ADVERTISEMENT

ಗುರುವಾರ, 23–03–2017

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಜೂನ್ ತಿಂಗಳಲ್ಲಿ ಮಹಾಜನ್ ವರದಿ
ಕಾರವಾರ, ಮಾ. 22– ಮುಂದಿನ ಜೂನ್ ತಿಂಗಳ ಕೊನೆಯ ಹೊತ್ತಿಗೆ ವರದಿ ಸಲ್ಲಿಸುವ ಆಶ್ವಾಸನೆ ಹೊಂದಿರುವುದಾಗಿ ಮೈಸೂರು– ಮಹಾರಾಷ್ಟ್ರ ಮತ್ತು ಮೈಸೂರು– ಕೇರಳ ಗಡಿ ವಿವಾದದ ಬಗ್ಗೆ ಪರಿಶೀಲಿಸಲು ನೇಮಕಗೊಂಡಿರುವ ಶ್ರೀ ಮೆಹರ್ ಚಂದ್ ಮಹಾಜನ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
 
ಈವರೆಗೆ ತಾವು ಸಂಗ್ರಹಿಸಿರುವ ಪ್ರತ್ಯಕ್ಷ ಸಾಕ್ಷ್ಯದಿಂದ ಹೆಚ್ಚು ತಿಳಿವಳಿಕೆಯುಂಟಾಗಿಲ್ಲವೆಂದೂ ಏಕೆಂದರೆ ಇವುಗಳ ಸಾರಾಂಶವೆಲ್ಲವೂ ಈಗಾಗಲೇ ವಿವಿಧ ಪಂಗಡಗಳು ಸಲ್ಲಿಸಿರುವ ಮನವಿಗಳಲ್ಲಿ ಅಡಗಿವೆಯೆಂದೂ ಅವರು ನುಡಿದರು.
 
ಸರ್ಕಾರಗಳಿಂದ ಇನ್ನೂ ಮನವಿಗಳಿಲ್ಲ:ಈ ಗಡಿ ಸಮಸ್ಯೆ ಸಂಬಂಧಪಟ್ಟ ಸರ್ಕಾರಗಳ ಮುಂದೆ ಕಳೆದ 10 ವರ್ಷಗಳಿಂದ ಇದ್ದರೂ ಉಭಯ ಸರ್ಕಾರಗಳು ಈವರೆಗೆ ತಮ್ಮ ಮನವಿಗಳನ್ನು ಆಯೋಗಕ್ಕೆ ಕಳುಹಿಸಿಲ್ಲವೆಂದು ಶ್ರೀಯುತರು ವಿಷಾದಿಸಿದರು.
 
ವೈಜಯಂತಿಮಾಲಳ ಲಗ್ನ ನಿಶ್ಚಿತಾರ್ಥ; ವರ– ಡಾ. ಬಾಲಿ
ಮುಂಬೈ, ಮಾ. 22– ಭಾರತ ರಜತ ರಂಗದ ವಿಖ್ಯಾತ ನೃತ್ಯತಾರೆ ವೈಜಯಂತಿಮಾಲ ಶೀಘ್ರದಲ್ಲೇ ವಿವಾಹವಾಗಲಿದ್ದಾಳೆ. ವರ 44 ವರ್ಷ ವಯಸ್ಸಿನ ವೈದ್ಯ ಡಾ. ಬಾಲಿ. ಹುಟ್ಟು ಪಂಜಾಬಿಯಾದ ಡಾ. ಬಾಲಿ ಈಗ ಮುಂಬೈನಲ್ಲಿ ನೆಲೆಸಿದ್ದಾರೆ.
 
ಇಲ್ಲಿನ ವಾಲಕೇಶ್ವರದಲ್ಲಿರುವ ತಾರೆಯ ಮನೆಯಲ್ಲಿ ಕೆಲವು ಆಪ್ತಮಿತ್ರರು ಹಾಗೂ ಸಮೀಪ ಸಂಬಂಧಿಗಳ ಸಮ್ಮುಖದಲ್ಲಿ ಇಂದು ಲಗ್ನದ ನಿಶ್ಚಿತಾರ್ಥ ನಡೆಯಿತು.
 
ಡಾ. ಬಾಲಿಯವರು ತಮ್ಮ ಮೊದಲನೆ ಪತ್ನಿಯಿಂದ ಅಧಿಕೃತ ವಿವಾಹ ವಿಚ್ಛೇದನ ಪಡೆದ ನಂತರ ಬಾಲಿ– ವೈಜಯಂತಿ ಲಗ್ನ ನಡೆಯಲಿದೆ. ಎರಡು ವರ್ಷಗಳ ಹಿಂದೆ ನಟ, ನಿರ್ಮಾತೃ ರಾಜ್‌ಕಪೂರ್‌ರವರು ಡಾ. ಬಾಲಿಯವರನ್ನು ವೈಜಯಂತಿಯವರಿಗೆ ಪರಿಚಯ ಮಾಡಿಸಿದರು. ಬಳಿಕ ಡಾ. ಬಾಲಿ ನೃತ್ಯತಾರೆಗೆ ಆಪ್ತ ವೈದ್ಯ ಮಿತ್ರರಾಗಿದ್ದಾರೆ.
 
ಡಾ. ಬಾಲಿಯವರು ನಾಲ್ಕು ಮಕ್ಕಳ ತಂದೆ. ಶ್ರೀಮತಿ ಬಾಲಿಯವರು ಇಲ್ಲಿನ ನ್ಯಾಯಾಲಯವೊಂದರಲ್ಲಿ ಕಳೆದ ನವೆಂಬರ್‌ನಲ್ಲಿ ಮೊಕದ್ದಮೆಯೊಂದನ್ನು ಹೂಡಿ, ತಮಗೆ ಡಾ. ಬಾಲಿಯವರೊಡನೆ ದಾಂಪತ್ಯದ ಹಕ್ಕು ನೀಡಬೇಕೆಂದು ಕೋರ್ಟನ್ನು ಕೋರಿದ್ದರು.
 
ಈ ಮೊಕದ್ದಮೆಯಲ್ಲಿ ವೈಜಯಂತಿಮಾಲಳನ್ನು ಸಹ ಪ್ರತಿವಾದಿಯಾಗಿ ಹೆಸರಿಸಲಾಗಿತ್ತು. ಈ ಮೊಕದ್ದಮೆ ಈಗ ನ್ಯಾಯಾಲಯದ ಹೊರಗೆ ರಾಜಿಯಾಗಿ ಇತ್ಯರ್ಥವಾಗಿದೆಯೆಂದು ಸುದ್ದಿ ಸಂಸ್ಥೆಯೊಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.