ADVERTISEMENT

ಉಡುಪಿಯ ‘ಇಫ್ತಾರ್’ ಸ್ತುತ್ಯರ್ಹ

ಎಸ್.ಆರ್.ವಿಜಯಶಂಕರ
Published 28 ಜೂನ್ 2017, 20:28 IST
Last Updated 28 ಜೂನ್ 2017, 20:28 IST
ಉಡುಪಿಯ ‘ಇಫ್ತಾರ್’ ಸ್ತುತ್ಯರ್ಹ
ಉಡುಪಿಯ ‘ಇಫ್ತಾರ್’ ಸ್ತುತ್ಯರ್ಹ   

ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಮುಸ್ಲಿಮರನ್ನು ಆಹ್ವಾನಿಸಿ ಆತಿಥ್ಯ ನೀಡಿದ್ದನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ವಿರೋಧಿಸಿದ ವರದಿ ಓದಿ ದುಃಖವಾಯಿತು (ಪ್ರ.ವಾ. ಜೂನ್‌ 27).

‘ನನ್ನ ಧರ್ಮ ಪಾಲಿಸಿದ್ದೇನೆ’ ಎಂದು ಪ್ರತಿಕ್ರಿಯೆ ನೀಡಿದ ಪೇಜಾವರ ಸ್ವಾಮೀಜಿ ಸ್ತುತ್ಯರ್ಹ ಕೆಲಸ ಮಾಡಿದ್ದಾರೆ. ಅವರು ಇಫ್ತಾರ್ ಕೂಟ ನಡೆಸಿರುವುದು ಯಾಕೆ ಸರಿ ಎಂಬುದಕ್ಕೆ ನನಗೆ ಅನಿಸಿದ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.ವಿ

ಭಜನಾಪೂರ್ವ ದಕ್ಷಿಣ ಕನ್ನಡ, ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಜಿಲ್ಲೆಯಾಗಿತ್ತು. ಈಚಿನ ಕೆಲವು ವರ್ಷಗಳಲ್ಲಿ ಆ ಸೌಹಾರ್ದವನ್ನು ಉದ್ದೇಶಪೂರ್ವಕ ಕಲಕಲಾಗಿದೆ. ಉಳ್ಳಾಲದ ಮುಸ್ಲಿಮರ ದರ್ಗಾಕ್ಕೆ ಹಿಂದೂಗಳೂ ಹರಕೆ ಹೇಳುವುದು ಅಲ್ಲಿಂದ ನಲವತ್ತು ಮೈಲು ದೂರದ ನನ್ನ ವಿಟ್ಲ ಪಡ್ಕೂರು ಗ್ರಾಮದಲ್ಲಿ 1970ರ ದಶಕದಲ್ಲಿ ಸಾಮಾನ್ಯ ವಿಚಾರವಾಗಿತ್ತು. ದನಕರುಗಳ ಆರೋಗ್ಯಕ್ಕಾಗಿ ಕುಂಬಳೆ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹರಕೆ ಹೊತ್ತಂತೆ ಉಳ್ಳಾಲದ ದರ್ಗಾಕ್ಕೂ ಹರಕೆ ಹೊರುತ್ತಿದ್ದರು.

ADVERTISEMENT

ನಾನು ಉಡುಪಿಯಲ್ಲಿದ್ದಾಗ 1980ರಲ್ಲಿ ನಡೆದ ಒಂದು ಘಟನೆ; ಸಾಮಾಜಿಕ ಕಾರ್ಯಕರ್ತ ಯು.ಆರ್. ಜಯವಂತರ ಬಳಿ ಕೌಟುಂಬಿಕ ದೂರು ಕೊಡುವುದಕ್ಕಾಗಿ ಬಂದಿದ್ದ ವೃದ್ಧೆಯೊಬ್ಬಳು ತುಳುವಿನಲ್ಲಿ ‘ಯಾನು ಸಾಯಿಬ್ಬರೆ ಪಡಿಗು ಉಂತುದಾಂಡಲ ಜೀವನ ಕಳೆವೆ (ನಾನು ಸಾಯಿಬ್ಬರು ಎಲ್ಲರಿಗೂ ನೀಡುವ ಉಚಿತ ಅಕ್ಕಿ ಪಡೆದಾದರೂ ಜೀವನ ಕಳೆದೇನು) ಎಂದಳು.

ಸಾಯಿಬ್ಬರ ಪಡಿ ಎನ್ನುವುದು ಅಲ್ಲಿ ಬಳಕೆ ಮಾತು. ಹಾಜಿ ಅಬ್ದುಲ್ಲ ಸಾಹೇಬರು ಜಾತಿ, ಧರ್ಮಗಳ ಭೇದವಿಲ್ಲದೆ ಬಡವರಿಗೆ ಧರ್ಮಾರ್ಥವಾಗಿ ಊಟಕ್ಕೆ ಅಕ್ಕಿಯನ್ನು (ಪಡಿ) ಪ್ರತಿದಿನ ನೀಡುತ್ತಿದ್ದರು. ಇದೇ ಹಾಜಿ ಅಬ್ದುಲ್ಲ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಜಾಗ, ಹಣ ಎರಡನ್ನೂ ದಾನ ಮಾಡಿದರು.

ಉಡುಪಿಯ ಹಿಂದೂ ಧಾರ್ಮಿಕ ಸಂಸ್ಥೆಗಳು ಕಷ್ಟದಲ್ಲಿದ್ದಾಗ ಸಾಲ ನೀಡಿದ ಮುಸ್ಲಿಮರಿದ್ದರು. ಉಡುಪಿಯ ಹಳೆ ಭೂಮಿ ದಾಖಲೆಗಳಲ್ಲಿ ಮಠದ ಹತ್ತಿರದ ಜಾಗಗಳು ನವಾಯತ (ಮುಸ್ಲಿಂ) ಕೇರಿಗಳೆಂದು ದಾಖಲಾಗಿದೆ. ಇದರ ಅರ್ಥ ನೂರಾರು ವರ್ಷಗಳ ಕಾಲ ಉಡುಪಿಯಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು, ಬ್ರಾಹ್ಮಣರು ಸಹ ಬಾಳ್ವೆ ನಡೆಸಿದ್ದಾರೆ. 800 ವರ್ಷಗಳ ಹಿಂದೆ ರಾಘವೇಂದ್ರ ಮಠ ಸ್ಥಾಪನೆಗೆ ಮುಸ್ಲಿಂ ಸುಲ್ತಾನರು ಜಾಗ ನೀಡಿದ್ದಾರೆ. ‘ತಮ್ಮ ಗುರುಗಳು ಹಾಜಿ ಅಬ್ದುಲ್ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ’ ಎಂದು ಪೇಜಾವರ ಸ್ವಾಮಿಗಳು ಹೇಳಿದ ಮಾತುಗಳನ್ನು ನಾವು ಗೌರವಿಸಬೇಕಾಗಿದೆ.

ಇದೇ ರೀತಿ ಮುಸ್ಲಿಮರು ಕೂಡಾ ಅನೇಕ ಹಿಂದೂ ಸಂಸ್ಥೆ, ದೇವಾಲಯಗಳಿಗೆ ಹರಕೆ ಹೇಳುತ್ತಿದ್ದರು. ನಾನಿದ್ದ ಹಳ್ಳಿಯಲ್ಲಿ ಅನೇಕ ಮುಸ್ಲಿಂ ಮನೆಗಳಿದ್ದವು. ಊರ ಭೂತಕೋಲ ನಡೆಯುವಾಗ ಮುಸ್ಲಿಮರು ಹಾಗೂ ಮುಸ್ಲಿಂ ಹೆಂಗಸರು ಕಾಣಿಕೆ ನೀಡುತ್ತಿದ್ದರು. ಯಾರಾದರೂ ಹಿಂದೂಗಳ ಕೈಯಲ್ಲಿ ಸ್ವಲ್ಪ ಹಣ ಕೊಟ್ಟು ಅದನ್ನು ಕಾಣಿಕೆ ಹಾಕಲು ಹೇಳುತ್ತಿದ್ದರು. ನಮ್ಮ ಊರಿನ ಮುಸ್ಲಿಮರು ಧರ್ಮಸ್ಥಳದ ದೇವರಿಗೂ ಕಾಣಿಕೆ ಹಾಕುತ್ತಿದ್ದುದು ಇದೆ. ಆ ಹಣವನ್ನು ಹೆಚ್ಚಾಗಿ ಹಿಂದೂಗಳ ಕೈಯಲ್ಲಿ ಕೊಟ್ಟು ದೇವರ ಹುಂಡಿಗೆ ಹಾಕಿಸುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣೆ ಕಾನೂನು ಬಂದಾಗ ಲಕ್ಷಾಂತರ ಮಂದಿ ಭೂ ಮಾಲೀಕರಾದರು. ಆಗ ಟ್ರಿಬ್ಯೂನಲ್‌ಗಳಲ್ಲಿ, ಕೋರ್ಟ್‌ ಕಚೇರಿಗಳಲ್ಲಿ ಒಕ್ಕಲು ಮಸೂದೆಯ ಹಕ್ಕಿಗಾಗಿ ಮುಸ್ಲಿಮರು ಹಾಗೂ ಹಿಂದೂಗಳು ಒಂದಾಗಿ ಹೋರಾಡುತ್ತಿದ್ದರು. ಮುಸ್ಲಿಮರು ಸಂಪೂರ್ಣ ನಂಬಿಕೆಯಿಂದ ಹಿಂದೂ ವಕೀಲರುಗಳನ್ನು ನೇಮಿಸಿಕೊಳ್ಳುತ್ತಿದ್ದರು. ಐದು ಸೆಂಟ್ಸ್ ಭೂಮಿಗಾಗಿ ನಮ್ಮ ಊರಿನ ಮುಸ್ಲಿಮನೊಬ್ಬ ತನ್ನ ಹೆಂಡತಿಯ ಚಿನ್ನ ಮಾರಿ ಸಾಲ ಮಾಡಿ ಹೈಕೋರ್ಟಿನಲ್ಲಿ ಭೂಮಾಲೀಕರ ವಿರುದ್ಧ ಹೋರಾಡಿದ. ತಾನು ಭೂಮಿಯನ್ನು ಪ್ರೀತಿಸುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ?

ಮಧ್ವ ಪರಂಪರೆಯ ಯತಿಗಳು ಮುಸ್ಲಿಮರ ಜತೆ ಮೊದಲಿನಿಂದಲೂ ಉತ್ತಮ ಸ್ನೇಹ, ಸೌಹಾರ್ದ ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳುವುದರ ಮೂಲಕ ಪೇಜಾವರ ಸ್ವಾಮಿಗಳು ಆ ಊರಿನ ನಿಜವಾದ ಚರಿತ್ರೆಯನ್ನು ಜ್ಞಾಪಿಸಿ ಕೊಟ್ಟಿದ್ದಾರೆ. ಅಜೆಂಡಾ ಒಂದನ್ನೇ ಹಿಡಿದುಕೊಂಡು ಇನ್ನೊಂದು ಊರಿನಿಂದ ಬರುವವರಿಗೆ ಆ ಊರಿನ ಸೌಹಾರ್ದದ ಚರಿತ್ರೆ ತಿಳಿದಿರುವುದಿಲ್ಲ. ಉಡುಪಿಯ ಕೋಮು ಸೌಹಾರ್ದವನ್ನು ಇಫ್ತಾರ್ ಕೂಟದ ಮೂಲಕ ನೆನಪಿಸಿ ಪೇಜಾವರ ಸ್ವಾಮೀಜಿ ದೇವರು ಮೆಚ್ಚುವ ಮಾನವ ಪ್ರೀತಿಯ ಕೆಲಸ ಮಾಡಿದ್ದಾರೆ. ಈ ಉತ್ತಮ ಕೆಲಸಕ್ಕೆ ಗೋಪಾಲಕನಾದ ಶ್ರೀ ಕೃಷ್ಣ ಪರಮಾತ್ಮನೂ ಆಶೀರ್ವದಿಸುತ್ತಾನೆ ಎಂಬ ನಂಬುಗೆ ನನ್ನದು.

ನಾಡಿಗೇ ಮಾದರಿ
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರು ಮುಸ್ಲಿಂ ಬಾಂಧವರನ್ನು ಇಫ್ತಾರ್ ಸ್ನೇಹಕೂಟಕ್ಕೆ ಆಹ್ವಾನಿಸಿರುವುದು ನಿಜಕ್ಕೂ ಒಂದು ದೊಡ್ಡ ಹೆಜ್ಜೆ. ಇದರಿಂದಾಗಿ ತಾನು ಎದುರಿಸಬೇಕಾದ ವಿರೋಧಗಳ ಎಲ್ಲ ಅರಿವಿದ್ದೂ ತನ್ನ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡ ಅವರ ರೀತಿ ನಾಡಿಗೇ ಒಂದು ಮಾದರಿ.

ಸ್ವಾಮೀಜಿಯವರು ತನ್ನ ಪ್ರೀತಿಯ ಕೈಚಾಚಿ ಅವರನ್ನು ಮಠದೊಳಗೆ ಬರಮಾಡಿಕೊಂಡದ್ದಷ್ಟೇ ಅಲ್ಲ, ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಲಾಗಾಯ್ತಿನಿಂದ ಇದ್ದ ನಂಟಿನ ಪರಂಪರೆಯನ್ನು ನೆನಪಿಸಿಕೊಂಡಿದ್ದಾರೆ. ಮಠದ ಈ ಸಮಾರಂಭದ ಚಿತ್ರದಲ್ಲಿ ಅತಿಥಿಗಳನ್ನು ನಿಷ್ಕಲ್ಮಶ ಕಿರುನಗೆಯಿಂದ ಕೂಡಿ ಮಾಗಿದ ವಾತ್ಸಲ್ಯಭರಿತ ಅಜ್ಜಿಯಂತೆ ಉಪಚರಿಸುವ ಪೇಜಾವರರ ಚಿತ್ರ ಒಂದು ಅರ್ಥಪೂರ್ಣ ಸಂದೇಶವನ್ನು ಸಮಾಜಕ್ಕೆ ರವಾನಿಸಿದೆ.

ಸ್ವಾಮೀಜಿಯ ಕರೆಯ ಮೇರೆಗೆ ಮುಸ್ಲಿಂ ಬಾಂಧವರೂ ಬಂದರು, ಉಪಾಹಾರ ಸೇವಿಸಿದರು. ಭಕ್ತಿಯಿಂದ ನಮಾಜು ಮಾಡಿದರು. ಇದೂ ದೊಡ್ಡದೇ. ಪ್ರೀತಿ ಸ್ನೇಹದ ಬೆಲೆ ಅರಿತು, ಯಾವ ಕಹಿಯಿಲ್ಲದೆ ಬಂದ ಈ ಅತಿಥಿಗಳದೂ ಕೂಡ ದೊಡ್ಡ ಮಾದರಿಯೇ.

ಸಾಮಾಜಿಕ ಸ್ನೇಹ ಸೌಹಾರ್ದದ ಬಾಳುವೆಗಾಗಿ ನಡೆದ  ಈ ಹೊಸ ಪರಿಯ ಪೀಠಿಕೆ ಕಂಡು ಅದನ್ನು ಹಂಬಲಿಸುವ ಎಲ್ಲರ ಮನ ತುಂಬಿದೆ. ಕಣ್ಣು ಕಂಬನಿಗೂಡಿದೆ.

ಹಾಜಿ ಅಬ್ದುಲ್ಲಾ ಸಾಹೇಬ್ ಅವರಂತಹ ಉದಾರದಾನಿ ಧೀಮಂತರು ಮಠದ ಇತಿಹಾಸವಷ್ಟೇ ಅಲ್ಲ, ಉಡುಪಿಯ ಇತಿಹಾಸದೊಂದಿಗೇ ಬೆರೆತು ಹೋಗಿದ್ದಾರೆ. ಬದುಕಿದ್ದಾಗಲೇ ದಂತಕತೆಯಂತಿದ್ದ ಅವರು ಅಕ್ಷರಶಃ ಸ್ವಚ್ಛ ಸಮಾಜದ  ಹರಿಕಾರರಾಗಿ ನಮ್ಮ ಸ್ಮೃತಿಯಲ್ಲಿ ಇವತ್ತಿಗೂ ಅಚ್ಚಳಿಯದೆ ಇದ್ದಾರೆ.  ಸಮಾಜವನ್ನು ನಡೆಸುತ್ತಿರುವುದು ಎಲ್ಲ ಸಮುದಾಯಗಳ ಪರಸ್ಪರ ಅವಲಂಬನೆ ಹೊಂದಾಣಿಕೆ ಪ್ರೀತಿ ಸ್ನೇಹಗಳೇ ಹೊರತು ಅವಿವೇಕಿ ಜಗಳ ದೊಂಬಿಗಳಲ್ಲವಷ್ಟೆ?

ಇವತ್ತು ಸಾಮಾಜಿಕ ಮನೋಸ್ವಾಸ್ಥ್ಯಕ್ಕಾಗಿ ದುಡಿಯುವಲ್ಲಿ, ಜನರ ಮನ ಒಲಿಸಿ ಒಂದಾಗಿಸುವಲ್ಲಿ ಎಲ್ಲಾ ಮತಗಳ ಧರ್ಮಗುರುಗಳು ಪಾತ್ರ/ಹೊಣೆ ವಹಿಸಲೇಬೇಕಾದ ಪರಿಸ್ಥಿತಿ ಇದೆ. ಮತಗಳ ಮೂಲ ಧ್ಯೇಯವೇ ಪ್ರೀತಿ ಸೌಹಾರ್ದ ಕಾರುಣ್ಯವಲ್ಲವೆ?

ಅದೃಷ್ಟವಶಾತ್ ಮುಸ್ಲಿಂ ಧರ್ಮಗುರುಗಳು ಯಾರೂ ತಮ್ಮ ಸಮುದಾಯದವರು ಮಠಕ್ಕೆ ತೆರಳಿ ನಮಾಜು ಮಾಡಿದ್ದನ್ನು ವಿರೋಧಿಸಿಲ್ಲ. ಪೇಜಾವರರ ನಡೆಯನ್ನು ವಿರೋಧಿಸುವವರ ಹೇಳಿಕೆಗಳು ದಿಗ್ಭ್ರಮೆಗೊಳಿಸುತ್ತಿವೆ. ಇದು - ‘ವಿರೋಧವು ಅಳಿಯಲೇ ಬಾರದು,  ಸದಾಕಾಲ ಜಾರಿಯಲ್ಲಿರಬೇಕು’ ಎಂಬ ಜೀವವಿರೋಧಿ ಆಕಾಂಕ್ಷೆಯೆ?ಶಾಂತಿಯುತ ಸಹಬಾಳ್ವೆಯ ಹಂಬಲವಿದ್ದವರಾರೂ ಸ್ವಾಮೀಜಿಯ ಈ ಕಾರ್ಯವನ್ನು ವಿರೋಧಿಸಲಾರರು.
–ವೈದೇಹಿ, ಮಣಿಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.