ADVERTISEMENT

ಮಂಗಳವಾರ, 8–8–1967

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2017, 19:30 IST
Last Updated 7 ಆಗಸ್ಟ್ 2017, 19:30 IST

ಡಾ. ತೇಜರನ್ನು ಬಂಧಿಸದ ಬಗ್ಗೆ ಆಕ್ಷೇಪ
ನವದೆಹಲಿ, ಆ. 7–
ಜಯಂತಿ ನೌಕಾ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಧರ್ಮತೇಜ ಕಳೆದ ವರ್ಷ ಭಾರತದಲ್ಲಿದ್ದಾಗ ಸರ್ಕಾರವು ಅವರನ್ನು ಬಂಧಿಸದಿದ್ದ ವಿಷಯವನ್ನು ವಿರೋಧ ಪಕ್ಷಗಳ ಸದಸ್ಯರು ಎತ್ತಿದಾಗ ಇಂದು ರಾಜ್ಯಸಭೆಯಲ್ಲಿ ಗಲಾಟೆಯಾಯಿತು.

ವೃತ್ತಪತ್ರಿಕಾ ಸಂಸ್ಥೆಯೊಂದರಲ್ಲಿ 10 ಲಕ್ಷ ರೂಪಾಯಿಯ ಷೇರುಗಳನ್ನು ಕೊಂಡುಕೊಳ್ಳುವಂತೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಡಾ. ತೇಜ ಅವರಿಗೆ ತಿಳಿಸಿದ್ದರೆಂದು ಶ್ರೀಮತಿ ತೇಜ, ಉಪಪ್ರಧಾನ ಮಂತ್ರಿಗೆ ಬರೆದಿದ್ದರೆನ್ನಲಾದ ಪತ್ರದಿಂದ ಶ್ರೀ ರಾಜ್ ನಾರಾಯಣ್ ಅವರು ಉದ್ಧರಿಸಿದಾಗ ಗಲಾಟೆಗೆ ಆರಂಭವಾಯಿತು.

ಕಾಂಗ್ರೆಸ್ ಸಂಪುಟಗಳ ವಿಸ್ತರಣೆಗೆ ಅನುಮತಿ
ನವದೆಹಲಿ, ಆ. 7–
ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಸಂಪುಟದ ವಿಸ್ತರಣೆಗೆ ಅನುಮತಿ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.

ADVERTISEMENT

ರಾತ್ರೋರಾತ್ರಿ ಮಧ್ಯಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಹುಮತ ಕುಸಿದು ತತ್ಫಲವಾಗಿ ಉಂಟಾದ ಅನಾಹುತದಿಂದ ದಿಗ್ಭ್ರಾಂತಿಗೊಂಡಿರುವ ಹೈಕಮಾಂಡ್‌ನ ಈ ಕ್ರಮಕ್ಕೆ ಈಗ ತಮ್ಮ ಪಕ್ಷ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿಯೂ ಇಂತಹ ಅನಾಹುತವಾಗದಿರಲಿ ಎಂಬ ಮುನ್ನೆಚ್ಚರಿಕೆಯೇ ಕಾರಣ.

ಗಜೇಂದ್ರಗಡ್ಕರ್ ಆಯೋಗದ ಶಿಫಾರಸುಗಳ ಬಗ್ಗೆ ಶೀಘ್ರದಲ್ಲೇ ನಿರ್ಧಾರ

ನವದೆಹಲಿ, ಆ. 7– ಗಜೇಂದ್ರಗಡ್ಕರ್ ಆಯೋಗದ ಶಿಫಾರಸುಗಳ ಬಗ್ಗೆ ಸರ್ಕಾರವು ಶೀಘ್ರದಲ್ಲೇ ತನ್ನ ನಿರ್ಧಾರವನ್ನು ಪ್ರಕಟಿಸುವುದೆಂದು ಕೇಂದ್ರ ರೈಲ್ವೆ ಸಚಿವ ಶ್ರೀ ಸಿ.ಎಂ. ಪೂಣಚ್ಚ ಅವರು ಇಂದು ಇಲ್ಲಿ ಸೂಚನೆಯಿತ್ತರು.

ಭಾರತೀಯ ರೈಲ್ವೆ ಸಮ್ಮೇಳನ ಸಂಸ್ಥೆಯ ನೌಕರರ ಸಂಘದ ವಾರ್ಷಿಕ ಸಭೆಯನ್ನು ಉದ್ಘಾಟಿಸುತ್ತಾ ಸಚಿವರು, ಸಂಬಂಧಪಟ್ಟ ಪಕ್ಷಗಳ ಜೊತೆ ಚರ್ಚೆ ನಡೆಯುತ್ತಿದೆಯೆಂದು ಹೇಳಿದರು.

ಕರ್ನಾಟಕ ನಿರ್ಯಾತ ಸಂಸ್ಥೆ ಜನ್ಮ: ಪ್ರಥಮ ವರ್ಷ ಐದು ಕೋಟಿ ರೂ. ರಫ್ತು ಯೋಜನೆ
ಬೆಂಗಳೂರು, ಆ. 7–
ಈಗ ಕಲ್ಕತ್ತೆ, ಮದ್ರಾಸು, ಮುಂಬೈಗಳ ಬಾಗಿಲು ದಾಟಿ, ವಿದೇಶಗಳನ್ನು ಸೇರುವ ಮೈಸೂರಿನ ಉತ್ಪನ್ನವನ್ನು ನೇರವಾಗಿ ಮೈಸೂರಿನಿಂದಲೇ ಕೊಂಡು ರಫ್ತು ಮಾಡುವ ‘ಕರ್ನಾಟಕ ನಿರ್ಯಾತ ಸಂಸ್ಥೆ’ ಇಂದು ನಗರದಲ್ಲಿ ಜನ್ಮ ತಾಳಿತು.

ಆಪ್ಪರ್ ಪ್ಯಾಲೆಸ್ ಆರ್ಚಡ್‌ನಲ್ಲಿ ‘ನಿರ್‍ಯಾತ ಭವನ’ವನ್ನು ಉದ್ಘಾಟಿಸಿ, ತತ್ಸಂಬಂಧವಾಗಿ ‘ವುಡ್‌ಲ್ಯಾಂಡ್ಸ್’ನಲ್ಲಿ ಜರುಗಿದ ಸಮಾರಂಭದಲ್ಲಿ ಭಾಗವಹಿಸಿದ ಕೇಂದ್ರ ವಾಣಿಜ್ಯ ಸಚಿವ ಶ್ರೀ ದಿನೇಶ್ ಸಿಂಗ್ ಅವರು ‘ಮೈಸೂರಿನ ಉತ್ಪನ್ನಗಳನ್ನು ಪಡೆಯಬಯಸುವ ಹೊರ ರಾಷ್ಟ್ರಗಳಿಗೆ ಕರ್ನಾಟಕ ರಫ್ತು ಸಂಸ್ಥೆ ಸಮರ್ಥ ಸೇವೆ ಸಲ್ಲಿಸುವಂತಾಗಲಿ’ ಎಂದು ಹಾರೈಸಿದರು.

ಹತ್ತು ವರ್ಷದೊಳಗೆ ವಾರ್ಸಿಟಿ ಘಟ್ಟದಲ್ಲಿ ಬೋಧನಾ ಮಾಧ್ಯಮವಾಗಿ ಪ್ರಾದೇಶಿಕ ಭಾಷೆ: ಕೇಂದ್ರದ ನಿರ್ಧಾರ
ನವದೆಹಲಿ, ಆ. 7–
ವಿಶ್ವವಿದ್ಯಾನಿಲಯ ಘಟ್ಟದಲ್ಲಿ ಬೋಧನಾ ಮಾಧ್ಯಮವನ್ನು ಹತ್ತು ವರ್ಷದೊಳಗೆ ಇಂಗ್ಲಿಷಿನಿಂದ ಪ್ರಾದೇಶಿಕ ಭಾಷೆಗಳಿಗೆ ಬದಲಾಯಿಸಬೇಕೆಂದು ಕೇಂದ್ರ ಸಂಪುಟವು ಇಂದು ನಿರ್ಧರಿಸಿತು.

ಪ್ರಿ– ಯೂನಿವರ್ಸಿಟಿ ಘಟ್ಟದಲ್ಲಿ ಈ ಮಿತಿಯನ್ನು 5 ವರ್ಷಗಳೆಂದು ಗೊತ್ತು ಮಾಡಲಾಗಿದೆ.

ಈ ವಿಷಯದಲ್ಲಿ ಶಿಕ್ಷಣ ಸಚಿವ ಡಾ. ತ್ರಿಗುಣ ಸೇನ್ ಅವರು ಇಷ್ಟರಲ್ಲೇ ಪಾರ್ಲಿಮೆಂಟ್ ಮುಂದೆ ಮಂಡಿಸುವ ವಿಶೇಷ ನಿರ್ಣಯವನ್ನೂ ಸಹ ಸಂಪುಟ ಅನುಮೋದಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.