ADVERTISEMENT

ಸೋಮವಾರ, 30–1–1967

​ಪ್ರಜಾವಾಣಿ ವಾರ್ತೆ
Published 29 ಜನವರಿ 2017, 19:30 IST
Last Updated 29 ಜನವರಿ 2017, 19:30 IST

ಅನ್ನ ಇಲ್ಲದೆ ಯಾರೂ ಸತ್ತಿಲ್ಲ ಎಂದು ಶ್ರೀ ಸುಬ್ರಹ್ಮಣ್ಯಂ
ಉದಕಮಂಡಲ, ಜ. 29–
ಆಹಾರದ ಅಭಾವವಿದ್ದರೂ ರಾಷ್ಟ್ರದಲ್ಲಿ ಯಾರೂ ಉಪವಾಸದಿಂದ ಸತ್ತಿಲ್ಲವೆಂದು ಕೇಂದ್ರ ಕೃಷಿ ಮತ್ತು ಆಹಾರಮಂತ್ರಿ ಶ್ರೀ ಸಿ. ಸುಬ್ರಹ್ಮಣ್ಯಂ ಅವರು ತಿಳಿಸಿದರು.

ಭಾರತದಲ್ಲಿ ಆಹಾರಧಾನ್ಯ ಖೋತಾ ಬೀಳುವುದಕ್ಕೆ ಅನಾವೃಷ್ಟಿಯೇ ಮುಖ್ಯ ಕಾರಣವೆಂದು ಅವರು ಇಂದು ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು.

ಬ್ರಹ್ಮಚಾರಿಯವರು ಉಪವಾಸ ನಿಲ್ಲಿಸುವ ಸುದ್ದಿಯಿಂದ ಪುರಿ ಶ್ರೀಗಳಿಗೆ ಅಸಮಾಧಾನ
ಪುರಿ, ಜ, 29–
ಗೋಹತ್ಯೆ ವಿರುದ್ಧ 71 ದಿನಗಳಿಂದ ಉಪವಾಸ ಮಾಡುತ್ತಿರುವ ಜಗದ್ಗುರು ಶ್ರೀ ಶಂಕರಾಚಾರ್ಯರು ‘ಸಂತ ಪ್ರಭುದತ್ತ ಬ್ರಹ್ಮಚಾರಿಯವರು ನಾಳೆ ಉಪವಾಸವನ್ನು ಮುಕ್ತಾಯಗೊಳಿಸುತ್ತಾರೆಂದು ಕೇಳಿ ನನಗೆ ದುಃಖವಾಗಿದೆ’ ಎಂದು ತಿಳಿಸಿದುದಾಗಿ ಗೋವರ್ಧನ ಪೀಠದಲ್ಲಿರುವ ಶಂಕರಾಚಾರ್‍ಯರ ನಿಕಟವರ್ತಿಗಳು ಇಂದು ತಿಳಿಸಿದರು.

ಶ್ರೀ ಶಂಕರಾಚಾರ್ಯರು ಇಂದು ತಮ್ಮನ್ನು ಭೇಟಿಮಾಡಲು ವೈದ್ಯರಿಗೆ ಅನುಮತಿ ನೀಡಲಿಲ್ಲ. ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ತುಂಬಾ ದುರ್ಬಲರಾಗಿದ್ದಾರೆಂದೂ, ಮೂರು ದಿನಗಳಿಂದ ‘ಚರಣಾಮೃತ್‌’ (ಗಂಗಾಜಲ)ವನ್ನು ತೆಗೆದುಕೊಳ್ಳದಿರುವುದರಿಂದ ಅವರ ಗಂಟಲು ಒಣಗಿದೆಯೆಂದೂ ಅವರ ಶಿಷ್ಯರು ತಿಳಿಸಿದ್ದಾರೆ.

ಮುಂದಿನ ಪ್ರಧಾನಿಯಾಗಿ ಇಂದಿರಾಜಿ ಆಯ್ಕೆಗೆ ಅತುಲ್ಯ ಘೋಷ್‌ ಬೆಂಬಲ
ಮದ್ರಾಸ್‌, ಜ. 29–
ಸಾರ್ವತ್ರಿಕ ಚುನಾವಣೆಗಳ ನಂತರ ಶ್ರೀಮತಿ ಇಂದಿರಾ ಗಾಂಧಿ ಅವರು ಮತ್ತೆ ಪ್ರಧಾನಿಯಾಗುವುದು ಅವರ ಅಪೇಕ್ಷೆ ಹಾಗೂ ಅಂತಿಮವಾಗಿ ಕಾಂಗ್ರೆಸ್‌ ಪಾರ್ಲಿಮೆಂಟರಿ ಪಕ್ಷದ ನಿರ್ಧಾರವನ್ನು ಅವಲಂಬಿಸಿರುವುದೆಂದು ಎ.ಐ.ಸಿ.ಸಿ.ಯ ಖಜಾಂಚಿ ಶ್ರೀ ಅತುಲ್ಯ ಘೋಷ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.