ADVERTISEMENT

ಒರಟು ವರ್ತನೆ

ಚಂದ್ರಶೇಖರ ತಾಳ್ಯ
Published 6 ನವೆಂಬರ್ 2015, 19:30 IST
Last Updated 6 ನವೆಂಬರ್ 2015, 19:30 IST

ಹೊಳಲ್ಕೆರೆ ರೈಲು ನಿಲ್ದಾಣದಿಂದ ದಾವಣಗೆರೆ ಕಡೆ ಹೋಗಲು ಈ ತಿಂಗಳ 5ರಂದು  ಬೆಳಿಗ್ಗೆ ಏಳು ಗಂಟೆ ಹೊತ್ತಲ್ಲಿ   ಅರಸೀಕೆರೆ-ಹುಬ್ಬಳ್ಳಿ ಪ್ಯಾಸೆಂಜರ್ ಗಾಡಿಗಾಗಿ ಪ್ರಯಾಣಿಕರೆಲ್ಲ ಕಾಯುತ್ತಿದ್ದೆವು. ಮುಖ್ಯ ಕಟ್ಟಡದ ಮುಂದಿನ ಟ್ರ್ಯಾಕ್‌ನಲ್ಲೇ ಗಾಡಿ ಬಂದು ನಿಲ್ಲಬಹುದೆಂದು ನಿರೀಕ್ಷಿಸಿ ಅಲ್ಲಿಯೇ ಇದ್ದೆವು. ಇದ್ದಕ್ಕಿದ್ದಂತೆ ಯಾರೋ ಒಬ್ಬರು ‘ಗಾಡಿ ಆ ಬದಿಯಲ್ಲಿ ನಿಲ್ಲುತ್ತದೆ’ ಎಂದು ಹೇಳಿ ಅತ್ತ ಹೊರಟರು. ನಾವೆಲ್ಲ, ‘ರೈಲು ಅಧಿಕಾರಿಗಳು ಮೊದಲೇ ಸೂಚನೆ ನೀಡಿದ್ದರೆ ಗಡಿಬಿಡಿಯಲ್ಲಿ ಮೂರು ಟ್ರ್ಯಾಕ್‌ ದಾಟುವುದು ತಪ್ಪುತ್ತಿತ್ತು’ ಎಂದು ಗೊಣಗುತ್ತಾ ಆ ಬದಿಗೆ ದಾಟಲು ಮುಂದಾದಾಗ ಇದನ್ನೆಲ್ಲ ನೋಡುತ್ತ ಸ್ಟೇಷನ್‌ ಮಾಸ್ಟರ್‌ ಸುಮ್ಮನೇ ನಿಂತಿದ್ದುದು ಕಣ್ಣಿಗೆ ಬಿತ್ತು.

ನಾನು ತಕ್ಷಣ ಅವರಲ್ಲಿಗೆ ಹೋಗಿ ‘ಹೀಗೆಂದು ಒಂದು ನೋಟಿಸ್‌ ಹಾಕಬಹುದಿತ್ತಲ್ಲವೆ? ಇಲ್ಲಾ ಬಾಯಿ ಮಾತಲ್ಲೇ ಸೂಚಿಸಬಹುದಿತ್ತಲ್ಲವೆ?’ ಎಂದು ಕೇಳಿದೆ.  ಆ ರೈಲ್ವೆ ಅಧಿಕಾರಿ,  ತುಂಬಾ ಒರಟಾಗಿ ‘ಹಂಗೆಲ್ಲಾ ಹಾಕಲಾಗುವುದಿಲ್ಲ, ಹೇಳಲೂ ಆಗುವುದಿಲ್ಲ’ ಎಂದರು. ಅವರ ಮಾತಿಗೆ ಪ್ರತಿಕ್ರಿಯೆಯಾಗಿ ನಾನು, ‘ಪ್ರಯಾಣಿಕರ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಬಾರದು’ ಎಂದು ಸೌಮ್ಯವಾಗಿ ಹೇಳಿ, ‘ನಿಮ್ಮ  ಮೇಲಧಿಕಾರಿಗಳಿಗೆ ದೂರು ನೀಡಬೇಕಾದೀತು’ ಎಂದೆ. ‘ನಿನಗೆ ಯಾರೆಲ್ಲ  ಗೊತ್ತೋ ಅವರಿಗೆಲ್ಲಾ ಕಂಪ್ಲೆಂಟ್ ಮಾಡಿಕೋ ಹೋಗು’ ಎಂದು ಏಕವಚನದಲ್ಲೇ ತುಂಬಾ ಒರಟಾಗಿ ನಡೆದುಕೊಂಡರು.
ಇದೇ ಸಂದರ್ಭದಲ್ಲಿ ತುಂಬಾ ವಯಸ್ಸಾದ   ಅಜ್ಜ–ಅಜ್ಜಿ ಹಳಿ ದಾಟಲು ಪ್ರಯಾಸಪಡುತ್ತಿದ್ದರು. ಸಣ್ಣಗೆ ಸೋನೆ ಬೇರೆ ಸುರಿಯುತ್ತಿತ್ತು. ಇದನ್ನೆಲ್ಲ ದೂರದಿಂದ ಆ ಸ್ಟೇಷನ್‌ ಮಾಸ್ಟರ್‌  ನಿರ್ಭಾವುಕರಾಗಿ ನೋಡುತ್ತಿದ್ದರು. ಕಾಫ್ಕನ ಯಾವುದೋ ಕಾದಂಬರಿಯ ದೃಶ್ಯವೊಂದು ಭಾರತೀಯ ಆವೃತ್ತಿಯಲ್ಲಿ ಪುನರಭಿನಯವಾದಂತೆ ನನ್ನಲ್ಲಿ ಭಾಸವಾಯಿತು. ಇಂಥ ಪ್ರಯಾಣಿಕ ದ್ವೇಷಿ ಅಧಿಕಾರಿಯನ್ನು  ಯಾರಾದರೂ ಮೇಲಧಿಕಾರಿ ವಿಚಾರಿಸಿ ಬುದ್ಧಿ ಹೇಳಬಲ್ಲರೇ?

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.