ADVERTISEMENT

09-02-1968, ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 20:30 IST
Last Updated 8 ಫೆಬ್ರುವರಿ 2018, 20:30 IST

ಚರಣ್‌ ಸಿಂಗ್‌ ರಾಜೀನಾಮೆ ಸದ್ಯಕ್ಕೆ ಇಲ್ಲ

ಲಖನೌ, ಫೆ. 8–  ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸುವುದನ್ನು ಮುಂದಕ್ಕೆ ಹಾಕಲು ಮುಖ್ಯಮಂತ್ರಿ ಶ್ರೀ ಚರಣ್‌ ಸಿಂಗ್‌ ಅವರು ಇಂದು ರಾತ್ರಿ ಒಪ‍್ಪಿಕೊಂಡರು.

ರಾಜೀನಾಮೆ ಸಲ್ಲಿಕೆಯನ್ನು ಮುಂದಕ್ಕೆ ಹಾಕಬೇಕೆಂದು ಉಪ ಮುಖ್ಯಮಂತ್ರಿ ಶ್ರೀ ರಾಮ್‌ಪ್ರಕಾಶ್‌ ಅವರು ಶ್ರೀ ಚರಣ್‌ ಸಿಂಗ್‌ ಅವರಿಗೆ ಮನವಿ ಮಾಡಿಕೊಂಡಿದ್ದರು.

ADVERTISEMENT

**

ನಗರದಲ್ಲಿ 57 ಗುಡಿಸಲುಗಳು ಭಸ್ಮ: ಮಗು ಸಾವು

ಬೆಂಗಳೂರು, ಫೆ. 8– ಶಿವಾಜಿ ಟಾಕೀಸ್‌ ಎದುರಿನಲ್ಲಿರುವ ಗುಡಿಸಲುಗಳಿಗೆ ಇಂದು ಮಧ್ಯಾಹ್ನ ಬೆಂಕಿ ಬಿದ್ದು ನಾಲ್ಕು ವರ್ಷದ ಲಕ್ಷ್ಮೀ ಮತ್ತು 57 ಗುಡಿಸಲುಗಳು ಬೆಂದು ಬೂದಿಯಾದವು.

**

3 ಕ್ಕಿಂತ ಹೆಚ್ಚು ಮಕ್ಕಳಾದರೆ ಬಡ್ತಿ ಮುಂದಕ್ಕೆ

ಬೆಂಗಳೂರು, ಫೆ. 8– ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಸರಕಾರಿ ನೌಕರರಿಗೆ ಇನ್ನು ಮುಂದೆ ಸಂಬಳದ ಒಂದು ಬಡ್ತಿಯನ್ನು ಮುಂದಕ್ಕೆ ಹಾಕಲಾಗುವುದು.

ಮಹಾರಾಷ್ಟ್ರದ ಮಾದರಿಯಲ್ಲಿರುವ ಈ ತೀರ್ಮಾನವನ್ನು ಇಂದು ನಡೆದ ಮಂತ್ರಿ ಮಂಡಲ ಕೈಗೊಂಡಿತು.

3 ಕ್ಕಿಂತ ಹೆಚ್ಚು ಮಕ್ಕಳು ಪಡೆಯುವ ಮಹಿಳಾ ನೌಕರರಿಗೆ ರಜಾ ಮತ್ತಿತರ ಸೌಲಭ್ಯಗಳನ್ನು ಕೊಡಬಾರದೆಂದು ಸರಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ.

ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ಮಂತ್ರಿಮಂಡಲದ ಉಪ ಸಮಿತಿಯ ವರದಿಯನ್ನು ಮಂತ್ರಿಮಂಡಲ ಅಂಗೀಕರಿಸಿತು.

ಸರ್ಕಾರದ ತೀರ್ಮಾನಗಳಿಗನುಗುಣವಾಗಿ ಮೈಸೂರು ಸರಕಾರ ಸೇವಾ ನಿಯಮಗಳು ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಪಟ್ಟ ನಿಯಮಗಳನ್ನು ತಿದ್ದುಪಾಟು ಮಾಡಲಾಗುವುದೆಂದು ವಾರ್ತಾ ಸಚಿವ ಶ್ರೀ ಡಿ. ದೇವರಾಜ ಆರಸ್‌ ಅವರು ಇಂದು ವರದಿಗಾರರಿಗೆ ತಿಳಿಸಿದರು.

**

ರಾಜ್ಯದಲ್ಲಿ ಶಾಂತಿ ರಕ್ಷಿಸಲು ಸಂಪುಟದ ದೃಢ ನಿರ್ಧಾರ

ಬೆಂಗಳೂರು, ಫೆ. 8– ಹಿಂದಿ ವಿರೋಧಿ ಚಳವಳಿ ಮತ್ತಿತರ ಕಾರಣಗಳಿಂದ ರಾಜ್ಯದಲ್ಲಿ ಉದ್ಭವಿಸಿದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಇಂದು ನಡೆದ ಮಂತ್ರಿ ಮಂಡಲದ ಸಭೆ ತೀವ್ರವಾಗಿ ಗಮನಕ್ಕೆ ತೆಗೆದುಕೊಂಡಿತೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.