ADVERTISEMENT

ಭಾನುವಾರ, 5–2–1967

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 19:30 IST
Last Updated 4 ಫೆಬ್ರುವರಿ 2017, 19:30 IST

ಚಾಮರಾಜನಗರ ಲೋಕಸಭೆ, 8 ವಿಧಾನಸಭೆ ಕ್ಷೇತ್ರ: ಬಹುಪಾಲು ಅನಿಶ್ಚಯದ ತೂಗುಯ್ಯಲೆಯಲ್ಲಿ
ನಂಜನಗೂಡು, ಫೆ. 4–
ಅರಣ್ಯ ಶಾಖೆ ಸಚಿವ ಶ್ರೀ ಬಿ. ರಾಚಯ್ಯ, ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಡಿ.ಎಂ. ಸಿದ್ದಯ್ಯನವರು ಸ್ಪರ್ಧಿಸಿರುವ ವಿಧಾನಸಭಾ ಕ್ಷೇತ್ರಗಳಿರುವ  ಚಾಮರಾಜನಗರ ಲೋಕಸಭೆ ಮೀಸಲು ಕ್ಷೇತ್ರ ಇಂದು ಬಹುಮಟ್ಟಿಗೆ ಅನಿಶ್ಚಯತೆಯ ತೂಗುಯ್ಯಾಲೆಯಲ್ಲಿದೆ. ಮತದಾನ ಫೆಬ್ರವರಿ 19ರಂದು ನಡೆಯಲಿದ್ದು ಅಲ್ಲಿಯವರೆಗೂ ಇದೇ ಸ್ಥಿತಿ ಮುಂದುವರಿಯುವಂತೆ ತೋರುತ್ತದೆ.

‘ಚುನಾವಣೆ ಎರಡು ದಿನಗಳಿದೆ ಎನ್ನುವವರೆಗೆ ಏನೂ ಹೇಳುವುದಕ್ಕಾಗುವುದಿಲ್ಲ’. ಇದು ವಿಧಾನ ಸಭೆಯ ಎಂಟು ಕ್ಷೇತ್ರಗಳ ಪೈಕಿ ಬಹು ಕ್ಷೇತ್ರಗಳ ಚುನಾವಣಾ ಕಾರ್ಯಕರ್ತರಿಂದ ಕೇಳಿ ಬರುವ ಸರ್ವೇಸಾಮಾನ್ಯವಾದ ಮಾತು. ಆ ಎರಡು ದಿನಗಳಲ್ಲಿ ಹಣವೇ ಫಲಿತಾಂಶವನ್ನು ನಿರ್ಧರಿಸುವುದೆಂಬುದು ‘ಲಕ್ಷಾಂತರ ರೂಪಾಯಿ ಚೆಲ್ಲುವ ಶಕ್ತಿ ಇಲ್ಲದ’ ಉಮೇದುವಾರರ ಶಂಕೆ.

ಮೈಸೂರು ಮಿನರ್ವ ಮಿಲ್  ಫೆ. 10 ರಿಂದ ಪುನರಾರಂಭ
ಬೆಂಗಳೂರು, ಫೆ. 4–
ಮೈಸೂರು ಮಿಲ್ ಮತ್ತು ಮಿನರ್ವ ಮಿಲ್‌ಗಳು ಇದೇ ತಿಂಗಳ 10 ರಿಂದ ಪುನರಾರಂಭವಾಗುವುವು.
ಲೇಬರ್ ಕಮಿಷನರ್ ಹಾಗೂ ಕನ್‌ಸೀಲಿಯೇಷನ್ ಅಧಿಕಾರಿ ಶ್ರೀ ವಿ. ಹನುಮಂತಪ್ಪ ಅವರ ಸಮ್ಮುಖದಲ್ಲಿ ಇಂದು ನಡೆದ ಮಾಲೀಕರ
ಹಾಗೂ ಕಾರ್ಮಿಕ ಪ್ರತಿನಿಧಿಗಳ ಸಭೆಯಲ್ಲಿ ಕಾರ್ಖಾನೆಗಳ ಪುನರಾರಂಭದ ದಿನವನ್ನು ನಿರ್ಧರಿಸಲಾಯಿತು.

ಮಾಸ್ಕೊದಲ್ಲಿ ರಾಯಭಾರಿ ಕಚೇರಿ ಮೇಲೆ ದಾಳಿ: 31 ಮಂದಿಗೆ ಏಟು
ಮಾಸ್ಕೋ, ಫೆ. 4–
ಇಲ್ಲಿಯ ತಮ್ಮ ರಾಯಭಾರಿ ಕಚೇರಿ ಮೇಲೆ ನಿನ್ನೆ ರಾತ್ರಿ ರಷ್ಯದ ತರುಣರು ದಾಳಿ ಮಾಡಿ ಮೂವರು ಮಹಿಳೆಯರೂ ಸೇರಿ, ಸಿಬ್ಬಂದಿ ವರ್ಗದ 31 ಮಂದಿಯನ್ನು ಹೊಡೆದರೆಂದು ಚೀನೀ ರಾಯಭಾರಿ ಕಚೇರಿಯವರು ಇಂದು ಆಪಾದಿಸಿದ್ದಾರೆ. ಈ ದಾಳಿಯನ್ನು ‘ಅನಾಗರಿಕ ವರ್ತನೆ’ ಎಂದು ಚೀನೀಯರು ಆಪಾದಿಸಿದ್ದಾರೆ.

ಕಾಲೇಜ್ ಶಿಕ್ಷಕರ ವೇತನ ಸ್ಕೇಲ್ ಪ್ರಶ್ನೆ ವೇತನ ಆಯೋಗದ ಪರಿಶೀಲನೆಗೆ
ಬೆಂಗಳೂರು, ಫೆ. 4–
ರಾಜ್ಯದಲ್ಲಿನ ಕಾಲೇಜ್ ಶಿಕ್ಷಕರಿಗೆ ಯು.ಜಿ.ಸಿ. ವೇತನ ಸ್ಕೇಲನ್ನು ಕಾರ್ಯಗತ ಮಾಡುವ ಪ್ರಶ್ನೆಯನ್ನು ವೇತನ ಆಯೋಗಕ್ಕೆ ಒಪ್ಪಿಸಲಾಗಿದೆ ಎಂದು ಇಂದು ಇಲ್ಲಿ ತಿಳಿದು ಬಂದಿದೆ.

ಪ್ರಾಥಮಿಕ ಹಾಗೂ ಸೆಕೆಂಡರಿ ಶಾಲಾ ಶಿಕ್ಷಕರಿಗೆ ಶಿಕ್ಷಣ ಆಯೋಗ ಶಿಫಾರಸ್ಸು ಮಾಡಿರುವ ವೇತನ ಸ್ಕೇಲುಗಳನ್ನು ಪರಿಶೀಲಿಸಬೇಕೆಂದು ವೇತನ ಆಯೋಗವನ್ನು ರಾಜ್ಯ ಸರ್ಕಾರ ಪ್ರಾರ್ಥಿಸಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.