ADVERTISEMENT

ಆರ್‌ಟಿಇ ರದ್ದಾಗದಿರಲಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST

ಆರ್‌ಟಿಇ ಮೂಲಕ ಮಕ್ಕಳನ್ನು ಸರ್ಕಾರವೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದು, ಈ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ (ಪ್ರ.ವಾ., ಜೂನ್‌ 26).

ಹಾಗಿದ್ದರೆ ಪ್ರತಿಭಾನ್ವಿತ ಬಡ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ, ಅದರಲ್ಲೂ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯಲೇಬಾರದು ಎಂಬುದು ಇವರ ಆಗ್ರಹವೇ? ಕನ್ನಡ ನಾಡಿನಲ್ಲಿ ಹುಟ್ಟಿದ ಬಡ ಮಕ್ಕಳು, ಮೂಲ ಸೌಕರ್ಯವಿಲ್ಲದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಓದಬೇಕು, ಈ ಮೂಲಕ ಅವರ ಉನ್ನತ ಶಿಕ್ಷಣದ ಕನಸು ಹಾಗೇ ಉಳಿದರೂ ಚಿಂತೆ ಇಲ್ಲ ಎಂದು ಅರ್ಥವೇ?

ತಾಂತ್ರಿಕತೆಯ ಈ ಸ್ಪರ್ಧಾ ಯುಗದಲ್ಲಿ, ಶ್ರೀಮಂತರು ಲಕ್ಷಾಂತರ ರೂಪಾಯಿ ನೀಡಿ ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದಾರೆ. ಇವರ ಮಕ್ಕಳು ಭವಿಷ್ಯದಲ್ಲಿ ಐಐಟಿ, ಐಐಎಂನಂಥ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಬಡಪಾಯಿ ಮಕ್ಕಳು ಈ ಮಕ್ಕಳೊಂದಿಗೆ ಸರಿಸಮನಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವೇ? 

ಇಂದು ಕನ್ನಡ ಮಾಧ್ಯಮದಲ್ಲಿ ಕಲಿತ ಕೆಲವು ಮಕ್ಕಳು ಆಟೊ ಚಾಲಕರಾಗಿ, ಕೂಲಿ ಕಾರ್ಮಿಕರಾಗಿ, ಕೆಳ ದರ್ಜೆಯ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಆರ್‌ಟಿಇ ಕಾಯ್ದೆ ದೇಶದಲ್ಲಿ ಜಾರಿಯಾದ ನಂತರ ಕೂಲಿ ಕಾರ್ಮಿಕರ ಮಕ್ಕಳೂ ಪ್ರತಿಷ್ಠಿತ ಶಾಲೆಗಳಲ್ಲಿ ಕನಿಷ್ಠ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಪಡೆಯುವಂತಾಗಿದೆ. ಇಂತಹ ಅವಕಾಶವನ್ನು ಕೇವಲ ಭಾಷೆಯ ಕಾರಣದಿಂದ ರದ್ದು ಮಾಡಬಾರದು ಹಾಗೂ ಈ ರೀತಿ ಹೇಳಿಕೆಗಳನ್ನು ನೀಡುವ ಮೊದಲು ಬಡ ಮಕ್ಕಳ ಶೈಕ್ಷಣಿಕ ಸ್ಥಿತಿ ಬಗ್ಗೆ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.