15 ಸಾವಿರ ಕೋಟಿಯು ಅವರ ಆದಾಯ ಮತ್ತು ಖರೀದಿ ಸಾಮರ್ಥ್ಯ ಏರಿಕೆಗೆ ನೆರವಾಗಲಿದೆ. ಗ್ರಾಮೀಣ ವಲಯವೂ ಸೇರಿದಂತೆ ಒಟ್ಟಾರೆ ಆರ್ಥಿಕತೆ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಲಿದೆ.

ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಸಾಧ್ಯತೆ ಕಂಡುಬರಲಿಕ್ಕಿಲ್ಲ. ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ. ಬೇಳೆಕಾಳು ಉತ್ಪಾದನೆ ಹೆಚ್ಚಿಸಲು ಮತ್ತು ಆಮದು ಅವಲಂಬನೆ ತಗ್ಗಿಸಲು ನೆರವಾಗುವ ಈ ಕ್ರಮ ಸ್ವಾಗತಾರ್ಹವಾಗಿದೆ. ಆದರೆ, ಅವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಲಾಗಿದೆ ಎನ್ನುವ ಟೀಕೆಗಳಿಗೆ ಸರ್ಕಾರ ಸಮಜಾಯಿಷಿ ನೀಡಬೇಕಾಗಿದೆ.

ಮುಂಗಾರು ಫಸಲಿಗೆ ಮಾತ್ರ ಈ ಬೆಲೆ ಸೀಮಿತವಾಗಿರುವುದೂ ಇದರ ಅತಿದೊಡ್ಡ ಮಿತಿಯಾಗಿದೆ. ಸಮಗ್ರ ಉತ್ಪಾದನಾ ವೆಚ್ಚ ಆಧರಿಸಿ ಎಂಎಸ್‌ಪಿ ಇರಲಿದೆ ಎನ್ನುವ ಸೂತ್ರವನ್ನು ಸಮರ್ಪಕವಾಗಿ ಪಾಲಿಸಿಲ್ಲ ಎಂಬ ಟೀಕೆಗಳಿವೆ. ತೊಗರಿ ಉತ್ಪಾದನಾ ವೆಚ್ಚದ ಬಗ್ಗೆ ಅಸಮರ್ಪಕ ಮಾಹಿತಿ ಆಧರಿಸಿ ತೀರ್ಮಾನಕ್ಕೆ ಬರಲಾಗಿದೆ.

ರಾಜ್ಯದ ತೊಗರಿ ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಕ್ಕಿಲ್ಲ ಎಂಬ ದೂರುಗಳಿವೆ. ಜೊತೆಗೆ ನೀರನ್ನು ಹೆಚ್ಚಾಗಿ ಅವಲಂಬಿಸಿರುವ ಫಸಲು ಬೆಳೆಯುವ ರೈತರಿಗೆ ಆದ್ಯತೆ ನೀಡಿರುವುದು ಮತ್ತೊಂದು ಸಮಸ್ಯೆ ಎಂಬಂಥ ವಾದಗಳೂ ಇವೆ.

ಕೃಷಿ ಕ್ಷೇತ್ರ ಎದುರಿಸುವ ಸವಾಲುಗಳಿಗೆ ಬೆಂಬಲ ಬೆಲೆಯೊಂದೇ ಪರಿಹಾರವಲ್ಲ. ದೀರ್ಘಾವಧಿಯಲ್ಲಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಎಂಎಸ್‌ಪಿಗೆ ಪೂರಕವಾಗಿ ಮಾರುಕಟ್ಟೆ ಸುಧಾರಣಾ ಕ್ರಮ, ಹೂಡಿಕೆ ಹೆಚ್ಚಳದಂತಹ ಕ್ರಮಗಳನ್ನೂ ಕೈಗೊಳ್ಳಬೇಕಾಗಿದೆ.

ಫಸಲು ಖರೀದಿ ವ್ಯವಸ್ಥೆಯ ವ್ಯಾಪ್ತಿ ವಿಸ್ತರಣೆ ಆಗುವವರೆಗೆ ಎಂಎಸ್‌ಪಿ ಹೆಚ್ಚಳ ಹೆಚ್ಚು ಪರಿಣಾಮಕಾರಿ ಆಗಲಾರದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರ ಆರಂಭಿಸುವುದನ್ನೂ ಕಾರ್ಯಗತಗೊಳಿಸಬೇಕಾಗಿದೆ. ಖರೀದಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸದಿದ್ದರೆ ಈ ಪ್ರಯತ್ನ ನಿರೀಕ್ಷಿತ ಫಲ ನೀಡಲಾರದು.

ಅಂತಹ ಪರಿಸ್ಥಿತಿಯಲ್ಲಿ ಈ ಕ್ರಮ ಹಣದುಬ್ಬರ ಹೆಚ್ಚಳಕ್ಕೆ ಇಂಬು ನೀಡಲಿದೆ. ಸಿಎಸಿಪಿ ಶಿಫಾರಸಿನಂತೆ, ರೈತರಿಗೆ ಎಂಎಸ್‌ಪಿ ದರದಲ್ಲಿ ಮಾರಾಟ ಮಾಡುವ ಹಕ್ಕು ಒದಗಿಸುವ ಕಾಯ್ದೆಯನ್ನು ಆದ್ಯತೆ ಮೇರೆಗೆ ಜಾರಿಗೆ ತರಬೇಕಾಗಿದೆ. ಆಹಾರ ಕೊರತೆಯಿಂದ ಸ್ವಾವಲಂಬನೆ ಮತ್ತು ಹೆಚ್ಚುವರಿ ಉತ್ಪಾದನೆ ಮಟ್ಟಕ್ಕೆ ಕೃಷಿ ಕ್ಷೇತ್ರ ಬೆಳವಣಿಗೆ ಸಾಧಿಸಿದ್ದರೂ ರೈತರ ಸಂಕಷ್ಟ ದೂರವಾಗದಿರುವುದು ವಿಪರ್ಯಾಸ. ಈಗ ಇಂತಹ ಸುಧಾರಣಾ ಕ್ರಮಗಳು ಕಣ್ಣೊರೆಸುವ ತಂತ್ರವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.