ADVERTISEMENT

ಸೋಮವಾರ, 3–7–1967

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST

ಸುಯೆಜ್‌ ಪ್ರದೇಶದಲ್ಲಿ ಚಕಮಕಿ: ವ್ಯತಿರಿಕ್ತ ಹೇಳಿಕೆ
ಬೈರುತ್‌, ಜುಲೈ 2–
ಸುಯೆಜ್‌ ಕಾಲುವೆ ಕಂತಾರ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಇಸ್ರೇಲ್‌ ಹಾಗೂ ಈಜಿಪ್ಟ್‌ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.  ಕಳೆದ 24 ಗಂಟೆಗೂ ಕಡಿಮೆ ಅವಧಿಯಲ್ಲಿ ನಡೆದ ಮೂರನೇ ಚಕಮಕಿ ಇದಾಗಿದೆ.

ಸುಯೆಜ್‌ ಕಾಲುವೆಯ ಪೂರ್ವಭಾಗದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಗೆ ಯುಎಆರ್‌ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ. ಇದರಲ್ಲಿ ಇಸ್ರೇಲ್‌ನ ಕೆಲವು ಟ್ಯಾಂಕ್‌ಗಳು ನಾಶವಾಗಿವೆ ಎಂದು ಕೈರೊ ರೇಡಿಯೊ ವರದಿ ಮಾಡಿದೆ. ಆದರೆ ಸ್ಥಳೀಯ ಕಾಲಮಾನ ಸಂಜೆ 4 ಗಂಟೆಗೆ ರೇಡಿಯೊ ಮೂಲಕ ಮಾಡಿದ ಸಂಕ್ಷಿಪ್ತ ಪ್ರಸಾರದಲ್ಲಿ ಈ ಯುದ್ಧದ ಬಗ್ಗೆ ಯಾವುದೇ ಪ್ರಸ್ತಾಪ ಇರಲಿಲ್ಲ.

ಆದರೆ ಕೈರೊದಿಂದ ಬಂದಿರುವ  ಅಧಿಕೃತ ಮಾಹಿತಿ ಪ್ರಕಾರ ಸುಯೆಜ್‌ ಕಾಲುವೆಯ ಪ್ರದೇಶದಲ್ಲಿ ಯುಎಆರ್‌ ಹಾಗೂ ಇಸ್ರೇಲ್‌ ಪಡೆಗಳ ನಡುವೆ ತೀವ್ರ ಸ್ವರೂಪದ ಚಕಮಕಿ ನಡೆಯುತ್ತಿದೆ.

ADVERTISEMENT

ಚೀನಾ ಪರ–ವಿರೋಧಿ ಬಣಗಳ ಘರ್ಷಣೆ: 16 ಮಂದಿಗೆ ಗಾಯ
ಕಲ್ಕತ್ತ, ಜುಲೈ 3–
ಚೀನಾ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಇಲ್ಲಿ ಇಂದು ನಡೆದ ಘರ್ಷಣೆಯಲ್ಲಿ ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದ ಕಾರಣ ಅವರನ್ನು ಚದುರಿಸಲು ಪೊಲೀಸರು ಅವರ ಮೇಲೆ ಮೂರು ಸುತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.

ಚೀನಾ ವಿರುದ್ಧ ಏಕತೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಇಲ್ಲಿನ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜನಸಂಘ, ಪ್ರಜಾ ಸೋಷಲಿಸ್ಟ್‌ ಪಾರ್ಟಿ ಹಾಗೂ ಸಂಯುಕ್ತ ಸೋಷಲಿಸ್ಟ್‌ ಪಾರ್ಟಿಗಳು ಸಭೆ ಏರ್ಪಡಿಸಿದ್ದವು.

ಇದಕ್ಕೆ ಪ್ರತಿಯಾಗಿ ಚೀನಾದ ಪರವಾಗಿ ಸಭಾಂಗಣದ ಹೊರಗೆ ಕಮ್ಯುನಿಸ್ಟ್‌ ಪಕ್ಷದವರು ಪ್ರತಿಭಟನೆ ಏರ್ಪಡಿಸಿದರು. ಈ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.

ವಿಶ್ವಸಂಸ್ಥೆ  ಕ್ಯಾಂಪ್‌ ಲೂಟಿಗೆ ಪ್ರಯತ್ನ: 12 ಮಂದಿ ಹತ್ಯೆ
ಟೆಲ್‌ ಅವೀವ್‌, ಜುಲೈ 3 – 
ವಿಶ್ವಸಂಸ್ಥೆಯ ನಿರಾಶ್ರಿತರ ಪರಿಹಾರ ಕೇಂದ್ರದ ಕ್ಯಾಂಪ್‌ನಲ್ಲಿ ಲೂಟಿ ನಡೆಸಲು ಪ್ರಯತ್ನಿಸಿದ ಗುಂಪಿನ ಮೇಲೆ ಇಸ್ರೇಲ್‌ ಪಡೆಗಳು ಗುಂಡಿನ ದಾಳಿ ನಡೆಸಿದ್ದರಿಂದ ಅರಬ್‌ನ 12 ಮಂದಿ ಲೂಟಿಕೋರರು ಹತ್ಯೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.