ADVERTISEMENT

ಕಾಲದ ಮಹಿಮೆ...

​ಪ್ರಜಾವಾಣಿ ವಾರ್ತೆ
Published 22 ಮೇ 2015, 19:30 IST
Last Updated 22 ಮೇ 2015, 19:30 IST

ನಾನೊಬ್ಬ ಹಿರಿಯ ಕಲಾವಿದ, ಕುಶಲಕರ್ಮಿ. ಅಂದಿನ ಕಾಯಕ ಮುಗಿಸಿ ದೇವರಿಗೆ ವಂದಿಸಿ ಕಾಫಿ ಹೀರುತ್ತಾ ಕುಳಿತೆ. ನನ್ನ ಮಗಳು ಟಿ.ವಿ. ಹಾಕಿದಳು. ಧಾರಾವಾಹಿಯ ಅಂದಿನ ಕಂತು ಪ್ರಾರಂಭವಾಯಿತು.

ಗಂಡ– ಹೆಂಡತಿ ಒಂದು ಪಾರ್ಟಿಗೆ ಹೊರಡುತ್ತಾರೆ.  ಮಾರ್ಗಮಧ್ಯ ಚಪ್ಪಲಿ ಕಿತ್ತು ಹೋಗುತ್ತದೆ. ಅವರಲ್ಲಿ ಆತಂಕ ಶುರುವಾಗುತ್ತದೆ. ಇನ್ನೊಂದು ಜೋಡಿ ಗಂಡ– ಹೆಂಡತಿ ಬಂದು ‘ಬೇರೆ ಚಪ್ಪಲಿ ಇಲ್ಲವೇ?’ ಎಂದು ಕೇಳಿ, ಅನುಕಂಪ ತೋರಿ ಮುಂದೆ ನಡೆಯುತ್ತಾರೆ. ನಂತರ ಒಬ್ಬ ಕಾರಿನಲ್ಲಿ ಬಂದು ಇವರ ಸ್ಥಿತಿ ನೋಡಿ, ಬೇರೊಬ್ಬರಿಗೆ ಫೋನ್‌ ಮಾಡಿ ‘ಬೇಗ ಕಾರು ತೆಗೆದುಕೊಂಡು ಬಾ’ ಎಂದು ಹೇಳುತ್ತಾನೆ. ಇವರು ‘ಬೇಡ’ ಎನ್ನುತ್ತಾರೆ. ‘ಇದು ನನ್ನ ಕರ್ತವ್ಯ’ ಎಂದು ಆತ ಸಮಜಾಯಿಷಿ ನೀಡುತ್ತಾನೆ. ಚಪ್ಪಲಿ ರಿಪೇರಿಗಾಗಿ ಕಾರು ಬರುವ ನಿರೀಕ್ಷೆಯಲ್ಲಿರುತ್ತಾರೆ. ಅಲ್ಲಿಗೆ ಅಂದಿನ ಕಂತು ಮುಗಿಯುತ್ತದೆ.

ಮುಂದಿನ ಕಂತಿನಲ್ಲಿ ಕಾರು ಬಂತೆ? ಚಪ್ಪಲಿ ರಿಪೇರಿಯಾಯಿತೆ!  ಚಪ್ಪಲಿಯನ್ನು ಕಾರಿನ ಹಿಂಬದಿ ಸೀಟಿನಲ್ಲಿ ತೆಗೆದುಕೊಂಡು ಹೋದರೋ, ಮುಂದಿನ ಸೀಟಿನಲ್ಲಿಟ್ಟುಕೊಂಡು ಹೋದರೋ ಎಂಬುದನ್ನೆಲ್ಲ ಸದ್ಯ ನಾನು ನೋಡಲಿಲ್ಲ. ಅಸಂಬದ್ಧ, ಅವಿವೇಕಯುತ ಇಂತಹ ಧಾರಾವಾಹಿಗಳು ಬೇಕೆ? ಸಾಂಸ್ಕೃತಿಕ, ನೈತಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಗಾಳಿಗೆ ತೂರಿ, ಪರರ ಮನಸ್ಸನ್ನು ಗಾಸಿಗೊಳಿಸುವ; ಧಾರಾವಾಹಿ ಮುಂದುವರಿಕೆಗಾಗಿ ಸಮಸ್ಯೆಗಳನ್ನು ಹುಟ್ಟುಹಾಕುವ; ಸಾಮರಸ್ಯಕ್ಕೆ  ಧಕ್ಕೆ ತರುವ ಇಂತಹ ಟಿ.ವಿ. ಧಾರಾವಾಹಿಗಳನ್ನು ಜನ ಏಕೆ ತಿರಸ್ಕರಿಸುತ್ತಿಲ್ಲ!

ಅಂದು ನಾನು, ಸುಳ್ಳಾಡದ ಸತ್ಯ ಹರಿಶ್ಚಂದ್ರನನ್ನು, ವೀರ ಕನ್ನಡಿಗ ರಣಧೀರ ಕಂಠೀರವನನ್ನು ಹೀರೊ ಮಾಡಿದ ಚಿತ್ರಗಳನ್ನು ನೋಡಿ ಸಂತೋಷಪಟ್ಟಿದ್ದೆ. ಇಂದು ಕಾಡುಗಳ್ಳ ವೀರಪ್ಪನ್‌, ರೇಪಿಸ್ಟ್ ಉಮೇಶ್‌ ರೆಡ್ಡಿಯನ್ನು ಹೀರೊ ಮಾಡಿದ ಚಿತ್ರಗಳನ್ನು ನೋಡಿ ಸಂತೋಷಪಡುವ ಕಾಲ ಬಂದಿದೆ. ಕಾಲದ ಮಹಿಮೆ ಅಂದರೆ ಇದೇನಾ?
-ಚಿಕ್ಕಜೋಗಿಹಳ್ಳಿ ನಾಗರಾಜ್‌, ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.