ADVERTISEMENT

ತರಬೇತಿ ಮುಂದೂಡಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
ತರಬೇತಿ ಮುಂದೂಡಿ
ತರಬೇತಿ ಮುಂದೂಡಿ   

ಪದವಿ ಪೂರ್ವ ಶಿಕ್ಷಣ ಇಲಾಖೆಯು 250 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ಎಲ್ಲಾ ಉಪನ್ಯಾಸಕರುಗಳಿಗೆ ‘ಟಾಲ್ಪ್‌’ (ತಂತ್ರಜ್ಞಾನ ಆಧರಿತ ಕಲಿಕಾ ಕಾರ್ಯಕ್ರಮ) ಯೋಜನೆಯಡಿ ಶೈಕ್ಷಣಿಕ ವರ್ಷದ ಮಹತ್ವಪೂರ್ಣ ಅವಧಿಯಲ್ಲಿ ಹತ್ತು ದಿನಗಳ ವಸತಿ ಸಹಿತ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.

ನವೆಂಬರ್‌ 20ರಿಂದ ಮಧ್ಯವಾರ್ಷಿಕ ಪರೀಕ್ಷೆಗಳು ನಿಗದಿಯಾಗಿವೆ. ಅಷ್ಟರೊಳಗೆ ಶೇ 50ರಷ್ಟು ಪಠ್ಯ ಮುಕ್ತಾಯವಾಗಬೇಕು. ಆನಂತರ, ಜನವರಿ 8ರಿಂದ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ಅಂದರೆ ಶೇ 50ಪಠ್ಯವನ್ನು ನಾಲ್ಕು ತಿಂಗಳಲ್ಲಿ ಮುಗಿಸಿ, ಡಿಸೆಂಬರ್‌ ಒಂದೇ ತಿಂಗಳಿನಲ್ಲಿ ಇನ್ನುಳಿದ ಶೇ 50ರಷ್ಟು ಪಠ್ಯವನ್ನು ಮುಗಿಸಬೇಕಾದ ಒತ್ತಡ ಉಪನ್ಯಾಸಕರ ಮೇಲಿದೆ. ಹಾಗೆಯೇ ವಿದ್ಯಾರ್ಥಿಗಳ ಮನಸ್ಥಿತಿ ಅರ್ಥವಾಗಿದೆಯೇ ಪದವಿ ಪೂರ್ವ ಶಿಕ್ಷಣ ಇಲಾಖೆಗೆ? ಇಲಾಖೆ ನಿರ್ದೇಶಕರು ಕೇವಲ ಒಂದು ತಿಂಗಳು ಓದಿ ಐ.ಎ.ಎಸ್‌. ಉತ್ತೀರ್ಣರಾದರೇನೊ?

ಇಷ್ಟು ಒತ್ತಡದ ನಡುವೆ ವಿಜ್ಞಾನ ವಿಭಾಗದ ಎಲ್ಲಾ ಉಪನ್ಯಾಸಕರುಗಳಿಗೆ ‘ಟಾಲ್ಪ್‌’ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ, ಅದೂ 10 ದಿನಗಳ ವಸತಿ ಸಹಿತ ತರಬೇತಿ. 250 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ಎಲ್ಲಾ ಉಪನ್ಯಾಸಕರುಗಳು ತರಬೇತಿಗೆ ಹಾಜರಾದರೆ ಇಷ್ಟು ಕಾಲೇಜುಗಳ ವಿಜ್ಞಾನ ವಿಭಾಗಗಳಿಗೆ ರಜೆ ಕೊಡಬೇಕು. ಈ ಕಾಲೇಜುಗಳಿಗೆ ಬೇರೆಯವರನ್ನು ನಿಯೋಜನೆ ಮಾಡಿ ಎಂದು ಆದೇಶಿಸಿರುವುದು ನಿಜ, ನಿಯೋಜಿತ ಕಾಲೇಜುಗಳ ಉಪನ್ಯಾಸಕರುಗಳು ಎಷ್ಟು ನ್ಯಾಯ ಒದಗಿಸಬಹುದು? ಕಾಲೇಜುಗಳ ಉಪನ್ಯಾಸಕರುಗಳಿಗೆ ಹೀಗೆ ಅವೈಜ್ಞಾನಿಕ ರೀತಿಯ ತರಬೇತಿ, ಆಯೋಜನೆಗಳನ್ನು ಮಾಡುತ್ತ ಹೋದರೆ ಸರ್ಕಾರಿ ಕಾಲೇಜುಗಳು ಮುಚ್ಚದೇ ಇನ್ನೇನಾಗುತ್ತವೆ? ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ಸೇರದೆ ಇನ್ನೇನು ಮಾಡುತ್ತಾರೆ?

ADVERTISEMENT

ಈ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಿ, ಏಪ್ರಿಲ್‌– ಮೇ ತಿಂಗಳಿನಲ್ಲಿ ಆಯೋಜನೆ ಮಾಡುವುದು ಸೂಕ್ತ. ಇಲಾಖೆ ನಿರ್ದೇಶಕರು ಈ ಬಗ್ಗೆ ಕ್ರಮವಹಿಸಬೇಕು.

–ವಸುಂಧರಾ, ಚನ್ನರಾಯಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.