ADVERTISEMENT

ಜಿಪಿಎಸ್‌ ತೊಡಕು: ಮನೆ ನಿರ್ಮಾಣ ಮೊಟಕು

ಪಾರ್ವತಿ ಪಿಟಗಿ
Published 11 ಸೆಪ್ಟೆಂಬರ್ 2014, 19:30 IST
Last Updated 11 ಸೆಪ್ಟೆಂಬರ್ 2014, 19:30 IST

ನಂದವ್ವ ಉತ್ತರ ಕರ್ನಾಟಕ ಭಾಗದ ಸಣ್ಣ ಗ್ರಾಮವೊಂದರ ಬಡ ವಿಧವೆ. ಮೂವರು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಹೇಗೋ ಹೆಣಗಾಡುತ್ತಾ ಸಂಸಾರದ ಬಂಡಿ ಸಾಗಿಸುತ್ತಿದ್ದಾಳೆ. ಅವಳ ಸ್ವಂತ ಆಸ್ತಿ ಎಂದರೆ ಒಂದೇ ಕೋಣೆಯ ಪುಟ್ಟ ಮನೆ. ಅದೂ ಈಗಲೋ ಆಗಲೋ ಬೀಳುವಂತಿತ್ತು. ದಿನ
ಬೆಳ­ಗಾದರೆ ನಂದವ್ವನ ನೆಮ್ಮದಿಗೆಡಿಸುತ್ತಿತ್ತು.

ತಲೆಯ ಮೇಲೊಂದು ಗಟ್ಟಿ ಸೂರನ್ನು ಹೇಗೆ ಕಟ್ಟಿಕೊಳ್ಳುವುದೆಂಬ ಯೋಚನೆಯಲ್ಲಿ ಅವಳಿದ್ದಾ­ಗಲೇ ‘ಇಂದಿರಾ ಆವಾಸ್‌ ಯೋಜನೆ’ಯಡಿ ಮನೆ ಕಟ್ಟಿಕೊಳ್ಳುವ ಅವಕಾಶ ಅವಳಿಗೆ ದೊರೆ­ಯಿತು. ಅದರಂತೆ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಿಕೊಳ್ಳಲು ಮುಂದಾದಳು. ಅದಕ್ಕೆ ಸಂಬಂಧಿಸಿದ ಹಣದ ಕಂತಿನ ಮೊದಲ­ನೆಯ ಬಿಲ್ಲು ಬಂತು. ಆದರೆ ಎರಡನೇ ಬಿಲ್ಲಿಗೆ ಜಿಪಿಎಸ್‌ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ವ್ಯವಸ್ಥೆಯು ‘ಹೌಸ್ ಎಕ್‌್ಸಟೆನ್ಷನ್‌’ ಎಂದು ತೋರಿಸಿಬಿಟ್ಟಿತು. ಅಲ್ಲಿಗೆ ಅವಳ ಹೊಸ ಮನೆ ಕಥೆ ಮುಗಿಯಿತು.

ಸಾವಿತ್ರಿಯದು ಮತ್ತೊಂದು ಕತೆ. ಈಕೆಗೆ ಮನೆ ಮಂಜೂರಾದ ಕೂಡಲೇ ಜಿಪಿಎಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮೂರು ತಿಂಗಳು ಕಳೆದರೂ ಬಿಲ್ಲು ಬರಲಿಲ್ಲ. ಸಂಬಂಧಿಸಿದವರನ್ನು ಕಾರಣ ಕೇಳಿದರೆ, ಜಂಟಿ ಗೋಡೆಯ ಮನೆ ಪಕ್ಕ­ದಲ್ಲಿ­ದ್ದಾಗ ಹೀಗೇ ಆಗುತ್ತದೆ ಎಂದು ಹೇಳು­ತ್ತಾರೆ. ಆದರೆ ಸಾವಿತ್ರಿ ನಿರ್ಮಿಸಿರುವ ಮನೆಯ ತಳಹದಿಯನ್ನು ಜಂಟಿ ಗೋಡೆಗಿಂತ ಎರಡೂವರೆ ಅಡಿ ಜಾಗ ಬಿಟ್ಟು ಕಟ್ಟಲಾಗಿದೆ. ಹೀಗಿದ್ದರೂ ಜಿಪಿಎಸ್ ವ್ಯವಸ್ಥೆಯಡಿ ಅದು ಸೇರುತ್ತಿಲ್ಲ, ಬಿಲ್ಲು ಪಾಸಾಗಿ ಹಣ ಕೈ ಸೇರುತ್ತಿಲ್ಲ.

ಇದು ಕೇವಲ ಇವರಿಬ್ಬರ ಕತೆಯಲ್ಲ. ರಾಜ್ಯ­ದಾದ್ಯಂತ ಸಾಕಷ್ಟು ಬಡ ಕುಟುಂಬಗಳು ಹೊಸ ಮನೆಯ ನಿರ್ಮಾಣಕ್ಕಾಗಿ ಇದ್ದ ಹಳೆ ಮನೆಯನ್ನು ಕೆಡವಿ, ಜಿಪಿಎಸ್ ಸಮಸ್ಯೆಯಿಂದ ಬಿಲ್ಲು­ಗಳು ಬರದೇ, ಸ್ವಂತ ಖರ್ಚಿನಿಂದ ಮನೆ ಕಟ್ಟಿ­ಕೊಳ್ಳಲು ಹಣವೂ ಇರದೇ ತ್ರಿಶಂಕು ಸ್ಥಿತಿ­ಯಲ್ಲಿ ತೊಳಲಾಡುತ್ತಿವೆ. ಸಾಲಸೋಲ ಮಾಡಿ ಮನೆ ಕಟ್ಟಿಕೊಂಡ ಫಲಾನುಭವಿಗಳು ಮುಖ ಒಣಗಿಸಿಕೊಂಡು, ‘ಇನ್ನ ಬಿಲ್ಲ ಯಾವಾಗ ಬರ್ತಾವರಿ? ನಾವು ಬಿಲ್ಲ ಬರತೈತಿ ಅಂತ ಸಾಲಾ ಮಾಡಿ ಮನಿ ಕಟ್ಟಗೊಂಡಿವಿರಿ. ಈಗ ದಿನಾ ಬೆಳ­ಗಾದ್ರ ಸಾಲಗಾರ ಮನಿಮುಂದ ಎದಿಮ್ಯಾಲೆ ಎದ್ದ ನಿಂತಂಗ ನಿಂದರತಾರರಿ. ಬರೆ ದಿನಾ ದಿನಾ ಟೇಪರೆಕಾರ್ಡ ಒದರಿದಂಗ ಬಿಲ್ಲ ಬಂದ ಮ್ಯಾಲೆ ಕೊಡತೀವಿ, ಬಿಲ್ಲ ಬಂದಮ್ಯಾಲೆ ಕೊಡತೀವಿ ಅಂತ ಅನ್ನೂದ ಆತ್ರಿ. ಮೊನ್ನೆ ನಮಗ ಸಾಲಾ ಕೊಟ್ಟ ಸೌಕಾರಾ, ಎಲ್ಲೊಲೆ ನಿನ್ನ ಬಿಲ್ಲ ಇನ್ನ ಯಾವಾಗ ಬರ್ತತಿ, ನೀ ಯಾವಾಗ ಕೊಡತಿ ಮಗನ ಅಂತ ಬಡಿಯಾಕ ಬಂದಿದ್ದರಿ’, ‘ಮನಿ ಅರ್ಧಕ್ಕ ನಿಂತೈತರಿ. ಹೇಳಿಕೇಳಿ ಮಳಗಾಲಾ ಜೋರಂಗ ಮಳಿ ಬೀಳಾಕತ್ತರ ಕಟ್ಟಿದಗೋಡಿ ನೆಲಸಮಾ ಅಕ್ಕಾವು. ಕಟ್ಟಿದ ಗೋಡಿನೂ ಕೆಡಿವಿಕೊಂಡ ಕುಂತ್ರ ಮುಂದ ಹ್ಯಾಂಗಕಟ್ಟಸೂದರಿ? ಆದಷ್ಟ ಲಗೂಣ ಬಿಲ್ಲ ಬರೂವಂಗ ಮಾಡ್ರಿ’ ಎನ್ನುವ ಗೋಳಿನ ಮಾತುಗಳು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಸುತ್ತ ದಿನನಿತ್ಯ ಕೇಳಿ ಬರುತ್ತಿವೆ.

ಈ ಗೋಳು ಗೊಂದಲಗಳಿಗೆಲ್ಲ ಕಾರಣವೇ­ನೆಂದು ನೋಡಿದರೆ, ಸರ್ಕಾರದ ವಸತಿ ನಿಗಮ­ಗಳು ಜಿಪಿಎಸ್ ವ್ಯವಸ್ಥೆಗೆ ನಿಗದಿಪಡಿಸಿರುವ ಮಾನದಂಡಗಳು ಎಂಬುದು ತಿಳಿಯುತ್ತದೆ. ವಸತಿ ಯೋಜನೆಗಳ ಅನುಷ್ಠಾನದಲ್ಲಿ ಪಾರದ­ರ್ಶ­ಕತೆ ಅಳವಡಿಸಿಕೊಳ್ಳುವುದರ ಜೊತೆಗೆ ಅಕ್ರ­ಮ­ಗಳಿಗೆ ಕಡಿವಾಣ ಹಾಕುವ ಸದುದ್ದೇಶ­ದೊಂದಿಗೆ ಜಿಪಿಎಸ್ ತಾಂತ್ರಿಕ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಅದರಿಂದಲೇ ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದು ವಿಪರ್ಯಾಸವೇ ಸರಿ.

ಜಿಪಿಎಸ್ ಉಪಗ್ರಹ ಆಧಾರಿತ ವ್ಯವಸ್ಥೆ. ಇದು ಭೂಮಿಯ ಅಕ್ಷಾಂಶ ರೇಖಾಂಶಗಳನ್ನು ನಿಖರ­ವಾಗಿ ಗುರುತಿಸುತ್ತದೆ. ಈ ತಂತ್ರಾಂಶ ಇರುವ ಮೊಬೈಲ್‌ನಲ್ಲಿ ಫಲಾನುಭವಿಯ ಮನೆ ಇರುವ ಸ್ಥಳದಲ್ಲಿ ನಿಂತು ಛಾಯಾಚಿತ್ರವನ್ನು ತೆಗೆದು ನಿಗಮದ ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ ಅಪ್‌­ಲೋಡ್‌  ಮಾಡಬೇಕು. ಆಗ ಫಲಾನುಭವಿಗೆ ನೀಡಿದ ಕೋಡ್ ಸಂಖ್ಯೆಗೆ ಅನುಗುಣವಾಗಿ ಮನೆಯ ಪ್ರಗತಿ ಹಂತವನ್ನು ನಿಗಮದ ಅಧಿ­ಕಾರಿಗಳು ಪರಿಶೀಲಿಸಲು ಅವಕಾಶವಾಗುತ್ತದೆ. ಆ ಪ್ರಕಾರ ಹಣ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಯಾರದೋ ಮನೆ ತೋರಿಸಿ ಮತ್ತಾರೋ ಬಿಲ್‌ ಪಡೆಯುವ, ಕಳ್ಳ ಬಿಲ್ ತಯಾರಿಸಿ ಹಣ ಲಪಟಾಯಿಸುವ ಕುಕೃತ್ಯ­ಗಳನ್ನು ತಡೆಯಬಹುದಾಗಿದೆ.

ಆದರೆ ಹಳ್ಳಿಗಳಲ್ಲಿನ ಸಮಸ್ಯೆಯೆಂದರೆ ಸ್ಥಳಾ­ಭಾವದಿಂದ ಬಹುತೇಕ ಮನೆಗಳು ಒಂದ­ಕ್ಕೊಂದು ಒತ್ತಿಕೊಂಡೇ ಇರುತ್ತವೆ. ಅಂದರೆ ಎರಡು ಮನೆಗಳನ್ನು ಒಂದೇ ಗೋಡೆ ಪ್ರತ್ಯೇಕಿ-­ಸು­ತ್ತಿರುತ್ತದೆ. ಹೀಗಾಗಿ ಒಂದು ಕುಟುಂಬ ತನ್ನ ಮನೆಯನ್ನು ಹೊಸದಾಗಿ ಕಟ್ಟಿಕೊಳ್ಳುವಾಗ ಮೂರೇ ಗೋಡೆಗಳನ್ನು ಕಟ್ಟುವುದು ಸಹಜ. ಆದರೆ ಈ ಬಗೆಯಾಗಿ ಮತ್ತೊಂದು ಮನೆಗೆ ಅಂಟಿಕೊಂಡೇ ಮನೆ ಕಟ್ಟಿದಾಗ ಜಿಪಿಎಸ್ ಅದನ್ನು ಪ್ರತ್ಯೇಕವಾದ ಹೊಸ ಮನೆ ಎಂದು ಪರಿಗಣಿಸದೇ, ಈಗಾಗಲೇ ಇರುವ ಮನೆಯ ವಿಸ್ತರಣೆ, ಅಂದರೆ ‘ಹೌಸ್‌ ಎಕ್‌್ಸಟೆನ್ಷನ್‌’ ಎಂದು ಗುರುತಿಸಿಬಿಡುತ್ತದೆ! ಇದೇ ಸಮಸ್ಯೆಯ ಮೂಲ.
ಮೊದಲು ಒಂದು ಜಾಗ ತೆಗೆದುಕೊಂಡು ಅಡಿಪಾಯ ಕಟ್ಟಿ ನಂತರ ಅಕ್ಕಪಕ್ಕದ ಜಾಗವನ್ನು ತೆಗೆದುಕೊಂಡು ಮನೆ ಕಟ್ಟಿದಾಗಲೂ ಈ ‘ಹೌಸ್ ಎಕ್ಸ್ ಟೆನ್ಷನ್’ ಸಮಸ್ಯೆ ಹುಟ್ಟಿ­ಕೊಳ್ಳು­ತ್ತದೆ.

ಜಿಪಿಎಸ್‌ನಲ್ಲಿ ಹೀಗೆ ‘ಹೌಸ್ ಎಕ್ಸ್ ಟೆನ್ಷನ್’ ಎಂದು ತೋರಿಸಿದ ಮನೆಗಳಿಗೆ ಹಾಗೂ ಜಿಪಿಎಸ್ ವ್ಯವಸ್ಥೆ ಆಗದೇ ಇರುವ ಮನೆಗಳಿಗೆ ಬಿಲ್ಲುಗಳು ಬರುವುದಿಲ್ಲ. ಆಗ  ಯೋಜನೆಯ ಫಲಾನುಭವಿ­ಗಳಿಗೆ ಸೂಕ್ತ ಕಾಲದಲ್ಲಿ ಹಣ ದೊರೆಯುವು­ದಿಲ್ಲ. ಹೀಗಾದಾಗ ಅಪೂರ್ಣಗೊಂಡು ನಿಂತ ಮನೆಗಳ ಸಮಸ್ಯೆಯನ್ನು ಸರಿಪಡಿಸುವ ಕೆಲಸ ತುಂಬಾ ಕಠಿಣವಾಗುತ್ತದೆ ಮತ್ತು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಇಂತಹ ಮನೆಗಳ ಕಡತಗಳನ್ನು ಗ್ರಾಮ ಪಂಚಾಯಿತಿಯಿಂದ ನೋಡಲ್ ಅಧಿಕಾರಿಗೆ ಕಳುಹಿಸಿದ ನಂತರ, ಅಲ್ಲಿಂದ ಸಂಬಂಧಿಸಿದ ಅಧಿ­ಕಾರಿ ಖುದ್ದಾಗಿ ಬಂದು ಪರಿಶೀಲಿಸಿ, ಫೋಟೊ ತೆಗೆದುಕೊಂಡು ಕಡತ ಸಿದ್ಧಪಡಿಸಿ ತಾಲ್ಲೂಕು ಪಂಚಾಯಿತಿಗೆ ಕೊಡಬೇಕು. ನಂತರ ಆ ಕಡತ ಜಿಲ್ಲಾ ಪಂಚಾಯಿತಿ, ಅಲ್ಲಿಂದ ರಾಜಧಾನಿ­ಯಲ್ಲಿ­ರುವ ಗೃಹ ಮಂಡಳಿಗೆ (ಹೌಸಿಂಗ್ ಬೋರ್ಡ್‌) ಹೋಗಿ ಅಲ್ಲಿಂದ ಬಿಲ್ಲು ಬರು­ವುದರಲ್ಲಿ ಆರು ತಿಂಗಳಿನಿಂದ ಒಂದು ವರ್ಷ ಹಿಡಿಯುತ್ತದೆ. ಅಲ್ಲಿಯವರೆಗೆ ಮನೆಯನ್ನು ಪೂರ್ಣಗೊಳಿಸಿಕೊಳ್ಳಲಾಗದ ಬಡ ಫಲಾನು­ಭವಿ­ಗಳು ನೋವು, ನಿರಾಸೆ, ಆತಂಕ, ಗೋಳಿನಲ್ಲಿ ದಿನಕಳೆಯಬೇಕಾಗುತ್ತದೆ.

ಬಡ ಪ್ರಜೆಗಳ ನೋವನ್ನು ನೀಗಿಸಲು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ತುರ್ತಾಗಿ ಗಮನ ಹರಿಸಬೇಕಾಗಿದೆ. ಜಿಪಿಎಸ್ ಸಮಸ್ಯೆಗೆ ಸಿಲುಕಿದ ಮನೆಗಳಿಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಿ, ಸದಸ್ಯ­ರಿಂದ ಪರಿಶೀಲನೆ ನಡೆಸಿ, ವರದಿ ತಯಾರಿಸ­ಬೇಕು. ಬಳಿಕ ಅದನ್ನು ಆದಷ್ಟು ಬೇಗ ಗೃಹ ಮಂಡ­ಳಿಗೆ ತಲುಪಿಸಬೇಕು. ಈ ಮೂಲಕ ಅಲ್ಲಿಂದ ಶೀಘ್ರದಲ್ಲಿ ಬಿಲ್ಲುಗಳು ಮಂಜೂರಾ­ಗು­ವಂತೆ ವ್ಯವಸ್ಥೆ ಮಾಡಬೇಕು. ಈ ಕ್ರಮವನ್ನು ಪ್ರತಿ ತಿಂಗಳೂ ತಪ್ಪದೇ ನಡೆಸಬೇಕು ಅಥವಾ ಕಡತ­ಗಳು ರಾಜಧಾನಿಗೆ ಹೋಗುವ ಬದಲು ಅವುಗಳ ಪರಿಶೀಲನೆ ಮತ್ತು ವಿಲೇವಾರಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದಲ್ಲೇ ನಡೆದರೆ ಸಮಸ್ಯೆಗೆ ಪರಿಹಾರ ಶೀಘ್ರದಲ್ಲಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.