ADVERTISEMENT

ಭಾನುವಾರ, 5–3–1967

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2017, 5:06 IST
Last Updated 5 ಮಾರ್ಚ್ 2017, 5:06 IST

ರಾಜಸ್ತಾನದಲ್ಲಿ ಸಂಪುಟ ರಚಿಸಲು ಕಾಂಗ್ರೆಸ್ಸಿಗೆ ಕರೆ; ಸಂಪೂರ್ಣಾನಂದ್ ಪ್ರಕಟಣೆ

ಜಯಪುರ, ಮಾ. 4– ರಾಜಸ್ತಾನ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಶ್ರೀ ಸುಖಾಡಿಯಾ ಅವರಿಗೇ ಸಂಪುಟ ರಚಿಸಲು ಆಮಂತ್ರಣ ನೀಡಬೇಕೆಂದು ತಾವು ನಿರ್ಧರಿಸಿರುವುದಾಗಿ ರಾಜ್ಯಪಾಲ ಡಾ. ಸಂಪೂರ್ಣಾನಂದ್ ಇಂದು ಪ್ರಕಟಿಸಿದರು.
ರಾಜಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸುತ್ತಾ, ಹೊಸ ವಿಧಾನಸಭೆಯಲ್ಲಿ 88 ಸ್ಥಾನಗಳು ಕಾಂಗ್ರೆಸ್ಸಿಗೂ 80 ಸ್ಥಾನಗಳು ವಿರೋಧ ಪಕ್ಷಗಳಿಗೂ ದೊರೆತಿರುವುದರಿಂದ ಕಾಂಗ್ರೆಸ್ಸಿಗೆ ವಿಧಾನಸಭೆಯಲ್ಲಿ ಬಹುಮತವಿದ್ದಂತಾಯಿತೆಂದು ಅವರು ತಿಳಿಸಿದರು. ಪಕ್ಷೇತರ ಸದಸ್ಯರನ್ನು ತಾವು ಗಣನೆಗೆ ತೆಗೆದುಕೊಂಡಿಲ್ಲವೆಂದೂ ಅವರು ಹೇಳಿದರು.

ಪಾನನಿರೋಧ ರದ್ದಿಗೆ ಕೇರಳದ ಕ್ರಮ
ತಿರುವನಂತಪುರ, ಮಾ. 4– ಅಂತಿಮವಾಗಿ ಪಾನನಿರೋಧವನ್ನು ರದ್ದುಪಡಿಸುವುದಕ್ಕೆ ಅನುಕೂಲವಾಗುವಂತೆ ಪಾನನಿರೋಧದ ನಿಯಮಗಳನ್ನು ಸಡಿಲಗೊಳಿಸುವುದು ಕೇರಳದ ಸಂಯುಕ್ತ ರಂಗದ ಸರ್ಕಾರದ ಪ್ರಥಮ ಕ್ರಮಗಳಲ್ಲೊಂದಾಗುವ ಸಂಭವವಿದೆಯೆಂದು ತಿಳಿದು ಬಂದಿದೆ.
ಶ್ರೀ ಅಣ್ಣಾದೊರೈ ಅವರಿಗೆ ಪೋಲೀಸ್, ಪಾನನಿರೋಧ, ಹಣಕಾಸು ಸಾಮಾನ್ಯ ಆಡಳಿತ
ಮದ್ರಾಸ್, ಮಾ. 4– ಮದ್ರಾಸ್‌ನಲ್ಲಿ ರಚಿತವಾದ ಪ್ರಥಮ ಕಾಂಗ್ರೆಸ್ಸೇತರ ಡಿ.ಎಂ.ಕೆ. ಸರ್ಕಾರದ ಸಚಿವ ಖಾತೆಗಳ ಹಂಚಿಕೆಯನ್ನು ಇಂದು ಪ್ರಕಟಿಸಲಾಯಿತು.
   ಮುಖ್ಯಮಂತ್ರಿ ಶ್ರೀ ಸಿ.ಎನ್. ಅಣ್ಣಾದೊರೈ ಅವರು ಸಾರ್ವಜನಿಕ, ಸಾಮಾನ್ಯ ಆಡಳಿತ, ಆರ್ಥಿಕ ಯೋಜನೆ ಪೋಲೀಸ್, ಚುನಾವಣೆಗಳು, ಪಾನನಿರೋಧ ಇಲಾಖೆಗಳನ್ನು ತಮ್ಮ ಹಿಡಿತದಲ್ಲೇ ಇರಿಸಿಕೊಂಡಿದ್ದಾರೆ.

ADVERTISEMENT

ಇಂದಿರಾ ವಿಚಾರದಲ್ಲಿ ಕಾಮರಾಜ್‌ಗೆ ಭ್ರಮನಿರಸನ:ವಮುರಾರಜಿಗೆ ಬೆಂಬಲ?
ನವದೆಹಲಿ, ಮಾ. 4– ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ನಾಯಕ ಸ್ಥಾನಕ್ಕೆ ಮುರಾರಜಿ ಸ್ಪರ್ಧಿಸುವುದನ್ನು ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್ ವಿರೋಧಿಸುವುದಿಲ್ಲವಲ್ಲದೆ, ತಮ್ಮ ಮಧ್ಯ ಪ್ರವೇಶದಿಂದ ಮುರಾರಜಿಯವರಿಗೆ ಸಹಾಯವಾಗುವುದೆಂಬುದು ಖಚಿತವಾದರೆ ನೇರವಾಗಿ ಬೆಂಬಲ ನೀಡುವರೆಂದೂ ಕಾಂಗ್ರೆಸ್ ಅಧ್ಯಕ್ಷರ ಸಮೀಪ ವಲಯಗಳಲ್ಲಿ ಹೇಳಲಾಗುತ್ತಿದೆ.
ಪ್ರಧಾನಮಂತ್ರಿ ಇಂದಿರಾಗಾಂಧಿಯವರ ವಿಚಾರದಲ್ಲಿ ಕಾಮರಾಜರಿಗೆ ಭ್ರಮನಿರಸನವಾಗಿದೆಯೆಂದು ಗೊತ್ತಾಗಿದೆ.
ಮಹಾರಾಷ್ಟ್ರ ಜೊತೆ ಗಡಿ ವಿವಾದ ರಾಜ್ಯದ ನಿಲುವು ವಾದಿಸಲು ನಂಬಿಯಾರ್ ನೇಮಕ
ಬೆಂಗಳೂರು, ಮಾ. 4– ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಪರಿಶೀಲನೆಗಾಗಿ ನೇಮಕವಾಗಿರುವ ಮಹಾಜನ್ ಆಯೋಗದ ಮುಂದೆ ಮೈಸೂರಿನ ಗಡಿ ನಿಲುವನ್ನು ಪ್ರತಿವಾದಿಸಲು ಮದರಾಸಿನ ಖ್ಯಾತ ವಕೀಲರಾದ ಎಂ.ಕೆ. ನಂಬಿಯಾರ್‌ರವರನ್ನು ರಾಜ್ಯ ಸರ್ಕಾರ ಗೊತ್ತು ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.