ADVERTISEMENT

ಅತ್ಯಗತ್ಯ ರಾಜಕೀಯ ಪ್ರಕ್ರಿಯೆ...

ಆರ್.ಕೆ.ದಿವಾಕರ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

‘ಜಾತಿ ಸಮಾವೇಶ ತಪ್ಪಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಂಚಿಟಿಗರ ಸಮಾವೇಶದಲ್ಲಿ (ಪ್ರ.ವಾ.,  ಮಾರ್ಚ್‌ ೨) ಅಭಿಪ್ರಾಯಪಟ್ಟಿದ್ದಾರೆ.  ನಿಜ, ಸಂವಿಧಾನದ ಆಶಯವನ್ನೂ ಮಿರಿ, ಜಾತಿಗಳೇ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವವರೆಗೆ, ಜಾತಿ ಸಮಾವೇಶ ಅತ್ಯಗತ್ಯ ರಾಜಕೀಯ ಪ್ರಕ್ರಿಯೆಯೇ ಆಗಿರುತ್ತದೆ!

ಜಾತಿಗಳ ಮುಂದುವರಿಕೆಗೆ, ಹೊಸ ಜಾತಿಗಳ ಸೃಷ್ಟಿಗೆ ನಮ್ಮ ಚುನಾವಣಾ ವ್ಯವಸ್ಥೆಯೇ ಮೂಲ ಪ್ರೇರಣೆ. ಕುಂಚಿಟಿಗರಿಗಾಗಲೀ, ಕುಂಬಾರರಿಗಾಲೀ, ಕುರುಬರಿಗಾಗಲೀ, ತಮ್ಮದೇ ಐಡೆಂಟಿಟಿಯ ಅಗತ್ಯ ಉಂಟಾಗಿದೆ. ಬ್ರಾಹ್ಮಣ ಸಮಾವೇಶಗಳೂ ನಡೆಯದೇ ಇಲ್ಲ. ಸಮಾವೇಶಗಳು ವೃತ್ತಿ ವಿಶಿಷ್ಟ ಕೌಶಲ, ಪ್ರತ್ಯೇಕವಾಗಿ ಗುರುತಿಸಿಕೊಳ್ಳುವುದರ ಅನಿವಾರ್ಯ ಮತ್ತು ಶೋಷಣೆಯ ಸ್ವರೂಪದ ನೈಜ, ವಸ್ತುನಿಷ್ಠ ಮಂಥನಕ್ಕಾಗಿ ಅಲ್ಲ.  ರಾಷ್ಟ್ರೀಯ ಉತ್ಪಾದನೆಗೆ ವಿಶಿಷ್ಟ ಜಾತಿಯ ಕೊಡುಗೆ ಬಗ್ಗೆ ಚಿಂತನೆಗಾಗಿಯೂ ಅಲ್ಲ. ಅನುಪಾತಾತ್ಮಕ ಮೀಸಲಾತಿ ಒತ್ತಾಯಕ್ಕಾಗಿ!

ರಾಜ್ಯದಲ್ಲಿ ಆರು ಸಾವಿರ ಜಾತಿಗಳಿವೆಯಂತೆ. ಹಾಗಂತ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಒಂದೊಂದಕ್ಕೂ ಮಠ, ಸ್ವಾಮಿಗಳು ಬೇರೆ! ಏತಕ್ಕಾಗಿ? ಕ್ಷೇತ್ರದ ಛಿದ್ರ-ಛಿದ್ರ ಜಾತಿಗಳ ಪ್ರಬಲ ಮುಖಂಡನನ್ನೇ ಓಲೈಸುವ ಸ್ಥಳೀಯ ರಾಜಕೀಯಕ್ಕಾಗಿ! ಉಳಿದೆಲ್ಲಾ ಜಾತಿಗಳು, ವಿಶೇಷವಾಗಿ ರಾಜಕೀಯ ಮಹತ್ವಾಕಾಂಕ್ಷೆಯಿಲ್ಲದ  ಜಾತಿ ಇಲ್ಲಿ ಗೌಣ. ಗೆಲ್ಲುವ ಅಭ್ಯರ್ಥಿ ಜಾತಿ ಚೌಕಟ್ಟು  ಮೀರಿ ಎಲ್ಲರ ವಿಶ್ವಾಸ ಗಳಿಸುವುದು ಅನಿವಾರ್ಯವಾದರೆ  ಜಾತಿ ಸಮಾವೇಶಗಳ ಅವಶ್ಯವಿರುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.