ADVERTISEMENT

ಅಪಘಾತಗಳ ಹಿಂದೆ...

ಧನಂಜಯ ಜೀವಾಳ ಬಿ.ಕೆ ಮೂಡಿಗೆರೆ
Published 22 ಜುಲೈ 2015, 19:30 IST
Last Updated 22 ಜುಲೈ 2015, 19:30 IST

ಬೆಳಿಗ್ಗೆ ದಿನಪತ್ರಿಕೆ ಕೈಗೆತ್ತಿಕೊಂಡರೆ ಸಾಕು, ಅಪಘಾತದ ಸುದ್ದಿಗಳು  ಭೀತಿಯುಂಟುಮಾಡುತ್ತವೆ. ಮನೆಯಿಂದ ಹೊರಬಂದು ರಸ್ತೆಗಿಳಿಯುವುದು ಎಂದರೆ, ನಮ್ಮ ಮೇಲೆ ನಾವೇ ಬೆಟ್ಟಿಂಗ್ ಕಟ್ಟಿಕೊಂಡಂತೆ ಎಂಬಂತಾಗಿದೆ. ವಾಹನಗಳು ಪರಸ್ಪರ ಗುದ್ದಿ, ಇಲ್ಲವೇ ಉರುಳಿ ಅಪಘಾತಗಳು ಸಂಭವಿಸುತ್ತವೆ. ಸ್ಥಳ ತಪಾಸಣೆ, ಮಹಜರು ನಡೆಯುತ್ತದೆ. ಮೃತಪಟ್ಟವರ ಮನೆಯವರು ಗೋಳಾಡುತ್ತಾರೆ. ಅದನ್ನು ನೋಡಿದವರು ಮರುಗುತ್ತಾರೆ. ಕೆಲವು ಪ್ರಕರಣಗಳಲ್ಲಿ ಸರ್ಕಾರ ಪರಿಹಾರ ನೀಡುತ್ತದೆ. ವಿಮಾ ಕಂಪೆನಿಗಳು ಹಣ ನೀಡಿ ಕೈತೊಳೆದುಕೊಳ್ಳುತ್ತವೆ.

ಅಲ್ಲಿಗೆ ಮುಗಿಯಿತು. ಮತ್ತೆಲ್ಲಾದರೂ ಈ ಸಾವಿನ ಸರಣಿ ತನ್ನ ಸರಪಳಿಗೆ ಮತ್ತೊಂದು ಕೊಂಡಿಯನ್ನು ಸೇರಿಸಿಕೊಳ್ಳುತ್ತಾ ಸಾಗುತ್ತದೆ. ಹೀಗೆ ಅಪಘಾತಗಳಿಂದ ಅಮೂಲ್ಯವಾದ ಜೀವಹಾನಿ ಮತ್ತು ಆಸ್ತಿ-ಪಾಸ್ತಿ ಹಾನಿ  ಆಗುವುದನ್ನು ನೋಡುತ್ತಲೇ ಇರುತ್ತೇವೆ. ಭೀಕರ ಕಾಯಿಲೆಗಳಿಂದ ಸಾಯುವುದಕ್ಕಿಂತ ಹೆಚ್ಚು ಮಾನವ ಸಂಪನ್ಮೂಲ ಅಪಘಾತಗಳಲ್ಲಿ ನಾಶವಾಗುತ್ತಿದೆ. ಆದರೂ ಇತರ ಕಾಯಿಲೆಗಳ ತಡೆ/ ನಿರ್ಮೂಲನೆಗೆ ನೀಡುತ್ತಿರುವಷ್ಟು ಗಮನವನ್ನು ಸರ್ಕಾರ ಸುರಕ್ಷಿತ ಸಂಚಾರಕ್ಕೆ ನೀಡುತ್ತಿಲ್ಲ.

ಸಾಮಾನ್ಯವಾಗಿ ಅಪಘಾತಗಳಿಗೆ ಚಾಲಕನ ಅಜಾಗರೂಕತೆ ಮತ್ತು ವಾಹನದ ತಾಂತ್ರಿಕ ವೈಫಲ್ಯ ಕಾರಣ ಎಂದುಕೊಳ್ಳುತ್ತೇವೆ. ಆದರೆ ಅಪಘಾತಕ್ಕೆ  ಮೇಲ್ನೋಟಕ್ಕೆ ಅಗೋಚರವಾದ ಇನ್ನೂ ಹಲವು ಕಾರಣಗಳಿರುವುದು ಹೆಚ್ಚಿನವರ ಗಮನಕ್ಕೆ ಬರುವುದೇ ಇಲ್ಲ. ಇಂತಹ ಕಾರಣಗಳ ಹಿಂದೆ ಇರುವವರು ತಮಗೆ ಅದು ಸಂಬಂಧವೇ ಇಲ್ಲದ ವಿಷಯ ಎಂಬಂತೆ ನಾಜೂಕಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ರಸ್ತೆ ಸಂಚಾರ ಇಲಾಖೆ ಚಾಲನಾ ಪರವಾನಗಿ ಕೊಡುವುದು ಮತ್ತು ವಾಹನ ನೋಂದಣಿ ಮಾಡುವುದಷ್ಟೇ ತನ್ನ ಕೆಲಸ ಎಂದುಕೊಂಡಿದೆ. ವಾಹನದ ಚಾಲನಾ ಸಾಮರ್ಥ್ಯ ಮತ್ತು ಉದ್ದೇಶಗಳನ್ನು ನಿಯಂತ್ರಿಸುವ ಕೆಲಸವನ್ನು ಅದು ಮಾಡುತ್ತಿಲ್ಲ. ಸರಕು ಸಾಗಣೆ ವಾಹನಗಳಲ್ಲಿ ಮನುಷ್ಯರನ್ನು ಕೃಷಿ ಮತ್ತು ನಿರ್ಮಾಣ ಕಾರ್ಯಗಳಿಗೆ ಹಂದಿ- ಕೋಳಿಗಳಂತೆ ತುಂಬಿಕೊಂಡು ಹೋಗುವುದು, ಆಟೊ ರಿಕ್ಷಾಗಳಲ್ಲಿ ಶಾಲಾ ಮಕ್ಕಳನ್ನು ಮತ್ತು ಕೂಲಿಯವರನ್ನು ಉಸಿರಾಡಲೂ ಕಷ್ಟಪಡುವಂತೆ  ತುರುಕಿಕೊಂಡು ಹೋಗುವುದು ಇಲಾಖೆಯ ಕಣ್ಣಿಗೆ ಕಾಣುವುದೇ ಇಲ್ಲ.

ಸುಸ್ಥಿತಿಯಲ್ಲಿರದ ವಾಹನಗಳು, ಪರವಾನಗಿ ಪಡೆಯದ ಚಾಲಕರು, ಮದ್ಯಪಾನ ಮಾಡಿ ವಾಹನ ಚಾಲನೆ, ವಾಹನದ ಡಿಮ್/ಡಿಪ್ ಸೌಲಭ್ಯ ಬಳಸದಿರುವುದು, ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ರಸ್ತೆಗಳು, ರಸ್ತೆ ಉಬ್ಬುಗಳು, ಅಪಾಯಕಾರಿ ತಿರುವುಗಳ  ಅಸಮರ್ಪಕ ನಿರ್ವಹಣೆ, ರಸ್ತೆಗೆ ತೀರಾ ಹತ್ತಿರದಲ್ಲಿರುವ ವಿದ್ಯುತ್/ ದೂರವಾಣಿ ಕಂಬಗಳು, ಮರಗಳು, ಕೊಳವೆ ಬಾವಿಗಳು, ಅನಧಿಕೃತ ಕಟ್ಟಡಗಳು, ತಾತ್ಕಾಲಿಕ ವ್ಯಾಪಾರಿ ಟೆಂಟ್‌ಗಳು, ತಳ್ಳುಗಾಡಿಗಳು, ಅಸಮರ್ಪಕ ಸೂಚನಾ ಫಲಕಗಳು, ತಿರುವಿನಾಚೆಯ ರಸ್ತೆ ಕಾಣಿಸದಂತೆ ನಿರ್ಮಾಣವಾಗಿರುವ ಕಟ್ಟಡಗಳು, ಅಸಮರ್ಪಕ ಟ್ರಾಫಿಕ್ ಸಿಗ್ನಲ್‌ಗಳು, ದ್ವಿಚಕ್ರ ವಾಹನದಲ್ಲಿ ಸ್ಟಂಟ್ ಮಾಡುವ ಅಪಾಯಕಾರಿ ಪ್ರವೃತ್ತಿ, ತಡೆಗೋಡೆಯಿಲ್ಲದ ಕೆರೆ ಏರಿ, ಕೇಬಲ್/ಪೈಪ್‌ಲೈನ್‌ಗಾಗಿ ಪದೇ ಪದೇ ರಸ್ತೆ ಅಗೆಯುವ ಕೆಟ್ಟಚಾಳಿ, ಅರ್ಥಹೀನ ಫ್ಲೆಕ್ಸ್, ಕಟೌಟ್, ಬ್ಯಾನರ್‌ ಸಂಸ್ಕೃತಿ... ಇತ್ಯಾದಿ ಕಾರಣಗಳಿಂದಲೂ ಅಪಘಾತ ಸಂಭವಿಸುತ್ತದೆ.

ಇನ್ನು ಕೆಲವೊಮ್ಮೆ ರಸ್ತೆಗಳು, ಸೇತುವೆಗಳು, ವಿಭಜಕಗಳೂ ಅಪಘಾತಗಳಿಗೆ ಕಾರಣವಾಗುತ್ತಿವೆ. ಎಲ್ಲ ರೀತಿಯ  ಒತ್ತಡಗಳನ್ನೂ ತಾಳಿಕೊಂಡು ಸದೃಢವಾಗಿ ಇರಬೇಕೆಂಬ ಉದ್ದೇಶದಿಂದ, ಸಾಕಷ್ಟು ಹಣ ನಿಗದಿಪಡಿಸಿಕೊಂಡೇ ಇವುಗಳನ್ನು ನಿರ್ಮಿಸಲಾಗಿರುತ್ತದೆ. ಆದರೂ ಅವು ಬೇಗನೇ ಹಾಳಾಗುವುದಕ್ಕೆ ಅಧಿಕ ಮಳೆ ಅಥವಾ ವಾಹನಗಳ ಸಂಚಾರದ ಒತ್ತಡ ಅತಿಯಾಯಿತು ಎಂದೆಲ್ಲ ಸಬೂಬು ಹೇಳಲಾಗುತ್ತದೆ.

ಅವುಗಳ ಗುಣಮಟ್ಟ ಕಳಪೆಯಾಗಿದ್ದರೆ, ತಿರುವು ಮತ್ತು ಕ್ರಾಸ್‌ಗಳು ಅವೈಜ್ಞಾನಿಕವಾಗಿದ್ದರೆ ಆಗಲೂ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿ ಈ ಕೆಲಸ ಮಾಡಿದ ಇಲಾಖೆಯೇ ಇದಕ್ಕೆ ನೇರ ಹೊಣೆ ಆಗಬೇಕಾಗುತ್ತದೆ. ಪುರುಸೊತ್ತಾದಾಗಲೆಲ್ಲ ತುಂಡು ಗುತ್ತಿಗೆ ಮೂಲಕ ರಸ್ತೆ ಬದಿ ಅಗೆಸುವ ದೂರವಾಣಿ ಇಲಾಖೆ, ವಿವೇಚನಾ ರಹಿತವಾಗಿ ವಿದ್ಯುತ್ ಕಂಬ ನೆಡುವ ವಿದ್ಯುತ್‌ ಇಲಾಖೆ ಸಹ ಒಂದಲ್ಲ ಒಂದು ರೀತಿಯಲ್ಲಿ ಅಪಘಾತಗಳ ಹಿಂದೆ ಇರುತ್ತವೆ.

ಇನ್ನು ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ನಿರ್ಮಿಸುವ ಸಾರ್ವಜನಿಕ ಕಾಮಗಾರಿಗಳು ಸಂಚಾರ ನಿಯಮಗಳಿಗೆ ಪೂರಕ ಹಾಗೂ ವೈಜ್ಞಾನಿಕವಾಗಿವೆಯೇ, ಬಳಕೆದಾರ ಸ್ನೇಹಿ ಆಗಿವೆಯೇ ಎಂಬುದನ್ನು  ಖಾತರಿಪಡಿಸಿಕೊಳ್ಳಬೇಕು.  ಕೆಲವೊಮ್ಮೆ ಸಂಚಾರ ನಿಯಂತ್ರಣ ಕ್ರಮಗಳು ಸಹ ಅಪಘಾತಗಳಿಗೆ ಕಾರಣವಾಗುವ ವಿಪರ್ಯಾಸವೂ ಇದೆ.

ಅಪಘಾತದಲ್ಲಿ ಸತ್ತ ಚಾಲಕನ ಮೇಲೆ, ಅಥವಾ ಸ್ವಂತ ಬುದ್ಧಿಯಿಲ್ಲದ ವಾಹನದ ಮೇಲೆ ತಪ್ಪುಗಳನ್ನು ಹೊರಿಸಿ ತಮ್ಮ ಕರ್ತವ್ಯಲೋಪದಿಂದ ನುಣುಚಿಕೊಳ್ಳುವ ಸಂಬಂಧಪಟ್ಟ ಇಲಾಖೆಗಳ ನೌಕರರಿಗಿರುವ ಹೊಣೆಗಾರಿಕೆಯನ್ನು ಪ್ರತಿ ಅಪಘಾತದ ಸಂದರ್ಭದಲ್ಲೂ ಸ್ವತಂತ್ರ ತನಿಖಾ ಆಯೋಗದ ಮೂಲಕ ಪರಿಶೀಲಿಸಬೇಕು. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇದರಿಂದ ಕರ್ತವ್ಯದೆಡೆಗಿನ ಬದ್ಧತೆ, ಪ್ರಾಮಾಣಿಕತೆ ಹಾಗೂ  ಹೊಣೆಗಾರಿಕೆಯನ್ನು ಜಾಗೃತಗೊಳಿಸಿದಂತಾಗುತ್ತದೆ. 

ಇಂದು ಯಾರಿಗೋ ಆಗುವ ಅಪಘಾತ ನಾಳೆ ನಮಗೆ, ಈ ಇಲಾಖೆಗಳ ಸಿಬ್ಬಂದಿಗೆ, ಇಲ್ಲವೇ ಅವರ ಬಂಧು-ಬಾಂಧವರಿಗೆ ಆಗುವುದಿಲ್ಲ ಎಂಬ  ಖಾತರಿ ಇಲ್ಲ. ಏಕೆಂದರೆ ಅದು ಅಪಘಾತ! ಮುಂದೆ ಸಿಗುವ ಟೋಲ್‌ಗೇಟ್‌, ಅಲ್ಲಿ ಯಾರು ಎಷ್ಟು ಸುಂಕ ಕೊಡಬೇಕು, ಯಾರು ಕೊಡದೇ ಹೋಗಬಹುದು ಎಂಬುದಕ್ಕೆಲ್ಲ ಕಿಲೊಮೀಟರ್ ಮುಂಚೆಯೇ ಸಾಕಷ್ಟು  ಬೋರ್ಡ್‌ಗಳನ್ನು ಹಾಕಿರುತ್ತಾರೆ.  ಆದರೆ ರಸ್ತೆ ಸುರಕ್ಷೆಗೆ ಸಂಬಂಧಿಸಿದ ಸೂಚನೆಗಳಿಗೆ ಎಷ್ಟು ಫಲಕಗಳಿವೆ?

ಚೆಕ್‌ಪೋಸ್ಟ್‌ಗಳಲ್ಲಿ, ಪೆಟ್ರೋಲ್ ಪಂಪ್‌ಗಳಲ್ಲಿ, ಟೋಲ್‌ಗೇಟ್‌ಗಳಲ್ಲಿ ವಾಹನದ ದಾಖಲೆ ಹಾಗೂ ಚಾಲಕರ ಪರವಾನಗಿ ಪರಿಶೀಲಿಸುವ, ವಾಹನದ ಧಾರಣಾ ಸಾಮರ್ಥ್ಯದ (ಜನ ಮತ್ತು ಸರಕು) ತಪಾಸಣೆ ಆಗಬೇಕು. ಹೆದ್ದಾರಿಗಳಲ್ಲಿ ಪ್ರತಿ 30 ಕಿ.ಮೀ.ಗೆ ಒಬ್ಬರಂತೆ ರಸ್ತೆ ಸುರಕ್ಷಾ ಅಧಿಕಾರಿಗಳನ್ನು ನೇಮಿಸಬೇಕು.  ಅವರು ಹಗಲು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವಂತೆ ಆಗಬೇಕು.

ತಮ್ಮ ವ್ಯಾಪ್ತಿಯ ರಸ್ತೆಯಲ್ಲಿ ಸಂಚಾರ ಸುರಕ್ಷೆಗೆ ಅಗತ್ಯವಾದ ಎಲ್ಲ ಮೂಲಸೌಕರ್ಯ ಮತ್ತು ವ್ಯವಸ್ಥೆಯನ್ನೂ ನೋಡಿಕೊಳ್ಳುವ ಉಸ್ತುವಾರಿಯನ್ನು ಅವರಿಗೆ ನೀಡಬೇಕು. ಆ  ಅಧಿಕಾರಿಯ ಗಸ್ತು ವ್ಯಾಪ್ತಿಯಲ್ಲಿ ಸಂಭವಿಸುವ ಅಪಘಾತಗಳಿಗೆ ಅವರನ್ನೇ ಉತ್ತರದಾಯಿ ಆಗಿಸಬೇಕು. ಇಂತಹ ಕ್ರಮಗಳ ಮೂಲಕ ಅಪಘಾತಗಳನ್ನು ತಡೆಯಬಹುದಾದ ವ್ಯವಸ್ಥೆಯನ್ನು ತುರ್ತಾಗಿ ಜಾರಿಗೆ ತರಲೇಬೇಕು. ಈ ಮೂಲಕ ರಸ್ತೆ ಸುರಕ್ಷೆ, ನಿರ್ಮಾಣ, ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ವೃತ್ತಿಪರತೆಯನ್ನು ಕಾಣಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT