ADVERTISEMENT

ಸೋಮವಾರ, 18–9–1967

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST

ರಾಜ್ಯ ಸಂಪುಟ ವಿಸ್ತರಣೆ ಯೋಚನೆ ಇಲ್ಲ: ಮುಖ್ಯಮಂತ್ರಿ ಸ್ಪಷ್ಟನೆ
ಬೆಂಗಳೂರು, ಸೆ. 17–
ಅಕ್ಟೋಬರ್- ಅಂತ್ಯದವರೆಗೆ ತಾವು ಮಂತ್ರಿಮಂಡಲದ ವಿಸ್ತರಣೆ ವಿಷಯ ಕುರಿತು ಯೋಚಿಸುವುದೂ ಇಲ್ಲವೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ರಾತ್ರಿ ವರದಿಗಾರರಿಗೆ ತಿಳಿಸಿದರು.

ಶಿವಸೇನೆಯ ವಿಸರ್ಜನೆಗೆ ಷರತ್ತು
ಪುಣೆ, ಸೆ. 17–
ಎಡ ಮತ್ತು ಬಲ ಕಮ್ಯುನಿಸ್ಟ್ ಪಕ್ಷಗಳು ಮತ್ತು ಡಿ.ಎಂ.ಕೆ. ರೀತಿಯ ಪ್ರಾದೇಶಿಕ ಸಂಕುಚಿತ ರಾಜಕೀಯ ಪಕ್ಷಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿದಲ್ಲಿ ತಮ್ಮ ಪಕ್ಷವನ್ನು ವಿಸರ್ಜಿಸಲು ತಾವು ಸಿದ್ಧರಿರುವುದಾಗಿ ಶಿವಸೇನೆ ಸಂಸ್ಥಾಪಕ ಶ್ರೀ ಬಾಳಠಕ್ರೆ ಅವರು ಸವಾಲು ಹಾಕಿದ್ದಾರೆ.

‘ಶಿವಸೇನೆಯ ಪಾತ್ರ ಮತ್ತು ಉದ್ದೇಶ’ ಕುರಿತು ನಿನ್ನೆ ಇಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯೊಂದರಲ್ಲಿ ಭಾಷಣ ಮಾಡಿದ ಶ್ರೀಯುತರು ತಮ್ಮ ಸಂಸ್ಥೆ ವಿರುದ್ಧ ಮಾಡಿರುವ ಆಪಾದನೆಗಳು ನಿಜವಲ್ಲ ಎಂದು ತಿಳಿಸಿದರು.

ADVERTISEMENT

ಅನ್ಯ ರಾಜ್ಯಗಳ ಜನರ ರಕ್ಷಣೆಗಾಗಿ ಪ್ರಧಾನಿ ಕರೆ
ನವದೆಹಲಿ, ಸೆ. 17–
ಇತರೆ ರಾಜ್ಯಗಳಿಗೆ ಸೇರಿದ ಜನರ ಪ್ರಾಣ ಮತ್ತು ಆಸ್ತಿಪಾಸ್ತಿ ರಕ್ಷಿಸಲು ತೀವ್ರ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ರಾಜ್ಯ ಸರ್ಕಾರಗಳನ್ನು ಒತ್ತಾಯಪಡಿಸಿದರು. ಕುಟುಂಬ ಯೋಜನೆ ವಿಚಾರಗೋಷ್ಠಿಯಲ್ಲಿ ಭಾಗವಹಿಸಿರುವ ಭಾಷಾ ಪತ್ರಿಕಾ ಸಂಪಾದಕರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ಇತರೆ ರಾಜ್ಯಗಳಿಗೆ ಸೇರಿದ ಜನರನ್ನು ಹೊರಹಾಕುವುದಕ್ಕಾಗಿ ನಡೆಸುವ ದಬ್ಬಾಳಿಕೆಯನ್ನು ಖಂಡಿಸಿದರು.

ನಿರುದ್ಯೋಗಿ ಪದವೀಧರರಿಗೆ ಮರದಡಿಯೇ ಮಂತ್ರಾಲೋಚನೆ
ಬೆಂಗಳೂರು, ಸೆ.17–
ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಕಚೇರಿ ಆವರಣದಲ್ಲಿರುವ ಮರದಡಿ ಭಾನುವಾರ ಭಾರಿ ಗುಂಪೊಂದು ಕೂತಿತ್ತು.

ಇದೇನು ವಿಹಾರ ಕೂಟವಿರಬಹುದೆ? ಕುತೂಹಲ ಕೆರಳಿದ ‘ಪ್ರಜಾವಾಣಿ’ಯ ವರದಿಗಾರ ಗುಂಪಿನ ಬಳಿಸಾರಿದ. ಮರದಡಿ ಕುಳಿತಿದ್ದು ವಿದ್ಯಾವಂತ, ಸುಸಂಸ್ಕೃತ ಯುವಕರ ತಂಡ. ಗುಂಪಿನಲ್ಲೊಬ್ಬ ಎದ್ದು ಹೇಳಿದ– ‘ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ತೀವ್ರ ರೂಪ ತಾಳಿರುವ ನಿರುದ್ಯೋಗ ಸಮಸ್ಯೆಯನ್ನು ಕುರಿತು ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳುವುದೇ ಈ ಸಭೆಯ ಉದ್ದಿಶ್ಯ’ ಮಾತನಾಡಿದ ಯುವಕನ ಹೆಸರು ಶ್ರೀ ಎಚ್.ಎನ್. ಸುರೇಶ್,ಎಲೆಕ್ಟ್ರಿಕಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವೀಧರ. ರಾಜ್ಯದಲ್ಲಿ ಇರುವ ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರ ವಕ್ತಾರ ಆತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.