ADVERTISEMENT

ಬ್ರಾಹ್ಮಣನ ಕಷ್ಟ...ದ್ವಂದ್ವವಲ್ಲ, ‘ಯುಗ್ಮತೆ’

ರೋಹಿತ್ ಚಕ್ರತೀರ್ಥ, ಬೆಂಗಳೂರು
Published 16 ಸೆಪ್ಟೆಂಬರ್ 2014, 19:30 IST
Last Updated 16 ಸೆಪ್ಟೆಂಬರ್ 2014, 19:30 IST

ಅನಂತಮೂರ್ತಿ ವ್ಯಕ್ತಿತ್ವದ ಸಂಕೀರ್ಣತೆಯನ್ನು ದ್ವಂದ್ವದ ಚೌಕಟ್ಟು ಹಾಕಿ ತೇಲಿಸಿಬಿಟ್ಟರೆ ಅವರನ್ನು ಯಾವ ಕನ್ನಡಕದ ಮೂಲಕವೂ ಸ್ಪಷ್ಟವಾಗಿ ನೋಡಲಾಗದ ಮಂಜುಗಣ್ಣು ಆವರಿಸಬಹುದು. ಅವರ ವ್ಯಕ್ತಿತ್ವದಲ್ಲಿ ಇದ್ದದ್ದು ದ್ವಂದ್ವ ಅಲ್ಲ, ಯುಗ್ಮತೆ.

ಬ್ರಾಹ್ಮಣನಾಗಿ ಹುಟ್ಟಿ ಬ್ರಾಹ್ಮಣನಾಗಿ ಲೋಕ ತ್ಯಜಿಸಿದ ಅನಂತಮೂರ್ತಿ­ಗಳು ಬದುಕಿದ್ದಷ್ಟೂ ಕಾಲ ಬ್ರಾಹ್ಮಣ್ಯಕ್ಕೆ ಪ್ರಶ್ನೆ­ಯಾಗಿ, ಬ್ರಾಹ್ಮಣ್ಯವನ್ನು ಪ್ರಶ್ನೆ ಮಾಡುತ್ತ ಬದು­ಕಿ­ದರು. ನಾರಣಪ್ಪನ ಸಂಸ್ಕಾರವನ್ನೇ ಕಾದಂಬ­ರಿಯ ವಸ್ತು ಮಾಡಿದ್ದ ಅನಂತಮೂರ್ತಿಗಳ ಸಂಸ್ಕಾರ ನಡೆದ ಬಗೆ ಸರಿಯೋ ತಪ್ಪೋ ಎನ್ನುವುದರ ಮೇಲೆಯೇ, ದುರದೃಷ್ಟವಶಾತ್, ಚರ್ಚೆ ನಡೆಯುವಂತಾಯಿತು. ಬದುಕಿದ್ದಾಗ ಮಾತ್ರ­ವಲ್ಲ, ಅದರಾಚೆ ಹೋದ ಮೇಲೂ ಮೇಷ್ಟ್ರು ಎರಡು ಬಣಗಳಿಗೆ ಅರ್ಥವಾಗದಂತೆ ತಪ್ಪಿಸಿಕೊಂಡರು ಎನ್ನಬಹುದೆ?

ಅನಂತಮೂರ್ತಿ ಬದುಕಲ್ಲೇ ದ್ವಂದ್ವ ಇತ್ತು ಎಂದು ಕೆಲವರು ಸಂಶೋಧನೆ ಮಾಡಿದ್ದಾರೆ. ಅವರ ತಂದೆಯವರಿಗೆ ಈ ದ್ವಂದ್ವ ಇತ್ತಂತೆ. ಇಂಗ್ಲಿಷ್‌ ಶಿಕ್ಷಣ ಕಲಿತು ಮಠದ ಪಾರುಪಾತ್ತೆ­ಗಾರನಾದವರು, ಹಿಂದೆ ಜುಟ್ಟುಬಿಟ್ಟು ಮುಂದೆ ಕ್ರಾಪು ಹಾಕುತ್ತಿದ್ದವರು ಇತ್ಯಾದಿಯನ್ನು ಮೂರ್ತಿ­­ಗಳೇ ತನ್ನ ತಂದೆಯ ವಿಚಾರದಲ್ಲಿ ಬರೆದಿದ್ದಾರೆ. ಅನಂತಮೂರ್ತಿಗಳ ಬಾಲ್ಯ ಬ್ರಾಹ್ಮ­ಣ್ಯದ ಪಾಕದಲ್ಲಿ ಅದ್ದಿತೆಗೆದಂತಿತ್ತು. ಮಠದಲ್ಲಿ ವೇದಾಧ್ಯಯನ ಮಾಡಿದ ಮಾಣಿ ಅವರು. ಆದರೆ, ತನ್ನ ಸುತ್ತಮುತ್ತ ನಡೆಯುವ ಎಲ್ಲ ಘಟನೆಗಳನ್ನು ಕುತೂಹಲದಿಂದ, ಅಷ್ಟೇ ಮಗು­ವಿನ ಮುಗ್ಧತೆಯಿಂದ ನೋಡುತ್ತಿದ್ದರು. ಭೂತ–ದೈವಗಳ ಬಗ್ಗೆ ಅವರೊಳಗೆ ನಿರಂತರ ಪ್ರಶ್ನೆ ಏಳುತ್ತಿತ್ತು. ಒಮ್ಮೆ ಪಂಜುರ್ಲಿ ದೈವದ ಕೋಲ ಆಗುವಲ್ಲಿ ಹೋಗಿ, ಅದರ ಎಲ್ಲ ಸೂಕ್ಷ್ಮ­ವಿವರಗಳನ್ನು ತಮ್ಮ ಕಣ್ಣು–-ಮನಸ್ಸುಗಳಲ್ಲಿ ದಾಖ­ಲಿಸುತ್ತಿದ್ದರಂತೆ. ಆದರೆ, ಭೂತ ಕುಣಿ­ಯುತ್ತ ಕುಣಿಯುತ್ತ ಕೊನೆಗೆ ಇವರ ಮುಂದೆಯೇ ಹಾರಿ ಹಾ ಎಂದು ನಾಲಿಗೆ ಚಾಚಿ­ದಾಗ ಮಾತ್ರ ಗಂಟಲೊಣಗಿ ಮೂರ್ಛೆ ಬಂದಂತಾಗಿ ‘ಅರ್ಜುನಃ ಫಲ್ಗುಣೋ ಪಾರ್ಥ’ ಎನ್ನುವ ಮಿಂಚುಗುಡುಗುಗಳ ಭಯ ಹೋಗಲಾ­ಡಿಸಲು ಬ್ರಾಹ್ಮಣ ಮಕ್ಕಳು ಹೇಳಿಕೊಳ್ಳುವ ಮಂತ್ರ­ವನ್ನು ಗಟ್ಟಿಯಾಗಿ ಹೇಳುತ್ತ ಓಡಿ ಬಿಟ್ಟಿ­ದ್ದರು. ಆ ಸಮಯದಲ್ಲಿ ಅವರು ಕಾಲೇಜು ಮೆಟ್ಟಿಲು ಹತ್ತಿ, ತನ್ನ ತೊಗಲಿಗೆ ಅಂಟಿಬಂದ ಬ್ರಾಹ್ಮಣ್ಯವನ್ನೇ ಪ್ರಶ್ನಿಸಲು ಶುರು ಮಾಡಿ­ಯಾಗಿತ್ತು ಎನ್ನುವುದು ಕುತೂಹಲಕರ.

ಒಬ್ಬ ಮನುಷ್ಯನ ಮೂಲಭೂತ ಸ್ವಭಾವ ಮತ್ತು ಹಚ್ಚಿಕೊಂಡ ಚಿಂತನೆಗಳು ಉತ್ಕಟವಾದ ಪ್ರೀತಿ ಮತ್ತು ಭಯಗಳಲ್ಲಿ ಹೊರಜಗತ್ತಿನ ಕಣ್ಣಿಗೆ ಬೀಳಬಲ್ಲವು ಎಂದು ಯೂಂಗ್ ಹೇಳುತ್ತಾನೆ. ಅನಂತಮೂರ್ತಿಗಳು ತಮ್ಮ ಪ್ರೀತಿ–ಭಯಗಳಲ್ಲಿ ನಡೆದುಕೊಂಡ ರೀತಿಯನ್ನು ಈ ಮನೋ­ವಿಜ್ಞಾನದ ಬೆಳಕಲ್ಲಿ ನೋಡುವುದು ಒಳ್ಳೆಯ­ದೇನೋ. ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಮಲಗಿ­ದ್ದಾಗ ದಾಸರ ಹಾಡು ಕೇಳುತ್ತ ಮೈಮರೆ­ಯು­ತ್ತಿದ್ದ, ಮಗನ ಬ್ರಹ್ಮೋಪದೇಶ ಮತ್ತು ಮಗಳ ತುಲಾಭಾರವನ್ನು ವಿಧಿವತ್ತಾಗಿ ಮಾಡಿಸಿದ್ದ ಮೇಷ್ಟ್ರು ಹುಟ್ಟೂರಿಗೆ ಹೋದಾಗೆಲ್ಲ ಕಾಡಿನ ಮಧ್ಯೆ ಇದ್ದ ಒಂದು ಹಳೇದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ‘ನಾನು ನಾಸ್ತಿಕ ಅಲ್ಲ; ಸುಲಭ­ವಾಗಿ ನಂಬುವ ಆಸ್ತಿಕನೂ ಅಲ್ಲ’ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇಲ್ಲೆಲ್ಲ ಕೆಲವರಿಗೆ ಅವರ  ವ್ಯಕ್ತಿತ್ವ ದಲ್ಲಿ ದ್ವಂದ್ವ ಕಂಡಿದೆ. ಅವರ ವ್ಯಕ್ತಿತ್ವವೇ ಒಡಕಲು ಅನ್ನಿಸಿದೆ. ದ್ವಂದ್ವ ಇದ್ದಾಗ ಗೊಂದಲ ಇರುತ್ತದೆ. ಅದನ್ನೂ ಇದನ್ನೂ ಪೂರ್ತಿಯಾಗಿ ಒಪ್ಪಿಕೊಳ್ಳ­ಲಾಗ­ದಂತೆ ಸಂಶಯ, ಭಯ, ಧಾರ್ಷ್ಟ್ಯ ಅಡ್ಡ­ಬರುತ್ತದೆ. ಅನಂತಮೂರ್ತಿಗಳ ವ್ಯಕ್ತಿತ್ವದ ಸಂಕೀ­ರ್ಣತೆಯನ್ನು ದ್ವಂದ್ವದ ಚೌಕಟ್ಟು ಹಾಕಿ ತೇಲಿಸಿ­ಬಿಟ್ಟರೆ ಅವರನ್ನು ಯಾವ ಕನ್ನಡಕದ ಮೂಲ­ಕವೂ ಸ್ಪಷ್ಟವಾಗಿ ನೋಡಲಾಗದ ಮಂಜುಗಣ್ಣು ಆವರಿಸಬಹುದು. ನನಗನ್ನಿಸುವ ಪ್ರಕಾರ, ಅವರ ವ್ಯಕ್ತಿತ್ವದಲ್ಲಿ ಇದ್ದದ್ದು ದ್ವಂದ್ವ ಅಲ್ಲ, ಯುಗ್ಮತೆ. ಇಂಗ್ಲಿಷಿನಲ್ಲಿ entanglement ಎನ್ನಬಹುದಾದ ಒಂದು ವಿಚಿತ್ರ ಗುಣ ಇದು. ಭೌತವಿಜ್ಞಾನದಲ್ಲಿ ಬರುವ ಒಂದು ಶಬ್ದ ಇದು. ಒಂದು ಕಣ ಎರಡಾಗಿ ಹೋಳಾಗಿದೆ. ಅವುಗಳಲ್ಲೊಂದು ಪೂರ್ವಕ್ಕೆ ಇನ್ನೊಂದು ಪಶ್ಚಿಮಕ್ಕೆ ಹೋಗಿದೆ. ಎಷ್ಟೇ ದೂರ ಜಗ್ಗಾಡಿದರೂ ಅವುಗಳ ನಡುವೆ ಏಕಸೂತ್ರತೆ, ಬಂಧುತ್ವ, ಅನೂಹ್ಯ ರಕ್ತಸಂಬಂಧ ಇದೆ. ಇದನ್ನು ಬಿಟ್ಟು ಅದಕ್ಕೆ, ಅದರ ಹೊರತು ಇದಕ್ಕೆ ಅಸ್ತಿತ್ವ, ಅರ್ಥಗಳಿಲ್ಲ. ಎರಡರ ಬಣ್ಣ, ರುಚಿ, ವ್ಯಕ್ತಿತ್ವಗಳೂ ಬೇರೆ, ಆದರೆ ಎರಡೂ ಒಂದೇ! ಬೇಕಾದರೆ ಅರ್ಧನಾರೀಶ್ವರ ತತ್ವ ಅಂತಿ­ಟ್ಟು­ಕೊಳ್ಳಿ. ಅನಂತಮೂರ್ತಿಯವರ ಅತ್ಯಂತ ಸಫಲ ಕತೆಗಳಲ್ಲಿ ಒಂದಾದ ‘ಮೌನಿ’ಯಲ್ಲಿ ಬರುವ ಅಪ್ಪಣ್ಣ-–ಕುಪ್ಪಣ್ಣ ಇಂಥದೊಂದು ಯುಗ್ಮತೆ. ಅಪ್ಪಣ್ಣನನ್ನು ಅವನು ಬದುಕಿದ್ದಷ್ಟೂ ಕಾಲ ಗೋಳಾಡಿಸಿದ ಕುಪ್ಪಣ್ಣ, ಕೊನೆಗೆ ಅಪ್ಪಣ್ಣ ಮನೆಜಗುಲಿಯ ಮೇಲೆ ಕಲ್ಲಾಗಿ ಕೂತಿದ್ದಾನಂತೆ; ಮಾತೇ ಆಡ್ತಿಲ್ಲವಂತೆ ಅಂದಾಗ ಅಧೀರನಾಗಿ ಅವನ ಹತ್ತಿರ ಬರುತ್ತಾನೆ. ಹೀಯಾಳಿಸುತ್ತಾನೆ; ಆದರೆ ಅವನಿಲ್ಲದೆ ತನಗೆ ಅಸ್ತಿತ್ವವೇ ಇಲ್ಲ ಎನ್ನುವ ಅಳುಕಿನಿಂದ ‘ಬದುಕು ಮಾರಾಯ’ ಅನ್ನುತ್ತಾನೆ.

ಅನಂತಮೂರ್ತಿಗಳು ಬ್ರಾಹ್ಮಣರಾಗಿದ್ದರು. ಜಿಗುಟಾದರೂ ಜಾರಿಕೊಳ್ಳುವ ಲೋಳೆತನ, ಭೋಳೆ­ಸ್ವಭಾವ, ಸಂಕೋಚ, ಜಿಪುಣತೆ, ಹಮ್ಮು, ಧಿಮಾಕು, ಭೂತದಯೆಗಳೆಲ್ಲ ಇರುವ ಸಾವ­ಯವ ಬ್ರಾಹ್ಮಣ ಜೀನು ತನ್ನೊಳಗೂ ಇವೆ ಎಂದು ಗೊತ್ತಾಗಿ, ಅವನ್ನು ಎಷ್ಟು ಅಡಗಿಸಿದರೂ ಸೋಡದ ಹುಳಿತೇಗಿನಂತೆ ಎದ್ದು ಬಂದೇ ಬರು­ತ್ತವೆ ಎಂಬ ತಿಳಿವಳಿಕೆ ಬಂದ ದಿನ ಅನಂತ­ಮೂರ್ತಿ­ಗಳು ಆ ತೇಗುಗಳನ್ನು ಕತೆಗಳಾಗಿ ಬರೆ­ಯುವ ಪ್ರಯತ್ನ ಮಾಡಿದರು. ಕೆಸರಲ್ಲಿ ಹೂತ-­ವರು ಹೊರಹಾರಬೇಕಾದಾಗ, ಆ ಲಂಘನಕ್ಕೆ ಬಲ­ಕೊಡಲು ಒಂದು ಕಾಲನ್ನು ಕೆಸರಲ್ಲಿ ಮತ್ತಷ್ಟು ಒತ್ತಿಹಿಡಿಯಬೇಕಾಗುತ್ತಲ್ಲ; ಅನಂತ­ಮೂರ್ತಿಗಳಿಗಿದ್ದ ಕಷ್ಟ ಈ ಬಗೆಯದು. ಹಾಗಾಗಿ ಅವರ ವ್ಯಕ್ತಿತ್ವವನ್ನು ಅವರ ಪ್ರಚಾರಪ್ರಿಯ ಹೇಳಿಕೆ­ಗಳಿಗಿಂತಲೂ ತನ್ಮಯರಾಗಿ ಬರೆದ ಕತೆ–ಕಾದಂಬರಿಗಳ ಮೂಲಕವೇ ಹೆಚ್ಚು ಸೂಕ್ಷ್ಮವಾಗಿ ನೋಡಬೇಕಾಗುತ್ತದೆ. ‘ಮೌನಿ’, ‘ಪ್ರಶ್ನೆ’, ‘ಕಾರ್ತೀಕ’, ‘ಖೋಜರಾಜ’, ‘ಸೂರ್ಯನ ಕುದುರೆ’­ಯಂತಹ ಅವರ ಯಶಸ್ವಿ ಕತೆಗಳಲ್ಲಿ ಯುಗ್ಮತೆಯ ಗುಣವುಳ್ಳ ಎರಡು ಪಾತ್ರಗಳು ಮತ್ತೆ ಮತ್ತೆ ಬರುತ್ತವೆ.

‘ಕ್ಲಿಪ್‌ಜಾಯಿಂಟ್‌’ನಲ್ಲಿ ಇದು ಎರಡು ಸಂಸ್ಕೃತಿ, ಎರಡು ಮನೋಭೂಮಿಕೆಗಳ ನಡುವಿನ ಸಂಘರ್ಷದಂತೆ ಕಾಣುತ್ತದೆ. ಆದರೆ, ಇಲ್ಲೆಲ್ಲ ಯಾವುದೇ ಒಂದು ಪಾತ್ರ ಇನ್ನೊಂದನ್ನು ಸಂಪೂರ್ಣವಾಗಿ ಧಿಕ್ಕರಿಸಿ ಹೊರಹೋಗುವ ಗುಣವುಳ್ಳದ್ದಲ್ಲ. ಅದಕ್ಕೆ ಇದರ, ಇದಕ್ಕೆ ಅದರ ಮೇಲೆ ಪ್ರೀತಿ, ಸೆಡವು, ಮಮತೆ, ನಂಜು, ಆಕರ್ಷಣೆ, ಆದರೂ ಅಂತರ ಕಾಯ್ದುಕೊಳ್ಳುವಷ್ಟು ವಿಕರ್ಷಣೆ ಇದ್ದೇ ಇರುತ್ತದೆ. ಒಬ್ಬನೇ ವ್ಯಕ್ತಿಯೊಳಗಿನ ಎರಡು ಧ್ರುವಗಳ ನಡುವೆ ನಡೆಯುತ್ತಿರುವ ಯುದ್ಧ­ವಲ್ಲದ ಜಗ್ಗಾಟ, ಪರಸ್ಪರ ಮುಖಗಳನ್ನು ಅರಿಯುವ ಇರಿಯುವ ಅಪ್ಪಾಲೆತಿಪ್ಪಾಲೆ ಆಟ ಇದು ಎಂದಷ್ಟೇ ಭಾವಿಸಿದರೆ ಕ್ಲಿಪ್‌ಜಾಯಿಂಟ್ ಕತೆ ಹೊಸಕೋನಗಳನ್ನು ಹೊಳೆಯಿಸುತ್ತದೆ. ಅದು ಏಕಕಾಲಕ್ಕೆ ಕತೆಯೂ, ಅನಂತ­ಮೂರ್ತಿ­ಗಳು ಹೇಳುತ್ತಿದ್ದ ಆತ್ಮಕತೆಯ ಬಿಡಿ ಅಧ್ಯಾಯವೂ ಆಗುತ್ತದೆ.

ಯುಗ್ಮತೆ ಅವರ ಸಂಕೀರ್ಣ ವ್ಯಕ್ತಿತ್ವಕ್ಕೆ ಅಗತ್ಯ­ವಾಗಿತ್ತು ಅಥವಾ ಅದಿದ್ದರಿಂದಲೇ ಅವರ ವ್ಯಕ್ತಿ­ತ್ವಕ್ಕೆ ಸಂಕೀರ್ಣತೆ ಬಂತು. ಇಂಗ್ಲಿಷ್‌ ಕಲಿತ ಮೇಲೆ ಅವರು ಸಂಸ್ಕೃತ ಬಿಡಲಿಲ್ಲ. ಇಂಗ್ಲೆಂಡ್‌ಗೆ ಹೋಗಿ ಕಲಿತು ಬಂದರೂ ಸೂಟುಬೂಟು ಹಾಕುವ ತೋರಿ­ಕೆಯ ವಿದೇಶೀಯತೆ ಅವರನ್ನು ಆವರಿಸ­ಲಿಲ್ಲ. ನ್ಯೂಯಾರ್ಕಿನ ಬೀದಿಯಲ್ಲಿ ಎಷ್ಟು ಆಧುನಿ­ಕ­ರಾಗಿ ನಡೆಯಬಲ್ಲವ ರಾಗಿದ್ದರೋ ಮೇಳಿಗೆಯ ತನ್ನ ಮನೆಯಲ್ಲಿ ಪಂಚೆ ಉಟ್ಟು ಚಕ್ಕಳಮಕ್ಕಳ ಹಾಕಿ ಕೂರಬಲ್ಲವರಾಗಿದ್ದರು. ಪಾರ್ಟಿಯಲ್ಲಿ ವಿಸ್ಕಿ ಹೀರುವಷ್ಟೇ ತನ್ಮಯತೆಯಿಂದ ತನ್ನೂರ ದೇವಸ್ಥಾನದಲ್ಲಿ ಪಂಚಾಮೃತಕ್ಕೆ ಕೈಯೊಡ್ಡ­ಬಲ್ಲವ­ರಾಗಿದ್ದರು. ಬುದ್ಧಿಜೀವಿ ಗಳ ಭ್ರಮೆಯಂತೆ ಅವರೆಂದೂ ಬ್ರಾಹ್ಮಣ್ಯ ಬಿಡಲಿಲ್ಲ. ಆದರೆ, ಬ್ರಾಹ್ಮಣ್ಯ ಬಿಟ್ಟನೆಂಬ ಅನಿಸಿಕೆ ಬರುವಂತೆ ಜನಿ­ವಾರ ಎತ್ತಿಡುವ ಮತ್ತು ಜನಿವಾರ ಇಲ್ಲದೆಯೂ ಬ್ರಾಹ್ಮಣನಾಗಿ ಬದುಕುವ ವಿದ್ಯೆ ಅವರಿಗೆ ಗೊತ್ತಿತ್ತು ಮತ್ತು ಅದವರಿಗೆ ಪ್ರಿಯವೂ ಆಗಿತ್ತು. ಬ್ರಾಹ್ಮಣ್ಯವನ್ನು ನೇರಾನೇರ ಧಿಕ್ಕರಿಸಿದ ಕಾರಂತ, ಕುವೆಂಪು ಅಥವಾ ಅದನ್ನು ಧಿಕ್ಕರಿಸಲು ಧೈರ್ಯ ಸಾಲದೆ ಒಪ್ಪಿಕೊಂಡ ಪುತಿನ ಅಥವಾ ಮಾಸ್ತಿ - ಇವರಿಗಿಂತ ಅನಂತಮೂರ್ತಿ ಹೆಚ್ಚು ಒಗಟಾಗಿ ಕಂಡದ್ದು ಈ ಕಾರಣಕ್ಕಾಗಿಯೇ.

ಬ್ರಾಹ್ಮಣನಿಗೆ ತೊಗಲಿಗಂಟಿದ ವ್ಯಾಧಿಗಳಂತೆ ಬರುವ ಸಿಟ್ಟು, ಆತ್ಮಪ್ರತಿಷ್ಠೆ, ಜಂಬ, ಇನ್ನೊಬ್ಬ­ನನ್ನು ಹಣಿಯಬೇಕೆಂಬ ತಪ್ಪೆನಿಸಿದರೂ ತಪ್ಪಿಸ­ಲಾಗದ ಏಡಿಬುದ್ಧಿ, ತನ್ನ ಬುದ್ಧಿಬಲದ ಮೇಲೆ ಅಮಿತವಿಶ್ವಾಸ, ವಾಕ್ಚಾತುರ್ಯ, ಸೂಕ್ಷ್ಮಗಳನ್ನು ಸೂಕ್ಷ್ಮವಾಗಿಯೇ ಇನ್ನೊಬ್ಬರಿಗೆ ಅರುಹುವ ಹಂಬಲ, ನಾಜೂಕುತನ, ಭೋಳೆತನ, ಎಷ್ಟೆತ್ತರ­ದಿಂದ ಬಿದ್ದರೂ ಕಾಲಮೇಲೆ ನಿಲ್ಲಬಲ್ಲೆನೆಂಬ ಮಾರ್ಜಾಲ ಧೈರ್ಯ ಇವೆಲ್ಲ ಇದ್ದ ಬ್ರಾಹ್ಮಣ­ನಾಗಿ ಅನಂತಮೂರ್ತಿ ಬದುಕಿದರು.

ಹಾಗೆಯೇ, ಬ್ರಾಹ್ಮಣ ತನ್ನ ಸಂಸ್ಕಾರದಿಂದ ಬೆಳೆಸಿಕೊಳ್ಳಬಲ್ಲ ಪ್ರೀತಿ, ವಿಶ್ವಾಸ, ಸೈದ್ಧಾಂತಿಕ ವಿರೋಧವಿದ್ದರೂ ಇನ್ನೊಬ್ಬರನ್ನು ಮನುಷ್ಯನಾಗಿ ನೋಡುವ ಸಹನ­ಶೀಲತೆ, ಮಗುವಿನ ಮುಗ್ಧತೆ, ತನಗೆ ಗೊತ್ತಿಲ್ಲ­ದ್ದನ್ನು ಗೊತ್ತಿಲ್ಲ ಎಂದು ಪ್ರಾಂಜಲವಾಗಿ ಒಪ್ಪುವ ತನ್ನನ್ನು ಒಪ್ಪಿಸಿಕೊಳ್ಳುವ ನಿಗರ್ವ, ತನಗೆ ಗೊತ್ತಾದ್ದನ್ನು ಹತ್ತುಜನಕ್ಕೆ ಹೇಳಿ ಖುಷಿಪಡಿಸ­ಬೇಕು, ಅವರನ್ನು ಎತ್ತಬೇಕೆಂಬ ಗುರುಸ್ವಭಾವ ಇವೆಲ್ಲವನ್ನೂ ಬೆಳೆಸಿಕೊಂಡ ಬ್ರಾಹ್ಮಣನೂ ಆದರು. ಬ್ರಾಹ್ಮಣನಾಗಿ ಆಧುನಿಕತೆಗೆ ಆತು­ಕೊಂಡ ಅನಂತಮೂರ್ತಿ ಅವರಿಗೆ ಆಧುನಿಕ ನಾ­ದರೂ ಬ್ರಾಹ್ಮಣ್ಯಕ್ಕೆ ಆತುಕೊಂಡ ಪೇಜಾವರ ಶ್ರೀಗಳ ಜೊತೆ ಒಳ್ಳೆಯ ಒಡನಾಟ ಇತ್ತು. ಯಾರಿಗೆ ಗೊತ್ತು, ಅವರಿಬ್ಬರೂ ದೊಡ್ಡ­ವ್ಯವಸ್ಥೆಯ ಯಗ್ಮದೆರಡು ತುದಿಗಳೋ ಏನೋ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT