ADVERTISEMENT

ಶನಿವಾರ, 29–4–1967

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST

ತ್ರಿಭಾಷಾ ಸೂತ್ರ: ಮುರಾರಜಿ, ಸೇನ್ ಭಿನ್ನಮತ
ನವದೆಹಲಿ, ಏ. 28–
ತ್ರಿಭಾಷಾ ಸೂತ್ರದ ಬಗ್ಗೆ ಇಂದು ರಾಜ್ಯ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಉಪಪ್ರಧಾನಿ ಮುರಾರಜಿ ದೇಸಾಯಿಯವರು ಮತ್ತು ಕೇಂದ್ರ ಶಿಕ್ಷಣ ಸಚಿವ ತ್ರಿಗುಣ ಸೇನ್ ಅವರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಮೂರೂ ದಿನಗಳ ಸಮ್ಮೇಳನವನ್ನು ಇಲ್ಲಿ ಉದ್ಘಾಟಿಸಿದ ಪ್ರಧಾನಿ ಇಂದಿರಾ ಗಾಂಧಿಯವರು, ‘ವಿಶಾಲವಾದ ರಾಷ್ಟ್ರೀಯ ಹಿತಾಸಕ್ತಿಗಳ ದೃಷ್ಟಿಯಿಂದ’ ಶಿಕ್ಷಣ ಮಾಧ್ಯಮದ ಪ್ರಶ್ನೆಯನ್ನು ಪರಿಶೀಲಿಸಬೇಕೆಂದು ಒತ್ತಿ ಹೇಳಿದರು.

ಸರಕು ಸಾಗಣೆ, ದ್ವಿಮುಖ ಮಾರ್ಗಗಳಿಗೆ ಆದ್ಯತೆ: ರೈಲ್ವೆ ಸಚಿವ ಶ್ರೀ ಪೂಣಚ್ಚ
ಬೆಂಗಳೂರು, ಏ. 28
– ಸರಕು ಸಾಗಾಟದ ಅಭಿವೃದ್ಧಿ, ಉಗಿ ಎಂಜಿನ್ನುಗಳ  ಬದಲು ಹೆಚ್ಚಿನ ಸಂಖ್ಯೆಯಲ್ಲಿ ಡೀಸೆಲ್ ಎಂಜಿನ್ನುಗಳನ್ನು ಬಳಕೆಗೆ ತರುವುದು ಮತ್ತು ದ್ವಿಮುಖ ಸಂಚಾರಕ್ಕೆ ಅನುಕೂಲವಾಗುವಂತೆ ಹಳಿಗಳನ್ನು ಹಾಕುವುದು– ಮುಂದಿನ ವರ್ಷಗಳಲ್ಲಿ ರೈಲ್ವೆ ಇಲಾಖೆಯು ಪ್ರಾಧಾನ್ಯ ನೀಡುವ ಅಂಶಗಳಿವು ಎಂದು ರೈಲ್ವೆ ಸಚಿವ ಸಿ.ಎಂ. ಪೂಣಚ್ಚ ತಿಳಿಸಿದರು.

ಕನ್ನಡವಾದಿಗಳಿಗೆ ಚಿತ್ರಹಿಂಸೆ
ಸೊಲ್ಲಾಪುರ, ಏ. 28–
ಅಕ್ಕಲಕೋಟೆಯಲ್ಲಿ ಕಾಂಗ್ರೆಸ್ ಸದಸ್ಯರೂ ಪತ್ರಿಕೋದ್ಯೋಗಿಯೂ ಆದ ಶ್ರೀ ನಾಗಯ್ಯ ಹಿರೇಮಠ ಅವರಿಗೆ ಕೈಕೋಳ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ! ಈ ಅನಾಗರಿಕ ವರ್ತನೆಗೆ ಜಿಲ್ಲಾ ಪೊಲೀಸ್‌ ಸೂಪರಿಂಟೆಂಡೆಂಟ್ ದ್ರಾವಿಡ್ ಹಾಗೂ ಇತರ ಪೋಲೀಸ್ ಅಧಿಕಾರಿಗಳ ನೇತೃತ್ವ. ಇದಾದ ನಂತರ ಪೋಲಿಸ್ ಲಾಕಪ್ಪಿನಲ್ಲಿ ನಾಲ್ಕು ದಿನಗಳ ಬಂದಿ ವಾಸ.

ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಗ್ರಾಮಗಳಿಗೆ ಹೋಗಿ ಅಲ್ಲಿಯ ನಾಗರಿಕರುಗಳಿಂದ ಬಲವಂತವಾಗಿ ತಮ್ಮ ಗ್ರಾಮಗಳು ಮಹಾರಾಷ್ಟ್ರ ರಾಜ್ಯಕ್ಕೆ ಸೇರಬೇಕೆಂಬ ಅರ್ಜಿಗಳಿಗೆ ಸಹಿ ಪಡೆದ ಸುದ್ದಿಯನ್ನು ಕನ್ನಡ ಪತ್ರಿಕೆಗಳಿಗೆ ವರದಿ ಮಾಡಿದ್ದರೆಂಬುದೇ ನಾಗಯ್ಯ ಹಿರೇಮಠರ ವಿರುದ್ಧ ಆಪಾದನೆ.

1967ರೊಳಗೆ ನಗರ ರೈಲು ನಿಲ್ದಾಣ ಸಿದ್ಧ: ಶ್ರೀ ಪೂಣಚ್ಚ ಭೇಟಿ
ಬೆಂಗಳೂರು, ಏ. 28–
ರೈಲ್ವೆ ಖಾತೆ ಸಚಿವ ಸಿ.ಎಂ. ಪೂಣಚ್ಚ ಅವರು ಇಂದು ಬೆಳಿಗ್ಗೆ ಹೊಸ ರೂಪ ತಾಳುತ್ತಿರುವ ನಗರ ರೈಲು ನಿಲ್ದಾಣದ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದರು.

1967ರ ಅಂತ್ಯದೊಳಗೆ ಈ ನಿರ್ಮಾಣ ಕಾರ್ಯ ಮುಗಿಯಲಿದೆ. ಈಗಾಗಲೇ ಶೇಕಡಾ 80 ರಷ್ಟು ಕೆಲಸ ಮುಗಿದಿದ್ದು ಉಳಿದ ಕೆಲಸವನ್ನು ರೈಲ್ವೆ ಇಲಾಖೆಯ ಮೂಲಕ ಮಾಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT