ADVERTISEMENT

ಮುಚ್ಚಿಡುವ ಸಂಸ್ಕೃತಿಯ ಬಿಚ್ಚುವ ತವಕ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2017, 19:30 IST
Last Updated 10 ಆಗಸ್ಟ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

–ನಡಹಳ್ಳಿ ವಸಂತ್

ವಸ್ತ್ರಸಂಹಿತೆಯ ಬಗೆಗಿನ ಚರ್ಚೆ ಕೆಲವು ಮೂಲಭೂತ ಅಂಶಗಳನ್ನು ಮರೆಯುತ್ತಿದೆ. ವ್ಯಕ್ತಿಯೊಬ್ಬನ ಮನೋಭಾವ, ಸಂವೇದನೆ ರೂಪಿಸುವುದರಲ್ಲಿ ಕುಟುಂಬದಷ್ಟೇ ಪ್ರಮುಖವಾಗುವುದು ಸಾಮಾಜಿಕ, ಸಾಂಸ್ಕೃತಿಕ ಅಂಶಗಳು ಎನ್ನುವುದನ್ನು ಸಂಶೋಧನೆಗಳು ಸಿದ್ಧಪಡಿಸಿವೆ. ಜಾಗತೀಕರಣಗೊಂಡ ಸಮಾಜದಲ್ಲಿ ಹೊಸ ಚಿಂತನೆಗಳು, ಜೀವನಶೈಲಿಗಳೆಲ್ಲಾ ಸಹಜವಾಗಿ, ಸುಲಭವಾಗಿ ನುಸುಳುತ್ತವೆ. ಸ್ತ್ರೀಯರಿಗೆ ತಮಗಿಷ್ಟವಾದ (ಸಂಹಿತೆಯ ವಾರಸುದಾರರು ಹೇಳುವಂತೆ ಪ್ರಚೋದನಕಾರಿ) ಉಡುಪನ್ನು ಧರಿಸುವುದು ಮನೆಯಲ್ಲಿ, ಮಾಲ್‌ಗಳಲ್ಲಿ, ಸಿನಿಮಾಗಳಲ್ಲಿ, ಬೀದಿಯಲ್ಲಿ ಸಮ್ಮತವಾದರೆ ಶಾಲೆಗಳಲ್ಲಿ, ಕಚೇರಿಗಳಲ್ಲಿ ಮಾತ್ರ ಅದನ್ನು ನಿರ್ಬಂಧಿಸಿ ಏನನ್ನು ಸಾಧಿಸುತ್ತೀರಿ? ಅಂತರ್ಜಾಲದಲ್ಲಿ ದೊರೆಯುತ್ತಿರುವುದಕ್ಕೆ ಯಾವ ವಸ್ತ್ರಸಂಹಿತೆಯನ್ನು ನಿರೂಪಿಸುತ್ತೀರಿ? ಶಾಲೆ– ಕಚೇರಿಗಳ ಹೊರಗಡೆರೂಪಿತವಾಗಿರುವ ವ್ಯಕ್ತಿಯೊಬ್ಬನ ಮನೋಭಾವವನ್ನು ಶಾಲೆ– ಕಚೇರಿ ಒಳಗಡೆ ಬಂದತಕ್ಷಣ ಬದಲಾಯಿಸಿಕೊಳ್ಳುವ ತಂತ್ರಾಂಶವನ್ನು ತಲೆಗೆ ಅಳವಡಿಸುತ್ತೀರೇನು? ದೇಹಗಳನ್ನು ಬಟ್ಟೆಯಿಂದ ಮುಚ್ಚಿದರೆ ಹದಿವಯಸ್ಸಿನ ಕಾಮನೆಗಳು ಬದಲಾಗುವುದಿಲ್ಲ ಎನ್ನುವುದಕ್ಕೆ ನಮ್ಮೆಲ್ಲರ ಹಳೆಯ ದಿನಗಳನ್ನು ನೆನಪಿಸಿಕೊಂಡರೆ ಉದಾಹರಣೆಗಳು ಸಿಗುತ್ತವೆಯಲ್ಲವೇ?

ಉಡುಪು ಪ್ರಚೋದನಕಾರಿಯಾಗಬಲ್ಲದು ಎನ್ನುವುದಾದರೆ ಕನಿಷ್ಠ ಉಡುಪನ್ನು ಧರಿಸುತ್ತಿದ್ದ ಶಿಲಾಯುಗದಲ್ಲಿ ಅಥವಾ ಬುಡಕಟ್ಟು ಜನಾಂಗಗಳಲ್ಲಿ ನಮ್ಮ ಸುಸಂಸ್ಕೃತ ಸಮಾಜದಲ್ಲಿ ಕಂಡುಬರುವಷ್ಟು ಲೈಂಗಿಕ ವಿಕೃತಿಗಳು ಏಕಿರಲಿಲ್ಲ? ಮುಚ್ಚಿಡುವ ಸಂಸ್ಕೃತಿಗೆ ಬಂದಮೇಲೆ ಏಕಿಷ್ಟು ಗೊಂದಲಗಳು ಸೃಷ್ಟಿಯಾಗುತ್ತಿವೆ? ಧಾರ್ಮಿಕ, ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು ತಮ್ಮ ಗುಡಾಣದಂತಹ ಹೊಟ್ಟೆಯನ್ನು ಪ್ರದರ್ಶಿಸಿ ಸ್ತ್ರೀಯರಲ್ಲಿ ಅಸಹ್ಯ ಭಾವನೆಯನ್ನು ಹುಟ್ಟಿಸಿದರೆ ಅದಕ್ಕೆ ಸಂಹಿತೆಯ ಅಗತ್ಯವಿಲ್ಲವೇ? ಇದಕ್ಕೆಲ್ಲಾ ಉತ್ತರ ಹುಡುಕದೆ ‘ಲೈಂಗಿಕ ಪ್ರಚೋದನೆ, ಶಿಸ್ತು’ ಎನ್ನುವ ಕಾರಣಗಳನ್ನು ನೀಡಿ ಸ್ತ್ರೀಯರಿಗೆ ಮಾತ್ರ ವಸ್ತ್ರಸಂಹಿತೆ ಹೇರುವುದು ಅರ್ಥಹೀನ.

ADVERTISEMENT

ಅಬ್ದುಲ್ ರೆಹಮಾನ್ ಪಾಷಾ ಅವರು ಕೆಲವು ವಿಚಿತ್ರ ತರ್ಕಗಳನ್ನು ಮುಂದಿಟ್ಟಿದ್ದಾರೆ (ಪ್ರ.ವಾ., ಚರ್ಚೆ, ಆ. 7). ಗಂಡನ್ನು ಆಕರ್ಷಿಸುವ ದೃಷ್ಟಿಯಿಂದ ಹೆಣ್ಣು ಬಿಗಿಯಾದ ಉಡುಪನ್ನು ಧರಿಸುತ್ತಾಳೆ, ಹಾಗಾಗಿ ವಾಸ್ತವದಲ್ಲಿ ಇದು ಸ್ತ್ರೀಸ್ವಾತಂತ್ರ್ಯವಲ್ಲ ಎನ್ನುವುದು ಅವರ ವಾದ. ಹೆಣ್ಣೊಬ್ಬಳು ಬಿಗಿಯಾದ ಉಡುಪನ್ನು ಧರಿಸಿ ಗಂಡನ್ನು ಆಕರ್ಷಿಸುವುದು ಪ್ರಕೃತಿ ಸಹಜ ಧರ್ಮ. ಸುಸಂಸ್ಕೃತ ಸಮಾಜವನ್ನು ಕಟ್ಟಿಕೊಂಡು ಬದುಕುತ್ತಿರುವ ಭ್ರಮೆಯಲ್ಲಿರುವ ಮಾನವ ಇಂತಹ ಮೂಲಪ್ರವೃತ್ತಿಯಿಂದ ಹೊರತಾಗುವುದು ಸಾಧ್ಯವಿಲ್ಲ. ವಿವಾಹಿತರಿಂದ ಹಿಡಿದು ಯಾವ ಹೆಣ್ಣೂ ಕೂಡ ಗಂಡನ್ನು ಆಕರ್ಷಿಸುವ ಆಸೆಯನ್ನು ಹೊಂದಿರುವುದಕ್ಕಾಗಿ ಕೀಳಾಗಬೇಕಾಗಿಲ್ಲ. ಸ್ತ್ರೀ ಸ್ವಾತಂತ್ರ್ಯದಲ್ಲಿ ಗಂಡನ್ನು ಆಕರ್ಷಿಸುವ ಅವಳ ಪ್ರಕೃತಿ ಸಹಜ ಸ್ವಾತಂತ್ರ್ಯವೂ ಸೇರಿರುತ್ತದೆ. ಇಂತಹ ಸ್ವಾತಂತ್ರ್ಯವನ್ನು ರಕ್ಷಿಸಿ ಗಂಡು ಇದರ ಸದುಪಯೋಗ ಪಡೆಯಬಹುದು! ಆದರೆ ದಬ್ಬಾಳಿಕೆಯಿಂದ ಹೆಣ್ಣನ್ನು ದಕ್ಕಿಸಿಕೊಳ್ಳುವ ಗಂಡು ಪ್ರವೃತ್ತಿಯನ್ನು ನಾವು ವಿರೋಧಿಸಬೇಕಾಗಿದೆ.

ವಸ್ತ್ರಸಂಹಿತೆ, ಸಂಸ್ಕೃತಿ, ಶಿಕ್ಷಣ ಇವೆಲ್ಲವೂ ವೋಟಿನ ರಾಜಕೀಯ ಪ್ರೇರಿತ ಮತ್ತು ಅಭದ್ರ ಧಾರ್ಮಿಕ ಮುಖಂಡರು ತಾವು ಚಲಾವಣೆಯಲ್ಲಿ ಇರಲು ಹುಟ್ಟುಹಾಕಿರುವ ನಿರರ್ಥಕ ಚರ್ಚೆಗಳು. ನಮಗೆ ತುರ್ತಾಗಿ ಅಗತ್ಯವಿರುವುದು ಒಂದು ಸಮಗ್ರವಾದ ಸಂವೇದನಾಶೀಲವಾದ ಲೈಂಗಿಕ ಶಿಕ್ಷಣ. ಲೈಂಗಿಕ ಶಿಕ್ಷಣ ಎಂದರೆ ಸಂಭೋಗದ ಶಿಕ್ಷಣ ಎಂದು ನಮ್ಮ ತಜ್ಞರು ತಿಳಿದುಕೊಂಡಂತೆ ಕಾಣುತ್ತಿದೆ. ಶುಚಿತ್ವ, ಪ್ರಾಕೃತಿಕವಾಗಿ ಗಂಡು– ಹೆಣ್ಣಿನಲ್ಲಿರುವ ಭಿನ್ನತೆ, ಲಿಂಗಸಮಾನತೆ, ಲೈಂಗಿಕತೆಯಲ್ಲಿ ಭಾವನಾತ್ಮಕತೆಯ ಪಾತ್ರ, ಹದಿವಯಸ್ಸಿನ ಕಾಮನೆಗಳನ್ನು ನಿಭಾಯಿಸುವುದು, ಲೈಂಗಿಕ ಸ್ವಾತಂತ್ರ್ಯದ ಇತಿಮಿತಿಗಳು, ಅಂತರ್ಜಾಲದಿಂದ ಮೋಸ ಹೋಗದಿರುವುದು, ಲೈಂಗಿಕ ರೋಗಗಳು, ಸಲಿಂಗಕಾಮ, ತೃತೀಯ ಲಿಂಗಿಗಳು- ಹೀಗೆ ಹಲವಾರು ವಿಚಾರಗಳನ್ನೊಳಗೊಂಡ ಪ್ರಾಥಮಿಕ ಶಾಲಾ ಮಟ್ಟದಿಂದ ಹಂತಹಂತವಾಗಿ ನೀಡುವಂತಹ ಸಮಗ್ರ ಲೈಂಗಿಕ ಶಿಕ್ಷಣವನ್ನು ರೂಪಿಸಲು ಸಾಧ್ಯವಿದೆ. ಪಾಶ್ಚಿಮಾತ್ಯ ಮಾದರಿಗಳು ಕೂಡ ಈ ನಿಟ್ಟಿನಲ್ಲಿ ಉಪಯುಕ್ತವಾಗಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾವು ಯೋಚಿಸಬೇಕಾಗಿದೆ. ಜಾಗತೀಕರಣಗೊಂಡ ಮುಕ್ತ ಸಮಾಜ ಇವತ್ತಿನ ಅನಿವಾರ್ಯ ಎಂದಾದರೆ ಅದಕ್ಕೆ ತಕ್ಕಂತೆ ಜನಸಮುದಾಯದ ಚಿಂತನೆ, ಜೀವನಶೈಲಿಗಳೆಲ್ಲಾ ಬದಲಾಗುತ್ತಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು. ಇದನ್ನು ಕಡೆಗಣಿಸಿ ಬೂಟಾಟಿಕೆಯ ಮಡಿವಂತಿಕೆಗೆ ಒತ್ತು ನೀಡುವ ಸರ್ಕಾರಗಳಿಂದ ಲೈಂಗಿಕ ಶಿಕ್ಷಣದ ಬಗೆಗೆ ಯೋಚಿಸಲು ಸಾಧ್ಯವೇ? ಸಾಧ್ಯವಿಲ್ಲದಿದ್ದರೆ ತಮ್ಮ ಮಕ್ಕಳ ಸಂತೃಪ್ತ ಬದುಕಿಗಾಗಿ ತಮ್ಮ ಮಿತಿಗಳಲ್ಲಿ ಮಾಡಬಹುದಾದ್ದು ಏನು ಎಂದು ಪೋಷಕರು ಯೋಚಿಸಬೇಕಾಗಿದೆ.

ಸಭ್ಯ ಉಡುಪು ಅಗತ್ಯ

ವಸ್ತ್ರ ಸಂಸ್ಕೃತಿಯ ಬಗ್ಗೆ ಜೆಸ್ಸಿ ಪಿ.ವಿ. ಅವರು ಪ್ರಕಟಪಡಿಸಿರುವ ನಿಲುವನ್ನು (ಪ್ರ.ವಾ., ಚರ್ಚೆ, ಆಗಸ್ಟ್‌ 8) ಒಪ್ಪಿಕೊಂಡರೂ, ಉಪನ್ಯಾಸಕಿಯರು ತಮ್ಮದೇ ಆದ ಕೆಲವು ಮಿತಿಗಳನ್ನು ಮೀರಿ ನಡೆಯುವುದು ಎಷ್ಟರಮಟ್ಟಿಗೆ ಸರಿ?

ಸೀರೆಯ ಜೊತೆಗೆ ‘ಚೂಡಿದಾರ್ ತೊಟ್ಟರೂ ಆಗಬಹುದು’ ಎನ್ನುವ ಜೆಸ್ಸಿಯವರ ಅಭಿಪ್ರಾಯ ಸರಿಯಲ್ಲ. ಉಪನ್ಯಾಸಕಿಯರು ಪ್ರತಿದಿನ ವಿಚಿತ್ರವಾದ ರೀತಿಯಲ್ಲಿ ಬಗೆ ಬಗೆಯ ಸೀರೆ ಧರಿಸಿ, ಅದಕ್ಕೆ ತಕ್ಕಂತೆ ಮೇಕಪ್‌, ಲಿಪ್‌ಸ್ಟಿಕ್‌, ಹೈ ಹೀಲ್ಸ್‌ ಹಾಕಿಕೊಂಡು ಬಂದರೆ ಯಾವುದೋ ಕಾರ್ಯಕ್ರಮಕ್ಕೆ ಬಂದವರಂತೆ ಕಾಣುತ್ತಾರೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಕೆಟ್ಟದೋ ಒಳ್ಳೆಯದೋ ಪರಿಣಾಮ ಬೀರುವುದಂತೂ ನಿಜ.

ಕಾಲೇಜ್ ಕ್ಯಾಂಪಸ್‌ನಲ್ಲಿ ತರಗತಿಯ ಕೊಠಡಿಯಲ್ಲಿ ನೂರಾರು ಕಣ್ಣುಗಳು ತಮ್ಮನ್ನು ಸ್ಕ್ಯಾನ್ ಮಾಡುತ್ತಿರುತ್ತವೆ ಎನ್ನುವುದು ಅವರ ಗಮನದಲ್ಲಿರಬೇಕು.

ಚೂಡಿದಾರ್ ಅಥವಾ ಬೇರೆ ಯಾವುದೇ ಉಡುಪು ಧರಿಸಿ ಬರುವುದಾದರೆ ಧಾರಾವಾಹಿಯಲ್ಲಿ ಬರುವ ಪಾತ್ರಗಳಿಗೂ ಉಪನ್ಯಾಸಕರಿಗೂ ವ್ಯತ್ಯಾಸ ಇರುವುದಿಲ್ಲ. ನಾವು ಕೆಲಸ ಮಾಡುವ ಪರಿಸರಕ್ಕೆ ತಕ್ಕಂತೆ ತಮ್ಮ ಉಡುಪನ್ನು ಬದಲಾಯಿಸಿಕೊಳ್ಳುವುದು ಎಲ್ಲರಿಗೂ ಸೂಕ್ತ.

–ಮಲ್ಲಮ್ಮ ಯಾಟಗಲ್, ದೇವದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.