ADVERTISEMENT

ಗುರುವಾರ, 11–1–1968

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

‘ಇನ್ನೊಂದು ವರ್ಷದಲ್ಲಿ ಉಳುವವನಿಗೇ ನೆಲದ ಒಡೆತನ’ ವರದಿ: ಎಸ್.ವಿ. ಜಯಶೀಲರಾವ್
ಲಾಲ್‌ಬಹಾದುರ್ ನಗರ, ಜ. 10– ಉಳುವವನೇ ನೆಲದೊಡೆಯನಾಗಬೇಕೆಂಬ ಆಗ್ರಹ ಇನ್ನೊಂದು ವರ್ಷದೊಳಗೆ ಈಡೇರಬೇಕೆಂದು ಕಾಂಗ್ರೆಸ್ ಅಧ್ಯಕ್ಷರು ಎಲ್ಲ ರಾಜ್ಯ ಸರಕಾರಗಳನ್ನೂ ಒತ್ತಾಯಪಡಿಸಿದರು.

71ನೇ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷ ಭಾಷಣ ಮಾಡುತ್ತಾ ಶ್ರೀ ನಿಜಲಿಂಗಪ್ಪನವರು ತಮ್ಮ ಭಾಷಣದ 27 ಪುಟಗಳಲ್ಲಿ 5 ಪುಟಗಳನ್ನು ಬೇಸಾಯ ಮತ್ತು ಆಹಾರ ಉತ್ಪಾದನೆಗೇ ಮೀಸಲಿರಿಸಿದ್ದರು.

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಕರ್ಯ ಮತ್ತು ಕೃಷಿಯನ್ನೂ ಕೈಗಾರಿಕೆಯೆಂದು ಪರಿಗಣಿಸಿ ಬ್ಯಾಂಕ್‌ಗಳ ಸಾಲ ನೀಡಿಕೆ ವಿಧಾನದಲ್ಲಿ ಮಾರ್ಪಾಟಿಗೆ ಅಗ್ರ ಪ್ರಾಶಸ್ತ್ಯ ಕೊಡಬೇಕೆಂದು ಅವರು ವಾದಿಸಿದರು.

ADVERTISEMENT

ರೋಮಾಂಚಕಾರಿ ಖೆಡ್ಡ: 47 ಆನೆಗಳ ಬಂಧನ (ನಮ್ಮ ವಿಶೇಷ ಪ್ರತಿನಿಧಿಯಿಂದ)
ಕಾರಾಪುರ, ಜ. 10–
  ‘ಸ್ಪ್ರೈಕ್’ ಮೆಲುದನಿಯದಾದರೂ ಕಾನನದ ನೀರವತೆಯನ್ನು ಭೇದಿಸಿ ಹೊರಟಿತು ವೈರ್‌ಲೆಸ್ ಸಂದೇಶ. ಕಪಿಲಾನದಿಯ ಆಚೆಯ ದಡದಿಂದ ಕೇಳಿ ಬಂತು ಗಾಳಿಯಲ್ಲಿ ಹಾರಿಸಿದ ಪ್ರಥಮ ಗುಂಡಿನ ಸದ್ದು, ಎಂಟು ಮರಿಗಳೂ ಸೇರಿ 47 ಆನೆಗಳು ಕಳೆದುಕೊಂಡವು ಸ್ವಾತಂತ್ರ್ಯವನ್ನು.

2–10 ಗಂಟೆಗೆ ಪಶ್ಚಿಮ ದಂಡೆಯಿಂದ ಸಂದೇಶ ಕಳುಹಿಸಿದಾಗ ಖೆಡ್ಡ ಆರಂಭವಾಯಿತು ಎಂದರು ದಂಡೆಯ ಹಿಂದಿನ ಕಾಡಿನಲ್ಲಿ ಆವರೆಗಿದ್ದ ನಿಶ್ಯಬ್ದ ಹಠಾತ್ತನೆ ಮುರಿಯಿತು.

ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು? (ಎಸ್.ವಿ. ಜಯಶೀಲರಾವ್ ಅವರಿಂದ)
ಲಾಲ್‌ಬಹಾದುರ್ ನಗರ, ಜ. 10–
ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಉತ್ತರಾಧಿಕಾರಿಯನ್ನು ಆರಿಸಲು ವಿಧಾನಮಂಡಲದ ಕಾಂಗ್ರೆಸ್ ಪಕ್ಷದ ಸಭೆಯನ್ನು ಯಾವಾಗ ಕರೆಯಬೇಕೆಂಬ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ವಿಧಾನ ಮಂಡಲದ ಬಜೆಟ್ ಅಧಿವೇಶನ ಫೆಬ್ರುವರಿ ತಿಂಗಳಲ್ಲಿ ಆರಂಭವಾಗಲಿದೆ. ಹೊಸ ನಾಯಕನನ್ನು ಚುನಾಯಿಸಲು ಕಾಂಗ್ರೆಸ್ ಪಕ್ಷ ಬಜೆಟ್ ಅಧಿವೇಶನಕ್ಕೆ ಮೊದಲು ಅಥವಾ ಆನಂತರ ಸೇರುವುದು ಶ್ರೀ ನಿಜಲಿಂಗಪ್ಪ ಅವರ ತೀರ್ಮಾನವನ್ನು ಅವಲಂಬಿಸಿದೆ.

ತುರ್ತು ಸ್ಥಿತಿ ಅಂತ್ಯ
ನವದೆಹಲಿ, ಜ. 10–
ಐದು ವರ್ಷಕ್ಕೂ ಹೆಚ್ಚು ಕಾಲ ದೇಶಾದ್ಯಂತ ಅಸ್ತಿತ್ವದಲ್ಲಿದ್ದ ತುರ್ತುಪರಿಸ್ಥಿತಿಯನ್ನು ಇಂದು, ರಾಷ್ಟ್ರಾಧ್ಯಕ್ಷರ ಆಜ್ಞೆಯೊಂದು ಅಂತ್ಯಗೊಳಿಸಿತು.

ಚೀನೀ ಆಕ್ರಮಣ ಕಾಲದಲ್ಲಿ 1962ನೇ ಆಕ್ಟೋಬರ್ 26 ರಂದು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.

ತುರ್ತು ಪರಿಸ್ಥಿತಿ ರದ್ದಾಗುವುದರಿಂದ, ರಾಜ್ಯಾಂಗದ 358 ಮತ್ತು 359ನೇ ವಿಧಿಗಳು ನೀಡುವ ಮೂಲಭೂತ ಹಕ್ಕುಗಳು ಪುನಃ ಜಾರಿಗೆ ಬರುತ್ತವೆ. ಆದರೆ ಇನ್ನೂ 6 ತಿಂಗಳ ಕಾಲ ಭಾರತ ರಕ್ಷಣಾ ಕಾನೂನು ಜಾರಿಯಲ್ಲಿರುತ್ತದೆ.

ಬಾಷಾ ಮಸೂದೆಗೆ ರಾಷ್ಟ್ರಪತಿ ಅಸ್ತು
ನವದೆಹಲಿ, ಜ. 10–
ಅಧಿಕೃತ ಭಾಷಾ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ಈಗ ಮಸೂದೆಯು ಶಾಸನವಾಗಿದೆ.

ಈ ಮಸೂದೆಯ ವಿಷಯವನ್ನು ಪುನರ್ ಪರಿಶೀಲನೆಯನ್ನು ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಈಗಾಗಲೇ ಸ್ಪಷ್ಟವಾಗಿ ವಿರೋಧಿಸಿದ್ದಾರೆ.

ಅಮೆರಿಕದ ಆಕಾಶನೌಕೆ ಚಂದ್ರ ಸ್ಪರ್ಶ
ವ್ಯಾಸಡೇನ (ಕ್ಯಾಲಿಪೋರ್ನಿಯ), ಜ. 10–
ಅಮೆರಿಕದ ಮಾನವ ರಹಿತ ಅಂತರಿಕ್ಷ ನೌಕೆ ಸರ್ವೆಯರ್ 7, ನಿನ್ನೆ ರಾತ್ರಿ ಚಂದ್ರನ ಮೇಲೆ ಯಶಸ್ವಿಯಾಗಿ, ಮೆಲ್ಲಗೆ ಇಳಿಯಿತು. ಇಳಿದ 42 ನಿಮಿಷಗಳೊಳಗಾಗಿ ಅದು ಚಂದ್ರನ ಮೇಲ್ಮೈ ಚಿತ್ರಗಳನ್ನು ಭೂಮಿಗೆ ಕಳುಹಿಸಲಾರಂಭಿಸಿತು.

ಹಿಂದೀತರರಿಗೆ ರಿಯಾಯಿತಿ ಹಿಂದೀ ಜನರ ಹೊಣೆ: ಎಸ್ಸೆನ್
ಹೈದರಾಬಾದ್, ಜ. 10–
ಹಲವು ವಿವಾದಗಳಿಗೆ ಎಡೆಕೊಟ್ಟಿರುವ ಅಧಿಕೃತ ಭಾಷಾ ನಿರ್ಣಯದ ಕೆಲವು ತಿದ್ದುಪಡಿಗಳ ಬಗೆಗೆ ಕೇಂದ್ರ ಸರಕಾರದೊಡನೆ ವ್ಯವಹರಿಸಲು ತಾವು ಸಿದ್ಧವೆಂದು ಕಾಂಗ್ರೆಸ್ ಅಧ್ಯಕ್ಷರು ಇಂದು ಇಲ್ಲಿ ಕಾಂಗ್ರೆಸ್ ಮಹಾಧಿವೇಶನ ಉದ್ದೇಶಿಸಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.