ADVERTISEMENT

ಭಾನುವಾರ, 14–1–1968

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST

ತೆರಿಗೆ ವ್ಯವಸ್ಥೆ ಸರಳಗೊಳಿಸಲು ಕ್ರಮ
ನವದೆಹಲಿ, ಜ. 13–
ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶವನ್ನು ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ವ್ಯಕ್ತಪಡಿಸಿದರು. ಭಾರತದಲ್ಲಿ ತೆರಿಗೆ ಪ್ರಮಾಣ ಹೆಚ್ಚೆಂಬ ದೂರು ಸರಿಯಲ್ಲ ಎಂದು ಅವರು ಹೇಳಿದರು.

ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಆಶ್ರಯದಲ್ಲಿ ‘ತೆರಿಗೆ ಮತ್ತು ರಾಷ್ಟ್ರೀಯ ಅಭಿವೃದ್ಧಿ’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಯನ್ನು ಅವರು ಉದ್ಘಾಟಿಸುತ್ತಿದ್ದರು.

‘ಹದಿನೈದು ನಿಮಿಷ ಮಾತ್ರ ವೃತ್ತ ಪತ್ರಿಕೆ ಪಠಣ’
ನವದೆಹಲಿ, ಜ. 13–
ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ದಿನದಲ್ಲಿ ಹದಿನೈದು ನಿಮಿಷಗಳು ಮಾತ್ರ ವೃತ್ತಪತ್ರಿಕೆಗಳನ್ನು ಓದುತ್ತಾರೆ.

ADVERTISEMENT

‘ಪತ್ರಿಕೆಗಳನ್ನು ಓದುವುದಕ್ಕೆ ನನಗೆ ಹೆಚ್ಚು ಕಾಲಾವಕಾಶ ಸಿಕ್ಕುವುದಿಲ್ಲ. ಪತ್ರಿಕಾ ವರದಿ ಕುರಿತು ಕೇಳಿದ ಯಾವುದೇ ಸಂಗತಿಯನ್ನು ನಾನು ಗ್ರಹಿಸದಿದ್ದರೆ ಅದಕ್ಕಾಗಿ ವರದಿಗಾರರು ನನ್ನನ್ನು ದೂಷಿಸಬಾರದು’ ಶ್ರೀ ಮುರಾರಜಿ ದೇಸಾಯಿ ಅವರು ಪತ್ರಕರ್ತರ ಜೊತೆ ಅನೌ‍ಪಚಾರಿಕವಾಗಿ ಮಾತನಾಡುತ್ತಾ ಹೇಳಿದರು.

ಎರಡನೆಯ ಯಶಸ್ವಿ ಖೆಡ್ಡ:40 ಗಜಗಳ ಬಂಧನ (ಪ್ರಜಾವಾಣಿ ಪ್ರತಿನಿಧಿಯಿಂದ)
ಮೈಸೂರು, ಜ. 13– ಹಲವು ವರ್ಷಗಳ ಕಾಲ ಸ್ವಚ್ಛಂದವಾಗಿ ವನವಿಹಾರ ಮಾಡಿದ್ದ ಸುಮಾರು 40 ಆನೆಗಳ ಸಮೂಹವನ್ನು ಕಾಕನಕೋಟೆ ಅರಣ್ಯ ಪ್ರದೇಶದ ಖೆಡ್ಡಾದಲ್ಲಿ ಇಂದು ಬಂಧಿಸಲಾಯಿತು. ಅನಂತರ ಅವುಗಳನ್ನು ಅರಣ್ಯಕ್ಕೆ ಅಟ್ಟಲಾಯಿತು.

ತೂತ್ತುಕುಡಿ ಎಕ್ಸ್‌ಪ್ರೆಸ್‌ನಲ್ಲಿ ಟೈಂ ಬಾಂಬ್?
ಮದರಾಸ್, ಜ. 13–
ಮದರಾಸ್‌ನ ಎಗ್ಮೋರ್ ರೈಲ್ವೆ ನಿಲ್ದಾಣವನ್ನು ಈ ರಾತ್ರಿ 9 ಗಂಟೆಗೆ ಬಿಟ್ಟು ಹೊರಟ ತೂತ್ತುಕುಡಿ ಎಕ್ಸ್‌ಪ್ರೆಸ್‌ಅನ್ನು ತಾಂಬರಂ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.

ಈ ಟ್ರೈನಿನಲ್ಲಿ ಟೈಂಬಾಂಬೊಂದನ್ನಿಡಲಾಗಿದೆಯೆಂದೂ ಇಲ್ಲಿಗೆ ತೊಂಬತ್ತು ಮೈಲಿಗಳ ದೂರದಲ್ಲಿರುವ ವಿಲ್ಲುಪುರಂ ಅನ್ನು ಈ ಟ್ರೈನು ತಲುಪುವುದಕ್ಕೆ ಮುಂಚೆಯೇ ಬಾಂಬ್ ಸ್ಫೋಟಿಸುತ್ತದೆಂದೂ ರೈಲ್ವೆ ಅಧಿಕಾರಿಗಳಿಗೆ ಟೆಲಿಫೋನಿನಲ್ಲಿ ಆಜ್ಞಾತ ಕರೆ ಬಂದುದೇ ಟ್ರೈನು ನಿಲ್ಲಿಸಲು ಕಾರಣ.

ಸಾಮಾನ್ಯರ ಸೇವೆಗೆ ಬುದ್ಧಿಜೀವಿಗಳು ಕಂಕಣ ಕಟ್ಟಲಿ: ತ್ರಿಗುಣಸೇನ್
ಜೈಪುರ, ಜ. 13–
ವಿವೇಚನೆಯುಳ್ಳ ಬುದ್ಧಿ ಜೀವಿಗಳು ಜನಸಾಮಾನ್ಯರೊಂದಿಗೆ ಗುರುತಿಸಿಕೊಳ್ಳಬೇಕಾದ  ಅವಶ್ಯಕತೆ ಇದೆ ಎಂದು ಕೇಂದ್ರ ಶಿಕ್ಷಣ ಸಚಿವ ಡಾ. ತ್ರಿಗುಣ ಸೇನ್ ಅವರು ಇಂದು ಇಲ್ಲಿ ಹೇಳಿದರು.

ಸ್ವಾರ್ಥ, ಪರಾವಲಂಬನೆ, ಸ್ವಪ್ರಗತಿಹಿತ ಮುಂತಾದ ಕ್ಷುಲ್ಲಕ ವಿಷಯಗಳತ್ತ ಬುದ್ಧಿ ಜೀವಿಗಳು ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಿದರೆ, ಸದ್ಯಕ್ಕೆ ಉಪಯೋಗಕಾರಿಯಾದರೂ ಜನತೆಯ ಅತ್ಯುತ್ತಮ ಹಿತಗಳಿಗೆ  ಧಕ್ಕೆ ತರುತ್ತದೆ. ಇಡೀ ರಾಷ್ಟ್ರಕ್ಕೆ ಹಾನಿಯಾದದ್ದು ಬುದ್ಧಿ ಜೀವಿ ವರ್ಗಕ್ಕೂ ಹಾನಿಯೆ ಎಂದವರು ಹೇಳಿದರು.

ನಾಲ್ವರು ಹಿಂದಿ ವಿರೋಧಿ ವಿದ್ಯಾರ್ಥಿಗಳ ಮರಣ
ಕೊಯಮತ್ತೂರು, ಜ. 13–
ಹಿಂದಿ ವಿರುದ್ಧ ಘೋಷಣೆಗಳನ್ನು ಬರೆಯಲು ನಿನ್ನೆ ಸಂಜೆ ಚಲಿಸುತ್ತಿದ್ದ ಬಸ್‌ಗಳನ್ನು ತಡೆ ಹಾಕಲು ಯತ್ನ ನಡೆದಾಗ ಕೊಯಮತ್ತೂರ ಜಿಲ್ಲೆಯಲ್ಲಿ ಒಟ್ಟು ನಾಲ್ವರು ಪ್ರೌಢಶಾಲಾ ವಿದ್ಯಾರ್ಥಿಗಳು ಮರಣ ಹೊಂದಿದರು.

ಉದಕಮಂಡಲಕ್ಕೆ ಹೋಗುತ್ತಿದ್ದ ಬಸ್ಸನ್ನು ಮೆಟ್ಟುಪಾಳ್ಯಂ ಬಳಿ ತಡೆಯಲು ಯತ್ನ ನಡೆದಾಗ ಚಲಿಸುತ್ತಿದ್ದ ಬಸ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮರಣ ಹೊಂದಿದರು. ಈ ಪೈಕಿ ರಂಗರಾಜನ್ ಸ್ಥಳದಲ್ಲೂ, ಸೈಯ್ಯದ್ ಸಾದಿಕ್ ಇಂದು ಬೆಳಿಗ್ಗೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲೂ ಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.