ADVERTISEMENT

ಭಾನುವಾರ, 26–11–1967

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 19:30 IST
Last Updated 25 ನವೆಂಬರ್ 2017, 19:30 IST
ಭಾನುವಾರ, 26–11–1967
ಭಾನುವಾರ, 26–11–1967   

ಶ್ರೀ ಲಕ್ಷ್ಮಣ್‌ಸಿಂಗ್ ಗಿಲ್ ಪಂಜಾಬ್ ಮುಖ್ಯಮಂತ್ರಿ

ಚಂಡೀಗಢ, ನ. 25– ಪಂಜಾಬ್‌ ಜನತಾ ಪಕ್ಷದ ನಾಯಕ ಶ್ರೀ ಲಕ್ಷ್ಮಣ್‌ಸಿಂಗ್ ಗಿಲ್ ಅವರು ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ 4.30ರ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿಯು ರಾಜ್ಯಪಾಲ ಡಾ. ಡಿ.ಸಿ. ಪಾವಟೆಯವರ ಸಮ್ಮುಖದಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ADVERTISEMENT

ಸಂಪರ್ಕ ಭಾಷೆ ರೂಪಿಸುವ ಯತ್ನ: ಸೇನ್

ನವದೆಹಲಿ, ನ. 25– ಅಧಿಕೃತ ಭಾಷಾ ತಿದ್ದುಪಡಿ ಮಸೂದೆ ಮಂಡಿಸುವ ಆಲೋಚನೆ ಇರುವುದರಿಂದ ಇಂಗ್ಲಿಷನ್ನು ಅನಂತವಾಗಿ ಮುಂದುವರಿಸಲಾಗುವುದೆಂಬ ಭೀತಿ ಅನಗತ್ಯವೆಂದು ಶಿಕ್ಷಣ ಸಚಿವ ಡಾ. ತ್ರಿಗುಣ ಸೇನ್ ಇಂದು ಸಂಸತ್ತಿನ ಕಾಂಗ್ರೆಸ್ ಸದಸ್ಯರಿಗೆ ಭರವಸೆ ಕೊಟ್ಟರೆಂದು ಗೊತ್ತಾಗಿದೆ.

ಮಸೂದೆಯ ವಿಧಿಗಳನ್ನು ಸದಸ್ಯರಿಗೆ ವಿವರಿಸುತ್ತಿದ್ದ ಡಾ. ಸೇನ್ ಅವರು ‘ಎಲ್ಲ ಭಾರತೀಯ ಭಾಷೆಗಳ ಬಗೆಗೂ ಅಭಿಮಾನ ಮತ್ತು ಗೌರವ ಬೆಳೆಸಿಕೊಳ್ಳಲು ನಾವು ಪ್ರಯತ್ನಿಸಬೇಕು’ ಎಂದರು.

ತಜ್ಞರಿಂದ ರಾಜ್ಯ ಕರಾವಳಿ ಸಮೀಕ್ಷೆ

ಬೆಂಗಳೂರು, ನ. 25– ಮುಂಬರುವ ವರ್ಷಗಳಲ್ಲಿ ರಾಜ್ಯ ಕರಾವಳಿಯ ಬಂದರುಗಳ ಅಭಿವೃದ್ಧಿ ಮತ್ತು ಮತ್ಸ್ಯ ವ್ಯವಸಾಯ ಪ್ರಗತಿಗೆ ಅಗಾಧ ಅವಕಾಶ ಒದಗಿಸಿ ಕೊಡಲಿರುವ, ವಿದೇಶಿ ಸಹಕಾರದಿಂದ ಕೂಡಿದ ಬೃಹತ್ ಯೋಜನೆಗೆ ಇಂದು ನಾಂದಿ.

ಯೋಜನೆಯ ರೂಪರೇಷೆಗಳನ್ನು ನಿರ್ಧರಿಸಲು ಪೋಲಂಡಿನ ತಜ್ಞರಿಗೆ ಅನುಮತಿ ನೀಡುವ ಕೋರಿಕೆ ಪತ್ರಕ್ಕೆ, ಮೈಸೂರು ಸರಕಾರ ಮತ್ತು
‘ಇಂಡೋ–ಪೋಲೆಂಡ್’‍ ವಾಣಿಜ್ಯ ಸಂಸ್ಥೆ ಸಹಿ ಬಿತ್ತು.

ಸಾಲವಾಗಾದರೂ ಅಕ್ಕಿ ಕೊಡಲು ಮದ್ರಾಸಿಗೆ ಒತ್ತಾಯ

ಬೆಂಗಳೂರು, ನ. 25– ಮಾರಾಟ ಮಾಡಲಿಕ್ಕಾಗದಿದ್ದಲ್ಲಲಿ ಕನಿಷ್ಟ ಪಕ್ಷ ಸಾಲವಾಗಿಯಾದರೂ ರಾಜ್ಯಕ್ಕೆ ಐದು ಸಾವಿರ ಟನ್ ಅಕ್ಕಿ ಸರಬರಾಜು ಮಾಡುವಂತೆ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಮದ್ರಾಸ್ ರಾಜ್ಯಕ್ಕೆ ಒತ್ತಾಯಪಡಿಸಿದ್ದಾರೆ.

ಶ್ರೀ ನಿಜಲಿಂಗಪ್ಪನವರು ಇತ್ತೀಚೆಗೆ ಮದ್ರಾಸಿಗೆ ಭೇಟಿ ಕೊಟ್ಟಿದ್ದಾಗ ಈ ಬಗ್ಗೆ ಶ್ರೀ ಅಣ್ಣಾ ದೊರೈರವರಿಗೆ ಮೊಖ್ತಾ ಕೇಳಿಕೊಂಡಿದ್ದುದನ್ನನುಸರಿಸಿ ಪತ್ರ ಬರೆದಿದ್ದಾರೆ.

ಮೈಸೂರಿನ ಈ ಪ್ರಾರ್ಥನೆಯನ್ನು ನಾನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಶ್ರೀ ಅಣ್ಣಾ ದೊರೈ ಅವರು ಆಗ ಆಶ್ವಾಸನೆಯಿತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.