ADVERTISEMENT

ಸೋಮವಾರ, 17–4–1967

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 19:30 IST
Last Updated 16 ಏಪ್ರಿಲ್ 2017, 19:30 IST

ವಿಯಟ್ನಾಂ ಸಮರ ಅಂತ್ಯಕ್ಕೆ ಒತ್ತಾಯ
ನ್ಯೂಯಾರ್ಕ್‌, ಏ. 16– 
ವಿಶ್ವರಾಷ್ಟ್ರ ಸಂಸ್ಥೆಯ ಇತಿಹಾಸದಲ್ಲೇ ಅತ್ಯಂತ ಭಾರಿಯಾದ ಸಮರ ವಿರೋಧ ಪ್ರತಿಭಟನಾ ಪ್ರದರ್ಶನ.

ಸುಮಾರು ಒಂದೂವರೆ ಲಕ್ಷ ಜನ ಅಮೆರಿಕನರು ನಿನ್ನೆ ದಿನ ವಿಶ್ವರಾಷ್ಟ್ರ ಸಂಸ್ಥೆಯೆದುರು ಉತ್ತರ ವಿಯಟ್ನಾಂ ಮೇಲೆ ಅಮೆರಿಕದ ಬಾಂಬ್‌ ದಾಳಿಯ ವಿರುದ್ಧ ಭಾರಿ ಪ್ರದರ್ಶನ ನಡೆಸಿದರು.

ಮೊದಲು ಸೇರಿದ್ದು ಸುಮಾರು 50 ಸಾವಿರ ಜನ. ಕ್ರಮೇಣ ಈ ಗುಂಪು ಸುಮಾರು ಒಂದೂವರೆ ಲಕ್ಷದಷ್ಟು ಗಾತ್ರಕ್ಕೆ ಬೆಳೆಯಿತು.

ADVERTISEMENT

ವಿಯಟ್ನಾಂ ಯುದ್ಧದ ವಿರುದ್ಧ ಪೌರ ಸ್ವಾತಂತ್ರ್ಯ ಚಳವಳಿಯ ನಾಯಕ ಹಾಗೂ ನೊಬೆಲ್‌ ಪಾರಿತೋಷಕ ವಿಜಯಿ ಮಾರ್ಟಿನ್‌ ಲೂಥರ್‌ ಕಿಂಗ್‌ ಮತ್ತಿತರ ನಾಯಕರ ಭಾಷಣಗಳನ್ನು ಕೇಳಲು ಪ್ರದರ್ಶಕರಿಗೆ ಅತ್ಯುತ್ಸಾಹ.

ಸೆಂಟ್ರಲ್‌ ಪಾರ್ಕ್‌ನಿಂದ ಹೊರಟ ಪ್ರದರ್ಶಕರ ಭಾರಿ ಮೆರವಣಿಗೆ ಮೂರು ಮೈಲಿಗಳಷ್ಟು ದೂರ ದಾರಿ ಸವೆಸಿದ ಮೇಲೆ ಮಾರ್ಟಿನ್‌ ಲೂಥರ್‌ ಕಿಂಗ್‌ ಮತ್ತು ಮತ್ತಿತರ ನಾಯಕರು ವಿಶ್ವರಾಷ್ಟ್ರ ಸಂಸ್ಥೆ ಭವನದೊಳಕ್ಕೆ ಹೋಗಿ, ಅಮೆರಿಕದ ಅಂಡರ್‌ ಸೆಕ್ರೆಟರಿ ರಾಲ್ಫ್‌ಬುಂಚ್‌ ಅವರನ್ನು ಭೇಟಿಮಾಡಿ ಅವರಿಗೆ ಮನವಿಯೊಂದನ್ನು ಸಲ್ಲಿಸಿದರು.

**

ವಿಯಟ್ನಾಂ ಸಮಸ್ಯೆಗೆ ತಮ್ಮ ಸಲಹೆಗಳ ಬಗ್ಗೆ ಥಾಂಟ್‌ ಆಶಾವಾದ
ನವದೆಹಲಿ, ಏ. 16–
ವಿಯಟ್ನಾಂ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಪಟ್ಟ ಪಕ್ಷಗಳ ಮುಂದೆ ತಾವು ಮಂಡಿಸಿರುವ ಶಾಂತಿ ಸಲಹೆಗಳನ್ನು ಮಾರ್‍ಪಡಿಸುವ ಯೋಚನೆಯನ್ನೇನೂ ತಾವು ಹೊಂದಿಲ್ಲವೆಂದು ವಿಶ್ವರಾಷ್ಟ್ರ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟ್‌ರು ಇಂದು ಇಲ್ಲಿ ಹೇಳಿದರು.

**

‘ಭಿನ್ನಮತೀಯರ ಪತ್ರದ’ ಬಗ್ಗೆ ತಮಗೇನೂ ತಿಳಿಯದೆಂದು ಮುಖ್ಯಮಂತ್ರಿ
ಬೆಂಗಳೂರು, ಏ. 16–
ಭಿನ್ನಮತೀಯ ಕಾಂಗ್ರೆಸ್ಸಿಗರೆನಿಸಿಕೊಂಡ ಯಾರೇ ಆಗಲಿ ಕಾಂಗ್ರೆಸ್‌ ಹೈಕಮಾಂಡಿಗೆ ಪತ್ರ ಬರೆದ ವಿಷಯ ತಮಗೆ ತಿಳಿಯದೆಂದು ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪನವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.