ADVERTISEMENT

ನ್ಯಾಯದಾನ ವ್ಯವಸ್ಥೆಯ ಉತ್ತರದಾಯಿತ್ವ...

ಸಚ್ಚಿದಾನಂದ ಹೆಗಡೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

-ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ­ಗಳನ್ನು  ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳೆಂದು ಪರಿಗಣಿಸ­ಲಾಗಿದೆ. ಇವುಗಳ ಜೊತೆಗೆ ಪತ್ರಿಕಾರಂಗ ನಾಲ್ಕನೆಯ ಸ್ತಂಭವಾಗಿದೆ. ಈ ನಾಲ್ಕೂ ಆಧಾರ­ಸ್ತಂಭಗಳು  ಆಂತರಿಕವಾದ ತಮ್ಮದೇ ಸ್ವಯಂ ಸರಿಪಡಿಸುವಿಕೊಳ್ಳುವಿಕೆಯನ್ನು ಆವಿಷ್ಕರಿಸಿ  ಅಭಿವೃದ್ಧಿಪಡಿಸಿಕೊಳ್ಳುವುವು ಎಂದು ಭಾವಿಸ­ಲಾ­ಗಿತ್ತು.

ಅದರಲ್ಲೂ ಜನರಿಗೆ ನ್ಯಾಯದ ಭರವಸೆ ನೀಡಬೇಕಾದ ಭಾರತೀಯ ನ್ಯಾಯ­ದಾನ ಪದ್ಧತಿಯ ಮೇಲೆ ಜನರಿಗೆ ಹೆಚ್ಚಿನ ನಿರೀಕ್ಷೆ ಇದೆ. ಆದರೆ ಈ ಭಾವನೆ ಕೇವಲ ಭಾವನೆಯಾಗಿಯೇ ಉಳಿದಿದೆ. ಸುಪ್ರೀಂಕೋರ್ಟ್‌  ನಿವೃತ್ತ ಮುಖ್ಯ ನ್ಯಾಯ­ಮೂರ್ತಿ  ವಿಶ್ವೇಶ್ವರನಾಥ ಖರೆ, ನ್ಯಾಯಾ­ಧೀಶರ ಪೈಕಿ ಶೇಕಡ 20ರಷ್ಟು ಮಂದಿ ಭ್ರಷ್ಟರಾಗಿರು­ವರೆಂದು ಒಮ್ಮೆ ಹೇಳಿದ್ದುಂಟು.

ಇನ್ನುಳಿದ ಶೇ ೮೦ರಷ್ಟು  ನ್ಯಾಯಾಧೀಶರು ನಿಷ್ಕಳಂಕರಾಗಿರು­ವರೆಂಬ ಸಮಾಧಾನ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ  ನ್ಯಾಯದಾನ ಪದ್ಧತಿಯಲ್ಲಿ ಭ್ರಷ್ಟಾ­ಚಾರ ಕುರಿತು ಹೆಚ್ಚುತ್ತಿರುವ ಸಾರ್ವಜನಿಕ ಚರ್ಚೆಗಳು ಜನರ ಮನಸ್ಸಿನಲ್ಲಿ ಆಶಾಕಿರಣ­ವನ್ನೇನೂ ಮೂಡಿಸುವುದಿಲ್ಲ.

ಭ್ರಷ್ಟಾಚಾರವೆಂದರೆ ಕೇವಲ ಹಣದ ಪಾತ್ರ ಎಂದು ಭಾವಿಸಲಾಗದು. ತೀರ್ಪು ನೀಡಿಕೆಯಲ್ಲಿ ತೋಳ್ಬಲ, ಜಾತಿ ಪ್ರಭಾವ, ರಾಜಕೀಯ ಸಂಬಂಧ­ಗಳು, ಮತ–-ಪಂಥಗಳ ಹಿನ್ನೆಲೆ ಇವೆಲ್ಲ ಪ್ರಭಾವ ಬೀರಿದರೂ ಅದೂ ಭ್ರಷ್ಟಾಚಾರವೇ ಆಗುತ್ತದೆ. ಇಂಥ ತೀರ್ಪು ನೀಡುವಿಕೆಯ ವಿರುದ್ಧ ಧ್ವನಿ ಎತ್ತಲು ವಕೀಲರೇ ಹೆದರುವಾಗ ಇನ್ನು ಜನಸಾಮಾನ್ಯರ ಪಾಡೇನು?

ಪಕ್ಷಪಾತದಿಂದ ವರ್ತಿಸುವ ನ್ಯಾಯಾಧೀಶರ ಬಗ್ಗೆ ಧ್ವನಿ ಎತ್ತಲಿಕ್ಕೆ  ನ್ಯಾಯಾಂಗ ನಿಂದನೆಯ ಕಾನೂನು, ಪ್ರಬಲವಾದ ಸಾಕ್ಷ್ಯಗಳನ್ನೇ ಬೇಡು­ತ್ತದೆ. ಬುದ್ಧಿವಂತನಾದ ಭ್ರಷ್ಟ ನ್ಯಾಯಾಧೀಶ­ರೊಬ್ಬರು ತಮ್ಮನ್ನು ಸಿಕ್ಕಿಹಾಕಿಸುವ  ಯಾವ ಸಾಕ್ಷ್ಯ­ವನ್ನೂ ಉಳಿಸುವುದಿಲ್ಲ. ಹೀಗಾದಾಗ ಸಾಮಾನ್ಯ ಮನುಷ್ಯ ಈ ಕುರಿತು ಯಾರಲ್ಲಿ ದೂರಿ­ಕೊಳ್ಳಬೇಕು? ಅವರು ಎಲ್ಲಿ ಪರಿಹಾರ ಕಂಡುಕೊಳ್ಳಬೇಕು?
ಭಾರತೀಯ ನ್ಯಾಯದಾನ ಪದ್ಧತಿಯಲ್ಲಿ ಸಾಮಾನ್ಯ ವ್ಯಕ್ತಿಗಳನ್ನು ಗೊಂದಲಕ್ಕೆ ತಳ್ಳುವ ಇಂಥ ಅಸಂಖ್ಯ ಸಂಕೀರ್ಣ ಸನ್ನಿವೇಶಗಳು ಸೃಷ್ಟಿ­ಯಾ­ಗುತ್ತಿವೆ.

ನ್ಯಾಯಾಂಗ ನಿಂದನೆಯ ಕಾನೂನು ಎಷ್ಟೋ ಬಾರಿ ಮಾಧ್ಯಮಗಳ ತಲೆಯ ಮೇಲಿನ ತೂಗುಗತ್ತಿಯಾಗಿ  ಹೊರ­ಹೊಮ್ಮುವ ಅಪಾಯವಿರುತ್ತದೆ. ಹೀಗಾಗಿ ಅವು ಕೂಡ ಬಾಯಿ ಬಿಡುವ ಸ್ಥಿತಿಯಲ್ಲಿ­ರುವುದಿಲ್ಲ. ಇಂಥ­ದೊಂದು ದೌರ್ಭಾಗ್ಯದ  ಸಂಗತಿಗೆ ಹೊನ್ನಾ­ವರದ ಇಬ್ಬರು ನ್ಯಾಯಾಧೀಶರ ವರ್ತನೆ ಜೀವಂತ ನಿದರ್ಶನವಾಗಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್‌  ನ್ಯಾಯಮೂರ್ತಿ  ಫಣೀಂದ್ರ ಅವರು ಕಳೆದ ಅಕ್ಟೋಬರ್ 9 ರಂದು ನೀಡಿದ ತೀರ್ಪಿನಲ್ಲಿ ತಮ್ಮ ತೀವ್ರ ಅಸಮಾಧಾನ  ಹೊರಹಾಕಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀರಾಮ­ಚಂದ್ರಾಪುರ ಮಠದ ಪೀಠಾಧಿಪತಿ  ರಾಘವೇಶ್ವರ ಭಾರತೀ ಸ್ವಾಮಿಗಳು ತಮ್ಮ ಪ್ರತಿನಿಧಿಗಳ ಮೂಲಕ ತಮ್ಮದೇ ಶಿಷ್ಯವರ್ಗಕ್ಕೆ ಸೇರಿದ ರಾಮಕಥಾ ಗಾಯಕಿ ಅವರ ಕುಟುಂಬಕ್ಕೆ ಸಂಬಂಧಿಸಿದ  ಕೆಲವರ  ಮೇಲೆ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. 

ಅವರ ವಿರುದ್ಧ ₨ 3 ಕೋಟಿಗಾಗಿ ಬ್ಲ್ಯಾಕ್‌ಮೇಲ್ ಮಾಡಿದರು ಎಂಬ ಆರೋಪದ ಜೊತೆಗೆ ಇನ್ನಿತರ ಆರೋಪಗಳನ್ನೂ ಹೊರೆಸಿದರು.  ಹೊನ್ನಾ­ವರ ಪೊಲೀಸರು ಈ ಪೈಕಿ ಇಬ್ಬರನ್ನು  ಬೆಂಗಳೂರಿನಲ್ಲಿ ಬಂಧಿಸಿ  ಹೊನ್ನಾವರದ ನ್ಯಾಯಾ­ಲಯದ ಎದುರು ಹಾಜರುಪಡಿಸಿದರು. ಆರೋಪಿಗಳನ್ನು ಹಾಜರುಪಡಿಸಲಾದ ನ್ಯಾಯಪೀಠದ ನ್ಯಾಯಾ­ಧೀಶರು ರಜೆಯ ಮೇಲಿದ್ದು­ದರಿಂದ ಆ ಪೀಠದಲ್ಲಿ  ತಾತ್ಕಾಲಿಕವಾಗಿ ಕುಳಿತ, ಅದೇ ನ್ಯಾಯಾಲಯದ ಇನ್ನೊಬ್ಬರು  ನ್ಯಾಯಾ­ಧೀಶರು  ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದರು.

ರಜೆಯಿಂದ ಮರಳಿ ಬಂದ ನ್ಯಾಯಾಧೀಶರೂ ಈ ನ್ಯಾಯಾಂಗ ಬಂಧನವನ್ನು ಮುಂದುವರಿ­ಸಿದರು. ಈ ಮಧ್ಯೆ ರಾಮಕಥಾ ಗಾಯಕಿ ತಮ್ಮ ಮೇಲೆ ಸ್ವಾಮೀಜಿ ಅತ್ಯಾಚಾರವೆಸಗಿದ್ದಾರೆ ಎಂದು ನ್ಯಾಯಾಧೀಶರ ಎದುರು ಲಿಖಿತ ದೂರು ನೀಡಿದಾಗ, ಆ ನ್ಯಾಯಾಧೀಶರು ವರ್ತಿಸಿದ ರೀತಿ ಚರ್ಚಾರ್ಹವಾಯಿತು. 

ಗಾಯಕಿ ಸಲ್ಲಿಸಿದ ಅತ್ಯಾಚಾರದ ದೂರನ್ನು ನ್ಯಾಯಾಧೀಶರು ಮುಚ್ಚಿದ ಲಕೋಟೆಯಲ್ಲಿ ಇರಿಸಿ­­­ದರು. ಈ ಕುರಿತು ಯಾವುದೇ ಕ್ರಮ ಕೈಗೊ­ಳ್ಳ­ಲಿಲ್ಲ. ಮರುದಿನ ಮತ್ತೆ ಗಾಯಕಿಯನ್ನು ನ್ಯಾಯಾ­­ಲಯದ ಮುಂದೆ ಹಾಜರುಪಡಿಸಿದಾಗ ಆಕೆ ತನ್ನ ಮೇಲೆ ಸ್ವಾಮೀಜಿಯಿಂದ ಅತ್ಯಾಚಾರ ನಡೆದಬಗ್ಗೆ ಸ್ವಹಸ್ತಾಕ್ಷರದಲ್ಲಿ ಬರೆದ ಮತ್ತೊಂದು ದೂರನ್ನೂ ನ್ಯಾಯಾಧೀಶರಿಗೆ ಸಲ್ಲಿಸಿದರು. ಆ ದೂರಿಗೂ ಅದೇ ಗತಿಯಾಯಿತು.

ರಜೆಯಿಂದ ಮರಳಿಬಂದ ನ್ಯಾಯಾಧೀಶರೂ, ರಾಮಕಥಾ ಗಾಯಕಿ  ತನ್ನನ್ನು ಇರಿಸಿದ ಕಾರ­ವಾರದ ‘ಸ್ವೀಕಾರ ಕೇಂದ್ರ’ದ ಮುಖ್ಯಸ್ಥರ ಮೂಲಕ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ಸಲ್ಲಿಸಬಹುದೆಂದು ಹೇಳಿದರು. ಈ ಮಧ್ಯೆ ಗಾಯಕಿ  ಪುತ್ರಿ, ತನ್ನ ತಾಯಿಯ ಮೇಲೆ ಸ್ವಾಮೀಜಿಯಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬೆಂಗಳೂರಿನ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.

ಈ ದೂರಿಗೆ ಸಂಬಂಧಿಸಿ ದಾಖಲಾದ ಪ್ರಥಮ ಮಾಹಿತಿ ವರದಿಯನ್ನು ರದ್ದುಗೊಳಿಸುವಂತೆ ಸ್ವಾಮೀಜಿ ಹೈಕೋರ್ಟ್‌ ಮೆಟ್ಟಿಲೇರಿದರು. ಆ ಪ್ರಕರಣ ನ್ಯಾ. ಫಣೀಂದ್ರ ಅವರಿದ್ದ ಏಕಸದಸ್ಯ ಪೀಠದ ಎದುರು ಬಂದು ಅವರು ಇದೇ ವರ್ಷದ ಅಕ್ಟೋಬರ್ ೯ ರಂದು ಸ್ವಾಮಿಯವರ ಅರ್ಜಿ­ಯನ್ನು ವಜಾಗೊಳಿಸಿ ತೀರ್ಪು ನೀಡಿದರು. ಆ ತೀರ್ಪಿ­ನಲ್ಲಿಯೇ ಅವರು ಹೊನ್ನಾವರ ನ್ಯಾಯಾ­ಧೀಶರ ವರ್ತನೆಯನ್ನು ತಮ್ಮ ಮಧ್ಯಾಂತರ ಆದೇಶದಲ್ಲಿ ಕಟುವಾಗಿ ಟೀಕಿಸಿದ್ದಾರೆ.

ಅಪರಾಧ  ನ್ಯಾಯಶಾಸ್ತ್ರಕ್ಕೆ ಅಪರಿಚಿತವಾದ ಕ್ರಮವನ್ನು ಹೊನ್ನಾವರದ ನ್ಯಾಯಾಧೀಶರು ಕೈಗೊಂಡಿದ್ದಾರೆ. ಆದ್ದರಿಂದ ಇನ್ನು ಮುಂದೆ ಆಯಾ ಪ್ರಕರಣದ ಸಂದರ್ಭಗಳನ್ನು ಗಮನಿಸಿಕೊಂಡು ಅಂಗೀಕೃತವಾದ ಪದ್ಧತಿಯನ್ನು ಅನುಸರಿಸಲು ಲಕ್ಷ್ಯ ವಹಿಸಬೇಕೆಂದು ನ್ಯಾಯಾ­ಧೀಶರಿಗೆ ಆದೇಶಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಫಣೀಂದ್ರ ತಮ್ಮ ತೀರ್ಪಿನಲ್ಲಿ ಎಚ್ಚರಿಸಿದ್ದಾರೆ.

ಈ ಪ್ರಕರಣಕ್ಕೆ ಇನ್ನೊಂದು ಆಯಾಮವಿದೆ.  ಸ್ವಾಮೀಜಿ ದೂರಿನ ಆಧಾರದಲ್ಲಿ ಹೊನ್ನಾವರ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಎರಡನೇ ಆರೋಪಿಯಾದ ರಾಮಕಥಾ ಗಾಯಕಿಯನ್ನು 21 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು. ಹೊನ್ನಾವರ ನ್ಯಾಯಾಲಯದಲ್ಲಿ ಗಾಯಕಿಗೆ ನ್ಯಾಯ ಸಿಗಲಾರದೆಂದು ಭಾವಿಸಿದ ಆಕೆಯ ಸಹೋದರ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ­ಯವರಿಗೆ ಮತ್ತು ಕರ್ನಾಟಕ ಹೈಕೋರ್ಟ್‌ನ  ಮುಖ್ಯ ನ್ಯಾಯಮೂರ್ತಿ­ಯ­ವರಿಗೆ  ಪತ್ರಮುಖೇನ ದೂರು ಸಲ್ಲಿಸಿದ್ದರು.

ನೂರು ಜನ ಅಪರಾಧಿಗಳು ಬಿಡುಗಡೆ ಹೊಂದಿ­ದರೂ ಪರವಾಗಿಲ್ಲ, ಆದರೆ ಒಬ್ಬನೇ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬ ತತ್ವ ಭಾರತೀಯ ನ್ಯಾಯಶಾಸ್ತ್ರದ ಅಡಿಗಲ್ಲು.  ತೀವ್ರತರ ಆಪಾದನೆ ಇಲ್ಲದೇ ಒಬ್ಬ ವ್ಯಕ್ತಿ ಮತ್ತು ಅವರ ಸಂಬಂಧಿಕರು 21 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಬೇಕಾದ ಸನ್ನಿವೇಶ ಎದು­ರಾದರೆ, ಅಂಥವರು ಯಾರಲ್ಲಿ ಈ ಬಗ್ಗೆ ದೂರಿಕೊಳ್ಳಬೇಕು?

ರಾಜ್ಯ ಹೈಕೋರ್ಟ್, ಕೆಳ  ಹಂತದ ನ್ಯಾಯಾ­ಲಯ ಎಸಗಿದ ಪ್ರಮಾದಗಳತ್ತ ಕಟು ಅಭಿಪ್ರಾಯ ವ್ಯಕ್ತಪಡಿಸಿದ್ದೇನೋ ಸ್ವಾಗತಾರ್ಹ. ಆದರೆ ಅಷ್ಟೇ ಸಾಕೆ?  ನ್ಯಾಯ ನೀಡಬೇಕಾದ  ಸ್ಥಾನದಲ್ಲಿರುವವರೇ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ನೀಡುವವರು ಯಾರು? ಅಥವಾ ಅವರು ಶಿಕ್ಷೆಗೆ ಅತೀತರೇ? ಇಂಥ ಹಲವಾರು ಪ್ರಶ್ನೆಗಳು ಪ್ರಸ್ತುತ ನ್ಯಾಯದಾನ ಪದ್ಧತಿಯಲ್ಲಿ ಆಗಾಗ ಏಳುತ್ತಿರುತ್ತವೆ. ಸಾಮಾನ್ಯ ಜನರಿಗೆ ಕಾನೂನಿನ ಕನಿಷ್ಠ ಜ್ಞಾನವೂ ಇರುವುದಿಲ್ಲ.

ನ್ಯಾಯದಾನ ವ್ಯವಸ್ಥೆಯಲ್ಲಿ ಉದ್ದೇಶ ಪೂರ್ವಕವೋ ಅನುದ್ದೇಶಪೂರ್ವಕವೋ ಆಗುವ ತಪ್ಪುಗಳಿಂದಾಗಿ, ನ್ಯಾಯಾಧೀಶರ ಪಕ್ಷಪಾತ­ದಿಂದಾಗಿ, ಕಾನೂನಿನ ಕನಿಷ್ಠ ಜ್ಞಾನವೂ ಇಲ್ಲದ ಅಮಾಯಕರು ಘೋರ ಮಾನಸಿಕ ತುಮುಲ­ಗಳಿಗೆ ಒಳಗಾಗುವರಲ್ಲವೇ? ಅವರನ್ನು ಅಸಹಾ­ಯಕ ಸನ್ನಿವೇಶಕ್ಕೆ ತಳ್ಳಿದಂತೆ ಆಗುವುದಿಲ್ಲವೇ? ಇಂಥ ಪ್ರಶ್ನೆಗಳಿಗೆ ಇತ್ತೀಚೆಗೆ ನ್ಯಾಯಾಂಗ ಉತ್ತರ­ದಾಯಿ ಕಾನೂನಿನಲ್ಲಿಯೂ  ಸಮರ್ಪಕ ಉತ್ತರ­ಗಳು ಇಲ್ಲ ಎಂಬ ಮಾತು ನ್ಯಾಯವೇತ್ತ­ರಿಂದಲೇ ಬರುತ್ತಿದೆ.

ಎಲ್ಲಿಯ ತನಕ ತಪ್ಪು ಮಾಡುವ ನ್ಯಾಯಾ­ಧೀಶ­ರಿಗೆ ಕಠಿಣ ಶಿಕ್ಷೆ ಜಾರಿಯಾಗುವುದಿಲ್ಲವೋ, ಎಲ್ಲಿಯವರೆಗೆ ನಮ್ಮ ನ್ಯಾಯದಾನ ಪದ್ಧತಿ­ಯಲ್ಲಿ  ಸ್ವಯಂ ಸರಿಪಡಿಸಿಕೊಳ್ಳುವಿಕೆಯ ವ್ಯವಸ್ಥೆ  ರೂಪು­ಗೊಳ್ಳುವುದಿಲ್ಲವೋ ಅಲ್ಲಿಯ ತನಕ ಯಾರಿಗೆ ನ್ಯಾಯ ಸಲ್ಲಬೇಕೋ ಅವರಿಗೆ ನ್ಯಾಯ ಸಿಗುವುದು ಅನುಮಾನಾಸ್ಪದವಾಗುತ್ತದೆ. ನಮ್ಮ ನ್ಯಾಯ­ದಾನ ಪದ್ಧತಿಯು ಉತ್ತರದಾಯಿ­ಯಾ­ಗುವ ಒಂದು ವ್ಯವಸ್ಥೆ ನಿರ್ಮಾಣವಾಗುವುದು ಜರೂರಿನ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.