ADVERTISEMENT

ಡಿಂಕೋಯಿಸಮ್ ಎಂಬ ಹೊಸ ಧರ್ಮ

ಮಾನವೀಯ ಮೌಲ್ಯ ಪ್ರತಿಪಾದಿಸಲು ಹುಟ್ಟಿಕೊಂಡಿದ್ದರೂ ‘ಧರ್ಮ’ವೆಂಬ ಕಲ್ಪನೆಗೆ ಜೋತು ಬಿದ್ದಿರುವುದು ವಿಪರ್ಯಾಸ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ಮಾನವ ಜಗತ್ತಿಗೆ ಹೊಸ ಸೇರ್ಪಡೆಯಾಗಿ ಕೇರಳದಲ್ಲಿ ‘ಡಿಂಕೋಯಿಸಮ್’ ಎಂಬ ಧರ್ಮ ಹುಟ್ಟಿಕೊಂಡಿದೆ. ಧರ್ಮಗಳ ಹುಸಿ ಸತ್ಯಗಳನ್ನು ವ್ಯಂಗ್ಯ ಮಾಡಲೆಂದೇ ಈ ಪರ್ಯಾಯ ಧರ್ಮ ಸ್ಥಾಪನೆಯಾಗಿದೆ ಎಂದು ಡಿಂಕೋಯಿಸಮ್‌ನ ದೇವರು ಡಿಂಕನ್ ಹೇಳುತ್ತಾನೆ. ಈ ಡಿಂಕನ್ ಎಂಬ ಹೊಸ ದೇವರು ಒಂದು ಇಲಿಯಾಗಿದ್ದು ಅತಿಮಾನುಷ ಶಕ್ತಿಯುಳ್ಳವನಾಗಿದ್ದಾನೆ. ಡಿಂಕನ್ ಮೊದಲು ಪರಿಚಿತವಾಗಿದ್ದು ಕೇರಳದ ‘ಬಾಲಮಂಗಳಮ್’ ಎಂಬ ಮಕ್ಕಳ ಪತ್ರಿಕೆಯಲ್ಲಿ. ಆದ್ದರಿಂದ ಬಾಲಮಂಗಳಮ್ ಪತ್ರಿಕೆಯೇ ಡಿಂಕೋ ಧರ್ಮದ ಧರ್ಮಗ್ರಂಥವೆಂದು ಅನುಯಾಯಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲೂ ‘ಬಾಲಮಂಗಳ’ ಓದಿದವರಿಗೆ ಡಿಂಗ ಎಂಬ ಇಲಿಯ ಕಥಾನಕಗಳು ನೆನಪಿರುತ್ತವೆ. ಈತನ ಹೆಸರಿನಲ್ಲೇ ಈಗ ಒಂದು ಧರ್ಮ ಸ್ಥಾಪನೆಯಾಗಿದೆ. ಕೇರಳದಲ್ಲಿ ಡಿಂಕೋ ಧರ್ಮಕ್ಕೆ ಸೇರಿರುವ ಸುಮಾರು 500ಕ್ಕೂ ಹೆಚ್ಚು ಅನುಯಾಯಿಗಳು ತಮ್ಮ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಡಿಂಕೋ ಧರ್ಮಕ್ಕೆ ಈಗ ಚಲಾವಣೆಯಲ್ಲಿರುವ  ಧರ್ಮಗಳಲ್ಲಿರುವ ಹುಳುಕನ್ನು ತೋರಿಸುವ ಉದ್ದೇಶವಿದೆ.

ಲಿಂಗ ಸಮಾನತೆ, ಧರ್ಮನಿರಪೇಕ್ಷತೆ, ಜಾತಿವಿನಾಶ ಮತ್ತು ವೈಜ್ಞಾನಿಕ ಚಿಂತನೆ ಈ ಧರ್ಮದ ಮುಖ್ಯ ಆಶಯಗಳು. ಪರ್ಯಾಯ ನಂಬಿಕೆಯನ್ನು ತರುವ ಉದ್ದೇಶ ಈ ಧರ್ಮಕ್ಕಿದೆ. ಡಿಂಕೋಯಿಸಮ್‌ನ ಉದ್ದೇಶಗಳು ಉನ್ನತವಾಗಿದ್ದರೂ, ಈ ಉದ್ದೇಶಗಳನ್ನು ಪೂರೈಸಲು ಮತ್ತೆ ‘ಧರ್ಮ’ವೆಂಬ ಚೌಕಟ್ಟಿನೊಳಗೆ ತನ್ನ ಸ್ವರೂಪವನ್ನು ಕಟ್ಟಿಹಾಕಿಕೊಂಡಿರುವುದನ್ನು ಪ್ರಶ್ನಿಸಬೇಕಾಗುತ್ತದೆ. ಸಮಾನತೆ, ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಯನ್ನು ಸಮಾಜದಲ್ಲಿ ಮೂಡಿಸಲು ಮತ್ತೆ ‘ನಂಬಿಕೆ’ ಎಂಬ ಭಾವನೆಯ ಊರುಗೋಲನ್ನು ಡಿಂಕೋಯಿಸಮ್ ಉಪಯೋಗಿಸುತ್ತದೆ.

ಈ ರೀತಿಯ ವಿಡಂಬನಾ ಧರ್ಮದ ಸ್ಥಾಪನೆ ಭಾರತದಲ್ಲಿ ಮೊದಲಾದರೂ ಪ್ರಪಂಚಕ್ಕೆ ಹೊಸದೇನಲ್ಲ. ಬರ್ಟಂಡ್ ರಸಲ್ 1952ರಲ್ಲಿ ‘ದೇವರು ಇದ್ದಾನೆಯೇ?’ ಎಂಬ ತಮ್ಮ ಲೇಖನದಲ್ಲಿ ದೇವರು ಎಂಬ ಪ್ರಶ್ನಾತೀತ ಕಲ್ಪನೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ‘ದೇವರ’ ಅಸ್ತಿತ್ವಕ್ಕೆ ಪುರಾವೆಗಳನ್ನು ತೋರಿಸಲು ಇಂದಿನವರೆಗೂ ಸಾಧ್ಯವಾಗದಿರುವುದರಿಂದ ದೇವರನ್ನು ನಂಬುವ ಅವಶ್ಯಕತೆಯಿಲ್ಲ ಎಂದು ವಿಜ್ಞಾನ ಹೇಳುತ್ತದೆ. ವಿಜ್ಞಾನಕ್ಕೆ ದೇವರು ಇದೆ ಎಂಬುದಕ್ಕೆ ಹೇಗೆ ಪುರಾವೆಗಳನ್ನು ತೋರಿಸಲು ಸಾಧ್ಯವಾಗಿಲ್ಲವೋ ಹಾಗೆಯೇ ದೇವರು ಇಲ್ಲ ಎನ್ನುವುದಕ್ಕೂ ಪುರಾವೆಗಳನ್ನು ತೋರಿಸಲು ಸಾಧ್ಯವಾಗಿಲ್ಲ.

‘ದೇವರು’ ಇಲ್ಲ ಎಂಬುದನ್ನು ಪುರಾವೆಗಳ ಸಮೇತ ಸಾಧಿಸಿ ತೋರಿಸಲು ಸಾಧ್ಯವಾಗದಿರುವುದರಿಂದ ದೇವರು ಇದ್ದಾನೆ ಎಂದೇ ನಂಬಬೇಕು ಎಂದು ಧಾರ್ಮಿಕ ಮನಸ್ಸುಗಳು ವಾದವನ್ನು ಮುಂದಿಡುತ್ತವೆ. ಈ ವಾದವನ್ನು ರಸಲ್ ಪ್ರಶ್ನಿಸುತ್ತಾರೆ. ಕೆಲವು ಕಲ್ಪನೆಗಳಿಗೆ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಸಾಧ್ಯವಾಗದಿದ್ದರೆ ಅವು ಕಲ್ಪನೆಗಳಾಗೇ ಉಳಿಯಬೇಕಾಗುತ್ತವೆ. ರಸಲ್, ದೇವರು ಎಂಬ ಕಲ್ಪನೆಗೆ ಪ್ರತ್ಯುತ್ತರವಾಗಿ ಅವರದೇ ಒಂದು ಕಲ್ಪನೆಯನ್ನು ಉದಾಹರಣೆಗಾಗಿ ಮುಂದಿಡುತ್ತಾರೆ: ‘ಭೂಮಿ ಮತ್ತು ಸೂರ್ಯನ ನಡುವೆ ಒಂದು ‘ಚೀನಾ ಟೀ ಪಾಟ್’ ಸುತ್ತುತ್ತಿದೆ. ಆದರೆ ಅದು ಟೆಲಿಸ್ಕೋಪಿನ ಕಣ್ಣಿಗೂ ಕಾಣಿಸದಷ್ಟು ಸಣ್ಣದು.

ಆದ್ದರಿಂದ ಯಾರಿಗೇ ಆಗಲಿ ಈ ಕಾಲಮಾನಕ್ಕೆ ನಮ್ಮಲ್ಲಿರುವ ಸಾಧನಗಳಿಂದ ಈ ಟೀ ಪಾಟನ್ನು ಸೂರ್ಯನ ಕಕ್ಷೆಯಲ್ಲಿ ಸುತ್ತುತ್ತಿದೆ ಎಂದು ಸಾಬೀತು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅದು ಇರುವುದು ನಿಜ ಎಂದು ನಾನು ನಂಬುತ್ತೇನೆ. ನನ್ನಂತೆಯೇ ಸಾವಿರಾರು ಜನ ನಂಬುತ್ತಾರೆ. ಹಾಗಾದರೆ ಟೀ ಪಾಟ್ ಇರುವುದು ಸತ್ಯವಾದೀತೇ? ಟೀ ಪಾಟ್ ಇರುವುದು ನನ್ನ ನಂಬಿಕೆಯಾದ್ದರಿಂದ ಮತ್ತು ಟೀ ಪಾಟನ್ನು ಸಾಬೀತುಪಡಿಸಲು ಈಗ ಯಾವುದೇ ಸಾಧನಗಳಿಲ್ಲದಿರುವುದರಿಂದ ಟೀ ಪಾಟ್ ಇರುವುದೇ ನಿಜ ಎಂದು ನೀವೆಲ್ಲಾ ನಂಬಬೇಕು ಎಂದು ನಾನು ಪಟ್ಟು ಹಿಡಿಯಲಾಗುತ್ತದೆಯೇ?

ನೀವು ನನ್ನ ಕಲ್ಪನೆಯನ್ನು ನಂಬದಿದ್ದರೆ ಟೀ ಪಾಟಿನಲ್ಲಿ ಭಕ್ತಿಯಿಲ್ಲದ ಅಹಂಕಾರಿ ಎಂದು ನಾನು ನಿಮ್ಮನ್ನು ದೂರುವುದು ಎಷ್ಟು ಸರಿ?’ ಎಂದು ತಮ್ಮ ವಾದವನ್ನು ಮುಂದಿಡುತ್ತಾರೆ. ಟೀ ಪಾಟ್ ಸೂರ್ಯನ ಕಕ್ಷೆಯಲ್ಲಿ ಸುತ್ತುತ್ತಿದೆ ಎನ್ನುವುದು ಹಾಸ್ಯಾಸ್ಪದ ಕಲ್ಪನೆಯಂತೆ ನಮಗೆ ಕಾಣಿಸುತ್ತದೆ. ಆದರೆ ದೇವರು ಎಂಬ ಕಲ್ಪನೆಯನ್ನು ನಾವು ಅರ್ಥೈಸುವಲ್ಲಿ ಮಾತ್ರ ವಿಶೇಷ ರಿಯಾಯಿತಿ ಕೊಡುತ್ತೇವೆ. ‘ದೇವರು’ ಒಂದು ಕಲ್ಪನೆ ಎಂದು ಒಪ್ಪಲು ನಾವು ಸಿದ್ಧರಿಲ್ಲ. ಟೀ ಪಾಟಿಗೂ ದೇವರಿಗೂ ಏನೇನೂ ವ್ಯತ್ಯಾಸವಿಲ್ಲ. ವಿಜ್ಞಾನಕ್ಕೆ ಇಂದಿಗೂ ಈ ಎರಡೂ ಕಲ್ಪನೆಗಳಲ್ಲಿ ಯಾವುದೇ ವ್ಯತ್ಯಾಸವನ್ನು ಹುಡುಕಲು ಸಾಧ್ಯವಾಗಿಲ್ಲ.

ಇದು ಸತ್ಯವಾದರೂ ‘ದೇವರು’ ತಲೆತಲಾಂತರದಿಂದ ನಂಬಿಕೊಂಡು ಬಂದಿರುವ ಕಲ್ಪನೆಯಾದ್ದರಿಂದ ಅದು ಕೇವಲ ಕಲ್ಪನೆಯಾಗಿ ಉಳಿಯದೆ ಪ್ರಶ್ನಾತೀತವಾದ ಅಂತಿಮ ಸತ್ಯವಾಗಿಬಿಟ್ಟಿದೆ. ಆದರೆ ವಿಜ್ಞಾನದಲ್ಲಿ ಯಾವುದೂ ಪ್ರಶ್ನಾತೀತವಲ್ಲ ಮತ್ತು ಅಂತಿಮ ಸತ್ಯವಲ್ಲ. ವಿಜ್ಞಾನ ವಿಮರ್ಶೆಗೆ ತನ್ನನ್ನು ತಾನು ಯಾವಾಗಲೂ ತೆರೆದುಕೊಂಡಿರುತ್ತದೆ. ‘ನಾನು ತಿಳಿಸಿದ್ದೇ ಅಂತಿಮ ಸತ್ಯ’ ಎಂದು ವಿಜ್ಞಾನ ಎಂದಿಗೂ ಪ್ರತಿಪಾದಿಸುವುದಿಲ್ಲ. ದೇವರು ಎಂಬ ಕಲ್ಪನೆ ಮತ್ತು ಅದರ ಆಧಾರದ ಮೇಲೆ ನಿಂತಿರುವ ಧರ್ಮ ಇದಕ್ಕೆ ತದ್ವಿರುದ್ಧವಾದದ್ದು. ಏಕೆಂದರೆ ದೇವರು-ಧರ್ಮ ಅಂತಿಮ ಸತ್ಯವನ್ನು ಪ್ರತಿಪಾದಿಸುತ್ತವೆ.

‘ಚೀನಾ ಟೀ ಪಾಟ್‌’ನಂತೆಯೇ ಸೂರ್ಯನ ಕಕ್ಷೆಯಲ್ಲಿ ಸುತ್ತುವ ‘ಫ್ಲೈಯಿಂಗ್ ಸ್ಪೆಗೆಟಿ ಮಾನ್ಸ್ಟರ್’ ಎಂಬ ನ್ಯೂಡಲ್ಸ್‌ನ ಪೆಡಂಭೂತವನ್ನು ವಿಡಂಬನೆಗಾಗಿ ತೋರಿಸಿರುವುದು ಇದೆ.  ಈ ಉದಾಹರಣೆಗಳೇ ಮುಂದೆ ಧರ್ಮ-ದೇವರು ಕಲ್ಪನೆಗಳನ್ನು ವಿಡಂಬನೆ ಮಾಡಲು ಹೆಚ್ಚು ಬಳಕೆಯಾಗಿ ಈ ಕಲ್ಪನೆಯ ಹೆಸರಿನಲ್ಲಿ ಪರ್ಯಾಯ ಧರ್ಮಗಳೇ ಸೃಷ್ಟಿಯಾಗಿವೆ. ಇಂತಹ ಪರ್ಯಾಯ ಧರ್ಮಗಳು ಇಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರೈಸ್ತ ಧರ್ಮವನ್ನು ಅಣಕ ಮಾಡುತ್ತವೆ. ಅಣಕ ಮಾಡುತ್ತಲೇ ಕಾಲ ಕಳೆದಂತೆ ಈ ಪರ್ಯಾಯ ಧರ್ಮಗಳು ಲಕ್ಷಾಂತರ ಅನುಯಾಯಿಗಳನ್ನು ಪಡೆದಿವೆ.

ಹಾಗೆಯೇ ಧರ್ಮವನ್ನು ಅಣಕಿಸುವ ಸಲುವಾಗಿ ಹುಟ್ಟಿಕೊಂಡ ಈ ಕಲ್ಪನೆಗಳು ತಮ್ಮ ಮೂಲ ಉದ್ದೇಶಗಳಿಗೆ ತದ್ವಿರುದ್ಧವಾಗಿ ಈಗ ಸ್ಥಾಪಿತ ಧರ್ಮಗಳಾಗಿ ಮುಂದುವರೆಯುತ್ತಿವೆ. ಸೈಂಟಾಲಜಿ ಎಂಬ ಅಸಂಬದ್ಧ ಧರ್ಮವೂ ಹೀಗೆಯೇ ಹುಟ್ಟಿಕೊಂಡಿದ್ದು. ತಾರ್ಕಿಕವಾಗಿ ನಿಲುಕದ ಇಂತಹ ಪರ್ಯಾಯ ಧರ್ಮಗಳ ಸೃಷ್ಟಿ ಮತ್ತೊಂದು ಮೂಢನಂಬಿಕೆಯನ್ನು ಸಮಾಜದಲ್ಲಿ ಸೃಷ್ಟಿಸುವ ಅಪಾಯವನ್ನು ಕಾಲಕಳೆದಂತೆ ಪಡೆದಿರುತ್ತದೆ. ಧರ್ಮಗಳು ಪ್ರತಿಪಾದಿಸುವಂತೆ ಶಾಂತಿಯೇ ಅವುಗಳ ಮೂಲ ಉದ್ದೇಶವಾಗಿದ್ದರೆ ಇಂದಿಗೂ ಮನುಕುಲದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿರುತ್ತಿರಲಿಲ್ಲ.

ದೇವರು-ಧರ್ಮಗಳು ಇರುವುದರಿಂದಲೇ ಸಮಾಜದಲ್ಲಿ ಇಷ್ಟಾದರೂ ಶಾಂತಿ ತುಂಬಿದೆ ಎಂದು ಸಮರ್ಥನೆ ಕೊಡುವವರು ಒಮ್ಮೆ ಧರ್ಮವೇ ಏಕಸ್ವಾಮ್ಯವನ್ನು ಹೊಂದಿರುವ ದೇಶಗಳನ್ನು ಅಭ್ಯಸಿಸಬೇಕು. ಸಮಾಜಕ್ಕೆ ಬೇಕಿರುವುದು ಸಮಾನತೆ, ವೈಚಾರಿಕತೆ ಮತ್ತು ಮಾನವೀಯತೆಯನ್ನು ನೇರವಾಗಿ ಪ್ರತಿಪಾದಿಸುವ ಮೌಲ್ಯಗಳು. ಈ ಮೌಲ್ಯಗಳನ್ನು ಪ್ರತಿಪಾದಿಸಲು ಕುರುಡು ನಂಬಿಕೆಯನ್ನು ನಿರೀಕ್ಷಿಸುವ ದೇವರು-ಧರ್ಮವೆಂಬ ಕಲ್ಪನೆಗಳ ಅಗತ್ಯವಿಲ್ಲ. ಡಿಂಕೋಯಿಸಮ್ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಲು ಹುಟ್ಟಿಕೊಂಡಿದ್ದರೂ ‘ಧರ್ಮ’ವೆಂಬ ಕಲ್ಪನೆಗೆ ಜೋತು ಬಿದ್ದಿರುವುದು ವಿಪರ್ಯಾಸ. ಕಾಲಕಳೆದಂತೆ ಅದರ ಮೂಲ ಉದ್ದೇಶಗಳು ಮಾಸಿ ಮತ್ತೊಂದು ಕುರುಡು ಧರ್ಮದ ಸೃಷ್ಟಿಗೆ ಇದು ನಾಂದಿಯಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.