ADVERTISEMENT

ನಗರೀಕರಣವೀಗ ಮುಪ್ಪಾದ ಹುಲಿ

ಮತಪೆಟ್ಟಿಗೆಯೆಂಬ ಪ್ರಜಾಪ್ರಭುತ್ವದ ಮಾಯಾ ಪೆಟ್ಟಿಗೆಗೆ ಪಾವಿತ್ರ್ಯ ಬಂದಾಗ ಸಮಾಜ-, ರಾಜಕಾರಣ-, ನ್ಯಾಯಾಂಗ ಎಲ್ಲವೂ ಶುದ್ಧವಾದಾವು

ಡಾ.ರಾಜೇಗೌಡ ಹೊಸಹಳ್ಳಿ
Published 5 ಡಿಸೆಂಬರ್ 2019, 20:15 IST
Last Updated 5 ಡಿಸೆಂಬರ್ 2019, 20:15 IST
Sangatha 06-12-2019
Sangatha 06-12-2019   

ಕೆರೆಗಳನ್ನು ಸಂರಕ್ಷಿಸದಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕಿಡಿಗಣ್ಣು ಬಿಟ್ಟಿದೆ. ನಕ್ಷೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳನ್ನು ಗುರುತಿಸಲು ಹೈಕೋರ್ಟ್ ನಿರ್ದೇಶಿಸಿದೆ. 1.62 ಲಕ್ಷ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ಸುದ್ದಿಗಳು ಏನು ಹೇಳುತ್ತವೆ?

ಮೊದಲನೆಯದು, ಸರ್ಕಾರಗಳಿಗೆ ಎನ್‌ಜಿಟಿ ಎಂಬುದು ಹಲ್ಲು ಕಿತ್ತು ಕೂರಿಸಿರುವ ಹುಲಿಯಂತೆ. ಎರಡನೆಯದು, ಹಳೇ ರಾಗದಲ್ಲಿ ‘ನಾ ಎದ್ದರೆ ನೀನು ಕೆಟ್ಟೆ’ ಎನ್ನುವ ಬೆದರಿಕೆ. ಆದರೆ ಅದಕ್ಕೆ ಅವಕಾಶ ಇಲ್ಲದ ಸ್ಥಿತಿ. ಮೂರನೆಯದು, ರಾಜಕೀಯದಾಟ. ಹಾಗಾಗಿ, 2010- 2020 ಗರಿಷ್ಠ ತಾಪಮಾನದ ದಶಕವೆಂದು; ಭೂಮಿ ಕುದಿಯುತ್ತಿದೆ ಎಂದು ಅಂಕಿಅಂಶ ನೀಡುತ್ತಿರುವ ವಿಶ್ವ ಹವಾಮಾನ ಸಂಸ್ಥೆಯ ವರದಿಗಳನ್ನು (ಪ್ರ.ವಾ., ಡಿ. 4) ಓದಿ, ಕೇವಲ ಸುದ್ದಿಗಳು ಎಂದುಕೊಳ್ಳುತ್ತಾ ಪತ್ರಿಕೆಯನ್ನು ಅತ್ತ ಇಡುವ ಸ್ಥಿತಿ. ದೇಶಿಮಂತ್ರ ತ್ಯಜಿಸಿದ ನಗರೀಕರಣವೀಗ ಮುಪ್ಪಾದ ಹುಲಿಯು ಕುಳಿತಲ್ಲೇ ಕಪ್ಪೆ ಎರಕುವಂತೆ ಆಗಿದೆ.

ಭಾರತದ ನಗರಗಳಲ್ಲಿ ದಿನಕ್ಕೆ 1.20 ಲಕ್ಷ ಟನ್ ಮಲ, ಗ್ರಾಮೀಣ ಭಾಗದಲ್ಲಿ 2.5 ಲಕ್ಷ ಟನ್ ಮಲವನ್ನು ನೀರಮ್ಮದಿರ ಮಡಿಲಿಗೆ ಮಾನವ ನೂಕುತ್ತಿದ್ದಾನೆ. ಅದು ರಾಜ್ಯದಲ್ಲಿ ನಂದಿಬೆಟ್ಟದಷ್ಟು, ರಾಷ್ಟ್ರದಲ್ಲಿ ಗೌರಿಶಂಕರದಷ್ಟು ಎತ್ತರದ ಮಲಗುಪ್ಪೆಯಾದೀತು! ಸಮುದ್ರರಾಜನ ಆಸ್ಥಾನವೆಂದರೆ, ಶ್ರೀಕೃಷ್ಣನ ಕೊಳಲಿಗೆ ನಲಿಯುವ ನರ್ತನದ ಲೀಲೆ. ಅದೀಗ ಕದಡಿದ ಮಲಮೂತ್ರದ ಕೆಸರುಗದ್ದೆ. ಹಾಗಾಗಿ, ಗುಟುಕಿಸಲಾರದೆ ಆತನಿಗೆ ಕೋಪ ಉಕ್ಕಿ ಬೆಂಕಿ ಉಗುಳುತ್ತಿದ್ದಾನೆ. ಕೆಲವೇ ವರ್ಷಗಳಲ್ಲಿ ಭೂಮಂಡಲ ಪಕ್ಕಕ್ಕೆ ಜರುಗಿ, ಸಮುದ್ರರಾಜನ ಕಲಗಚ್ಚು ಬಾನಿಯಲ್ಲಿ ಬೆರೆತು ಇಡೀ ಜಗತ್ತು ಬೆಳ್ಳಂದೂರು ಕೆರೆಯ ರೂಪಕವಾಗುವ ಎಲ್ಲಾ ಸೂಚನೆಗಳಿವೆ. ಕೆ.ಸಿ. ವ್ಯಾಲಿ ನೀರಿಗೆಹಲುಬುವಂತಾಗಿರುವ ಮಾನವನ ಸ್ಥಿತಿ ಎಂಥದ್ದಿರಬೇಕು! ‘ಎಲ್ಲರಿಗೂ ಆದದ್ದು ನಮಗೂ ಆಗುತ್ತದೆ’ ಎಂಬ ಅಂತ್ಯ ಕಾಲದ ಹತಾಶೆ ಇದು!

ADVERTISEMENT

ಹಾಗಾದರೆ ಪರಿಹಾರವಿಲ್ಲವೇ? ಯಾಕಿಲ್ಲ? ಅದಕ್ಕೇ ಬಾಲಕಿ ಗ್ರೇತಾ ಥನ್‌ಬರ್ಗ್ ದಾರಿಯಲ್ಲಿ ಮಕ್ಕಳನ್ನು ತಯಾರು ಮಾಡಬೇಕು. ಈಗಂತೂ ಮತದಾರರು ಅರ್ಹ, ಅನರ್ಹ ನಾಯಕರನ್ನು ವಿಂಗಡಿಸುತ್ತಿಲ್ಲ. ತಮ್ಮ ಮಕ್ಕಳ ಭವಿಷ್ಯದ ತಲೆ ಮೇಲೆ ತಾವೇ ಕಲ್ಲು ಎಸೆಯು ತ್ತಿದ್ದಾರೆ. ಮತಪೆಟ್ಟಿಗೆಯೊಂದೇ ಪ್ರಜಾಪ್ರಭುತ್ವದ ಮಾಯಾ ಪೆಟ್ಟಿಗೆಯಾಗಿರುವುದರಿಂದ ಅದಕ್ಕೆ ಪಾವಿತ್ರ್ಯ ಬಂದಾಗ ಸಮಾಜ ರಾಜಕಾರಣ- ನ್ಯಾಯಾಂಗ ಎಲ್ಲವೂ ಶುದ್ಧವಾದಾವು! ಒಂದು ಕೆರೆ ಕೆಟ್ಟ ಮೇಲೆ ಶುದ್ಧೀಕರಿಸಲು ಎಷ್ಟು ಕೋಟಿಯಾದರೂ ಸಾಲದು. ಅದು ಗಂಗಾ, ಯಮುನೆಯರನ್ನು ಶುದ್ಧೀಕರಣ ಮಾಡುತ್ತೇವೆಂದು ಹೊರಟ ಉತ್ತರನ ಪೌರುಷ.

ಸರಿಯಾಗಿರುವ ಕೆರೆಗಳನ್ನು ಕೆಡುವ ಮೊದಲು ಬಂದೋಬಸ್ತ್ ಮಾಡಿದರೆ ಅದು ಸುಲಭ. ಉದಾಹರಣೆಗೆ, ಬೆಂಗಳೂರಿನ ಕೆಂಗೇರಿ ಬಳಿ ಭೀಮನಕುಪ್ಪೆ ಹೊಸಕೆರೆ ಇದೆ. ಸ್ಫಟಿಕದ ಸರೋವರದಂತಿದೆ. ಸುತ್ತಲೂ ನಗರದವರು ಹೇಳುವ ಅಭಿವೃದ್ಧಿಯ ಗುಮ್ಮ ಬರಲಾರಂಭಿಸಿದೆ. ಅದನ್ನು ಉಳಿಸಿಕೊಳ್ಳುವ ಯೋಚನೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕಾಗಲೀ ಕೆರೆಗಳ ಸುಪರ್ದಿನ ಇಲಾಖೆಯವರಿಗಾಗಲೀ ಬೇಕಿಲ್ಲ. ಜನ ಗೋಗರೆದರು, ಬರೆದರು. ಯಾರೂ ಕ್ಯಾರೇ ಎನ್ನುತ್ತಿಲ್ಲ. ಅಂತಹ ಕೆರೆಗಳು ಕೆಟ್ಟರೆ ಬಾಚಬಹುದಲ್ಲವೇ ಎಂಬುದು ರಾಜಕಾರಣದ ಆಲೋಚನೆ. ಇಂಥಾದ್ದಕ್ಕೆ ಎಚ್ಚರಿಕೆ ವಹಿಸದಿದ್ದರೆ ಪುನಃ ನ್ಯಾಯಮಂಡಳಿಯ ಹಲ್ಲುಕಿತ್ತ ಗುಟುರುಗಳನ್ನು ಕೇಳುತ್ತಾ ಸಾಗುವ ದಿನಗಳಷ್ಟೇ ಉಳಿದಾವು!

ಕಟ್ಟಡ ನಿರ್ಮಿಸುವಾಗ ನಿಯಮ ಉಲ್ಲಂಘಿಸಿದರೆ ದಂಡ ಕಟ್ಟಿ ಸರಿಪಡಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯು ಒಮ್ಮೆ ಕರೆ ಕೊಡುತ್ತದೆ. ಉಲ್ಲಂಘಿಸಿದರೆ ಕಟ್ಟಡ ಬೀಳಿಸಿ ಬಿಡುತ್ತೇವೆ ಎಂದು ಮತ್ತೊಮ್ಮೆ ಅಧಿಕಾರಿಗಳು ಬರುವುದುಂಟು. ಈ ಸ್ಥಿತಿ ಯಾವ ಮಟ್ಟದಲ್ಲಿದೆ ಎಂದರೆ, ನಗರವನ್ನು ಒಡೆದು ಹಾಳು ಹಂಪೆ ಮಾಡುವುದಷ್ಟೇ ಬಾಕಿ ಎನ್ನುವ ಹಂತ ತಲುಪಿದೆ. ಮುಂಜಾಗ್ರತೆಯಿಲ್ಲದ ಅಧಿಕಾರ ವರ್ಗ ಹಾಗೂ ರಾಜಕಾರಣದ ಒಣ ಪೌರುಷದ ಹೂರಣವಿದು.

ದೇಶದಲ್ಲಿ ಅಮುಖ್ಯವೆಂದು ಕಡೆಯ ಸ್ಥಾನ ನೀಡಿರುವುದು ಅರಣ್ಯ ನೀತಿಗೆ. ಅದೇ ಪ್ರಮುಖ ಅಭಿವೃದ್ಧಿ ನೀತಿಯಾಗಬೇಕಿತ್ತು. ಇಂದಿರಾ ಗಾಂಧಿ ಆಡಳಿತ ಅವಧಿಯಲ್ಲಿ ಅರಣ್ಯ‌ಪರ ಕಾಯ್ದೆಗೆ ಬಲ ಬಂದಿತು. ಆನಂತರದ ರಾಜಕಾರಣವು ಅದನ್ನು ಮುಂದುವರಿಸಬೇಕಿತ್ತು. ಅದು ಆಗದೇ ಹೋದುದು ದುರದೃಷ್ಟಕರ. ಈಗಂತೂ ಅರಣ್ಯವೆಂಬುದು ಅಭಿವೃದ್ಧಿ ಹೆಸರಿನ ಹಳಸು ಮಾಂಸದೂಟವಾಗಿದೆ. ಹೀಗಿರುವಾಗ ಭವಿಷ್ಯದ ಬದುಕು ಅದೆಷ್ಟು ಆರೋಗ್ಯಪರ! ಭಯವಾಗುತ್ತಿದೆ ಸೂಕ್ಷ್ಮ ಮನಸ್ಸಿನವರಿಗೆ. ನಿರ್ಭಯವಾಗುತ್ತಿದೆ, ಬಕಾಸುರ ಸಮೂಹಕ್ಕೆ.

ಮಲಮೂತ್ರ ಹೀರಲು ಯಂತ್ರಗಳಿವೆ. ಆ ತ್ಯಾಜ್ಯವನ್ನು ಸಾವಯವಗೊಳಿಸಿದರೆ ಮನುಷ್ಯನಿಗೆ ಪ್ರಯೋಜನಕಾರಿ. ಈಗ ಅದೂ ರೈತರ ಪಾಲಿನ ಗೊಬ್ಬರವಲ್ಲ. ನೀರಿಗೆ ನೂಕಲಾಗುತ್ತಿದೆ. ಪರಿಣಾಮವಾಗಿ, ಆ ನೀರು ಕುಡಿಯಲಾರದ ಹೇಸಿಗೆ ರಾಸಾಯನಿಕವಾಗಿ ಮಾರ್ಪಾಡಾಗುತ್ತಿದೆ. ಈ ಎಲ್ಲವುಗಳ ಪರಿಣಾಮವಾಗಿ ಮಾನವನ ಬದುಕು ಅಯ್ಯೋ ಎನಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.