ADVERTISEMENT

ಜೀವಕ್ಕೆ ಬೆಲೆ ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 19:30 IST
Last Updated 12 ಏಪ್ರಿಲ್ 2017, 19:30 IST
ಅರಣ್ಯ ಇಲಾಖೆಯವರ ಬೇಜವಾಬ್ದಾರಿತನಕ್ಕೆ ಬೆಳಗಾವಿಯಲ್ಲಿ ಇತ್ತೀಚೆಗೆ ದುರಂತ ಅಂತ್ಯ ಕಂಡ ಕೋತಿಯ ಕಥೆ ಒಂದು ನಿದರ್ಶನ. ಸೆರೆಹಿಡಿದ ಕೋತಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಅದು ಉಸಿರುಗಟ್ಟಿ ಸಾಯುವಂತೆ ಮಾಡಲಾಗಿದೆ. 
 
ಬುದ್ಧಿಜೀವಿ ಮನುಷ್ಯನ ದುರಾಸೆ, ಹೊಣೆಗೇಡಿತನದ ಮಧ್ಯೆ ಮೂಕಜೀವಿಗಳ ರೋದನ ಕೇಳುವವರಿಲ್ಲ. ಮೂಕ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲವೇ? ಅವುಗಳಿಗೂ ಬದುಕುವ ಹಕ್ಕಿಲ್ಲವೇ? 
ಮಂಜುಶ್ರೀ ಬಿ.ಆರ್., ಬೆಂಗಳೂರು
 
ಕೆರೆ ಹೂಳೆತ್ತಿ
ತೀವ್ರ ಬರಗಾಲದಿಂದ ಗ್ರಾಮೀಣ ಪ್ರದೇಶದ 40 ಸಾವಿರಕ್ಕೂ ಹೆಚ್ಚು ಕೆರೆಗಳು ಬತ್ತಿಹೋಗಿ ಹೂಳು ತುಂಬಿಕೊಂಡಿವೆ. ಮಳೆಗಾಲಕ್ಕೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಕೆರೆಗಳ ಹೂಳೆತ್ತುವ ಕೆಲಸವನ್ನು ಬಹುಬೇಗನೆ ಮಾಡಬೇಕಾಗಿದೆ. 
 
ಮಳೆಗಾಲದಲ್ಲಿ ಭೂಮಿಯೊಳಗೆ ನೀರು ಇಂಗಿ ಅಂತರ್ಜಲ ಹೆಚ್ಚಿಸುವಲ್ಲಿ ಕೆರೆಗಳ ಪಾತ್ರ ಪ್ರಮುಖವಾದುದು. ರಾಜ್ಯ ಸರ್ಕಾರ ಕೆರೆಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ಸರಿಯಾಗಿ ಅನುಷ್ಠಾನಗೊಳ್ಳದೆ ದುಂದುವೆಚ್ಚಗಳಿಗೆ ಕಾರಣವಾಗುತ್ತಿದೆ.
 
ಮೊದಲ ಕಂತಿನಲ್ಲಿ ಬಿಡುಗಡೆಯಾದ ಹಣದಲ್ಲಿ ಯಾವ ಕೆರೆಗಳ ಹೂಳೆತ್ತಲಾಗಿದೆ ಎಂಬ ಮಾಹಿತಿ ಜನರಿಗೆ ಇಲ್ಲ. ಉಳಿದ ಬಾಕಿ ಮೊತ್ತವನ್ನಾದರೂ ಸರ್ಕಾರ ಶೀಘ್ರವೇ ಬಿಡುಗಡೆ ಮಾಡಿ, ಕೆರೆಗಳ ಹೂಳೆತ್ತುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಲಿ.
ಮಧುಕುಮಾರ್,  ಬಿಳಿಚೋಡು
 
ಎಲ್ಲರದೂ ತಪ್ಪಿದೆ
‘ಹವಾಮಾನ ಇಲಾಖೆಯ ಮುನ್ಸೂಚನೆಗಳು ಕಾಟಾಚಾರಕ್ಕೆ ಕೊಡುವ ಅಂಶಗಳೆಂದು ಪರಿಗಣಿತವಾಗುತ್ತಿವೆಯೇ ಹೊರತು ಯಾರೂ ಅವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಲೇ ಇಲ್ಲ’ ಎಂದು ‘ಮಾಹಿತಿ ಇದೆ; ಪಕ್ಕಾ ಲೆಕ್ಕಾಚಾರವೆಲ್ಲಿ?’ ಎಂಬ ಲೇಖನದಲ್ಲಿ (ಸಂಗತ, ಏ. 7) ಆನಂದತೀರ್ಥ ಪ್ಯಾಟಿ ಹೇಳಿದ್ದಾರೆ. ಈ ಮಾತು ನಿಜವಾದರೂ ತಪ್ಪನ್ನೆಲ್ಲ ಇಲಾಖೆಯ ಮೇಲೇ ಹೊರಿಸುವುದು ತರವಲ್ಲ. 
 
60, 70ರ ದಶಕದಲ್ಲಿ ರೇಡಿಯೊದಲ್ಲಿ ವಾರ್ತೆಗಳ ಬಳಿಕ ಪ್ರಸಾರವಾಗುತ್ತಿದ್ದ ಹವಾಮಾನ ಕುರಿತ ಮಾಹಿತಿಯನ್ನು ಕೃಷಿಕರು ಕಾದು ಕುಳಿತು ಕೇಳುತ್ತಿದ್ದರು. ಇಲಾಖೆ ನೀಡುತ್ತಿದ್ದ ಮುನ್ಸೂಚನೆಗಳು ಬಹುತೇಕ ಸರಿಯಾಗಿಯೂ ಇರುತ್ತಿದ್ದವು.
 
ಸಾಮಾನ್ಯ ಕೃಷಿಕರೂ ಋತುಮಾನಗಳನ್ನು ಕುರಿತ ಅನುಭವಗಳನ್ನು ಆಧರಿಸಿ ಮಳೆ, ಬೆಳೆ ಕುರಿತು ನೀಡುತ್ತಿದ್ದ ಮಾಹಿತಿ ಹೆಚ್ಚುಕಡಿಮೆ ಇದಕ್ಕೆ ಹೊಂದಿಕೆಯಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಯಾವ ವೈಜ್ಞಾನಿಕ ತಂತ್ರಜ್ಞಾನ, ಸಾಂಪ್ರದಾಯಿಕ ಜ್ಞಾನವನ್ನು ಬಳಸಿಕೊಂಡರೂ ಪರಿಸರದಲ್ಲಿನ ಏರುಪೇರಿನಿಂದಾಗಿ ಹವಾಮಾನ ಕುರಿತು ನಿಖರ ವರದಿ ನೀಡುವುದು ಅಸಾಧ್ಯ. 
 
ಕಣ್ಮರೆಯಾಗಿರುವ ಅರಣ್ಯ ಸಂಪತ್ತು, ಗಣಿಗಾರಿಕೆಗೆ ಸಿಲುಕಿ ಕುಸಿದಿರುವ ಬೆಟ್ಟಗುಡ್ಡಗಳು, ವಾಹನಗಳ ಭರಾಟೆಯಲ್ಲಿ ಹೆಚ್ಚುತ್ತಿರುವ ಇಂಗಾಲದ ಅಂಶ, ಮುಚ್ಚಿಹೋಗಿರುವ ಕೆರೆಕಟ್ಟೆಗಳು, ಬತ್ತಿರುವ ನೀರಿನ ಮೂಲಗಳಿಂದ ಏರುತ್ತಿರುವ ತಾಪಮಾನದಂತಹ ಪರಿಸರ ಮಾಲಿನ್ಯದಿಂದ  ಹವಾಮಾನ ವೈಪರೀತ್ಯಗಳು ಉಂಟಾಗಿವೆ.

ಹೀಗಾಗಿ ಇದು ಇಲಾಖೆಯ ವೈಫಲ್ಯ ಮಾತ್ರವೇ ಅಲ್ಲ, ಮಾನವ ಹಿಡಿಯುತ್ತಿರುವ ವಿನಾಶದ ದಾರಿಗೆ ಮುನ್ಸೂಚನೆ ಎಂದರೂ ತಪ್ಪಿಲ್ಲ. ಪ್ರಕೃತಿಗೆ ಬಂದಿರುವ ಈ ದುರವಸ್ಥೆಯನ್ನು ಸರಿಪಡಿಸಿ ಸುಸ್ಥಿತಿಗೆ ತಂದಾಗ ಮಾತ್ರ ಹವಾಮಾನದಲ್ಲೂ ನಿಖರತೆ ಸಾಧಿಸಲು ಸಾಧ್ಯವಾಗಬಹುದೇನೊ.
ಜಿ.ಚಂದ್ರಶೇಖರ್, ಅರಕಲಗೂಡು
 
ಬಿಟ್ಟುಕೊಡಲು ಸಾಧ್ಯವೇ?
ಅಯೋಧ್ಯೆಯ ಬಾಬ್ರಿ ಮಸೀದಿ ವಿವಾದ ಕುರಿತು ದಂಡಿನ ಶಿವಕುಮಾರ ಅವರು ‘ಎರಡೂ ಬೇಡ’ ಎಂಬ ಕವನವನ್ನು ಬರೆದಿದ್ದಾರೆ (ವಾ.ವಾ., ಏ. 11). ಈ ಕುರಿತು ನನ್ನ ಮನದಲ್ಲಿ ಮೂಡಿದ ಒಂದು ಸರಳ ಪ್ರಶ್ನೆಯನ್ನು ಕೇಳ ಬಯಸುತ್ತೇನೆ. 
 
ಒಂದು ವೇಳೆ ಯಾರಾದರೂ ನಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ಆ ಮನೆಯನ್ನು ಧ್ವಂಸಗೊಳಿಸಿ, ತಮ್ಮ ಸ್ವಾಯತ್ತತೆಯನ್ನು ಸಾಧಿಸಲು ಹೊರಟರೆ ನಾವು ಏನು ಮಾಡುತ್ತೇವೆ? ಆಗ ನಮಗಿರುವುದು ಒಂದೇ ದಾರಿ, ಅವರ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನೇರುವುದು.
 
ಒಂದು ವೇಳೆ ಈ ಹಂತದಲ್ಲಿ ಯಾರಾದರೂ ಮಧ್ಯ ಪ್ರವೇಶಿಸಿ, ಈ ಸ್ಥಳದಲ್ಲಿ ಇಬ್ಬರಿಗೂ ಮನೆ ಬೇಡ, ಈ ವಿವಾದವನ್ನು ಶಾಶ್ವತವಾಗಿ ಕೊನೆಗಾಣಿಸಲು ಇಲ್ಲಿ ಒಂದು ಸುಂದರವಾದ ಉದ್ಯಾನ ಅಥವಾ ಸಾರ್ವಜನಿಕರಿಗೆ ಉಪಯುಕ್ತವಾಗುವ ಕಟ್ಟಡವನ್ನು ನಿರ್ಮಿಸೋಣ ಎಂದು ಸಲಹೆ ಕೊಟ್ಟರೆ ಆಗ ನಾವೇನು ಮಾಡುತ್ತೇವೆ?
 
ತಾವು ಕಷ್ಟಪಟ್ಟು ಸ್ವಂತ ದುಡಿಮೆಯಿಂದ ಕಟ್ಟಿಸಿದ ಮನೆಯನ್ನು ಯಾರಾದರೂ ಸುಖಾಸುಮ್ಮನೆ ಇನ್ನೊಬ್ಬರಿಗೆ ಬಿಟ್ಟುಕೊಡಲು ಸಾಧ್ಯವೇ? 
ನ್ಯಾಯವೆಂದರೆ ಬರೀ ಸಮಾನತೆಯಲ್ಲ, ಹೊಂದಾಣಿಕೆಯೂ ಅಲ್ಲ. ಯಾರಿಗೆ  ನಿಜವಾಗಿಯೂ ಏನು ಸಲ್ಲಬೇಕೋ ಅದನ್ನು ಅಥವಾ ಅವರವರ ಹಕ್ಕುಗಳನ್ನು ದೊರಕಿಸಿಕೊಡುವುದೇ ನ್ಯಾಯ.
ರಿಯಾಝ್ ಅಹ್ಮದ್, ರೋಣ 
 
ಕೈತಪ್ಪುತ್ತಿದೆ ಪರೀಕ್ಷೆ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ 2ರಿಂದ ನಡೆಸಲಿರುವ ಸಂಗೀತ ಪರೀಕ್ಷೆಯನ್ನು ದ್ವಿತೀಯ ಪಿಯುಸಿ ಓದುತ್ತಿರುವ ವಿಜ್ಞಾನ ವಿದ್ಯಾರ್ಥಿಗಳು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಈ ಅವಧಿಯಲ್ಲೇ ಅವರಿಗೆ ಸಿಇಟಿ ಹಾಗೂ ನೀಟ್‌ ಪರೀಕ್ಷೆಗಳು ನಡೆಯಲಿವೆ.

ಹೀಗಾಗಿ ಮೂರ್ನಾಲ್ಕು ವರ್ಷಗಳಿಂದ ಸಂಗೀತ ಅಭ್ಯಾಸ ನಡೆಸಿ ಪರೀಕ್ಷೆ ಬರೆಯಲು ಬಯಸಿರುವ ವಿದ್ಯಾರ್ಥಿಗಳು ಎರಡನ್ನೂ ಒಟ್ಟಿಗೇ ನಿಭಾಯಿಸಲು ಸಾಧ್ಯವಾಗದೆ ಸಂಗೀತ ಪರೀಕ್ಷೆಯಿಂದ ವಂಚಿತರಾಗುತ್ತಿದ್ದಾರೆ. ಈ ತೊಂದರೆಯನ್ನು ಸರಿದೂಗಿಸಲು ಪರೀಕ್ಷಾ ಮಂಡಳಿ ಸಂಗೀತ ಪರೀಕ್ಷೆಯ ದಿನಾಂಕವನ್ನು ಮುಂದೂಡಬೇಕು.
ಸಂಗೀತ ಪರೀಕ್ಷೆಯಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿ  ವೃಂದ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.