ADVERTISEMENT

ನೀರಾ ನೀತಿ ಜಾರಿಗೊಳಿಸಿ

ಎಸ್.ಗಂಗಾಧರಯ್ಯ
Published 27 ಏಪ್ರಿಲ್ 2017, 19:42 IST
Last Updated 27 ಏಪ್ರಿಲ್ 2017, 19:42 IST
ನೀರಾ ನೀತಿ ಜಾರಿಗೊಳಿಸಿ
ನೀರಾ ನೀತಿ ಜಾರಿಗೊಳಿಸಿ   

ತೆಂಗು ಬೆಳೆಗಾರರ ಪಾಲಿಗೆ ಸದ್ಯದ ದಿನಗಳು ಹಿಂದೆಂದಿಗಿಂತಲೂ ತುಂಬಾ ಶೋಚನೀಯವಾಗಿವೆ. ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ವ್ಯಾಪಾರಿ ವರ್ಗದವರ ಶೋಷಣೆ ಮುಂದುವರಿದಿದೆ. ಕೊಬ್ಬರಿ ಬೆಲೆ ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿದ್ದು ರೈತರಿಗೆ ಉತ್ಪಾದನಾ ವೆಚ್ಚದ ಅರ್ಧದಷ್ಟೂ ಸಿಗುತ್ತಿಲ್ಲ.

ಇಂಥ ಸ್ಥಿತಿ ಸುಧಾರಣೆಗಾಗಿ ಮತ್ತು ರೈತರ ಶೋಷಣೆ ತಪ್ಪಿಸುವ ಸಲುವಾಗಿ ಸರ್ಕಾರವೇ ಜಾರಿಗೆ ತಂದಿರುವ ಆನ್‌ಲೈನ್ ಟ್ರೇಡಿಂಗ್ ವ್ಯವಸ್ಥೆಯು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅನಾಥವಾಗಿದೆ. ಆಗಾಗ್ಗೆ ಬಂದು ತೆಂಗಿನ ಮರಗಳನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ಕೀಟಬಾಧೆಯ  ಜೊತೆಗೆ ಕಳೆದ ಎರಡು ವರ್ಷಗಳಿಂದ ಅಪ್ಪಳಿಸಿರುವ ಭೀಕರ ಬರದಿಂದಾಗಿ ತೆಂಗು ಬೆಳೆಗಾರರು ಚೇತರಿಸಿಕೊಳ್ಳಲಾಗದಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬರದ ಹೊಡೆತಕ್ಕೆ  ತೆಂಗು ಸೀಮೆಯ ಲಕ್ಷಾಂತರ ಮರಗಳು ಒಣಗುತ್ತಿವೆ. ತೆಂಗನ್ನೇ ನಂಬಿ ಬದುಕುತ್ತಿರುವ ರೈತ ದಿಕ್ಕು ಕಾಣದಾಗಿದ್ದಾನೆ. ಆರ್ಥಿಕವಾಗಿ ನೆಲ ಕಚ್ಚಿದ್ದಾನೆ. ಅಳಿದುಳಿದ ಮರಗಳನ್ನೇ ಬದುಕಿಗಾಗಿ ಆಶ್ರಯಿಸಬೇಕಾದಂಥ ಅನಿವಾರ್ಯಕ್ಕೆ ಒಳಗಾಗಿದ್ದಾನೆ. ಇಂತಹ  ಸ್ಥಿತಿಯಲ್ಲಿ ತೆಂಗು ಬೆಳೆಗಾರ  ಉಸಿರಾಡಲು ಕಿಂಚಿತ್ತು ನೆರವಾಗಬಲ್ಲಂಥದ್ದು ತೆಂಗಿನ ಮರಗಳಿಂದ ಇಳಿಸಬಹುದಾದ ನೀರಾ.

ನೀರಾ ಇಳಿಸಲು ಅನುಮತಿ ಕೊಡಲು ಹಾಗೂ ಅದನ್ನು ಅಬಕಾರಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಸಂಗತಿ. ಇಂಥದೊಂದು ತೀರ್ಮಾನ ಹೊರಬಿದ್ದ ತಕ್ಷಣ ತೆಂಗು ಬೆಳೆಗಾರನ ಮೊಗದಲ್ಲಿ ತುಸು  ಸಂತಸ ಮೂಡಿದ್ದು ನಿಜ. ಕಳೆದ ಎರಡು ಬಜೆಟ್‌ಗಳಲ್ಲೂ ನೀರಾ ನೀತಿಯನ್ನು ಜಾರಿಗೊಳಿಸುವುದಾಗಿ ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಅದು ಇವತ್ತಿಗೂ ಜಾರಿಯಾಗಿಲ್ಲ. ಬಾಯಿ ಉಪಚಾರದ ಮಾತಾಗಿಯೇ ಉಳಿದಿದೆ.

ಸರ್ಕಾರದ ಈ ಮಾತನ್ನು ನಂಬಿ ತೆಂಗು ಬೆಳೆಯುವ ಪ್ರದೇಶದಲ್ಲಿ ಈಗಾಗಲೇ ಹದಿಮೂರು ತೆಂಗು ಉತ್ಪಾದನಾ ಕಂಪೆನಿಗಳು ಅಸ್ತಿತ್ವಕ್ಕೆ ಬಂದು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿವೆ. ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದ್ದ ಹಾಗೂ ತೆಂಗು ಬೆಳೆಗಾರರಿಗೆ ನೆರವಾಗಬೇಕಾಗಿದ್ದ ತೆಂಗು ಅಭಿವೃದ್ಧಿ ಮಂಡಳಿ ಒಂದು ರೀತಿಯಲ್ಲಿ ಕೈಚೆಲ್ಲಿ ಕೂತಿದೆ.

ತನ್ನ ಪ್ರಾಯೋಜಕತ್ವದಲ್ಲಿ ಸ್ಥಾಪನೆಗೊಂಡಿರುವ ಕಂಪೆನಿಗಳ ಬಗ್ಗೆ ಕೂಡ ಮಂಡಳಿ ಸರಿಯಾದ ನಿಗಾ ವಹಿಸದೆ, ನೀರಾ ನೀತಿಯ ತಕ್ಷಣದ ಜಾರಿ ಅಗತ್ಯದ ಬಗ್ಗೆ ಸರ್ಕಾರಕ್ಕೆ ಸಕಾಲಕ್ಕೆ ಮನವರಿಕೆ ಮಾಡಿಕೊಡಲಾಗದೆ ರೈತರು ತನ್ನನ್ನು ದೂರುವಂತಹ ವಾತಾವರಣವನ್ನು ಸ್ವತಃ ಮಂಡಳಿಯೇ  ಸೃಷ್ಟಿಸಿಕೊಂಡಿದೆ. ಸರ್ಕಾರದ ಆದೇಶ ಆಗ ಸಿಗುತ್ತದೆ, ಈಗ ಸಿಗುತ್ತದೆ ಅನ್ನುವ ಸಬೂಬು ಹೇಳುತ್ತಲೇ ಬಂದಿದೆಯೇ ಹೊರತು ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುವ ಮನಸ್ಸನ್ನು ಅಲ್ಲಿನ ಅಧಿಕಾರಶಾಹಿ ಮಾಡಿದಂತಿಲ್ಲ.

ನೀರಾ ನೀತಿಯ ಕರಡನ್ನು ಸರ್ಕಾರ ಈಗಾಗಲೇ ರೂಪಿಸಿದೆ. ಆದರೆ ಅದನ್ನು ಜಾರಿ ಮಾಡುವಲ್ಲಿ ವಿಳಂಬ  ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ರೈತರು ನೀರಾ ಇಳಿಸಲು ಹಾಗೂ ಅದನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಇಲ್ಲದಂತಾಗಿದೆ. ಹಾಗೆ ನೋಡಿದರೆ ನೀರಾ ಕುರಿತ ತೆಂಗು ಬೆಳೆಗಾರರ ಬೇಡಿಕೆ ಇತ್ತೀಚಿನದ್ದೇನೂ ಅಲ್ಲ.

ನೀರಾ ಇಳಿಸಲು ಅನುಮತಿ ಕೊಡುವಂತೆ ಆಗ್ರಹಿಸಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ನೇತೃತ್ವದಲ್ಲಿ ಚಳವಳಿ ನಡೆದಿತ್ತು. ಆದರೆ ಲಿಕ್ಕರ್ ಲಾಬಿಗೆ  ಮಣಿದು ಸರ್ಕಾರ ಅದಕ್ಕೆ ಅನುಮತಿ ನಿರಾಕರಿಸಿತು. ಅಲ್ಲದೆ,  ಸಾವಿರಾರು ರೈತರನ್ನು ಬಂಧಿಸುವ ಮೂಲಕ ಚಳವಳಿಯನ್ನು ಆಗ ಹತ್ತಿಕ್ಕಿತು.

ಈಗಂತೂ ಕೆಟ್ಟ ಬರಗಾಲ. ಈ ಸಂದರ್ಭದಲ್ಲಿ ತೆಂಗು ಬೆಳೆಗಾರರಿಗೆ ಬದುಕಿ ಉಳಿಯಲು ಸದ್ಯಕ್ಕೆ ಕಾಣುತ್ತಿರುವ ಏಕೈಕ ಮಾರ್ಗ ನೀರಾ ಇಳಿಸುವುದು. ಈ ನಿಟ್ಟಿನಲ್ಲಿ ಕುಣಿಗಲ್‌ನಲ್ಲಿ ತೆಂಗು ಉತ್ಪಾದಕ ಕಂಪೆನಿಯೊಂದು ಈಗಾಗಲೇ ಹೆಜ್ಜೆ ಇಟ್ಟಿದೆ. ಈ ಕಂಪೆನಿಯ ಪರಿಣತರೊಬ್ಬರ ಪ್ರಕಾರ, ಕೇವಲ ಹತ್ತು ತೆಂಗಿನ ಮರಗಳಿಂದ ನೀರಾ ಇಳಿಸಿದರೆ ವರ್ಷಕ್ಕೆ ₹ 1.50 ಲಕ್ಷ ಆದಾಯ ಪಡೆಯಬಹುದು. ಅಲ್ಲದೆ, ಒಂದು ಮರದಲ್ಲಿ ಆರು ತಿಂಗಳ ಕಾಲ ಪ್ರತಿದಿನ ಎರಡು ಲೀಟರ್ ನೀರಾ ಇಳಿಸಬಹುದು.

ಅಂದರೆ ಒಂದು ಮರಕ್ಕೆ ವಾರ್ಷಿಕ ₹ 15 ಸಾವಿರದಷ್ಟು ಆದಾಯ ಸಿಗಲಿದೆ. ಇಷ್ಟು ಪ್ರಮಾಣದ ಆದಾಯವನ್ನು ಒಂದು ತೆಂಗಿನ ಮರದಲ್ಲಿ ನೀರಾದಿಂದ ಅಲ್ಲದೆ ಬೇರೆ ಯಾವ ತೆಂಗಿನ ಉತ್ಪನ್ನದಿಂದಲೂ ಪಡೆಯಲು ಸಾಧ್ಯವಿಲ್ಲ. ಕಾಫಿ ಕೆಫೆಗಳಂತೆ ನೀರಾ ಕೆಫೆಗಳನ್ನು ತೆಗೆಯುವುದರಿಂದ ಮಾರಾಟವೂ ಚೆನ್ನಾಗಿ ಆಗುತ್ತದೆ. ಜನರಿಗೆ ಆರೋಗ್ಯಕರ ಪಾನೀಯವನ್ನೂ ನೀಡಿದಂತಾಗುತ್ತದೆ ಅನ್ನುತ್ತಾರೆ.

ನೀರಾ ಇಳಿಸುವುದರಿಂದ ತೆಂಗಿನ ಮರದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲವೆಂಬುದು ವೈಜ್ಞಾನಿಕವಾಗಿ ಈಗಾಗಲೇ ಸಾಬೀತಾಗಿದೆ.  ನೀರಾ ಇಳಿಸುವ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗಲಿವೆ. ಕೇರಳ ಮತ್ತು ತಮಿಳುನಾಡಿನಲ್ಲಿ ಇದಕ್ಕೆ ನಿದರ್ಶನಗಳು ಸಿಗುತ್ತವೆ.  ನೀರಾ ಇಳಿಸಲು ಹಾಗೂ ಮಾರಾಟ ಮಾಡಲು ಅಲ್ಲಿನ ಸರ್ಕಾರಗಳು ಅವಕಾಶ ಕಲ್ಪಿಸಿಕೊಟ್ಟಿವೆ.

ADVERTISEMENT

ಅಲ್ಲಿನ ರೈತರು ನೀರಾದೊಂದಿಗೆ ಸಕ್ಕರೆ, ಜೇನುತುಪ್ಪ ಅಂಥವುಗಳನ್ನು ತಯಾರಿಸಿ ಮಾರುವ ಮೂಲಕ ನೀರಾದ ಉಪ ಉತ್ಪನ್ನಗಳಿಂದಲೂ ಒಳ್ಳೆಯ ಬೆಲೆ ಪಡೆಯುತ್ತಿದ್ದಾರೆ ಹಾಗೂ ಮಾದರಿಯಾಗಿದ್ದಾರೆ.

ಇಡೀ ದೇಶದಲ್ಲಿ ಅತಿಹೆಚ್ಚು ತೆಂಗು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 17 ಜಿಲ್ಲೆಗಳಲ್ಲಿ ತೆಂಗು ಬೆಳೆ ಇದೆ. 13 ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿದೆ. ತುಮಕೂರು ಜಿಲ್ಲೆಯೊಂದರಲ್ಲೇ 1.52 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಬೆಳೆ ಇದೆ. 

ಇಷ್ಟೂ ಜಿಲ್ಲೆಗಳ ರೈತರು ನಂಬಿರುವ  ತೆಂಗಿನ ಸಾಂಪ್ರದಾಯಿಕ ಆದಾಯದ ಮೂಲವೇ ಈಗ ಬತ್ತಿಹೋಗಿದೆ. ಅಂದರೆ ಕೊಬ್ಬರಿ ಮಾಡುವುದು, ಕಾಯಿಗಳನ್ನು ಇಲ್ಲವೇ ಎಳನೀರನ್ನು ಮಾರಾಟ ಮಾಡುವಂಥ ತೆಂಗು ಆಶ್ರಿತ ಆದಾಯವೇ ಇಲ್ಲವಾಗುತ್ತಿದೆ.

ಆದಕಾರಣ ನೀರಾ ನೀತಿಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಿದರೆ ರೈತರಿಗೆ ನೆರವಾದಂತೆ ಆಗುತ್ತದೆ. ಸರ್ಕಾರ ಯಾವ ಲಾಬಿಗೂ ಮಣಿಯದೆ ನೀರಾ ವಿಷಯದಲ್ಲಿ ಅಂಥ ಇಚ್ಛಾಶಕ್ತಿಯನ್ನು ತೋರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.