ADVERTISEMENT

ಕಾರ್ಯಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 19:30 IST
Last Updated 26 ಜೂನ್ 2016, 19:30 IST

ಭಾರತದಲ್ಲಿ ಆದಾಯ ತೆರಿಗೆ ಕೇವಲ ಮಧ್ಯಮ ವರ್ಗ ಮತ್ತು ವೇತನ ಪಡೆಯುವವರ ಪಾಲಿಗಿದೆ ಎಂಬ ಡಾ. ಸುಬ್ರಮಣಿಯನ್‌ ಸ್ವಾಮಿ ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ. ಆದಾಯ ತೆರಿಗೆ ವಂಚಿಸುವುದು ಹೇಗೆ ಎಂಬುದು ಶ್ರೀಮಂತರಿಗೆ ಚೆನ್ನಾಗಿ ಗೊತ್ತು. ಬಡ ವರ್ಗದವರು ಆದಾಯ ತೆರಿಗೆ ಆವರಣಕ್ಕೇ ಬರುವುದಿಲ್ಲ. ಆದಾಯ ತೆರಿಗೆಯನ್ನು ನಿಷ್ಠೆಯಿಂದ ಪಾವತಿಸುತ್ತಿರುವವರು ನೌಕರರು. 

ಅವರ ನಂತರ ಮಧ್ಯಮ ವರ್ಗದ ಜನ ಅಷ್ಟೆ. ಸಂಬಳ ಪಡೆಯುವ ನೌಕರರೆಲ್ಲರೂ ಪ್ರಾಮಾಣಿಕರು. ಆದಕಾರಣ ಸಂಪೂರ್ಣ ತೆರಿಗೆ ಪಾವತಿ ಮಾಡುತ್ತಾರೆ ಎಂದೇನೂ ಭಾವಿಸಬೇಕಾಗಿಲ್ಲ. ವಂಚಿಸಲು ಸಾಧ್ಯವಿಲ್ಲದ್ದಕ್ಕೆ ಅವರು ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಮಾತೂ ಸತ್ಯ.  ಕಾರಣ ಏನೇ ಇರಲಿ, ನೌಕರರು ಮತ್ತು ಮಧ್ಯಮ ವರ್ಗದಿಂದಲೇ  ಸರ್ಕಾರಕ್ಕೆ ಆದಾಯ ಬರುತ್ತಿರುವುದು ಎಂಬುದು ದಿಟ.

‘ನಾನು ಸರ್ಕಾರದ ಭಾಗವಾಗಿದ್ದರೆ  ಆದಾಯ ತೆರಿಗೆಯನ್ನು ತೆಗೆದುಹಾಕಲು ಬರಿ 7 ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೆ’ ಎಂದು ಸ್ವಾಮಿ ಹೇಳಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಆದಾಯ ತೆರಿಗೆಯನ್ನು ತೆಗೆದುಹಾಕುವ ಪ್ರಯತ್ನ ಮಾಡಲಾಗುವುದು ಎಂದೂ ಭರವಸೆ ನೀಡಿದ್ದಾರೆ.  ಅವರಿಗೆ ನಿಜವಾಗಿಯೂ ಅಂಥ ಕಾಳಜಿ ಇರಬಹುದು. ಆದರೆ ಇದು ಜಾರಿಸಾಧ್ಯ ಎಂಬ ವಿಶ್ವಾಸ ಯಾರಿಗೂ ಮೂಡುತ್ತಿಲ್ಲ.

ಪ್ರತಿ ಬಾರಿ ಬಜೆಟ್‌ ಮಂಡಿಸಿದಾಗ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿರೀಕ್ಷೆ ಗರಿಗೆದರುತ್ತದೆ. ಕಣ್ಣೊರೆಸುವ ರೀತಿ ಚೂರು–ಪಾರು ವಿನಾಯಿತಿ ದೊರೆತರೆ ಅದೇ ಭಾಗ್ಯ ಎಂದು  ಜನರು ನಿಟ್ಟುಸಿರುಬಿಡುತ್ತಾರೆ.ಆದಾಯ ತೆರಿಗೆಯನ್ನು ಪೂರ್ತಿ ರದ್ದು ಮಾಡುವುದು  ಕನಸಿನ ಮಾತು. ಆದರೆ ವರ್ಷದಿಂದ ವರ್ಷಕ್ಕೆ ಅಗತ್ಯ ವಸ್ತು ಮತ್ತು ಸೇವೆಗಳ ಬೆಲೆ ಹೆಚ್ಚಳಕ್ಕೆ ಸರಿದೂಗುವಂತಾದರೂ ವಿನಾಯಿತಿ ಮಿತಿಯನ್ನು ವಿಸ್ತರಿಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT