ADVERTISEMENT

ಕೈಮಗ್ಗ ಉದ್ಯಮ ಮತ್ತೆ ಬಲ ಗಳಿಸುವುದೇ?

ನಾಗರಾಜ ಎಸ್.ಹೊಂಗಲ್ ಇಳಕಲ್‌
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ಭಾರತೀಯ ಕೈಮಗ್ಗ ಉದ್ಯಮಕ್ಕೆ ಪುರಾ­ತನ ಕಾಲದಿಂದಲೂ ವಿಶಿಷ್ಟ­ವಾದ ಸ್ಥಾನವಿದೆ. ಮೊದಲಿಗೆ ಹತ್ತಿಯಿಂದ ನೂಲು ತೆಗೆದು ಬಟ್ಟೆಯನ್ನು ತಯಾರಿಸಿದವರು ಭಾರತೀ­ಯರೇ. ಭಾರತದ ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೆ ಇಂದಿಗೂ ವಿಶ್ವ ಮಾನ್ಯತೆಯಿದೆ. ಕರ್ನಾಟಕವೂ ಅನಾದಿ ಕಾಲದಿಂದ ಈ ಬಟ್ಟೆಗಳ ತಯಾರಿಕೆಗೆ ಪ್ರಸಿದ್ಧಿಯಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಳಿ ಉದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ಕೈಮಗ್ಗ ವಲಯಕ್ಕೆ ಹತ್ತು ಹಲವು ಸವಲತ್ತುಗಳನ್ನು ಕೊಟ್ಟಿವೆ. ಇವುಗಳನ್ನು ಕೆಲವೇ  ಸೀಮಿತ ವರ್ಗಗಳು  ದೋಚಿಕೊಳ್ಳುತ್ತಿವೆ. ಇದಕ್ಕೆ ಯಾರು ಕಾರಣ?

ಸಾಂಸ್ಕೃತಿಕ ಲೋಕದ ಬುದ್ಧಿಜೀವಿಗಳು ಇದೀಗ ಆ ಮೂಲವನ್ನು ಅರಸಲು ಹೊರಟಿರುವುದು ಸಂತಸದ ಸಂಗತಿ. ಇದೇ ಕಾರಣಕ್ಕಾಗಿ ರಾಜ್ಯದ­ಲ್ಲಿನ ಕೈಮಗ್ಗ ಉದ್ಯಮದ ಕುರಿತು ಈಚೆಗೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ. ಇದು ರಾಜ್ಯದಲ್ಲಿನ ನೇಕಾರಿಕೆ ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ತುಂಬಾ ಸಹಕಾರಿಯೂ ಹೌದು.

೧೯೮೫ರಲ್ಲಿ ಕೇಂದ್ರ ಸರ್ಕಾರ ೨೨ ಬಗೆಯ ಸಾಂಪ್ರದಾ­ಯಿಕ ಉತ್ಪನ್ನಗಳು ಕೈಮಗ್ಗಗಳ­ಲ್ಲಿಯೇ ತಯಾರಾಗಬೇಕು ಎಂಬ ಮೀಸಲು ನೀತಿ ಪ್ರಕಟಿಸಿತು. ಬಣ್ಣದ ರೇಷ್ಮೆ ಬಟ್ಟೆಗಳು, ಧೋತಿ, ಟವೆಲ್, ಲುಂಗಿ, ಕರವಸ್ತ್ರ, ಕಂಚಿ ಸಾಂಪ್ರದಾ­ಯಿಕ ಸೀರೆಗಳು ಈ ಪಟ್ಟಿಯಲ್ಲಿ ಸೇರಿದ್ದವು. ಇದನ್ನು ಕೆಲವು ಮಿಲ್‌ಗಳ ಮಾಲೀಕರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ೧೯೯೩ರ ಫೆಬ್ರು­ವರಿ­ಯಲ್ಲಿ ಸುಪ್ರೀಂ ಕೋರ್ಟ್, ಕೇಂದ್ರದ ನೀತಿ­ಯನ್ನು ಎತ್ತಿ ಹಿಡಿದು ಕೈಮಗ್ಗ ವಲಯದ ರಕ್ಷ­ಣೆಗೆ ಮಹತ್ವದ ಆದೇಶ ನೀಡಿತು. ಆಗ ರಾಜ್ಯ­ದಲ್ಲಿ ಕೈಮಗ್ಗ ಉದ್ಯಮ ಅವಸಾನದತ್ತ ಮುಖ ಮಾಡಿತ್ತು. ಈ ವೇಳೆಗೆ ಅವಿಭಜಿತ ವಿಜಾಪುರ, ಧಾರವಾಡ, ಚಿತ್ರದುರ್ಗ ಜಿಲ್ಲೆ, ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಕೈಮಗ್ಗಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿತ್ತು.

ವೀರಪ್ಪ ಮೊಯಿಲಿ ಸಂಪುಟದಲ್ಲಿ ಜವಳಿ ಸಚಿವರಾಗಿದ್ದ ಇಂದಿನ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರ ಕಾಳಜಿಯಿಂದ ರೂಪಿತವಾದ ಜವಳಿ ನೀತಿಯು ಕೈಮಗ್ಗ ವಲಯ ಹಾಗೂ ಅದರ ಅವಲಂಬಿತರಿಗೆ ನಂತರದ ದಿನಗಳಲ್ಲಿ ನಿರೀಕ್ಷಿತ ಫಲ ನೀಡಲಿಲ್ಲ. ಸರ್ಕಾರದ ಬದಲಾವಣೆಯೂ ಇದಕ್ಕೆ ಭಾಗಶಃ ಕಾರಣವಿ­ರಬಹುದು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಲೋಕದ ವಾರಸುದಾರರು ಕೈಮಗ್ಗ ವಲಯದ ರಕ್ಷಣೆಗೆ ಆಂದೋಲನ ನಡೆಸಿದ್ದರೆ ರಾಜ್ಯದ ಕೈಮಗ್ಗ ಉದ್ಯಮ ಇಂದು ನೆಲ ಕಚ್ಚುವ ಪ್ರಮೇಯವೇ ಬರುತ್ತಿರಲಿಲ್ಲವೇನೋ?

ಒಂದು ಉದ್ಯಮದ ಅವಸಾನವನ್ನು ತಡೆ­ಯಲು ಅಥವಾ ಅದರ ಬೆಳವಣಿಗೆಗೆ ಇಂಬು ತುಂಬಲು  ಮಾಧ್ಯಮ ಜಾಗೃತಿ ಮತ್ತು ಆಂದೋ­ಲ­­ನ­ದಿಂದ ಮಾತ್ರವೇ ಸಾಧ್ಯವಿಲ್ಲ. ಇದಕ್ಕೆ ಪೂರಕ­ವಾಗಿ ಸರ್ಕಾರದ ಉನ್ನತ ಸ್ಥಾನಗಳಲ್ಲಿ ಯಾವುದೇ ಉದ್ಯಮದ ನೀತಿ ನಿರೂಪಣೆ ಮಾಡಬೇಕಾದವರು ಆ ಉದ್ಯಮದಲ್ಲಿ ಸ್ವಯಂ ಅನುಭವ  ಹೊಂದಿದವರಾಗಿರಬೇಕು ಇಲ್ಲವೇ ಆ ಕುರಿತು ಕನಿಷ್ಠ ತಿಳಿವಳಿಕೆ ಪಡೆದಿರಬೇಕು. ಅಂದಾಗ ಮಾತ್ರ ಒಂದು ಉದ್ಯಮದ ಅಳಿವು, ಉಳಿವಿನಲ್ಲಿ ಪರಿವರ್ತನೆ ಯಾಗುತ್ತದೆ. ರಾಜ್ಯದ­ಲ್ಲಿನ ಜವಳಿ ಉದ್ಯಮದ ದುರಂತವೆನ್ನಬೇಕೋ ಏನೋ ಸರ್ಕಾರದಲ್ಲಿ  ಇಲ್ಲಿಯ ವರೆಗೂ ಜವಳಿ ಖಾತೆ ಮಂತ್ರಿಗಳಾದವರು (ಒಬ್ಬಿಬ್ಬರನ್ನು ಬಿಟ್ಟು) ಜವಳಿ ಉದ್ಯಮ ಹಾಗೂ ನೇಕಾರಿಕೆ  ಹಿನ್ನೆಲೆಯನ್ನು ಅರಿಯದವರೇ ಆಗಿದ್ದಾರೆ!

ಕೇಂದ್ರ ಸರ್ಕಾರದ ನಿರ್ದೇಶನದಂತೆ ೧೯೯೪-–೯೫ರಲ್ಲಿ ಸುಪ್ರೀಂ ಕೋರ್ಟ್‌ನ ಕೈಮಗ್ಗ ಮೀಸಲು ಆಜ್ಞೆ ಪಾಲಿಸಲು ತಮಿಳುನಾಡು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಜವಳಿ ಇಲಾಖೆ ಅಧಿಕಾರಿಗಳ ವಿಶೇಷ ಪಡೆಯನ್ನೇ ನೇಮಕ ಮಾಡಿದವು. ಆದರೆ ಕರ್ನಾಟಕ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಸರ್ಕಾರವೇ ಮೀಸಲು ನೀತಿ ಉಲ್ಲಂಘನೆಗೆ ಕಾರಣವಾಯಿತು. ದೇವೇಗೌಡರು ಪ್ರಧಾನ ಮಂತ್ರಿಯಾದಾಗ ೧೯೯೬ರಲ್ಲಿ ಕೈಮಗ್ಗ ಮೀಸಲು ಪಟ್ಟಿಯಲ್ಲಿದ್ದ ೨೨ ಉತ್ಪಾದನೆಗಳನ್ನು ಕೇಂದ್ರ ಸರ್ಕಾರ ೧೫ಕ್ಕೆ ಇಳಿಸಿತು. ಕೇಂದ್ರ ಸರ್ಕಾರ  2008ರ ಸೆ. 3ರಂದು  ಮತ್ತೊಂದು ಆದೇಶ ಹೊರಡಿಸಿ, ಕೈಮಗ್ಗ ಮೀಸಲು ಪಟ್ಟಿಯಲ್ಲಿನ ಉತ್ಪಾದನೆಗಳನ್ನು ೧೧ಕ್ಕೆ ಸೀಮಿತಗೊಳಿಸಿತು.

ಭಾರತೀಯ ಕೈಮಗ್ಗ ಪರಂಪರೆಯನ್ನು ಈಶಾನ್ಯ ರಾಜ್ಯಗಳು, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶದಲ್ಲಿನ ಕರ ಕುಶಲಿಗರು, ಆಂಧ್ರಪ್ರದೇಶ ಮತ್ತು ತಮಿಳುನಾಡು ನೇಕಾರರು ಪೋಷಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಂಥ ಯತ್ನಗಳು ನಡೆದಿಲ್ಲ. ಒಂದು ಉದ್ಯಮ ಅವಸಾನದತ್ತ ಸಾಗಿದರೆ ಅದಕ್ಕೆ ಇಡಿಯಾಗಿ ಸರ್ಕಾರವನ್ನೇ ದೂಷಿಸುವುದು ಕೂಡ ತಪ್ಪು. ಉದಾರೀಕರಣ, ಅಲ್ಪ ಮಟ್ಟಿಗೆ ಯಾಂತ್ರೀಕರಣ, ಕೆಲ ಭಾಗಗಳಲ್ಲಿನ ಅದಿರು, ಕಲ್ಲು ಗಣಿಗಾರಿಕೆಯಂತಹ ಅಕ್ರಮ ಉದ್ಯೋಗಗಳ ಪ್ರವಾಹದಲ್ಲಿ ರಾಜ್ಯದ ಕೈಮಗ್ಗ ಉದ್ಯಮ ಕೊಚ್ಚಿ ಹೋಗಿದೆ. ಅಕ್ರಮ ಉದ್ಯೋಗಗಳಲ್ಲಿನ ಆಕರ್ಷಕ ಕೂಲಿ ಕೈಮಗ್ಗದಲ್ಲಿ ಸಿಕ್ಕೀತೇ?  ೧೯೮೦ರ ದಶಕದಲ್ಲಿ ರಾಜ್ಯದಲ್ಲಿನ ಸುಮಾರು ೧.೫ ಲಕ್ಷ ಕೈಮಗ್ಗಗಳ ಪೈಕಿ ೪೦ ಸಾವಿರಕ್ಕೂ ಹೆಚ್ಚು ಕೈಮಗ್ಗ­ಗಳು ಅವಿಭಜಿತ ವಿಜಾಪುರ ಮತ್ತು ರಾಯ­ಚೂರು ಜಿಲ್ಲೆಗಳೆರಡರಲ್ಲೇ ಇದ್ದವು. ಅಷ್ಟು ಕೈಮಗ್ಗಗಳು ಈಗ ಇಡೀ ಕರ್ನಾಟಕದಲ್ಲಿ ಇಲ್ಲ!

ಕೈಮಗ್ಗ ಉದ್ಯಮದ ಉಳಿವಿನ ಕುರಿತು ಭಾಷಣ ಮಾಡುವುದು, ಲೇಖನ ಬರೆಯು­ವುದು ಸುಲಭ. ಆದರೆ ಅದರ ವಾಸ್ತವಗಳ ಹಾದಿಯಲ್ಲಿ ನಡೆಯುವುದು ಬಹಳ ದುರ್ಗಮ. ಅಂದ­ಮಾತ್ರಕ್ಕೆ ಕೈಮಗ್ಗ ಉದ್ಯಮವನ್ನು ಹೀಗೆಯೇ ಬಿಟ್ಟುಬಿಡಬೇಕು ಎಂದಲ್ಲ. ಕೈಮಗ್ಗ ಉತ್ಪನ್ನಗಳಿಗೆ ಬೇಡಿಕೆ ಇದ್ದೇ ಇದೆ. ಈ ಬೇಡಿಕೆಯನ್ನು ಸರ್ಕಾರಿ ಕೃಪಾ ಪೋಷಿತ ಸಂಸ್ಥೆಗಳೇ ಈಡೇರಿಸ ಬೇಕಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಮಗ್ಗ ವಿಶೇಷ ವಲಯಕ್ಕಾಗಿಯೇ ಆಕರ್ಷಕ ಯೋಜನೆ­ಗಳನ್ನು ರೂಪಿಸಿವೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆಗಳು ನಡೆದರೆ ಅವಸಾನದ ಕೆಳ ತುದಿಯಲ್ಲಿರುವ ಕೈಮಗ್ಗ ಉದ್ಯಮದ ಪುನರುತ್ಥಾನ ಅಸಾಧ್ಯವೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.