ADVERTISEMENT

ಗುರುವಾರ, 9–2–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 19:30 IST
Last Updated 8 ಫೆಬ್ರುವರಿ 2017, 19:30 IST
ಇಂದಿರಾ ಗಾಂಧಿ ಅವರಿಗೆ ಕಲ್ಲಿನೇಟು
ಭುವನೇಶ್ವರ, ಫೆ. 8– ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಮುಖಕ್ಕೆ ಇಂದು ಸಂಜೆ ಇಲ್ಲಿನ ಚುನಾವಣಾ ಪ್ರಚಾರದ ಸಭೆಯೊಂದರಲ್ಲಿ ಕಲ್ಲಿನೇಟು ಬಿತ್ತು. ಅವರ ಮೂಗಿನಿಂದ ತುಂಬ ರಕ್ತ ಸುರಿಯಿತು.
 
ಕಲ್ಲು ತಾಗಿದೊಡನೆ ಶ್ರೀಮತಿ ಇಂದಿರಾ ಗಾಂಧಿಯವರು ಸ್ವಲ್ಪ ಬಾಗಿ ಮುಖವನ್ನು ಎರಡು ಕೈಗಳಿಂದಲೂ ಮುಚ್ಚಿಕೊಂಡರು ಬಳಿಕ ಹಿಂದಕ್ಕೆ ತಿರುಗಿ ಕುರ್ಚಿಯಲ್ಲಿ ಕುಳಿತರು. ನೀರನ್ನು ತರುತ್ತಿದ್ದಾಗ ‘ನೀರಿನ ಅಗತ್ಯವಿಲ್ಲ, ಐಸ್ ಇದ್ದರೆ ಸ್ವಲ್ಪ ತನ್ನಿ’ ಎಂದು ಅವರು ಹೇಳಿದ್ದು ಕೇಳಿ ಬಂತು. ಆದರೆ ಐಸ್ ತತ್‌ಕ್ಷಣ ಸಿಕ್ಕಲಿಲ್ಲ. ಕಲ್ಲೇಟು ಬಿದ್ದ ಬಳಿಕವೂ ಕೆಲವು ನಿಮಿಷ ಇಂದಿರಾ ಗಾಂಧಿಯವರು ವೇದಿಕೆಯ ಮೇಲೆ ಕುಳಿತಿದ್ದರು. ಅವರಿಗೆ ಗಾಯವಾಗಿದೆ ಎಂಬುದು ಅನೇಕರಿಗೆ ಗೊತ್ತಾಗಲೇ ಇಲ್ಲ.
 
***
ವಿಶೇಷ ರಾಜಕೀಯ ಪ್ರಜ್ಞೆಯ ಉಡುಪಿ– ಬಣಗಳ ಕಣ
ಉಡುಪಿ, ಫೆ. 8– 446820 ಮತದಾರರಿರುವ ಉಡುಪಿ ಲೋಕಸಭಾ  ಕ್ಷೇತ್ರ ಆರ್ಥಿಕ ಬಲ, ಕೋಮಿನ ಪ್ರಭಾವ, ಗುಪ್ತಗಾಮಿನಿಯಾದ ವೈಯಕ್ತಿಕ ಪ್ರತಿಷ್ಠೆಯ ಸವಾಲು, ಪ್ರತಿಸವಾಲಿನ ವಾತಾವರಣದಲ್ಲಿ ರಾಜಕೀಯವನ್ನು ಪ್ರತಿಕ್ಷಣಕ್ಕೂ ಪರಿವರ್ತನೆಗೊಳಿಸುತ್ತಿರುವ ಮೂಸೆಯಾಗಿದೆ.
 
ರಾಜಕೀಯ ಪ್ರಜ್ಞೆ ವಿಶೇಷವಾಗಿರುವ ಈ ಕ್ಷೇತ್ರವು ಇಡೀ ಜಿಲ್ಲೆಯ ಬಣಗಳಲ್ಲಿನ ಹೋರಾಟದ ಪ್ರತೀಕವಾಗಿದೆ. ಶ್ರೀ ಟಿ.ಎ. ಪೈ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ‘ವಿವಾದ ಉಂಟಾದುದು’ ಈ ಪ್ರದೇಶದಲ್ಲಿ ಅಸಮಾಧಾನ ಉಂಟು ಮಾಡಿದ್ದು, ಚುನಾವಣೆಯ ಮೇಲೆ ಪ್ರಭಾವ ಆಗುತ್ತಿರುವುದು ಕಂಡು ಬರುತ್ತಿದೆ. ಇದು ಕಾಂಗ್ರೆಸ್ಸಿಗೆ ಆತಂಕ ವನ್ನುಂಟು ಮಾಡುತ್ತಿರುವ ವಿಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.