ADVERTISEMENT

ಏಕೆ ಈ ನಿಯಮ?

​ಪ್ರಜಾವಾಣಿ ವಾರ್ತೆ
Published 22 ಮೇ 2015, 19:30 IST
Last Updated 22 ಮೇ 2015, 19:30 IST

ಬೆಂಗಳೂರಿನವನಾದ ನಾನು ಗಡಿ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಬಾರಿ ರಜೆಗೆ ಬಂದಿದ್ದಾಗ ನನ್ನ ಬಳಿಯಿದ್ದ, ಆರು ವರ್ಷಗಳ ಹಿಂದೆ ಕೊಂಡಿದ್ದ ರಾಷ್ಟ್ರೀಯ ಉಳಿತಾಯ ಪತ್ರವನ್ನು ನೀಡಿ ಹಣ ಪಡೆಯಲು ಪ್ರಧಾನ ಅಂಚೆ ಕಚೇರಿಗೆ ಹೋದೆ. ಒಂದು ಗಂಟೆ ಸರತಿಯಲ್ಲಿ ಕಾದು, ಕೌಂಟರ್‌ ಬಳಿ ಬಂದಾಗ ಹಣವನ್ನು ನಗದು ರೂಪದಲ್ಲಾಗಲೀ, ಚೆಕ್‌ ಮೂಲಕವಾಗಲೀ ಕೊಡಲಾಗುವುದಿಲ್ಲವೆಂದು ಹೇಳಿದರು. ಅಂಚೆ ಕಚೇರಿ ಉಳಿತಾಯ ಖಾತೆಯನ್ನು ತೆರೆದಲ್ಲಿ ಅದರಲ್ಲಿ ಹಣ  ಜಮಾ ಮಾಡುವುದಾಗಿ ತಿಳಿಸಿದರು. ಅಷ್ಟೇ ಅಲ್ಲ, ಉಳಿತಾಯ ಖಾತೆ ತೆರೆಯದಿದ್ದರೆ ನಾನು ಹೂಡಿದ ಹಣ ನನಗೆ ವಾಪಸು ದೊರೆಯುವುದಿಲ್ಲವೆಂದೂ ತಿಳಿಸಿದರು.

ಬೆಂಗಳೂರಿನಿಂದ ಸಾವಿರಾರು ಮೈಲು ದೂರದಲ್ಲಿ, ಅನಿಶ್ಚಿತ ಸ್ಥಿತಿಯಲ್ಲಿ ಗಡಿ ಕಾಯುವ ನಮ್ಮಂಥವರ ಪರಿಸ್ಥಿತಿಯನ್ನು ವಿವರಿಸಿದರೂ ಅವರು ಕೇಳಲಿಲ್ಲ. ಹಿರಿಯ ಅಧಿಕಾರಿಗಳಿಗೆ ಕೇಳುವ ತಾಳ್ಮೆಯೂ ಇರಲಿಲ್ಲ. ಬೇಸತ್ತು  ಹಣ ಪಡೆಯದೆ ಮನೆಗೆ ಹಿಂದಿರುಗಿದೆ.

ಈ ಘಟನೆಗೆ ಸಂಬಂಧಪಟ್ಟಂತೆ ಕೆಲವು ಪ್ರಶ್ನೆಗಳಿವೆ. ಇಂಥ ಪ್ರಜಾವಿರೋಧಿ ನಿಯಮವನ್ನು ಯಾರು, ಯಾರಿಗಾಗಿ, ಯಾವ ಉದ್ದೇಶದಿಂದ ಮಾಡಿದರು? ಹಣ ವಾಪಸು ಪಡೆಯಲು ಅಂಚೆ ಕಚೇರಿಯಲ್ಲೇ ಖಾತೆ ತೆರೆಯಬೇಕೆಂದು ಇಲಾಖೆ ಒತ್ತಾಯಿಸಬಹುದೇ? ಇದು ವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲವೇ? ಖಾತೆ ತೆರೆಯದಿದ್ದರೆ ನಾನು ಹೂಡಿದ ಹಣವನ್ನು ಸರ್ಕಾರವೇ ನುಂಗಿ ಹಾಕುತ್ತದೆಯೇ? ಇಂಥ ನಾಚಿಕೆಗೇಡಿನ ನಿಯಮಕ್ಕೆ ಕಾನೂನಿನ ಬೆಂಬಲವಿದೆಯೇ? ಅಂಚೆ ಇಲಾಖೆ ಈ ಬಗ್ಗೆ ತಿಳಿಸಬೇಕು.
-ಸತೀಶ‌ಸೋಮೇಶ್ವರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.