ADVERTISEMENT

ಶನಿವಾರ, 13–4–1968

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST

ಮುಖ್ಯಮಂತ್ರಿ ‘ಸ್ಥಾನ ಬಿಟ್ಟು ಹೋಗುವ ವ್ಯಕ್ತಿ’ ಎಸ್ಸೆನ್

ಬೆಂಗಳೂರು, ಏ. 12– ಬಜೆಟ್ ಅಧಿವೇಶನ ಮುಗಿದ ನಂತರ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರ ನಿರ್ಧಾರದಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ಅವರ ಸಮೀಪ ವಲಯಗಳಿಂದ ತಿಳಿದುಬಂದಿದೆ. ಈ ಅಂಶವನ್ನು ಶ್ರೀ ಎಸ್. ನಿಜಲಿಂಗಪ್ಪನವರು ಸಂಜೆ ಸಮಾರಂಭವೊಂದರಲ್ಲಿಯೂ ಪರೋಕ್ಷವಾಗಿ ಸ್ಪಷ್ಟಪಡಿಸಿದರು.

ಆಸ್ತಿಪಾಸ್ತಿ ವಿವರ ಕೇಳಿ 75 ಮಂದಿಗೆ ಸುತ್ತೋಲೆ

ADVERTISEMENT

ಬೆಂಗಳೂರು, ಏ. 12– 1947 ರಿಂದೀಚೆಗೆ ಅಧಿಕಾರದಲ್ಲಿದ್ದವರಿಗೆ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಸುತ್ತೋಲೆಯೊಂದನ್ನು ಕಳುಹಿಸಿ, ಈ ಅವಧಿಯಲ್ಲಿ ಅವರಿಗಿರುವ ಆಸ್ತಿ ಹಾಗೂ ಸಾಲಗಳ ವಿವರಗಳನ್ನು ಏಪ್ರಿಲ್ ತಿಂಗಳ ಅಂತ್ಯದೊಳಗೆ ಕಳುಹಿಸಬೇಕೆಂದು ಪ್ರಾರ್ಥಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳು, ಸದ್ಯದ ಹಾಗೂ ಮಾಜಿ ಮಂತ್ರಿಗಳು ಹಾಗೂ ಉಪಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರುಗಳು, ಪ್ರದೇಶ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರುಗಳು ಹೀಗೆ ಒಟ್ಟು ಸುಮಾರು 75 ಮಂದಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ.

ಡಾ. ಕಾರಂತರಿಗೆ ಕಠಮಂಡುವಿನಲ್ಲಿ ಸನ್ಮಾನ

ಕಠಮಂಡು, ಏ. 12– ಸಾಹಿತ್ಯಕ್ಕಾಗಿ ‘ಪದ್ಮಭೂಷಣ’ ಪ್ರಶಸ್ತಿ ಪಡೆದಿರುವ ಸುಪ್ರಸಿದ್ಧ ಕನ್ನಡ ಸಾಹಿತ್ಯ, ಶಿಕ್ಷಣವೆತ್ತ ಹಾಗೂ ಕಲಾವಿದ ಡಾ. ಶಿವರಾಮ ಕಾರಂತ ಅವರಿಗೆ ನಿನ್ನೆ ರಾತ್ರಿ ಇಲ್ಲಿನ ನೇಪಾಳ– ಭಾರತ ಮೈತ್ರಿ ಸಂಘವು ಅದ್ಭುತ ಸ್ವಾಗತ ನೀಡಿ ಸನ್ಮಾನ ಮಾಡಿತು.

ಕರಗ ಬಂತು

ಬೆಂಗಳೂರು, ಏ. 12– ನಗರದಲ್ಲಿ ಶ್ರೀ ಧರ್ಮರಾಯಸ್ವಾಮಿ ಕರಗ ಮಹೋತ್ಸವವು ಏಪ್ರಿಲ್ 13 ರಂದು ಶನಿವಾರ ರಾತ್ರಿ ನಡೆಯುವುದು.

ವಿಮೆಯಿಂದೇನು?

ಬೆಂಗಳೂರು, ಏ. 12– ವಿಮೆಯಿಂದೇನು ಪ್ರಯೋಜನ ಎಂದು ಆಲೋಚಿಸುವವರಿಗೆ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಇಂದು ತಮ್ಮ ಅನುಭವದ ಉತ್ತರ ನೀಡಿದರು.

‘ನಾನು ಲಾಯರ್ ಆಗಿದ್ದಾಗ, ಕಚೇರಿಯಲ್ಲಿ ದಿನವಿಡೀ ಏಜಂಟರುಗಳ ಉಪಟಳ. 50,000 ರೂಪಾಯಿಗಳಿಗೆ ಜೀವವಿಮೆ ಇಳಿಸಿದೆ. ನಂತರ ಕೆಲಸ ಬಿಟ್ಟೆ. ಕಂತು ಕಟ್ಟುವುದೂ ನಿಂತು ಹೋಯಿತು. ಆದರೆ ಕೊನೆಗೊಂದು ದಿನ ನಾನು ಕಟ್ಟಿದ 20,000 ರೂಪಾಯಿಗಳು ಬಂದುವು. ಕೆಲವು ವರ್ಷಗಳವರೆಗೆ ಅದರಿಂದ ನನಗೆ ಪ್ರಯೋಜನವೂ ಆಯಿತು’ ಎಂದರು.

ಕಿಂಗ್ ಕೊಲೆ ಒಂದು ಭಾರಿ ಪಿತೂರಿ

ನ್ಯೂಯಾರ್ಕ್, ಏ. 12– ನೀಗ್ರೋ ನಾಯಕ ಡಾ. ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಕೊಲೆ ಮಾಡಿದಾತ ಒಬ್ಬ ವ್ಯಕ್ತಿಯೆ? ಇದು ಕೇವಲ ಒಬ್ಬನ ಕೆಲಸವೆಂದು ಅಧಿಕೃತ ಹೇಳಿಕೆ. ಆದರೆ ಆ ಬಗ್ಗೆ ಇಲ್ಲಿ ಅನುಮಾನದ ಬುಗ್ಗೆ ಎದ್ದಿದೆ. ಕಿಂಗ್ ಕೊಲೆಯ ಹಿಂದೆ ಒಂದು ದೊಡ್ಡ ಪಿತೂರಿಯ ಜಾಲವೇ ಇದೆ ಎಂಬುದು ಬೆಳೆಯುತ್ತಿರುವ ಭಾವನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.