ADVERTISEMENT

ಗುರುವಾರ, 1–2–1968

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

ದಕ್ಷಿಣ ವಿಯಟ್ನಾಂನಲ್ಲಿ ಮಾರ್ಷಲ್ ಲಾ ಜಾರಿ
ಸೈಗಾನ್, ಜ. 31–
ದಕ್ಷಿಣ ವಿಯಟ್ನಾಂನಾದ್ಯಂತ ಇಂದು ಮಾರ್ಷಲ್ ಲಾ ಜಾರಿಗೆ ತರಲಾಯಿತು. ಈ ಮಧ್ಯೆ ಸೈಗಾನ್ ಮತ್ತು ರಾಷ್ಟ್ರದಾದ್ಯಂತ ಪ್ರಾಂತ ರಾಜಧಾನಿಗಳಲ್ಲಿ ಸರ್ಕಾರಿ ಪಡೆಗಳು ಮತ್ತು ಕಮ್ಯುನಿಸ್ಟ್ ವಿಯಟ್ ಕಾಂಗ್ ಗೆರಿಲ್ಲಾಗಳ ನಡುವೆ ಭೀಕರ ಹೋರಾಟ ಮುಂದುವರಿಯುತ್ತಿದೆ. ಸೈಗಾನ್ ಸರ್ಕಾರದ ಅಧಿಕೃತ ರೇಡಿಯೋ ನಿಲಯವನ್ನು ವಿಯಟ್ ಕಾಂಗ್ ಗೆರಿಲ್ಲಾಗಳು ಸುಟ್ಟು ಹಾಕಿದ್ದಾರೆ.

ಅಭಾವ ಪರಿಸ್ಥಿತಿಯದವಡೆಯಲ್ಲಿ ರಾಜ್ಯದ ಅರ್ಧಕ್ಕಿಂತ ಹೆಚ್ಚು ಪ್ರದೇಶ
ಬೆಂಗಳೂರು, ಜ. 31–
ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯ ತಾಲ್ಲೂಕುಗಳನ್ನು ಅಭಾವ ಪೀಡಿತ ಪ್ರದೇಶವೆಂದು ಸರ್ಕಾರ ಇಂದು ಸಾರಿದೆ. ಪೂರ್ಣವಾಗಿ ಅಥವಾ ಭಾಗಶಃ ಅಭಾವ ಪೀಡಿತ ಪರಿಸ್ಥಿತಿಯನ್ನು ಎದುರಿಸುತ್ತಿರುವ ತಾಲ್ಲೂಕುಗಳ ಸಂಖ್ಯೆ 90 ಕ್ಕಿಂತ ಹೆಚ್ಚು.

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬಿದರೆ ಜಿಲ್ಲೆಗಳನ್ನು ಬಿಟ್ಟರೆ ರಾಜ್ಯದ ಉಳಿದ ಹದಿನಾರು ಜಿಲ್ಲೆಗೆ ಅನಾವೃಷ್ಟಿಯ ಬಿಸಿತಟ್ಟಿದೆ. ಅನೇಕ ಕಡೆ ಬೆಳೆದ ಬೆಳೆ ಮಳೆ ಇಲ್ಲದೆ ಕಮರಿ ಹೋದ ವರದಿಗಳು ಬಂದಿವೆ.

ADVERTISEMENT

ಮೈಸೂರಿನಲ್ಲಿ ಗೋಳಿಬಾರ್ ಕುರಿತು ತನಿಖೆ
ಮೈಸೂರು, ಜ. 30–
ಜನವರಿ 29 ರಂದು ಮೈಸೂರಿನಲ್ಲಿ ನಡೆದ ಗೋಳಿಬಾರ್ ಬಗ್ಗೆ ಮ್ಯಾಜಿಸ್ಟ್ರೇಟರೊಬ್ಬರಿಂದ ವಿಚಾರಣೆ ನಡೆಸಲು ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀ ಎಸ್. ವರದನ್ ಅವರು ಆಜ್ಞೆ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮುಖ್ಯಮಂತ್ರಿ ಕಾರಿಗೆ ಕಲ್ಲೇಟು
ಚಿಕ್ಕಮಗಳೂರು, ಜ. 31–
ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಗರಿಕರ ಸಭೆಯನ್ನುದ್ದೇಶಿಸಿ ಭಾಷಣ ಮಾಡಿ ಹೊರಬಂದ ಕೂಡಲೆ, ಅಲ್ಲಿ ಬಹಳ ಹೊತ್ತಿನಿಂದ ಕಾಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಜನರ ಗುಂಪು ಅವರತ್ತ ಧಾವಿಸಿತು.

‘ಭಾಷಾ ಸಮಸ್ಯೆಯನ್ನು ಬಗೆಹರಿಸಲು ವಿಫಲಗೊಂಡಿರುವ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ’ ಎಂದು ವಿದ್ಯಾರ್ಥಿಗಳು ಶ್ರೀ ನಿಜಲಿಂಗಪ್ಪನವರನ್ನು ಒತ್ತಾಯಿಸಿದರು. ಮೆಟ್ಟಿಲುಗಳ ಮೇಲೆ ನಿಂತು ವಿದ್ಯಾರ್ಥಿಗಳನ್ನುದ್ದೇಶಿಸಿ 2 ನಿಮಿಷ ಮಾತನಾಡಿದ ಮುಖ್ಯಮಂತ್ರಿಗಳು ಕಾರಿನೊಳಕ್ಕೆ ಪ್ರವೇಶಿಸಿದ ಕೂಡಲೆ ಕಲ್ಲಿನ ಸುರಿಮಳೆ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.