ADVERTISEMENT

ಅರ್ಹರ ನೇಮಕವಾಗಲಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ಗುಮಾಸ್ತರೊಬ್ಬರನ್ನು ನೇಮಿಸಿರುವುದನ್ನು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ಬಜೆಟ್‌ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ (ಪ್ರ.ವಾ., ಮಾರ್ಚ್‌ 23).
 
ಒಂದು ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯ ಹುದ್ದೆ ಅತ್ಯಂತ ಪ್ರಮುಖವಾದದ್ದು. ಆ ಸ್ಥಾನದಲ್ಲಿರುವವರಿಗೆ ಪ್ರೊಫೆಸರ್‌ ಹುದ್ದೆಗೆ ಸಮನಾದ ಜ್ಞಾನ, ವಿದ್ಯಾರ್ಹತೆ ಮತ್ತು ಕೌಶಲಗಳಿರಬೇಕಾಗುತ್ತದೆ. ಅವರು ಜನ, ಮಾಧ್ಯಮ ಮತ್ತು ಸರ್ಕಾರದ ಜೊತೆ ವಿಶ್ವವಿದ್ಯಾಲಯದ ಸಂಪರ್ಕ ಸಾಧಿಸುವವರಾಗಿರುತ್ತಾರೆ.

ಅಲ್ಲದೆ ವಿಶ್ವವಿದ್ಯಾಲಯದ ಅನೇಕ ದಾಖಲಾತಿಗಳು, ಮೇಲ್ಮಟ್ಟದ ಕಾರ್ಯಚಟುವಟಿಕೆಗಳು, ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿಯುತವಾದ ಹುದ್ದೆ ಇದಾಗಿರುತ್ತದೆ. ಅಂತಹ ಹುದ್ದೆಗೆ ಗುಮಾಸ್ತರೊಬ್ಬರನ್ನು ನೇಮಿಸಿರುವುದು ಎಷ್ಟು ಸರಿ?
 
ಅದೂ ಹಲವು ವರ್ಷಗಳಿಂದ ಆ ವ್ಯಕ್ತಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರೆ ಅದು ವಿಶ್ವವಿದ್ಯಾಲಯಕ್ಕೆ ನಾಚಿಕೆಗೇಡಿನ ವಿಷಯ. ಮಾತ್ರವಲ್ಲ ಕಪ್ಪುಚುಕ್ಕೆ ಸಹ.  ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಶೀಘ್ರ ಕ್ರಮ ಕೈಗೊಂಡು, ಅರ್ಹ ವ್ಯಕ್ತಿಯನ್ನು ಆ ಹುದ್ದೆಗೆ ನೇಮಿಸಬೇಕು. 
ಜಯಪ್ರಕಾಶ್ ಬಿರಾದಾರ್, ದಾವಣಗೆರೆ
 
ಶಾಪವಾದ ಅಧಿನಿಯಮ
ಅರ್‌ಟಿಇ ಅಧಿನಿಯಮಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ ದಾಮ್ಲೆ ಅವರು ಬರೆದಿರುವ ಲೇಖನ (ಸಂಗತ, ಮಾರ್ಚ್‌ 3), ಆರ್‌ಟಿಇ ನಿಯಮಗಳ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕರಿಗೆ ಚೆನ್ನಾಗಿ ಅರ್ಥವಾಗುವಂತೆ ತಿಳಿಸಿಕೊಟ್ಟಿದೆ. 
 
ರಾಜ್ಯದ ಪ್ರತಿ ಮಗುವೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಲಿ ಎಂಬ ಉದ್ದೇಶದಿಂದ ಮಾಡಿದ ನಿಯಮವನ್ನು ಶಿಕ್ಷಣ ಇಲಾಖೆ ತಪ್ಪಾಗಿ ತಿಳಿದುಕೊಂಡು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಉತ್ತೇಜಿಸುತ್ತಿದೆ.

ಇದರಿಂದ ಎಷ್ಟೋ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಕನ್ನಡ ಶಾಲೆಗಳಿಗೆ ಶಾಪವಾಗಿದ್ದ ಆರ್‌ಟಿಇ ಅಧಿನಿಯಮವನ್ನು ಒಂದು ವರ್ಗ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ.
 
ಶಿಕ್ಷಣ ಇಲಾಖೆಯು  ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಕನ್ನಡ ಶಾಲೆಗಳು ಉಳಿಯುತ್ತವೆ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದರ ಕಡೆ ಸರ್ಕಾರ ಆಸ್ಥೆ ವಹಿಸಬೇಕು. ಕನ್ನಡಪರವಾದ ಮನಸ್ಸುಗಳು ಸರ್ಕಾರದೊಂದಿಗೆ ನಿಂತು ತಮ್ಮ ಸೇವೆಯನ್ನು ಸಲ್ಲಿಸಬೇಕು. ಆಗ ಮಾತ್ರ ಕನ್ನಡ ಶಾಲೆಗಳು ಉಳಿಯಲು ಸಾಧ್ಯ.
ಸುಶೀಲಾ ಸದಾಶಿವಯ್ಯ, ತುಮಕೂರು
 
ಮೂಗುದಾರ ಏಕೆ?
ಸುದ್ದಿ ಏನೇ ಇರಲಿ, ವ್ಯಕ್ತಿ ಯಾರೇ ಆಗಿರಲಿ ಮಾಧ್ಯಮಗಳು ಸತ್ಯವನ್ನು ನಿರ್ಭೀತಿಯಿಂದ ಜನರಿಗೆ ತಲುಪಿಸುತ್ತವೆ. ಅದರಲ್ಲೂ ಲಂಗುಲಗಾಮಿಲ್ಲದ ಅನೇಕ ರಾಜಕಾರಣಿಗಳ ನಿಜರೂಪವನ್ನು ಬಿಚ್ಚಿಡುತ್ತವೆ.

ಮನೆಯಲ್ಲಿ ಗುಟ್ಟು ಮಾಡಿ ಹೊರಗೆ ಅವರು ಮಾಡುವ ಘನ ಕಾರ್ಯಗಳನ್ನು ಮನೆಯವರಿಗೆ ತಿಳಿಸುವುದು ಸಹ ಮಾಧ್ಯಮಗಳೇ. ಇದರಿಂದ ಕೆಲ ರಾಜಕಾರಣಿಗಳಿಗೆ ಮುಜುಗರ ಉಂಟಾಗಿ, ತಮ್ಮ ಮುಖವಾಡ ಕಳಚಿಬಿತ್ತಲ್ಲ ಎಂಬ ಸಿಟ್ಟಿನಿಂದ ಅವರು ಸದನದಲ್ಲಿ ಹುಯಿಲೆಬ್ಬಿಸಿದ್ದನ್ನು  ಇಡೀ ಕರ್ನಾಟಕ ನೋಡಿದೆ. 
 
ರಾಜಕಾರಣಿಗಳು ಮಾಡುವ ಒಳ್ಳೆಯ ಕೆಲಸಗಳನ್ನು ಸಹ ಮಾಧ್ಯಮಗಳು ಬೆನ್ನುತಟ್ಟಿ ಹೊಗಳಿ ಪ್ರಸಾರ ಮಾಡುತ್ತವೆ. ಟಿ.ವಿ, ಪತ್ರಿಕೆ ಅಥವಾ ಯಾವುದೇ ಮಾಧ್ಯಮ ಇರಲಿ ಅವು ಕನ್ನಡಿ ಇದ್ದಂತೆ. ಇದ್ದದ್ದನ್ನು ಇದ್ದ ಹಾಗೆ ಬಿಂಬಿಸುತ್ತವೆ.

ಇಲ್ಲದಿದ್ದರೆ ಜನರಿಗೆ ನಿಜಬಣ್ಣ ಗೊತ್ತಾಗುವುದಾದರೂ ಹೇಗೆ? ಲೂಟಿ ಹೊಡೆದದ್ದು, ಭ್ರಷ್ಟಾಚಾರ ಮಾಡಿ ಬಾಚಿದ್ದು, ಸಿಕ್ಕಸಿಕ್ಕಲ್ಲೆಲ್ಲಾ ಆಸ್ತಿ ಮಾಡಿದ್ದು ಎಲ್ಲವೂ ಗೊತ್ತಾಗುವುದು ಮಾಧ್ಯಮಗಳು ನಿರ್ಭೀತಿಯಿಂದ ಕೆಲಸ ಮಾಡಿದಾಗ ಮಾತ್ರ.
 
ಮಾಧ್ಯಮದವರಿಗೂ ಅಪಾಯ ಇದ್ದೇ ಇರುತ್ತದೆ. ಹೆಜ್ಜೆಹೆಜ್ಜೆಗೂ ಅವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಭಾವಿಗಳನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಕೋರ್ಟುಗಳಲ್ಲಿ ಅವರ ವಿರುದ್ಧ ಕೇಸುಗಳು ದಾಖಲಾಗುತ್ತವೆ. ಆದರೂ ಜನಹಿತದ ದೃಷ್ಟಿಯಿಂದ ಮಾಧ್ಯಮ ಮಂದಿ ಎಲ್ಲವನ್ನೂ ಬಯಲು ಮಾಡುತ್ತಾರೆ. 
 
ಇದನ್ನು ಸಹಿಸಿಕೊಳ್ಳಲಾಗದೆ ಅನೇಕರು ಮೈಪರಚಿಕೊಳ್ಳುತ್ತಿದ್ದಾರೆ. ಸ್ವಹಿತ ಸಾಧನೆಗಾಗಿ ಮಾಧ್ಯಮಗಳಿಗೆ ಮೂಗುದಾರ ಹಾಕಲು ಹೋದರೆ (ಪ್ರ.ವಾ., ಮಾರ್ಚ್‌ 23) ಜನರೇ ತಕ್ಕ ಪಾಠ ಕಲಿಸುತ್ತಾರೆ.
ಪದ್ಮಾ ಕೃಷ್ಣಮೂರ್ತಿ, ತುಮಕೂರು
 
ಇವರಿಗೇಕೆ ಲಾಭವಿಲ್ಲ?
ಸಂಗೀತ ನಿರ್ದೇಶಕ ಇಳಯರಾಜ ಅವರು ತಾವು ಸಂಯೋಜಿಸಿದ ಹಾಡುಗಳನ್ನು ಅನುಮತಿ ಪಡೆಯದೆ ಹಾಡಕೂಡದು ಎಂದು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನೋಟಿಸ್‌ ನೀಡಿರುವುದು ಬಹುಚರ್ಚಿತ ವಿಷಯವಾಗಿದೆ.

ಸಾಮಾನ್ಯವಾಗಿ ಹಾಡುಗಾರರು ಹಲವಾರು ವೇದಿಕೆಗಳಲ್ಲಿ ಹಾಡುತ್ತಾರೆ, ತೀರ್ಪುಗಾರರಾಗಿ ಭಾಗವಹಿಸುತ್ತಾರೆ, ಹಣ ಸಂಪಾದಿಸುತ್ತಾರೆ. ಆದರೆ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ ನಿರ್ದೇಶಕನಿಗೆ ಮಾತ್ರ ಅಂತಹ ಅವಕಾಶಗಳೂ ಇಲ್ಲ, ಹಣ ಸಂಪಾದನೆಯೂ ಇಲ್ಲ. ಇದ್ದರೂ ತೀರಾ ಕಡಿಮೆ.

ಹಾಡೊಂದನ್ನು ಸಂಯೋಜಿಸುವ ಸಂದರ್ಭದಲ್ಲೇ ಸಂಗೀತ ನಿರ್ದೇಶಕ ಹಾಗೂ ಗಾಯಕ ಇಬ್ಬರೂ ತಕ್ಕ ಸಂಭಾವನೆಯನ್ನು ಪಡೆದಿರುತ್ತಾರೆ. ಮುಂದೆ ಅದೇ ಹಾಡಿನ ಗಾಯನಕ್ಕಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಗಾಯಕರು ಸಂಭಾವನೆ ಪಡೆದರೆ, ಸಂಗೀತ ನಿರ್ದೇಶಕನಿಗೆ ನಯಾಪೈಸೆಯೂ ಇಲ್ಲ.
 
ಹಾಗಾದರೆ ಸಂಗೀತ ನಿರ್ದೇಶಕನ ಶ್ರಮಕ್ಕೆ ಬೆಲೆ ಬೇಡವೇ? ಇನ್ನು ಮೇಲಾದರೂ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕಪಡೆಯುವ ಲಾಭದಲ್ಲಿ ಸಂಗೀತ ನಿರ್ದೇಶಕನಿಗೂ ಕಿಂಚಿತ್ತಾದರೂ ಲಾಭ ಸಿಗುವಂತಾಗಲಿ.
ಮೂರ್ತಿ ತಿಮ್ಮನಹಳ್ಳಿ, ಹೊಸಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.