ADVERTISEMENT

ಮಕ್ಕಳನ್ನು ಸಹಜವಾಗಿ ಬೆಳೆಯಲು ಬಿಡಿ

ನಳಿನಿ ಟಿ.ಭೀಮಪ್ಪ
Published 29 ಮೇ 2017, 19:30 IST
Last Updated 29 ಮೇ 2017, 19:30 IST

ಈಗ್ಗೆ ಕೆಲವು ದಿನಗಳ ಹಿಂದೆ ಅಂದರೆ ಬೇಸಿಗೆ ರಜೆಯಲ್ಲಿ ನಮ್ಮ ಹತ್ತಿರದ ಬಂಧುಗಳು ತಮ್ಮ ಮಕ್ಕಳ ಜೊತೆ ಮನೆಗೆ ಬಂದಿದ್ದರು.  ವೃತ್ತಿಯಲ್ಲಿ ವೈದ್ಯರು.  ಅವರ ನಾಲ್ಕು ವರ್ಷ ಹಾಗೂ ಎರಡು ವರ್ಷದ ಇಬ್ಬರು ಹೆಣ್ಣುಮಕ್ಕಳು ತುಂಬಾ ಮುದ್ದಾಗಿದ್ದವು.  ಬಂದ ನಂತರ ಎರಡೂ ಮಕ್ಕಳು ಆಟವಾಡುತ್ತಾ ಮನೆಯ ಒಳಗೆ, ಹೊರಗೆ ಕುಣಿದಾಡತೊಡಗಿದವು.  ಆ ತಾಯಿ, ‘ಹೊರಗಡೆ ಬಿಸಿಲಿದೆ ಪುಟ್ಟಾ, ಹೋಗಬೇಡಿ, ಮನೆಯಲ್ಲೇ ಆಡಿಕೊಳ್ಳಿ’ ಎನ್ನುತ್ತಾ ನನ್ನ ಕಡೆ ತಿರುಗಿ, ‘ಇವರು ಸುಮ್ಮನೆ ಕೂಡುವುದೇ ಇಲ್ಲ’  ಎಂದು ಪ್ರೀತಿಯಿಂದ ಗದರುತ್ತಾ  ‘ಇವುಗಳ ಕೈಗೆ ಏನಾದರೂ ಕೊಡಿ’ ಎಂದು ಕೇಳಿದರು. 

ಸಂಜೆ ಐದು ಗಂಟೆಯ ಬಿಸಿಲಿಗೆ ಹೊರಗೆ ಆಡಲು ಕಳಿಸಲು ಎಷ್ಟು ಯೋಚನೆ ಮಾಡುತ್ತಾರಲ್ಲಾ! ನಮ್ಮ
ಮಕ್ಕಳು ಮಧ್ಯಾಹ್ನದಿಂದ ಬಿಸಿಲಲ್ಲಿ ಮುಖವೆಲ್ಲಾ ಕೆಂಪಡರಿಸಿಕೊಂಡು, ಬಟ್ಟೆಯೆಲ್ಲಾ ಮಣ್ಣು ಮಾಡಿಕೊಂಡು, ಸ್ನೇಹಿತರ ಜೊತೆ ಇನ್ನೂ ಕುಪ್ಪಳಿಸುತ್ತಿದ್ದವು. 

ಅವರನ್ನು ಕರೆದು ‘ನಿಮ್ಮ ಆಟದ ಸಾಮಾನು ಈ ಮಕ್ಕಳಿಗೆ ಕೊಡಿ’ ಎಂದಿದ್ದಕ್ಕೆ  ಓಡಿ ಹೋಗಿ ತಮ್ಮ ಹಳೆಯ ಅಡುಗೆ ಸಾಮಾನಿನ ಸೆಟ್ಟು, ಬ್ಯಾಟು, ಬಾಲು ಎಲ್ಲಾ ತಂದು ಆ ಮಕ್ಕಳಿಗೆ ಕೊಟ್ಟು ಮತ್ತೆ ಹೊರಗೆ ಪುರ್ ಅಂತ ಹಾರಿದವು.

ADVERTISEMENT

ಆ ಮಕ್ಕಳು ಅವುಗಳನ್ನು ಹಿಡಿದು ತುಂಬಾ ಸಂತೋಷದಿಂದ ಆಡಲು ತೊಡಗಿದವು.  ಆ ಮಕ್ಕಳ ತಾಯಿ ಮಾತ್ರ ‘ಅಯ್ಯೋ ಇದನ್ನಲ್ಲ ಕೇಳಿದ್ದು, ಆಡಿ ಸುಮ್ಮನೆ ಟೈಮು ವೇಸ್ಟ್ ಮಾಡುವುದು ಬೇಡ, ಯಾವುದಾದರೂ ಚಿತ್ರಗಳಿರುವ ಪುಸ್ತಕ ಇದ್ದರೆ ಕೊಡಿ ಅಥವಾ ಡ್ರಾಯಿಂಗ್ ಮಾಡಲು ಯಾವುದಾದರೂ ಬಿಳಿ ಹಾಳೆ ಮತ್ತು ಪೆನ್ಸಿಲ್ ಕೊಡಿ’ ಅಂತ ಕೇಳಿದರು.

ಮತ್ತೆ ಅವುಗಳನ್ನೆಲ್ಲಾ ನಾನೇ ಅಲ್ಲಿ ಇಲ್ಲಿ ಹುಡುಕಿ ತಂದು ಕೊಟ್ಟೆ. ಆ ಮಕ್ಕಳನ್ನು ಆಟ ಬಿಡಿಸಿ ‘ಎ ಫಾರ್ ಆ್ಯಪಲ್, ಬಿ ಫಾರ್ ಬ್ಯಾಟ್’ ಅಂತ ಹೇಳಿಕೊಡಲು ಶುರುಮಾಡಿದರು.  ಪಾಪ ಆ ಮಕ್ಕಳು ಆಟದಿಂದ ಎಬ್ಬಿಸಿದ್ದಕ್ಕೆ ತುಂಬಾ ಬೇಜಾರು ಮಾಡಿಕೊಂಡವು. ಆದರೆ ಎದುರಾಡಲಿಲ್ಲ. ತಾಯಿ ಹೇಳಿಕೊಡುತ್ತಿದ್ದ ಪಾಠವನ್ನು ಜೋಲುಮೋರೆ ಹಾಕಿಕೊಂಡು ಹೇಳತೊಡಗಿದವು.  ಬಿಳಿಹಾಳೆಯಲ್ಲಿ ತಮಗಿಷ್ಟ ಬಂದಂತೆ ಗೀಚಾಡತೊಡಗಿದವು.  ನಾನಂತೂ ‘ಹೀಗೂ ಉಂಟೇ’ ಅಂತ ಸೋಜಿಗದಿಂದ ಬಾಯಿ ಮೇಲೆ ಬೆರಳಿಟ್ಟು ವೀಕ್ಷಿಸತೊಡಗಿದ್ದೆ.

ನಮ್ಮ ಮಕ್ಕಳಿಗೆ ಸ್ಕೂಲು ಇದ್ದಾಗಲೇ ಸಂಜೆ ಆಟಕ್ಕೆ ಹೋದವರನ್ನು ಹುಡುಕಿ ಹಿಡಿದು ತಂದು ಓದಿಸುವುದು, ಬರೆಸುವುದು, ಹೋಮ್ ವರ್ಕ್‌ ಮಾಡಿಸುವುದಕ್ಕೆ ತಲೆಯಲ್ಲಿರುವ ನಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗುತ್ತದೆ.  ‘ಇನ್ನೊಂದು ಐದು ನಿಮಿಷ ಮಮ್ಮೀ, ಹತ್ತು ನಿಮಿಷ ಮಮ್ಮೀ ಬಂದುಬಿಡುತ್ತೇವೆ’ ಅಂತ ಗೋಗರೆಯುತ್ತಿರುತ್ತವೆ.  ಅವುಗಳ ಆಟ ಕೆಡಿಸಲಾಗದೆ ‘ಆಯಿತು. ಇಷ್ಟು ಟೈಮಿನಲ್ಲಿ ಬರಬೇಕು’ ಅಂತ ಎಚ್ಚರಿಸಿಯೇ ಬಂದಿರುತ್ತೇನೆ.  ಮತ್ತೂ ಅವು ಕೇಳಿದ ಸಮಯಕ್ಕಿಂತ ಡಬಲ್ ಟೈಮು ಆಡಿಯೇ ಒಳಗೆ ಬರುತ್ತಿದ್ದುದು. 

‘ಆಡೋ ವಯಸ್ಸು ಆಡಲಿ ಬಿಡೆ, ಏನು ನಾನೂ ನೀನು ಆಡೋಕ್ಕಾಗುತ್ತಾ’ ಅಂತ ನಮ್ಮ ಯಜಮಾನರು ಮಕ್ಕಳನ್ನೇ ಸಪೋರ್ಟ್‌ ಮಾಡುತ್ತಾರೆ. ಇಷ್ಟು ಚಿಕ್ಕ ವಯಸ್ಸಿನ ಮಕ್ಕಳನ್ನು ಓದುವ ನೆಪದಲ್ಲಿ ಆಟ ಬಿಡಿಸಿದ್ದು ತುಂಬಾ ಕೆಡುಕೆನಿಸಿತು.   ‘ಕೋಣೆ ಕೂಸು ಕೊಳೀತು, ಬೀದಿ ಕೂಸು ಬೆಳೀತು’ ಎಂದು ನಮ್ಮ ಹಿರಿಯರು ಇಂಥವರನ್ನೇ ನೋಡಿ ಹೇಳಿದ್ದಾರೇನೋ ಎನ್ನಿಸಿತು.

ನನ್ನ ಗೆಳತಿಯೊಬ್ಬಳು ಹೀಗೆಯೇ ನೋಡಿ.  ಒಂದನೇ ತರಗತಿಯಲ್ಲಿ ಓದುತ್ತಿರುವ ಮಗಳಿಗೆ ಓದಿದ್ದು ಮರೆತು ಹೋಗಬಾರದೆಂದು ತಾನೇ ಕೈಯಾರ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅವಳಿಗೆ ‘ಡೇಸ್ ಆಫ್ ದ ವೀಕ್, ಮಂಥ್ಸ್ ಇನ್ ಅ ಇಯರ್, ಪಾರ್ಟ್ಸ್‌  ಆಫ್ ದ ಬಾಡಿ, ನೇಮ್ಸ್ ಆಫ್ ವೆಜಿಟೆಬಲ್ಸ್, ಫ್ರೂಟ್ಸ್, ಮಗ್ಗಿಗಳು’ ಹೀಗೆ ಆ ಮಗು ಓದಬೇಕಾದ ಸಿಲೆಬಸ್ಸನ್ನು ರಂಗು ರಂಗಿನ ಪೆನ್ಸಿಲ್ಲುಗಳಿಂದ, ಸ್ಕೆಚ್ ಪೆನ್ನುಗಳಿಂದ ಆಕರ್ಷಕವಾಗಿ ಬರೆದು ಮನೆಯ ಪಡಸಾಲೆ, ರೂಮಿನಿಂದ ಹಿಡಿದು ಅಡುಗೆ ಮನೆಯ ತನಕ ಎಲ್ಲಾ ಕಡೆ ಹಚ್ಚಿದ್ದಳು.  ಬಹುಶಃ ಬಾತ್‌ರೂಮು, ಟಾಯ್ಲೆಟ್ ರೂಮೂ ಬಿಟ್ಟಿರಲಿಕ್ಕಿಲ್ಲ ಎನ್ನುವುದು ನನ್ನ ಅನಿಸಿಕೆ (ಅವರ ಮನೆಯಲ್ಲಿ ಆ ಎರಡೂ ರೂಮು ಮಾತ್ರ ನಾನು ನೋಡಿರಲಿಲ್ಲ).  ಆ ಮಗು ಎಲ್ಲಿ ಓಡಾಡಿದರೂ ಆ ಚೀಟಿಗಳು ಕಣ್ಣಿಗೆ ಬೀಳಲೇಬೇಕು, ಅಂತಹ ಜಾಗಗಳಲ್ಲಿ ಅಂಟಿಸಿದ್ದಳು.  ಆ ಮಗು ಫಸ್ಟ್ ರ್‌್ಯಾಂಕ್‌ ತೆಗೆದುಕೊಳ್ಳಲು ಈ ವಿಧಾನ ತುಂಬಾ ಸಹಾಯವಾಗುತ್ತದೆ ಎಂಬುದು ಅವಳ ಅನಿಸಿಕೆ.

ಮತ್ತೊಮ್ಮೆ ಹೀಗೇ ಆಯಿತು.  ಉತ್ತರ ಭಾರತದ ಶೈಲಿಯ ಊಟಕ್ಕೆಂದು ದೊಡ್ಡ ಹೋಟೆಲ್‌ಗೆ ಹೋಗಿದ್ದೆವು.  ಊಟ ಆರ್ಡರ್ ಮಾಡಿ ಕುಳಿತಿದ್ದೆವು.  ಅಲ್ಲಿದ್ದ ಆರು ಫ್ಯಾಮಿಲಿ ಟೇಬಲ್‌ಗಳು ಭರ್ತಿಯಾಗಿದ್ದವು.  ನಮ್ಮ ಪಕ್ಕದ ಟೇಬಲ್‌ನಲ್ಲಿ ಗಂಡ ಹೆಂಡತಿ ಹಾಗೂ ಒಂದೂವರೆ ವರ್ಷದ ಮಗು ಕುಳಿತಿದ್ದರು.  ಆ ಮಗು ಟೇಬಲ್‌ನ ಮೇಲೆ ಕುಳಿತು ಟಿಶ್ಯೂ ಪೇಪರ್ ಕೈಗೆತ್ತಿಕೊಂಡು ‘ಇದೇನು’ ಎಂಬ ರೀತಿಯಲ್ಲಿ ತನ್ನದೇ ಮುದ್ದು ಭಾಷೆಯಲ್ಲಿ ತಂದೆ ತಾಯಿಯನ್ನು ಪ್ರಶ್ನಿಸುತ್ತಿತ್ತು.  ಅವರು ಆ ಕುತೂಹಲವನ್ನು ತಣಿಸುವ ಗೋಜಿಗೆ ಹೋಗದೆ ಅದನ್ನು ತೆಗೆದು ಪಕ್ಕಕ್ಕಿಟ್ಟು ಮೊಬೈಲಿನಲ್ಲಿ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ರೈಮ್ಸ್ ಹಾಕಿ ಆ ರೈಮಿಗೆ ತಕ್ಕಂತೆ ಆ್ಯಕ್ಷನ್ ಮಾಡಿ ತೋರಿಸತೊಡಗಿದರು.  ಆ ಮಗುವೂ ಅದನ್ನು ಅನುಕರಿಸಲು ಶುರುಮಾಡಿತು.  ಅಯ್ಯೋ! ಈ ಮಗುವಿನ ಕರ್ಮವೇ ಎನಿಸಿತು.       

ಮತ್ತೊಂದು ಟೇಬಲ್‌ನಲ್ಲಿ ಸುಮಾರು ಹತ್ತರಿಂದ ಹನ್ನೆರಡು ಜನರ ಮಧ್ಯಮ ವರ್ಗದ ಕುಟುಂಬವೊಂದು ಎರಡು ಟೇಬಲ್‌ಗಳನ್ನು ಕೂಡಿಸಿ ಊಟಕ್ಕೆ ಕುಳಿತಿತ್ತು.  ಅದರಲ್ಲಿನ ಎರಡು ವರ್ಷದ ಮಗು ತುಂಬಾ ಚೂಟಿ ಇತ್ತು, ಒಬ್ಬರಿಂದ ಇನ್ನೊಬ್ಬರ ಕೈಗೆ ಪಾಸಾಗುತ್ತಲೇ ಇತ್ತು.  ಅವರ ತಾತನ ಕೈಗೆ ಆ ಮಗು ಬಂದಾಗ ಆತ ಅಲ್ಲಿದ್ದ ಒಬ್ಬೊಬ್ಬರನ್ನೇ ತೋರಿಸಿ ‘ಇವರು ಯಾರು’ ಎಂದು ಪ್ರಶ್ನಿಸುತ್ತಿದ್ದರು.  ‘ಇದು ಮಾಮ, ಇದು ಕಾಕ, ಇದು ಅವ್ವ, ಇದು ಅಣ್ಣ, ಇದು ಪುಟ್ಟೀ’ ಅಂತ ಗುರುತು ಹಿಡಿದು ಹೇಳಿದಾಗ ‘ಹಾಂ ಜಾಣಾ...’ ಅಂತ ಅದನ್ನು ಹುರಿದುಂಬಿಸುತ್ತಿದ್ದರು.  ಅದನ್ನು ನೋಡಿ ಸದ್ಯ ಕೆಲವು ಮಕ್ಕಳಾದರೂ ಸಹಜವಾಗಿ, ಮುಗ್ಧತೆ ಉಳಿಸಿಕೊಂಡು ಬೆಳೆಯುತ್ತಿವೆಯಲ್ಲಾ ಎಂದು ಸಮಾಧಾನವಾಯಿತು.

ಮೇಲಿನ ಮೊದಲ ಮೂರೂ ಉದಾಹರಣೆಯಲ್ಲಿ ಆ ಪೋಷಕರ ಹುರುಪನ್ನು ನೋಡುತ್ತಿದ್ದರೆ ಈಗಿನಿಂದಲೇ ಮಕ್ಕಳನ್ನು ಎಂಜಿನಿಯರಿಂಗ್‌ಗೋ, ಮೆಡಿಕಲ್‌ಗೋ, ಐಐಟಿಗೋ ತಯಾರಿ ನಡೆಸುತ್ತಿದ್ದಾರೇನೋ ಎನ್ನಿಸಿತು.  ಕುತೂಹಲದಿಂದ, ಅರಳುಗಣ್ಣುಗಳಿಂದ, ಮುಗ್ಧತೆಯಿಂದ ಜಗತ್ತನ್ನು ಅರಿಯುವ ಅವರ ಪ್ರಯತ್ನಕ್ಕೆ ಪೋಷಕರೇ ತಣ್ಣೀರೆರಚಿ ಅವುಗಳನ್ನು ಕೇವಲ ಓದುವ ಯಂತ್ರಗಳನ್ನು ಮಾಡುವತ್ತಲೇ ಒಲವು ತೋರಿಸುತ್ತಿರುವುದು ವಿಷಾದದ ಸಂಗತಿ.

ಮಕ್ಕಳ ಆಸಕ್ತಿ, ಅಭಿರುಚಿಗಳಿಗೆ ಬೆಲೆ ಕೊಡದೆ ತಮ್ಮ ಆಸಕ್ತಿಗನುಗುಣವಾಗಿ ಅವರ ಮೇಲೆ ಒತ್ತಡ ಹೇರುತ್ತಿ ರುವುದು ಕಂಡಾಗ, ಈಗಿನ ಮಕ್ಕಳು ತಮ್ಮ ಬಾಲ್ಯ, ಸಹಜ ಮುಗ್ಧತೆಯನ್ನು ಎಲ್ಲಿ ಕಳೆದುಕೊಳ್ಳುತ್ತವೆಯೋ ಎಂಬ ಆತಂಕ ಕಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.