ADVERTISEMENT

ಒಂದೇ ನ್ಯಾಯ

ಸ್ವಯಂ ಪ್ರಕಾಶ್, ಬೆಂಗಳೂರು
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST

ಬೆಂಗಳೂರಿನಲ್ಲಿ ಸುಡಾನ್‌ ವಿದ್ಯಾರ್ಥಿಯೊಬ್ಬ ಅಪಘಾತ ಎಸಗಿ ಮಹಿಳೆಯೊಬ್ಬರು ಮೃತರಾದ ಸಂದರ್ಭದಲ್ಲಿ ತಾಂಜಾನಿಯಾ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಸ್ಥಳೀಯರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಗೃಹ ಸಚಿವ ಡಾ. ಪರಮೇಶ್ವರ್‌ ಆಶ್ವಾಸನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ಅನೂಚಾನವಾಗಿ ನಡೆಯುತ್ತಿರುವ ಸರಗಳ್ಳತನ, ವೇಗದ ವಾಹನ ಚಾಲನೆಯಿಂದ ಅಪಘಾತ, ವಾಹನ ನಡೆಸುವಾಗ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಹೋಗುವುದು, ನಡು ರಾತ್ರಿಯಲ್ಲೂ ಗದ್ದಲ ಎಬ್ಬಿಸುವುದು, ಸೈಬರ್ ಕಳ್ಳತನದ ಮೂಲಕ ಲಕ್ಷಗಟ್ಟಲೆ ಹಣ ದೋಚುವುದು, ಗಾಂಜಾ ಸೇವನೆ ಮುಂತಾದ ಕೃತ್ಯಗಳಲ್ಲಿ ವಿದೇಶಿಯರ ಕೈವಾಡ ಇರುವುದನ್ನು ಮಾಧ್ಯಮಗಳಿಂದ ತಿಳಿದು, ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಸ್ಥಳೀಯರಿಗೆ ನಿಂದನಾ ಭಾವ ಬೇರುಬಿಟ್ಟಿದೆ. ಈ ಹಿನ್ನೆಲೆಯಲ್ಲಿ, ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದನ್ನು ಕಂಡವರು ಸಹಜವಾಗಿಯೇ ಉದ್ವೇಗಗೊಂಡು, ನಂತರ ಸ್ಥಳಕ್ಕೆ ಬಂದ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ.

ಆದರೆ ದೆಹಲಿ ಮೂಲದ ಕೆಲವು ಸುದ್ದಿವಾಹಿನಿಗಳು ಸ್ಥಳೀಯರ ದುಃಖ,  ದುಮ್ಮಾನಗಳನ್ನು ಅರ್ಥ ಮಾಡಿಕೊಳ್ಳದಿರುವುದು ವಿಪರ್ಯಾಸ. ಜನರ ನಡವಳಿಕೆ ತಪ್ಪು. ಆದರೆ ಅದನ್ನೇ ದೊಡ್ಡದು ಮಾಡಿ, ಅಪಘಾತದಲ್ಲಿ ಸಾವಿಗೀಡಾದ ಮಹಿಳೆಯ ಕುಟುಂಬದ ನೋವನ್ನು ತಿಳಿಯದಿರುವುದು, ಕೆಲವು ವಿದೇಶಿ  ವಿದ್ಯಾರ್ಥಿಗಳ ಕೆಟ್ಟ ನಡತೆಯನ್ನುಗಮನಿಸದಿರುವುದು ಸರಿಯಲ್ಲ.

ಕೇಂದ್ರ ಸರ್ಕಾರ ಕೂಡ, ಅಲ್ಲಿನ ರಾಯಭಾರಿಗಳಿಗೆ ಈ ಬಗ್ಗೆ ಮಾಹಿತಿ ಕೊಟ್ಟು, ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳು ಇಲ್ಲಿನ ಜನರ ಸ್ನೇಹ ಸಂಪಾದಿಸುವುದರ ಜೊತೆಗೆ ಸ್ಥಳೀಯ ಕಾನೂನನ್ನೂ ಗೌರವಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದೆ ವಿದೇಶಿ ವಿದ್ಯಾರ್ಥಿಗಳು ತಮ್ಮ ಅಟಾಟೋಪಗಳನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.