ADVERTISEMENT

ಶುಕ್ರವಾರ, 20–1–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST

ಮಹಾರಾಷ್ಟ್ರವಾದಿಗಳಿಗೆ ಮುಖಭಂಗ; ಗೋವೆಯ ಅಸ್ತಿತ್ವ ಸ್ಥಿರ
ಪಣಜಿ, ಜ. 19–
ವಿಲೀನ ವಿರೋಧಿಗಳಿಗೆಲ್ಲಾ ನಗೆಮುಖ. ವಿಲೀನ ವಾದಿಗಳಿಗೆಲ್ಲಾ ಪೆಚ್ಚು ಮೋರೆ, ಮಹಾರಾಷ್ಟ್ರೀಯರಿಗೆ ಮುಖಭಂಗ. ಗೋವೆಯ ಈಗಿದ್ದ ಸ್ಥಾನಮಾನವೆ ಮುಂದುವರೆಯುವ ಪರವಾಗಿ ಬಹುಮತದಿಂದ ವಿಜಯ ಗಳಿಸಿದವರು ವಿಜಯೋತ್ಸವ ಆಚರಿಸಲೂ ಆಗಲಿಲ್ಲ. ನಿಷೇಧಾಜ್ಞೆ ಅಡ್ಡ ಬಂದಿತು.

ಅಭಿಪ್ರಾಯ ಸಂಗ್ರಹದ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಪಣಜಿಯಲ್ಲಿ 144ನೇ ಸೆಕ್ಷನ್‌ ಜಾರಿ ಮಾಡಲಾಗಿತ್ತು. ವಿಜಯೀ ಪಕ್ಷದವರು ಈ ನಿಷೇಧಾಜ್ಞೆ ಲೆಕ್ಕಿಸದೆ ಮೆರವಣಿಗೆಯಲ್ಲಿ ಬಂದಾಗ, ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಲಾಯ್ತು.

***
ಚವಾಣರ ವೈಯಕ್ತಿಕ ಘನತೆಗೆ ಭಾರಿ ಪೆಟ್ಟು
ನವದೆಹಲಿ,  ಜ. 19– 
ಗೋವೆಯಲ್ಲಿನ ಪರಾಭವದಿಂದ ಮಹಾರಾಷ್ಟ್ರ ಕಾಂಗ್ರೆಸ್‌ ಚೇತರಿಸಿಕೊಳ್ಳಬಹುದಾದರೂ ಶ್ರೀ ವೈ.ಬಿ. ಚವಾಣ್‌ರವರ ವೈಯಕ್ತಿಕ ಘನತೆಗೆ ಭಾರಿ ಪೆಟ್ಟು ಬಿತ್ತೆಂಬುದು ನಿಸ್ಸಂಶಯ. ಗೋವೆಯನ್ನು ಮಹಾರಾಷ್ಟ್ರದಲ್ಲಿ ವಿಲೀನ ಮಾಡಬೇಕೆಂಬುದರ ವಿರುದ್ಧ ಜನತೆಯು ತೀರ್ಪಿತ್ತಿರುವುದನ್ನು ಇಲ್ಲಿಯ ರಾಜಕೀಯ ವಲಯದಲ್ಲಿ ಮಹಾರಾಷ್ಟ್ರದ ಅನ್ಯಾಕ್ರಮಣಶೀಲ ಸ್ವದೇಶ ಪ್ರೇಮಕ್ಕೆ ಭಾರಿ ಪೆಟ್ಟು ಎಂದು ವ್ಯಾಖ್ಯಾನ ಮಾಡಲಾಗಿದೆ.

***
ಟಿ. ಚೌಡಯ್ಯ ಅವರ ನಿಧನ
ಮೈಸೂರು, ಜ. 19–
ಖ್ಯಾತ ಪಿಟೀಲು ವಾದನಕಾರರಾದ ಸಂಗೀತರತ್ನ, ಆಸ್ಥಾನ ವಿದ್ವಾನ್‌ ಶ್ರೀ ಟಿ. ಚೌಡಯ್ಯನವರು ಹೃದಯಾಘಾತಕ್ಕೊಳಗಾಗಿ ಇಂದು ರಾತ್ರಿ 12 ಗಂಟೆಯಲ್ಲಿ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ನಿಧನರಾದರು.

ಶ್ರೀಯುತರನ್ನು ಚಿಕಿತ್ಸೆಗಾಗಿ ಇಂದು ಬೆಳಿಗ್ಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಶ್ರೀ ಚೌಡಯ್ಯನವರು ದಾಕ್ಷಿಣಾತ್ಯ ಸಂಗೀತ ಪ್ರಿಯರಿಗೆ ಚಿರಪರಿಚಿತರಾಗಿದ್ದರು. ಬೆಂಗಳೂರಿನಲ್ಲಿ ಉತ್ತಮ ರೀತಿಯ ಸಂಗೀತ ಶಿಕ್ಷಣ ನೀಡುವುದಕ್ಕಾಗಿ ಅವರು ಅಯ್ಯನಾರ್‌ ಸಂಗೀತ ಶಾಲೆ ಸ್ಥಾಪಿಸಿದ್ದರು. ಮೈಸೂರಿನ ಬಿಡಾರಂ ಕೃಷ್ಣಪ್ಪನವರ ಬಳಿ ಪಿಟೀಲು ಅಭ್ಯಾಸ ಮಾಡಿ ಅದರಲ್ಲಿ ಪ್ರಾವೀಣ್ಯತೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.