ADVERTISEMENT

ಕಳೆದುಹೋದ ಅಪೂರ್ವ ಅವಕಾಶ

ಅಂಬೇಡ್ಕರ್‌ ಸಮಾವೇಶ... ಕೆಲವರಿಂದ, ಕೆಲವರಿಗಾಗಿ ಆಯೋಜಿಸಿದ ಕಾರ್ಯಕ್ರಮವೇ?

ಡಿ.ಎಸ್.ನಾಗಭೂಷಣ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ಅಂಬೇಡ್ಕರ್‌ ಅವರನ್ನು ಕುರಿತ ಪುನರಾವಲೋಕನದ ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶ ವಿಜೃಂಭಣೆಯಿಂದ ಜರುಗಿತು. ಇದರ ಬಗೆಗಿನ ವರದಿಗಳನ್ನು ಓದಿದಾಗ ಇದು ಕೆಲವರಿಂದ ಕೆಲವರಿಗಾಗಿ ಆಯೋಜಿಸಲಾಗಿದ್ದ ಕೆಲವರ ಕಾರ್ಯಕ್ರಮವೆಂದು ಯಾರಿಗಾದರೂ ಅನ್ನಿಸಿದ್ದರೆ ಆಶ್ಚರ್ಯವಿಲ್ಲ.

ಇದಕ್ಕೆ ಹೋಗಿ ಬಂದ ಕೆಲ ಗೆಳೆಯರ ಪ್ರಕಾರ ಇದರ ಆಯೋಜನೆಯಲ್ಲಿ ಶ್ರೇಣೀಕರಣ ಮತ್ತು ಅಸ್ಪೃಶ್ಯತೆಯೂ ಸೇರಿದಂತೆ ಜಾತಿ ಪದ್ಧತಿಯ ಎಲ್ಲ ಲಕ್ಷಣಗಳೂ ಅಂತರ್ಗತವಾಗಿದ್ದವು.

ಏಕೆಂದರೆ ಇದಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತಲ್ಲದೆ ಪ್ರವೇಶ ಪಡೆದವರಲ್ಲೂ ತರತಮಗಳನ್ನು ನಿಗದಿಪಡಿಸಲಾಗಿತ್ತು. ಇನ್ನು, ಈ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದವರಾಗಿದ್ದರೂ, ಸದ್ಯದ ವ್ಯವಸ್ಥೆಯ ಟೀಕಾಕಾರರೆಂಬ ಕಾರಣಕ್ಕೆ ಹಲವರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿತ್ತು.

ADVERTISEMENT

ಇದೆಲ್ಲವೂ ಈ ಮಹಾ ಕಾರ್ಯಕ್ರಮದ ಹಿಂದೆ ಕೆಲಸ ಮಾಡಿದವರು ಅಂಬೇಡ್ಕರ್ ಅವರನ್ನು ಅರಿತಿದ್ದ ಬಗೆಯ ಬಗ್ಗೆ ಎಲ್ಲವನ್ನೂ ಹೇಳುತ್ತದೆ. ಮುಖ್ಯವಾಗಿ, ಅಂಬೇಡ್ಕರ್ ಅವರ ಇಡೀ ಸಾಮಾಜಿಕ-ರಾಜಕೀಯ ದರ್ಶನದ ನಿರ್ಣಾಯಕ ಅಂಶವಾಗಿದ್ದ ಜಾತಿ ವಿನಾಶ ಆಶಯ ಈ ಕಾರ್ಯಕ್ರಮದಲ್ಲಿ ಎಲ್ಲೂ ಚರ್ಚೆಗೆ ಬರಲಿಲ್ಲ ಮತ್ತು ಈ ಕಾರ್ಯಕ್ರಮದ ಕೊನೆಯಲ್ಲಿ ಪ್ರಕಟಿಸಲಾಗಿರುವ ‘ಬೆಂಗಳೂರು ಘೋಷಣೆ’ ಎಂಬ ದಾಖಲೆಯಲ್ಲಿಯೂ ನೆಪ ಮಾತ್ರಕ್ಕೂ ಇದರ ಪ್ರಸ್ತಾಪವಿಲ್ಲ. ಇದಕ್ಕೆ ಇಡೀ ಕಾರ್ಯಕ್ರಮವನ್ನು ಸದ್ಯದ ರಾಜಕೀಯ ಅಗತ್ಯವೊಂದನ್ನು ಪೂರೈಸಲೆಂದೇ ರೂಪಿಸಿದ್ದುದು ಕಾರಣವೆಂದು ತೋರುತ್ತದೆ.

ಕೊನೆಯ ದಿನದ ಪ್ರಶ್ನೋತ್ತರದ ಸಂದರ್ಭದಲ್ಲಿ ಕೇಳುಗರೊಬ್ಬರ ‘ಜಾತಿ ವಿನಾಶಕ್ಕಾಗಿ ನಿಮ್ಮ ಕಾರ್ಯಕ್ರಮಗಳೇನು’ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಯವರು, ‘ಜಾತಿ ವ್ಯವಸ್ಥೆ ನಾಶ ಮಾಡಲು ಕೆಳವರ್ಗದ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬಬೇಕು.

ಜಾತಿವ್ಯವಸ್ಥೆ ಸಡಿಲಗೊಂಡಾಗ ಸಮಾಜ ಚಲನಶೀಲಗೊಳ್ಳುತ್ತದೆ’ ಎಂದಿದ್ದಾರೆ. ಇದು ಸಾಮಾಜಿಕ ನ್ಯಾಯ ಪರಿಕಲ್ಪನೆ ಕುರಿತಂತೆ ದಶಕಗಳಿಂದ ಹೇಳುತ್ತಾ ಬಂದಿರುವ ಗಿಳಿಪಾಠವಾಗಿದ್ದು, ಇದಕ್ಕೂ ವಾಸ್ತವದಲ್ಲಿ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೂ ಮತ್ತು ಅವುಗಳ ಪರಿಣಾಮಗಳಿಗೂ ಯಾವುದೇ ಸಂಬಂಧವಿಲ್ಲದ್ದಾಗಿದೆ.

ವಾಸ್ತವವಾಗಿ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸರ್ಕಾರಗಳು ಈ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಕಾರ್ಯಕ್ರಮಗಳನ್ನು ಹೇಗೆ ಜಾರಿಗೊಳಿಸುತ್ತಿವೆ ಎಂದರೆ, ಈ ಸಬಲೀಕರಣಗಳು ಆಯಾ ಜಾತಿಗಳು ತಮ್ಮೊಳಗೇ ಚಲನಶೀಲವಾಗಿ ಒಳವರ್ಗಗಳನ್ನು ಸೃಷ್ಟಿಸುತ್ತಿವೆಯೇ ಹೊರತು ಒಟ್ಟಾರೆ ಸಮಾಜವನ್ನು ಚಲನಶೀಲಗೊಳಿಸುತ್ತಿಲ್ಲ.

ಅವು ಜಾತಿಗಳಾಗಿ ತಮ್ಮದೇ ಜಾತಿ ಪುರಾಣಪುರುಷ, ಲಾಂಛನಗಳೊಂದಿಗೆ ಮತ್ತಷ್ಟು ಭದ್ರವಾಗಿ, ಆಕ್ರಮಣಶೀಲವಾಗಿ ಸಂಘಟಿತಗೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ, ಈ ಜಾತಿಗಳ ಜನರು ಎಷ್ಟೇ ಆರ್ಥಿಕವಾಗಿ ಸಬಲೀಕರಣಗೊಂಡರೂ ಒಟ್ಟು ಸಮಾಜದಲ್ಲಿ, ಸಾಮಾನ್ಯ ಸಾರ್ವಜನಿಕ ಜೀವನದಲ್ಲಿ ಅವರ ಸಾಮಾಜಿಕ ಸ್ಥಾನಮಾನದಲ್ಲಿ ಏನೂ ನಿರ್ಣಾಯಕ ಬದಲಾವಣೆ ಆಗುತ್ತಿಲ್ಲ ಎಂಬುದೇ ಆಗಿದೆ.

ಉದಾಹರಣೆಗೆ ಬಡ ಅಸ್ಪೃಶ್ಯ, ಬಡ ಉಪ್ಪಾರ ಶ್ರೀಮಂತ ಅಸ್ಪೃಶ್ಯ ಮತ್ತು ಶ್ರೀಮಂತ ಉಪ್ಪಾರ ಎನಿಸಿಕೊಳ್ಳಬಹುದಷ್ಟೇ. ಬಹಳಷ್ಟು ಜನ ಅಸ್ಪೃಶ್ಯರು ಮತ್ತು ಹಿಂದುಳಿದ ಜಾತಿಗಳ ಜನರು ಇಷ್ಟಕ್ಕೇ ಸಮಾಧಾನಿತರಾಗುತ್ತಿದ್ದರೆ, ಕೆಲವರು ಇದರಿಂದ ವ್ಯಗ್ರರಾಗುತ್ತಿದ್ದಾರೆ. ಇದು ಹೊಸ ಶ್ರೀಮಂತರ ವ್ಯಗ್ರತೆ
ಯಾದುದರಿಂದ ಬಿರುಸು ಜಾಸ್ತಿ. ಇದು ಇಂದಿನ ಸಾಮಾಜಿಕ ನ್ಯಾಯದ ರಾಜಕಾರಣವನ್ನು ಇನ್ನಷ್ಟು ಜಟಿಲಗೊಳಿಸಿದೆ.

ಇದಕ್ಕೆ ಮುಖ್ಯ ಕಾರಣಗಳು ಎರಡು. ಒಂದು ಈ ಸಬಲೀಕರಣ ಕಾರ್ಯಕ್ರಮಗಳನ್ನು ವೋಟ್ ಬ್ಯಾಂಕ್ ರಾಜಕಾರಣವಾಗಿ ಜಾರಿಗೊಳಿಸುತ್ತಿರುವುದು. ಇದಕ್ಕೆ ಮತ್ತೆ ಕಾರಣ ನಮ್ಮ ರಾಜಕೀಯ ನಾಯಕರಾರಿಗೂ ಜಾತಿ ವಿನಾಶದ ಬಗ್ಗೆ ನಂಬಿಕೆ ಇಲ್ಲದಿರುವುದು. ಇವರೆಲ್ಲರೂ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ಅಸ್ತಿತ್ವವನ್ನೇ ಸಾಮಾಜಿಕವಾಗಿ ಜಾತಿ ಸಂವೇದನೆಗಳ ಮೂಲಕವೇ ಕಟ್ಟಿಕೊಂಡಿರುವುದು. ಇವರಿಗೆ ಜಾತಿ ವಿನಾಶ ಎಂದರೆ ತಮ್ಮನ್ನು ತಾವೇ ಕಳೆದುಕೊಳ್ಳುವ ಭಯಾನಕ ಅನುಭವವಾಗಿ ಕಾಣುತ್ತದೆ, ಕಾಡುತ್ತದೆ ಮತ್ತು ಸಹಜವಾಗಿಯೇ ಅದು ಅಸಾಧ್ಯ ಮತ್ತು ಅಸಾಧುವಾಗಿ ತೋರುತ್ತದೆ.

ಹಾಗಾದರೆ ಸಾಮಾಜಿಕ ನ್ಯಾಯದ ಬಿಕ್ಕಟ್ಟಿನ- ಜಾತಿ ವಿನಾಶ ಗುರಿಯಿಂದ ವಿಮುಖವಾಗಿರುವಂತೆ ಮಾಡಿರುವುದರ-ಮೂಲದಲ್ಲಿರುವ ಸಮಸ್ಯೆ ಯಾವುದು? ಬಹುಶಃ, ಅದು ಜಾತಿ ಪದ್ಧತಿಯನ್ನು ಅರ್ಥ ಮಾಡಿಕೊಂಡ ಬಗೆಯಲ್ಲೇ ಸಮಸ್ಯಾತ್ಮಕತೆ ಇದ್ದಂತೆ ತೋರುತ್ತದೆ. ಆ ಸಮಸ್ಯಾತ್ಮಕತೆ ಈ ಜಾತಿ ಪದ್ಧತಿಯನ್ನು ಯಾರೋ ಯಾವಾಗಲೋ ಯಾರನ್ನೋ ಶೋಷಿಸಲು ಯಾರ ಮೇಲೋ ಹೇರಿದ ಪದ್ಧತಿ ಎಂಬ ಸರಳ ಗ್ರಹಿಕೆಯಲ್ಲಿದ್ದಂತಿದೆ.

ಇದರಿಂದಾಗಿ ಅದರ ಸಾಂಸ್ಕೃತಿಕ ಆಯಾಮ ಮತ್ತು ಐತಿಹಾಸಿಕ ರೂಪಾಂತರಗಳು ಮುಖ್ಯ ಚರ್ಚೆಗೆ ಬಾರದೇ ಹೋಗಿವೆ. ಅಂಬೇಡ್ಕರ್‌ರ ಜಾತಿ ಮೀಮಾಂಸೆಯೂ ಸೇರಿದಂತೆ ಜಾತಿ ವಿರೋಧಿಯಾದ ನಮ್ಮ ಎಲ್ಲ ಬಹಳಷ್ಟು ಆಧುನಿಕ ತತ್ವ ಮೀಮಾಂಸೆಗಳಲ್ಲೂ ಈ ಸಮಸ್ಯಾತ್ಮಕತೆ ಇದ್ದಂತಿದೆ.

ಆದರೆ ಈ ಅಂತರರಾಷ್ಟ್ರೀಯ ಅಂಬೇಡ್ಕರ್ ಮೇಳ ಈ ಬಗ್ಗೆ ಗಮನವನ್ನೇ ಹರಿಸಲಿಲ್ಲ. ಏಕೆ? ಹರಿಸಿದ್ದರೆ ಬಹುಶಃ ಈಗ ಜಾರಿಯಲ್ಲಿರುವ– ಜಾತಿ ಮೀಸಲಾತಿ ಮಾತ್ರವಾಗಿ ಕುಬ್ಜಗೊಂಡಿರುವ– ‘ಸಾಮಾಜಿಕ ನ್ಯಾಯ ಕಾರ್ಯಕ್ರಮ’ದ ಒಂದು ಪುನರ್‌ವಿಮರ್ಶೆಯ ಅಗತ್ಯ ಕಂಡುಬರುತ್ತಿತ್ತು. ಅದನ್ನು ಕೆಲವು ಜಾತಿಗಳ ಹಿತಾಸಕ್ತಿ ರಕ್ಷಣೆ ಮಾತ್ರವಲ್ಲದೆ ಇಡೀ ಸಮಾಜದ ಹಿತರಕ್ಷಣೆಯ ಕಾರ್ಯಕ್ರಮವನ್ನಾಗಿ ನೋಡಿ ಅದರ ವಿವರ-ವಿನ್ಯಾಸಗಳನ್ನೇ ಬದಲಿಸಬೇಕಾಗುತ್ತಿತ್ತು.

ಇದು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬಹು ಧೈರ್ಯವನ್ನು ಬೇಡುವ ಸಾಹಸವೇ ಸರಿ. ಆದರೆ ಇಂತಹ ಸಾಹಸದ ಮೊದಲ ಹೆಜ್ಜೆಯನ್ನಾದರೂ ಇಡಲು ಇಂತಹ ಸಂದರ್ಭಗಳಿಗಿಂತ ಹೆಚ್ಚು ಪ್ರಶಸ್ತವಾದ ಸಂದರ್ಭವಾದರೂ ಯಾವುದು? ಉದಾಹರಣೆಗೆ, ಈ ಸಂದರ್ಭದ ಸಾರ್ಥಕತೆಯ ಸಂಕೇತವಾಗಿ ಹಲವು ವರ್ಷಗಳಿಂದ ಪರಿಶೀಲನೆಯ ಹಂತದಲ್ಲೇ ಸ್ಥಗಿತವಾಗಿರುವ, ಸಾಮಾಜಿಕ ನ್ಯಾಯದ ಹೆಸರಲ್ಲಿ ಆಗಿರುವ ಅನ್ಯಾಯಗಳನ್ನು ಸರಿಪಡಿಸಲು ನೇಮಕವಾದ ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಘೋಷಣೆಯನ್ನಾದರೂ ಮಾಡಬಹುದಿತ್ತಲ್ಲವೇ? ಏಕೆ ಮಾಡಲಾಗಲಿಲ್ಲ? ಬದಲಿಗೆ ಮಾಡಿದ್ದೇನು? ಬರೀ ಬುರುಗು ಮಾತುಗಳ, ಉದ್ದನೆಯ ‘ಬೆಂಗಳೂರು ಘೋಷಣೆ!’

ಆದ್ದರಿಂದ ಈ ಕಾರ್ಯಕ್ರಮದ ಆಯೋಜನೆಯೇ ಅಂಬೇಡ್ಕರ್ ಆರಾಧನೆಯ ಉದ್ದೇಶ ಹೊಂದಿತ್ತು ಎಂದು ಹೇಳಬೇಕಾಗುತ್ತದೆ. ಹಾಗಾಗಿಯೇ, ಬಹುಕಾಲದಿಂದ ತಿಪ್ಪೆ ಸಾರಿಸುವಂತಹ ಪ್ರಯತ್ನಗಳಿಂದಾಗಿಯೇ ಒಂದು ಸುಸಂಗತ ಉತ್ತರ ಕಾಣದಂತಾಗಿರುವ ಜಾತಿ ಪದ್ಧತಿ ಕುರಿತ ಅಂಬೇಡ್ಕರ್ v/s ಗಾಂಧಿ ವಿವಾದಕ್ಕೆ ಪುನರ್‌ಭೇಟಿ ನೀಡುವ ಒಂದು ಸಣ್ಣ ಪ್ರಯತ್ನವೂ ಇಲ್ಲಿ ನಡೆಯಲಿಲ್ಲ.

ಅಂಬೇಡ್ಕರ್ ಅವರ ಐತಿಹಾಸಿಕ ಚಿತ್ರವನ್ನು ಇನ್ನಷ್ಟು ಸ್ಫುಟವಾಗಿ ಬಿಡಿಸಬಹುದಾಗಿದ್ದ ಇಂತಹ ಪ್ರಯತ್ನ ಯಾಕೆ ಯಾರಿಗೂ ಅಗತ್ಯ ಎನಿಸಲಿಲ್ಲ? ಯಾರೋ, ಈ ಕಾರ್ಯಕ್ರಮಕ್ಕಾಗಿ ₹ 23 ಕೋಟಿ ಖರ್ಚು ಮಾಡಿದ್ದನ್ನು ಟೀಕಿಸಿದವರನ್ನು ಟೀಕಿಸುತ್ತಾ, ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕಕ್ಕೆ ನೂರಾರು ಕೋಟಿ ರೂಪಾಯಿ ಮೀಸಲಿರಿಸುವುದನ್ನು ಇವರೇಕೆ ಟೀಕಿಸುತ್ತಿಲ್ಲ ಎಂದು ಕೇಳಿರುವುದು ಕುತೂಹಲಕಾರಿಯಾಗಿದೆ. ಇದೆಲ್ಲ ನಡೆದಿರುವುದು, (ಗಾಂಧೀಜಿಯನ್ನು ಮನಸ್ಸಲಿಟ್ಟುಕೊಂಡು) ವ್ಯಕ್ತಿಪೂಜೆ ಸಲ್ಲದು; ಅದು ಅಪಾಯಕಾರಿ ಎಂದು ಎಚ್ಚರಿಸಿದ ಅಂಬೇಡ್ಕರ್ ಹೆಸರಲ್ಲಿ ಎಂಬುದು ಇನ್ನೂ ಕುತೂಹಲಕಾರಿಯಾದ ಅಂಶವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.