ADVERTISEMENT

ಬುಧವಾರ, 25–1–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 19:30 IST
Last Updated 24 ಜನವರಿ 2017, 19:30 IST
ಎನ್‌.ಜಿ.ಓ.ಗಳ ‘ಕೆಲಸ ತ್ಯಜಿಸಿ’ ಚಳವಳಿ ಆರಂಭ
ಬೆಂಗಳೂರು, ಜ. 24–  ನಾನ್‌ ಗೆಜೆಟೆಡ್‌ ಸರ್ಕಾರಿ ನೌಕರರ ಕೇಂದ್ರ ಫೆಡರೇಷನ್ನಿನ ಆದೇಶದಂತೆ ತಮ್ಮ ಬೇಡಿಕೆಗಳ ಬಗೆಗೆ ರಾಜ್ಯ ಸರ್ಕಾರದ ಗಮನವನ್ನು ಸೆಳೆಯುವ ಉದ್ದೇಶದಿಂದ ಎರಡು ದಿನಗಳ ‘ಕೆಲಸ ತ್ಯಾಗ’ದ ಕಾರ್ಯಕ್ರಮ ಇಂದು ರಾಜ್ಯದಾದ್ಯಂತ ಆರಂಭವಾಯಿತು.
 
ರಾಜಧಾನಿಯಲ್ಲಿ ಶೇಕಡ 70ರಷ್ಟು ಎನ್‌.ಜಿ.ಓ.ಗಳು ಕೆಲಸಕ್ಕೆ ಹಾಜರಾಗಲಿಲ್ಲವಾದರೆ ಇತರ ಕೇಂದ್ರಗಳಿಂದ ಬಂದ ವರದಿಗಳ ಪ್ರಕಾರ ‘ಕೆಲಸ ತ್ಯಾಗ’ ಕಾರ್ಯಕ್ರಮ ಪೂರ್ಣ ಯಶಸ್ವಿಯಾದುದು ವ್ಯಕ್ತವಾಗಿದೆ.
 
**
ಅರಿಯಕುಡಿ ನಿಧನದ ಬಗ್ಗೆ ಪ್ರಧಾನಿ ಸಂತಾಪ
ಇಂದೂರು, ಜ. 24– ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಕಳೆದ 50 ವರ್ಷದಿಂದ ಮುಂದಿನ ಸಾಲಿನಲ್ಲಿ ರಾರಾಜಿಸುತ್ತಿದ್ದ ವಿದ್ವಾನ್‌ ಅರಿಯಕುಡಿ ರಾಮಾನುಜಯ್ಯಂಗಾರ್‌ರವರ ನಿಧನ ತುಂಬ ಶೋಕದಾಯಕವೆಂದು ಪ್ರಧಾನಿ ಇಂದಿರಾ ಗಾಂಧಿಯವರು ತಿಳಿಸಿದರು.
 
ಪಂಡಿತ ಸುಖಾರಾಂ, ವಿದ್ವಾನ್‌ ಚೌಡಯ್ಯ ಹಾಗೂ ವಿದ್ವಾನ್‌ ಅರಿಯಕುಡಿಯವರ ನಿಧನದಿಂದ ಭಾರತೀಯ ಸಂಗೀತಕ್ಕೆ ತ್ರಿಮುಖ ನಷ್ಟವಾಗಿದೆಯೆಂದೂ ಅವರು ನುಡಿದರು.
 
**
‘ಉಪಕುಲಪತಿಯ ಸ್ಥಾನಕ್ಕೆ ಶ್ರೇಷ್ಠ ಶಿಕ್ಷಣ ತಜ್ಞರನ್ನೇ ನೇಮಕ ಮಾಡುವುದು ಅಗತ್ಯ’
ನವದೆಹಲಿ, ಜ. 24– ಒಂದು ಅಥವ ಹೆಚ್ಚು ವಿದ್ಯಾಕ್ಷೇತ್ರದಲ್ಲಿ ನಿರ್ದಿಷ್ಟ ಸಾಧನೆಗಳನ್ನು ಸಾಧಿಸಿದ ಶ್ರೇಷ್ಠ ಶಿಕ್ಷಣ ತಜ್ಞರು ಅಥವ ಮೇಧಾವಿಗಳು ಮಾತ್ರ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಾಗಿರಬೇಕೆಂದು (ವೈಸ್‌ ಚಾನ್ಸಲರ್‌) ಕೇಂದ್ರ ಶಿಕ್ಷಣ ಸಚಿವ ಫಕ್ರುದಿನ್‌ ಆಲಿ ಅಹಮದ್‌ರವರು ರಾಜ್ಯಗಳ ಶಿಕ್ಷಣ ಸಚಿವರುಗಳಿಗೆ ಬರೆದಿರುವ ಪತ್ರವೊಂದರಲ್ಲಿ ಸೂಚನೆ ನೀಡಿದ್ದಾರೆ.
 
ಉಪಕುಲಪತಿಗಳು 65ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಲು ಅವಕಾಶವಿರಬೇಕೆಂದು ತಿಳಿಸಿದ್ದಾರೆ.
 
ಉಪಕುಲಪತಿಗಳ ಆಯ್ಕೆಗೆ ಏಕರೀತಿಯ ಕ್ರಮವನ್ನು  ಜಾರಿಗೆ ತರುವುದು, ಕೇಂದ್ರ ಶಿಕ್ಷಣ ಸಚಿವರ ಈ ಪತ್ರದ ಉದ್ದೇಶವೆಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.