ADVERTISEMENT

ಕೆರೆಯನ್ನು ಉಳಿಸಿದರಷ್ಟೇ ನೀರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2017, 19:30 IST
Last Updated 31 ಅಕ್ಟೋಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

– ಪಾರ್ವತಿ ಪಿಟಗಿ

ಕೆರೆಗಳು ಗ್ರಾಮಗಳ ಪ್ರಮುಖ ಜಲಸಂಪನ್ಮೂಲಗಳು. ತೋಟ, ಹೊಲ, ಗದ್ದೆಗಳಿಗೆ; ಜಾನುವಾರುಗಳಿಗೆ ಜೀವಜಲ. ಗ್ರಾಮಗಳ ಜೀವನಾಡಿಗಳು. ಮಳೆ ನೀರನ್ನು ಭೂಮಿಗೆ ಇಂಗಿಸುವ ಮುಖಾಂತರ, ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತವೆ. ಕೆರೆಗಳಲ್ಲಿ ಸಂಗ್ರಹವಾದ ನೀರು ಕೃಷಿಗೆ ಬಳಕೆಯಾಗುತ್ತದೆ. ಹೀಗಾಗಿ ಇವು ಜಲಸಂಗ್ರಹದ ಆಸ್ತಿಗಳು.

ನೂರಾರು ವರ್ಷಗಳಿಂದ ನಮ್ಮ ಹಿರಿಯರು ಪರಂಪರಾಗತವಾಗಿ ನಮ್ಮ ನಾಡಿನಲ್ಲಿ ಕೆರೆ ನೀರಾವರಿ ಪದ್ಧತಿ ಮುಂದುವರಿಸಿಕೊಂಡು ಬಂದಿದ್ದಾರೆ. ಇವು ಕಾಲಕಾಲಕ್ಕೆ ನೀರ ನೆಮ್ಮದಿ ನೀಡುತ್ತ ಬಂದಿವೆ. ಹಿಂದೆ ಗಾಳಿ, ಮಳೆ, ನದಿ, ಕೆರೆ, ಬಾವಿಗಳಂಥ ನೈಸರ್ಗಿಕ ಸಂಪನ್ಮೂಲಗಳನ್ನು ದೇವರೆಂದು ಬಗೆದು ಪೂಜಿಸುತ್ತಿದ್ದರು. ನಮ್ಮ ಹಿರಿಯರು ಈ ನೈಸರ್ಗಿಕ ಸಂಪತ್ತಿನ ಮಹತ್ವವನ್ನು ಅರಿತು ಅವುಗಳಿಗೆ ಧಾರ್ಮಿಕ ಆಯಾಮ ನೀಡಿದ್ದರು. ಯಾವ ವಸ್ತು ಎಲ್ಲಿಯವರೆಗೆ ಪೂಜನೀಯವೋ ಅದಕ್ಕೆ ಅಲ್ಲಿಯವರೆಗೆ ಅಳಿವಿಲ್ಲ. ಕೆರೆಗಳೂ ಪೂಜೆಗೆ ಒಳಗಾಗಿದ್ದರಿಂದ ಸಮೃದ್ಧಿಯಾಗಿದ್ದವು.

ADVERTISEMENT

ನಾನು ಚಿಕ್ಕವಳಿದ್ದಾಗ, ಹೀಗೊಂದು ಹಳ್ಳಿಗೆ ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಕಾರ್ಯಕ್ರಮದ ಸ್ಥಳದ ಹತ್ತಿರದಲ್ಲಿಯೇ ಸ್ಫಟಿಕದಂತಹ ನೀರು ಹೊತ್ತ ಸುಂದರ ಕೆರೆಯನ್ನು ನೋಡಿ, ಅದರಲ್ಲೊಮ್ಮೆ ಮುಳುಗಬೇಕೆಂಬ ಆಸೆಉಂಟಾಯಿತು. ಆದರೆ ಬೇರೆ ಬಟ್ಟೆ ಇರಲಿಲ್ಲವಾದ್ದರಿಂದ ಕೊನೇಪಕ್ಷ ಕೈಕಾಲು, ಮುಖವನ್ನಾದರೂ ತೊಳೆದುಕೊಳ್ಳಬೇಕೆಂದು ಸೋಪು, ಟವೆಲ್‌ ಕೈಲಿಹಿಡಿದು ಕೆರೆಯತ್ತ ಧಾವಿಸುತ್ತದ್ದಂತೆಯೇ ಹಳ್ಳಿಗರ ಎಚ್ಚರಿಕೆ ಗಂಟೆಯಂತೆ ಮೊಳಗಿದ ‘ಕೆರಿಯಾಗ ಇಳೀಬ್ಯಾಡ್ರಿ’ ಎನ್ನುವ ಕೂಗು ಕೇಳಿ ತಬ್ಬಿಬ್ಬಾದೆ. ಗಾಬರಿಸಿದ ನನ್ನನ್ನು ಕಂಡ ಆ ಜನರು, ‘ನೀರ ಕುಡೀರಿ, ಆದ್ರ ಕೈಕಾಲ ಮೋತಿ ತೊಳಕೋಬ್ಯಾಡ್ರಿ. ಬೇಕಾದ್ರ ಕೊಡಾ ಕೊಡತೀವಿ, ತುಂಬಕೊಂಡ ಅತ್ತಾಗ ಹೋಗಿ ತೊಳಕೋರಿ’ ಎಂದಾಗ ಅವರ ಮಾತು ನನಗೆ ನಿರಾಸೆ ಹುಟ್ಟಿಸಿತು. ಆದರೆ ಅಂದಿನ ಆ ಘಟನೆಯನ್ನು ನೆನಪಿಸಿಕೊಂಡಾಗ ಹಳ್ಳಿಗರು ಕೆರೆಗಳಿಗೆ ನೀಡಿದ್ದ ಮಹತ್ವ ಅರಿವಿಗೆ ಬರುತ್ತದೆ.

ಹೀಗೆ ಅಮೂಲ್ಯ ಜೀವಜಲವಾದ ಈ ಕೆರೆಗಳಿಗೆ ಕಣ್ಗಾವಲಿರಿಸುತ್ತಿದ್ದರು. ಯಾರಾದರೂ ನೀರು ಪೋಲು ಮಾಡಿದರೆ, ಅವರಿಗೆ ದಂಡ ವಿಧಿಸಲಾಗುತ್ತಿತ್ತು. ಕೆರೆಗಳನ್ನು ಕಾಪಾಡುವುದಷ್ಟೇ ಅಲ್ಲದೆ ಆಗಾಗ ಶ್ರಮದಾನ ಮಾಡಿ ಇವುಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಒಟ್ಟಿನಲ್ಲಿ ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಾ ಸದಾಕಾಲ ನೀರು ತುಂಬಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಈ ಕೆರೆಗಳಿಂದ ಕೃಷಿಯಷ್ಟೇ ಅಲ್ಲದೆ ಅವುಗಳನ್ನು ಅವಲಂಬಿಸಿ ಮೀನುಗಾರಿಕೆ; ಬಿದಿರು ಬುಟ್ಟಿ, ಪೊರಕೆ ತಯಾರಿಕೆ, ಕೆರೆಗಳ ಮಣ್ಣಿನಿಂದ ಮಡಕೆ ತಯಾರಿಕೆ ಅಂದರೆ ಕುಂಬಾರಿಕೆ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು.

ಕೆರೆಯಲ್ಲಿನ ಜಲಚರಗಳನ್ನು ಭಕ್ಷಿಸಲೆಂದು ಬಾತುಕೋಳಿ, ಬೆಳ್ಳಕ್ಕಿ, ಮೀಂಚುಳ್ಳಿ, ಗೀಜಗ ಮುಂತಾದ ಪಕ್ಷಿಗಳು ಕೆರೆಪಕ್ಕದಲ್ಲಿ ಗೂಡು ಕಟ್ಟಿಕೊಂಡು ವಸತಿ ಹೂಡುತ್ತಿದ್ದವು. ಸುತ್ತಮುತ್ತಲಿನ ಹೊಲಗದ್ದೆಗಳಲ್ಲಿಯ ಹುಳುಹುಪ್ಪಟೆಗಳನ್ನು ಮೇಯುವುದರೊಂದಿಗೆ ರೈತನಿಗೆ ಸಹಕಾರಿಯಾಗಿದ್ದವು. ಈ ಕೆರೆಗಳು ಹಳ್ಳಿಗರ ಅಕ್ಷಯ ಪಾತ್ರೆಗಳಾಗಿದ್ದವು.

ಆದರೆ ಶತ ಶತಮಾನಗಳಿಂದ ನೀರಿನ ನಿಶ್ಚಿತ ಜಲನಿಧಿಗಳಾಗಿದ್ದ ಈ ಕೆರೆಗಳು ಸರ್ಕಾರಿ ಸುಪರ್ದಿಗೆ ಬಿದ್ದು ಸಮುದಾಯದಿಂದ ದೂರವಾಗಿಬಿಟ್ಟವು. ಜೊತೆಗೆ, ಕೊಳವೆಬಾವಿಗಳು, ಅಣೆಕಟ್ಟುಗಳೇ ಜನರ ಜೀವಸೆಲೆಗಳಾದ ನಂತರ ಕೆರೆಗಳು ತಮ್ಮ ಮಹತ್ವವನ್ನು ಕಳೆದುಕೊಂಡವು. ಅಷ್ಟೇ ಅಲ್ಲ ಜನರ ಅಸಡ್ಡೆ, ಅಲಕ್ಷ್ಯಕ್ಕೆ ಒಳಗಾಗಿ ಇಂದು ಈ ಕೆರೆಗಳು ಸಂಪೂರ್ಣವಾಗಿ ಅವಸಾನಗೊಳ್ಳುತ್ತಿವೆ.

ಹದಿನೈದು ವರ್ಷಗಳ ಹಿಂದೆ ಬೆಳಗಾವಿ ಬಳಿಯ ನಮ್ಮ ಹತ್ತಿರದ ಗ್ರಾಮವೊಂದರ ಕೆರೆ ತುಂಬಿ ತುಳುಕುತ್ತಿತ್ತು. ಆದರೆ ಅದುಗ್ರಾಮಸ್ಥರ ಅಲಕ್ಷ್ಯದಿಂದ ಕಸ, ಹೂಳಿನಿಂದ ತುಂಬಿತ್ತು. ಮುಂದೆ ಐದಾರು ವರ್ಷಗಳ ನಂತರ ಕೆರೆಗೆ ಅರ್ಧಮರ್ಧ ನೀರು ಬರುತ್ತಿತ್ತು. ಆದರೆ ಈ ಐದಾರು ವರ್ಷಗಳಿಂದ ಸಂಪೂರ್ಣ ಬತ್ತಿ ಹೋಗಿದೆ. ಕೆರೆಯ ಜಾಗದಲ್ಲಿ ಮುಳ್ಳುಕೊಂಪೆಗಳು ಬೆಳೆದಿವೆ. ಅದು ವಿಷಜಂತುಗಳ ತಾಣವಾಗಿದೆ.

ಕೆರೆಯ ಪೂರ್ವ ಭಾಗದಲ್ಲಿ ಒಂದು ಗುಡ್ಡ ಇದೆ. ಒಂದೆರಡು ದೊಡ್ಡ ಮಳೆಯಾದರೆ ಸಾಕು, ಆ ಗುಡ್ಡದ ನೀರು ನೇರ
ವಾಗಿ ಹರಿದು ಕೆರೆಯನ್ನು ತುಂಬಿಸುತ್ತಿತ್ತು. ಆದರೆ, ಗ್ರಾಮದಲ್ಲಿಯೂ ಕಾಂಕ್ರೀಟ್ ಕಾಡು ಬೆಳೆದು, ಗುಡ್ಡದ ನೀರು ಹರಿದು ಹೋಗುವ ದಾರಿಗೆ ಅಡ್ಡವಾಗಿದೆ. ಪರಿಣಾಮ, ಕೆರೆಗೆ ಗುಡ್ಡದ ನೀರಿನ ಕೊರತೆಯುಂಟಾಯಿತು. ಸಾಲದ್ದಕ್ಕೆ ಸುರಿಯುವ ಮಳೆಯೂ ಕಡಿಮೆಯಾಗಿ ಕೆರೆಯ ನೀರು ಕರಗಿ ಹೋಯಿತು.

ಇದನ್ನು ‘ಅಭಿವೃದ್ಧಿ ಭರಾಟೆಯಲ್ಲಿ ಜಲಸಂಪನ್ಮೂಲದ ಕಗ್ಗೊಲೆ’ ಎಂದೇ ಹೇಳಬಹುದು. ಇದು ಈ ಗ್ರಾಮವೊಂದರ ಕೆರೆಯ ಕತೆಯಲ್ಲ. ದಿನದಿಂದ ದಿನಕ್ಕೆ ನೂರಾರು ಕೆರೆಗಳು ಬತ್ತಿ ಬರಿದಾಗುತ್ತಿವೆ. ಇತಿಹಾಸ ಮರುಕಳಿಸುವುದು ಎಂಬಂತೆ ಬರಗಾಲದ ಬವಣೆ ಹಾಗೂ ಅಂತರ್ಜಲ ಕುಸಿತದಿಂದಕಂಗೆಟ್ಟ ಕಾರಣ ನಮಗೆ ಈಗ ಬುದ್ಧಿ ಬಂದಂತಿದೆ. ಎಚ್ಚೆತ್ತುಕೊಂಡು ಕೆರೆಗಳಿಗೆ ಮಹತ್ವ ನೀಡುವಂತಾಗಿದೆ. ಜೊತೆಗೆ ಅವಸಾನದ ಅಂಚಿನಲ್ಲಿರುವ ಈ ಕೆರೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯು ವರದಾನವಾಗಿದೆ.

ಈ ಯೋಜನೆಯಲ್ಲಿ ಕೆರೆಗಳ ಹೂಳು ತೆಗೆಯುವ ಕೆಲಸ ಸಾಗಿದೆ. ಆದರೆ ಇಲ್ಲಿ ದುಡಿಯುವ ಕೈಗೆ ಕೆಲಸ ಕೊಡುವುದಕ್ಕೇ ಹೆಚ್ಚು ಮಹತ್ವ ಇರುವುದರಿಂದ ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸದೆ ಕೆರೆಯ ಅಲ್ಪಸ್ವಲ್ಪ ಭಾಗದಲ್ಲಿ ಹೂಳೆತ್ತಲಾಗುತ್ತಿದೆ. ಉಳಿದ ಭಾಗ, ಕಸಕಡ್ಡಿಗಳಿಂದ, ಮುಳ್ಳುಕೊಂಪೆಯಿಂದ ತುಂಬಿಕೊಳ್ಳುತ್ತದೆ. ಮಳೆ ಬಂದಾಗ, ಹೂಳೆತ್ತಿದ ಭಾಗಕ್ಕೂ ಈ ಕಸ ಆವರಿಸುತ್ತದೆ. ಹೂಳನ್ನು ಕೆರೆ ದಂಡೆಗೇ ಹಾಕಿಬಿಡುವ ಪರಿಪಾಟ ಇದೆ. ಇದು ಮತ್ತೆ ಕೆರೆಪಾಲಾಗಿಬಿಡುತ್ತಿದೆ. ಹೀಗಾಗಿ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿಲ್ಲ.

ಈ ವರ್ಷವೇನೋ ಮಳೆಯಾಯಿತು. ಆದರೆ, ಮುಂದಿನ ವರ್ಷಗಳಲ್ಲಿ ಇದೇ ತರಹ ಮಳೆ ಸುರಿಯುತ್ತದೆ ಎಂಬ ಖಾತರಿಏನಿದೆ? ಆದ್ದರಿಂದ, ಅಂತರ್ಜಲ ಕುಸಿತ ಹಾಗೂ ಅನಾವೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಕೊಳ್ಳಲೇಬೇಕಿದೆ. ‘ಕೆರೆ ಸರ್ಕಾರದ್ದು; ಅವರೇ ಮಾಡಲಿ’ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಸಾರ್ವಜನಿಕರೇ ಈ ಕೆರೆಗಳನ್ನು ಸಂರಕ್ಷಿಸಲು ಮುಂದಾಗಬೇಕಿದೆ. ಬೇಕಿದ್ದರೆ, ಗ್ರಾಮ ಪಂಚಾಯಿತಿಯ ಸಹಾಯ ಪಡೆದು ಕೆರೆಯನ್ನು ಕಸಕಡ್ಡಿ, ಮುಳ್ಳುಕಂಟಿಗಳಿಂದ ಮೊದಲು ಮುಕ್ತವಾಗಿಸಬೇಕು. ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. ಹೊರತೆಗೆದ ಹೂಳನ್ನು ಹೊಲಗಳಿಗೆ ಸಾಗಿಸಬೇಕು. ಕೆರೆಯ ದಂಡೆಯ ಮಣ್ಣು ಕುಸಿಯದಂತೆ ಹುಲ್ಲನ್ನು ಬೆಳೆಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಮೂಲ್ಯವಾದ ಮಳೆಯ ನೀರು ಕೆರೆಯನ್ನೇ ಸೇರುವಂತೆ ಮಾಡಬೇಕು. ಗ್ರಾಮದಲ್ಲಿ ಗುಡ್ಡ–ಬೆಟ್ಟವಿದ್ದರೆ, ಅಲ್ಲಿ ಬೀಳುವ ನೀರು ನೇರವಾಗಿ ಕೆರೆಯನ್ನು ಸೇರುವಂತೆ ಕಾಲುವೆ ನಿರ್ಮಿಸಬೇಕು. ಆ ಕಾಲುವೆ ಹೂಳಿನಿಂದ ತುಂಬದಂತೆ ಆಗಾಗ ಸ್ವಚ್ಛಗೊಳಿಸಬೇಕು.

ನಿಸರ್ಗ ನಮಗೆ ಎಲ್ಲವನ್ನೂ ನೀಡಿದೆ. ಅದರ ಮಡಿಲಲ್ಲಿ ಪ್ರತಿಯೊಂದು ಜೀವಿಯೂ ಹಾಯಾಗಿರಬಹುದು. ಆದರೆ ಅದನ್ನು ಹಾಳಾಗದಂತೆ ನೋಡಿಕೊಳ್ಳುವ ಮತ್ತು ಸದ್ಬಳಕೆ ಮಾಡಿಕೊಳ್ಳುವ ಇಚ್ಛಾಶಕ್ತಿ ನಮಗೆ ಬೇಕಿದೆ ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.