ADVERTISEMENT

50 ವರ್ಷಗಳ ಹಿಂದೆ

ಶುಕ್ರವಾರ, 9–12–1966

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2016, 19:30 IST
Last Updated 8 ಡಿಸೆಂಬರ್ 2016, 19:30 IST

ಹೊಸಪೇಟೆ ಬಳಿ ಕಬ್ಬಿಣ ಅದುರಿನ ಗಟ್ಟಿಗಳ ತಯಾರಿಕಾ ಕಾರ್ಖಾನೆ
ನವದೆಹಲಿ, ಡಿ. 8– 
ಜಪಾನ್‌ ಮತ್ತು ಇತರ ದೇಶಗಳಿಗೆ ರಫ್ತು ಮಾಡಲು ಬಳ್ಳಾರಿ– ಹೊಸಪೇಟೆ ಪ್ರದೇಶದಲ್ಲಿ ದೊರೆಯುವ ಕಬ್ಬಿಣದ ಅದುರನ್ನು ಸಣ್ಣ ಗಟ್ಟಿಗಳಾಗಿ ಮಾಡುವ ಕಾರ್ಖಾನೆಯನ್ನು ಸರ್ಕಾರಿ ಕ್ಷೇತ್ರದಲ್ಲಿ ಬಳ್ಳಾರಿ–ಹೊಸಪೇಟೆ ಪ್ರದೇಶದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವರ್ಷಕ್ಕೆ 20 ಲಕ್ಷ ಟನ್‌ ಕಬ್ಬಿಣದ ಅದುರನ್ನು ಗಟ್ಟಿಗಳಾಗಿ ಪರಿವರ್ತಿಸುವ ಈ ಕಾರ್‍ಖಾನೆಯ ಸ್ಥಾಪನೆಗೆ 12 ಕೋಟಿ ರೂಪಾಯಿಗಳು ವೆಚ್ಚವಾಗುವುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 6 ಕೋಟಿ ರೂ. ವಿದೇಶಿ ವಿನಿಮಯ ಸೇರಿದೆ.

***
ಅಂತರಿಕ್ಷದಲ್ಲಿ ಅಣ್ವಸ್ತ್ರ ನಿಷಿದ್ಧ
ಟೆಕ್ಸಾಸ್‌, ಡಿ. 8–
ಬಾಹ್ಯಾಂತರಿಕ್ಷದಲ್ಲಿ ಅಣ್ವಸ್ತ್ರಗಳನ್ನು ನಿಷೇಧಿಸುವ ಕರಡು ಒಪ್ಪಂದದ ಬಗೆಗೆ ಅಮೆರಿಕ, ರಷ್ಯ ಮತ್ತು ಇತರ ರಾಷ್ಟ್ರಗಳು ಒಡಂಬಡಿಕೆಗೆ ಬಂದಿವೆಯೆಂದು ಅಧ್ಯಕ್ಷ ಜಾನ್ಸನ್‌ರವರು ಇಂದು ಇಲ್ಲಿ ಹೇಳಿದರು. ಒಪ್ಪಂದವನ್ನು ಸ್ಥಿರೀಕರಿಸುವ ಮೊದಲ ರಾಷ್ಟ್ರ ಅಮೆರಿಕವಾಗುವುದೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

***
ಆತ್ಮಾರ್ಪಣೆ ನಿರ್ಧಾರ ಕೈಬಿಡಲು ಫತೇಸಿಂಗ್‌ ಅವರಿಗೆ ಚವಾಣ್‌ ಮನವಿ
ನವದೆಹಲಿ, ಡಿ. 8–
ಉಪವಾಸ ಹಾಗೂ ಆತ್ಮಾರ್ಪಣೆ ಮಾಡಿಕೊಳ್ಳುವ ನಿರ್ಧಾರವನ್ನು ಕೈಬಿಡಬೇಕೆಂದು ಗೃಹ ಸಚಿವ ಶ್ರೀ ಚವಾಣ್‌ ಇಂದು ಅಕಾಲಿ ನಾಯಕ ಸಂತ ಫತೇಸಿಂಗ್‌ ಅವರಿಗೆ ಮನವಿ ಮಾಡಿಕೊಂಡರು. ತಮ್ಮ ರಾಜ್ಯಕ್ಕೆ ಪ್ರತ್ಯೇಕ ಹೈಕೋರ್ಟ್‌ ಅಥವಾ ಪ್ರತ್ಯೇಕ ರಾಜ್ಯಪಾಲರಿರಬೇಕೆಂದು ಹರಿಯಾನ ಅಥವಾ ಪಂಜಾಬ್‌ ರಾಜ್ಯ ಸರ್ಕಾರಗಳು ಶಿಫಾರಸು ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಶ್ರೀ ಚವಾಣ್‌ ನುಡಿದರು.

***
ರಾಜಗುರು ಪರಕಾಲ ಮಠದ ಶ್ರೀಗಳು ಪರಮಪದಕ್ಕೆ
ಮೈಸೂರು, ಡಿ. 8–
ಮೈಸೂರಿನ ರಾಜಮನೆತನದ ರಾಜಗುರುವರ್‍ಯರಾದ ಶ್ರೀ ಶ್ರೀಮದಭಿನವ ರಂಗನಾಥ ಬ್ರಹ್ಮತಂತ್ರ ಪರಕಾಲ ಮಹಾದೇಶಿಕ ಸ್ವಾಮಿಗಳು ಗುರುವಾರ ಅಪರಾಹ್ನ 2 ಗಂಟೆ 5 ನಿಮಿಷ ಸಮಯದಲ್ಲಿ ಪರಮಪದವನ್ನೈದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.