ADVERTISEMENT

ಮಾತೃಭಾಷೆ ಎನ್ನಬೇಡಿ, ಕನ್ನಡವೆನ್ನಿ!

ಎಂ.ಅಬ್ದುಲ್ ರೆಹಮಾನ್ ಪಾಷ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಮಾತೃಭಾಷೆ ಎನ್ನಬೇಡಿ, ಕನ್ನಡವೆನ್ನಿ!
ಮಾತೃಭಾಷೆ ಎನ್ನಬೇಡಿ, ಕನ್ನಡವೆನ್ನಿ!   

ಶಿಕ್ಷಣಕ್ಕಾಗಿ ‘ಉರ್ದು ಮಾಧ್ಯಮ ಬೇಡ’ ಎಂದು ಹಜರತ್ ಅಲಿ ಇ. ದೇಗಿನಾಳ ಹೇಳಿದ್ದಾರೆ (ವಾ.ವಾ., ಫೆ. 14). ‘ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿಯಲು ಉರ್ದು ಭಾಷೆಯನ್ನು ಮಾಧ್ಯಮವಾಗಿಸಿಕೊಂಡದ್ದು ಬಹುಮಟ್ಟಿಗೆ ಕಾರಣ. ಹತ್ತನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಕಲಿತವರು ಆನಂತರ ಉರ್ದು ಮಾಧ್ಯಮದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶವಿಲ್ಲದೇ ಬೇರೆ ಭಾಷೆ ಮಾಧ್ಯಮದಲ್ಲಿ ಕಲಿಯಲು ಹೆದರಿ, ಶಿಕ್ಷಣಕ್ಕೆ ಸಲಾಮು ಹೊಡೆದು ಸಣ್ಣ ಪುಟ್ಟ ಉದ್ಯೋಗದಲ್ಲಿ ತೊಡಗುತ್ತಾರೆ. ಈ ಪರಿಸ್ಥಿತಿ ತಪ್ಪಿಸಲು ಉರ್ದು ಮಾಧ್ಯಮವಾಗಿಸುವ ಬದಲು ಒಂದು ಭಾಷೆಯಾಗಿ ಕಲಿಸುವುದು ಉತ್ತಮ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ’ ಎಂಬುದರ ಕುರಿತು ಭಾಷಾವಿಜ್ಞಾನಿಗಳಿಂದ ಹಿಡಿದು ಕನ್ನಡಪರ ಹೋರಾಟಗಾರರವರೆಗೆ ಎಲ್ಲರೂ ತಮ್ಮ ಮೂಗಿನ ನೇರಕ್ಕೆ ಮಾತಾಡುತ್ತಿರುವ ಸಂದರ್ಭದಲ್ಲಿ, ಅಲ್ಪಸಂಖ್ಯಾತ ಭಾಷೆಯ ಪೋಷಕರ ಮನಸ್ಸಿನಲ್ಲಿ ಹುಟ್ಟುವ ಗೊಂದಲ ಮತ್ತು ಆತಂಕದ ಪ್ರತೀಕವಾಗಿದೆ ಈ ಪತ್ರ.

‘1994- 95ರಿಂದ, ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃಭಾಷೆ ಅಥವಾ ಕನ್ನಡವು ಶಿಕ್ಷಣದ ಮಾಧ್ಯಮವಾಗಬೇಕು’ ಎಂಬಂಥ ಆದೇಶವನ್ನು ಕರ್ನಾಟಕ ಸರ್ಕಾರ ಈ ಹಿಂದೆ ಹೊರಡಿಸಿತ್ತು. ಇದಕ್ಕೆ ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಗಳನ್ನು ನಡೆಸುವ ಖಾಸಗಿ ಶಾಲೆಗಳು ತಕರಾರು ಎತ್ತಿ, ವ್ಯಾಜ್ಯವನ್ನು ಹೈಕೋರ್ಟ್‌ಗೆ ಒಯ್ದವು. ನ್ಯಾಯಾಲಯವು ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಆನಂತರ 2014ರ ಮೇ 6ರಂದು ಸುಪ್ರೀಂ ಕೋರ್ಟ್‌ ಈ ತೀರ್ಪನ್ನು ಎತ್ತಿ ಹಿಡಿಯಿತು.

ADVERTISEMENT

ಆಗಿನಿಂದ ಕರ್ನಾಟಕ ಸರ್ಕಾರ, ಬುದ್ಧಿಜೀವಿಗಳು, ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರ... ಮುಂತಾದವು  ಕೋರ್ಟ್‌ ತೀರ್ಪನ್ನು ಒಪ್ಪಿಕೊಳ್ಳಲಾಗದೆ, ಧಿಕ್ಕರಿಸಲೂ ಆಗದೆ ವಿವಿಧ ಬಗೆಯಲ್ಲಿ ವಿಚಾರ ಮಂಥನ ನಡೆಸಿವೆ. ‘ಸರ್ಕಾರದ ಅಭಿಪ್ರಾಯಕ್ಕೆ ಗೆಲುವು ಸಿಗಬೇಕಾದರೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾದುದು ಅನಿವಾರ್ಯ’ ಎಂದು ಹೇಳುತ್ತಾ ಬಂದಿವೆ. ಏನು ತಿದ್ದುಪಡಿ ಎಂಬುದು ಇನ್ನೂ ನಿರ್ಧಾರವಾದಂತಿಲ್ಲ. ಇದರ ಒಂದು ಮುಂದುವರಿಕೆಯಾಗಿತ್ತು ಜನವರಿ 28ರಂದು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶ. ಮೈಸೂರಿನ ಕನ್ನಡ ಕ್ರಿಯಾಸಮಿತಿಯು ಆಯೋಜಿಸಿದ್ದ ಈ ಸಮಾವೇಶವು ‘ಶಾಲಾ ಶಿಕ್ಷಣ ಹಾಗೂ ಶಿಕ್ಷಣ ಮಾಧ್ಯಮ ಸಮಸ್ಯೆಗಳು’ ಕುರಿತು ಚಿಂತನ ಮಂಥನ ನಡೆಸಿತು.

ಇಲ್ಲಿ ಪ್ರಕಟಗೊಂಡ ಒಟ್ಟಾರೆ ಅಭಿಪ್ರಾಯವೆಂದರೆ ‘ಸರ್ಕಾರಿ ಕನ್ನಡ ಶಾಲೆಗಳ ಅವನತಿಗೆ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳೇ ಕಾರಣ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳು ನಾಡಿನ ಸಂಸ್ಕೃತಿಯನ್ನು ಕಲಿತು ಜವಾಬ್ದಾರಿಯುತ ನಾಗರಿಕರಾಗುವುದಿಲ್ಲ; ಬಂಡವಾಳಶಾಹಿ ಉದ್ಯಮದ ಗುಲಾಮರಾಗುತ್ತಾರೆ. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವುದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕ...’ ಇತ್ಯಾದಿ. ಮೇಲುನೋಟಕ್ಕೆ ಇದು ತಾರ್ಕಿಕವಾಗಿ ತೋರುತ್ತದೆ ಎಂದು ಭಾಷಾವಿಜ್ಞಾನದ ವಿದ್ಯಾರ್ಥಿಯಾದ ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಮಾತೃಭಾಷೆಯಲ್ಲಿ ಶಿಕ್ಷಣದ ಪ್ರಶ್ನೆ ಬಂದಾಗ ಕನ್ನಡವನ್ನು ಮತ್ತು ಇತರ (ಅಲ್ಪಸಂಖ್ಯಾತ) ಮಾತೃಭಾಷೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವಂತಿಲ್ಲ.

ಕನ್ನಡ ಮಾತೃಭಾಷೆಯಾಗಿರುವವರಿಗೆ ಅದೇ ರಾಜ್ಯದ ಪ್ರಮುಖ ವ್ಯವಹಾರದ, ಆಡಳಿತದ ಭಾಷೆಯೂ ಆಗಿರುವ ನೈಜ ಅನುಕೂಲವಿದೆ. ಕನ್ನಡೇತರ ಮಾತೃಭಾಷೆಗಳನ್ನು ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡರೆ, ನಮ್ಮ ರಾಜ್ಯದಲ್ಲಿರುವ, ಕನ್ನಡವಲ್ಲದ ಇತರ ಸುಮಾರು 50ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮಾತೃಭಾಷೆಗಳ ಮಕ್ಕಳು ಈ ನೈಜ ಅನುಕೂಲದಿಂದ ವಂಚಿತರಾಗುತ್ತಾರೆ. ಕರುನಾಡಿಗರಾಗಿದ್ದೂ ಉರ್ದು, ತೆಲುಗು, ತಮಿಳು, ಬಂಜಾರ, ತುಳು, ಕೊಂಕಣಿ ಇತ್ಯಾದಿ ಭಾಷೆಗಳನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಮಕ್ಕಳು ಆಯಾ ಭಾಷೆಗಳ ಮಾಧ್ಯಮದಲ್ಲಿ ಓದಿದರೆ ಮುಂದೆ ಕನ್ನಡ–ಇಂಗ್ಲಿಷ್ ಭಾಷೆಗೆ ಸೇರಿಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತದೆ. ಕರ್ನಾಟಕದಲ್ಲಿ ಇವಿಷ್ಟೂ ಮಾತೃಭಾಷೆಗಳು ಸದ್ಯ ಕೇವಲ ಮನೆವಾರ್ತೆ, ಸಾಮಾಜಿಕ– ಧಾರ್ಮಿಕ ವ್ಯವಹಾರಗಳಿಗಷ್ಟೇ ಸೀಮಿತವಾಗಿರುವುದರಿಂದ ಮತ್ತು ಮನೆಮಾತಾಗಿ ಬಳಸುವ ಉಪಭಾಷೆಗೂ ಶಾಲೆಗಳಲ್ಲಿ ಕಲಿಸಲು ನೋಡುವ ಈ ಭಾಷೆಗಳ ಶಿಷ್ಟ ರೂಪಕ್ಕೂ ಅಜಗಜಾಂತರವಿರುವುದರಿಂದ ಆಯಾ ಮಾತೃಭಾಷೆಗಳಲ್ಲಿ ಶಿಕ್ಷಣ ಕಠಿಣವಾಗುತ್ತದೆ.

ಇನ್ನು ಬ್ಯಾರಿ, ಮಲಯಾಳ, ಕೊರಗ, ಬಡಗ, ಯರವ, ಇರುಳ, ಸೋಲಿಗ, ಗೌಳಿ ಮುಂತಾದ ಭಾಷಾ ಮಾಧ್ಯಮಗಳಲ್ಲಿ ಶಿಕ್ಷಣ ಕೊಡಲು ಸಾಧ್ಯವೂ ಅಲ್ಲ, ಪ್ರಯೋಜನಕಾರಿಯೂ ಅಲ್ಲ. ಆದ್ದರಿಂದ ಎಲ್ಲರಿಗೂ ಪ್ರಾದೇಶಿಕ ಪ್ರಮುಖ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ ಸಮಾನವಾದ ಶಿಕ್ಷಣ ನೀಡುವುದೇ ಹೆಚ್ಚು ಸಮಂಜಸ. ಶಿಕ್ಷಣಕ್ಕಾಗಿ ಪ್ರಾದೇಶಿಕ ಭಾಷೆ ಕನ್ನಡವನ್ನು ಒಪ್ಪಿಕೊಳ್ಳುವುದು, ಅಲ್ಪಸಂಖ್ಯಾತ ಭಾಷೆಗಳನ್ನೂ ಉಪೇಕ್ಷಿಸದೇ ಅವುಗಳನ್ನು ಸಮುದಾಯಗಳ ಸಾಂಸ್ಕೃತಿಕ ಅಗತ್ಯಗಳಿಗೆ ತಕ್ಕಹಾಗೆ ಕಲಿಯುವ, ಕಲಿಸುವ ವ್ಯವಸ್ಥೆಯನ್ನು ಮಾಡುವುದು ನ್ಯಾಯ.

ಸುಪ್ರೀಂ ಕೋರ್ಟ್‌ ತನ್ನ 2014ರ ತೀರ್ಪಿನಲ್ಲಿ, ‘ಅಲ್ಪಸಂಖ್ಯಾತರಿಗೆ ಮಾತೃಭಾಷೆಯನ್ನಷ್ಟೇ ಆಯ್ದುಕೊಳ್ಳಬೇಕು ಎಂಬುದನ್ನು ಒತ್ತಾಯಿಸುವಂತಿಲ್ಲ’, ‘ತನ್ನ ಆಯ್ಕೆಯ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಮಗು ಹೊಂದಿರುತ್ತದೆ’. ‘ಮಗುವಿನ ಮಾತೃಭಾಷೆ ಯಾವುದು ಎಂದು ನಿರ್ಧರಿಸುವ ಹಕ್ಕು ಪೋಷಕರಿಗೆ ಇದೆ’ ಇತ್ಯಾದಿ ನಿರ್ಣಯಗಳನ್ನು ನೀಡಿದೆ. ಇವೆಲ್ಲವೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ಹಿತದಲ್ಲಿವೆ.

ಎಲ್ಲರಿಗೂ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ನೀಡುವ ಇಂಗಿತದ ಪೂರೈಕೆಗಾಗಿ ಸಂವಿಧಾನ ತಿದ್ದುಪಡಿ ತರುವುದು ದೂರದ ಮಾತು. ಬದಲಿಗೆ ಸರ್ಕಾರ ಮತ್ತು ಮಕ್ಕಳ ಹಿತಾಸಕ್ತಿಯಲ್ಲಿ ಕಾಳಜಿ ಹೊಂದಿರುವ ವ್ಯಕ್ತಿ, ಸಂಘಸಂಸ್ಥೆ, ಪ್ರಾಧಿಕಾರಗಳು, ಮುಖ್ಯವಾಗಿ ಅಲ್ಪಸಂಖ್ಯಾತ ಭಾಷಿಗರೂ ಸೇರಿದ ಹಾಗೆ ಎಲ್ಲ ಪೋಷಕರಲ್ಲಿಯೂ ಕನ್ನಡ ಮಾಧ್ಯಮದ ಪರವಾಗಿ ಜಾಗೃತಿಯನ್ನು ಮೂಡಿಸುವ ಜನಾಂದೋಲನ ಕೈಕೊಳ್ಳುವುದೊಂದೇ ಈಗಿರುವ ಅನಿವಾರ್ಯವೆಂದು ತೋರುತ್ತದೆ. ಈ ಆಂದೋಲನಕ್ಕೆ ಇಡಬೇಕಾದ ಹೆಸರು: ‘ಮಾತೃಭಾಷೆ ಎನ್ನಬೇಡಿ, ಕನ್ನಡವೆನ್ನಿ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.