ADVERTISEMENT

ಶನಿವಾರ, 4–2–1967

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 19:30 IST
Last Updated 3 ಫೆಬ್ರುವರಿ 2017, 19:30 IST

ಮುರಾರ್ಜಿ ಸಭೆಯಲ್ಲಿ ಕೂಗಾಟ, ಗದ್ದಲ
ಬೆಂಗಳೂರು, ಫೆ. 3–
ಕೂಗಾಟ, ಗದ್ದಲ, ಸಿಳ್ಳು ಹಾಗೂ ಪದೇ ಪದೇ ಪ್ರಶ್ನೆಗಳು ಇಂದು ಗಾಂಧಿ ಬಜಾರ್‌ನಲ್ಲಿ ಕಾಂಗ್ರೆಸ್ ಪಕ್ಷದ ಪರ ಮುರಾರಜಿ ದೇಸಾಯ್ ಅವರು ಮಾಡಿದ ಪ್ರಚಾರ ಭಾಷಣದ ಕಾಲದಲ್ಲಿ ಕಂಡುಬಂದ ಪ್ರಮುಖ ದೃಶ್ಯ.

ರಸ್ತೆಗಳ ಫುಟ್‌ಪಾತ್‌ನಲ್ಲಿ ಅಂಗಡಿಗಳ ಮುಂದೆ ಹಾಗೂ ಮಹಡಿಗಳ ಮೇಲೆ ಸೇರಿದ ಅಪಾರ ಜನಸ್ತೋಮ ಸಭೆಗೆ ಅರ್ಧ ಗಂಟೆ ಮುಂಚೆಯೇ ಶ್ರೀ ಮುರಾರಜಿ ಯವರ ಭಾಷಣ ಕೇಳಲು ಸೇರಿದ್ದರೂ ತಡವಾಗಿ ಪ್ರಾರಂಭವಾದ ಸಭೆಯಲ್ಲಿ ನಾನಾ ಮೂಲೆಗಳಿಂದ ಕೂಗಾಟಗಳು ಕೇಳಿಬಂದವು. ಪೋಲೀಸರು ಒಬ್ಬಿಬ್ಬರನ್ನು ಎಳೆದೊಯ್ಯುತ್ತಿದ್ದುದು ಗೋಚರಿಸಿತು.

ಈ ವರ್ಷವೂ ಆಹಾರ ಸ್ಥಿತಿ ನಿರಾಶಾದಾಯಕ
ನವದೆಹಲಿ, ಫೆ. 3–
1966–67 ರಲ್ಲಿ ಒಟ್ಟು ಆಹಾರ ಉತ್ಪಾದನೆ ಕೇವಲ ಸುಮಾರು ಏಳೂವರೆ ಕೋಟಿ ಟನ್ನಿನಷ್ಟು ಎಂದು ಈಗ ಅಂದಾಜು ಮಾಡಿರುವುದರಿಂದ 1967 ರಲ್ಲಿಯೂ ಆಹಾರ ಪರಿಸ್ಥಿತಿ ನಿರಾಶಾದಾ ಯಕ ವಾಗಿರುವುದಾಗಿ ಆಹಾರ ಸಚಿವ ಶಾಖೆಯ ವಲಯಗಳು ತಿಳಿಸಿದುವು.

ಸುತ್ತೂರಿನಲ್ಲಿ  ರಜತಾಂದೋಲಿಕಾ ಮಹೋತ್ಸವ
ಮೈಸೂರು, ಫೆ. 3–
ಶಿವೈಕ್ಯರಾದ ಸುತ್ತೂರಿನ ಹಿರಿಯ ಜಗದ್ಗರು ಶ್ರೀ ಶಿವ ಯೋಗಿ ಶಿವರಾತ್ರೀಶ್ವರ ಸ್ವಾಮೀಜಿ ಇವರ ಶಿವಗಣಾರಾಧನೆಯು ಇಂದು ಸುತ್ತೂರಿನಲ್ಲಿ ಅತ್ಯಂತ ಶ್ರದ್ಧಾಪೂರ್ವಕವಾಗಿ ನೆರವೇರಿತು.

ಮೈಸೂರಿನಿಂದ 25 ಮೈಲಿ ದೂರದ, ನಂಜನಗೂಡು ತಾಲ್ಲೂಕಿನ ಕಪಿಲಾನದಿ ದಂಡೆಯಲ್ಲಿರುವ ರಮ್ಯಸ್ಥಾನವಾದ ಸುತ್ತೂರು ಇಂದು ಜಾತ್ರೆಯ ಉತ್ಸಾಹ ದಿಂದ ತುಂಬಿತ್ತು. ಕ್ಷೇತ್ರದ ಸುತ್ತಮುತ್ತಲ ಗ್ರಾಮಗಳಿಂದಲೂ ಅತಿದೂರದ ಇತರ ಅನೇಕ ಊರುಗಳಿಂದಲೂ ಸಹಸ್ರಾರು ಭಕ್ತರು ಇಂದಿನ ಸಮಾರಂಭದಲ್ಲಿ ಪಾಲ್ಗೊಂಡು ಪೂಜ್ಯ ಸ್ವಾಮೀಜಿಗಳ ಪುಣ್ಯಸ್ಮರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.