ADVERTISEMENT

ತಾತ್ಸಾರವೇಕೆ?

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

ಕೆಲ ದಿನಗಳ ಹಿಂದೆ ಕುಶಾಲನಗರ ಸಮೀಪದ ಕೂಡಿಗೆ ಆಸ್ಪತ್ರೆಗೆ ಬೈಕಿನಲ್ಲಿ ಹೋಗಿ ಬರುತ್ತಿದ್ದೆ. ದಾರಿ ಮಧ್ಯೆ ಕೂಡ್ಲೂರು ಎಂಬಲ್ಲಿ ರಸ್ತೆ ಪಕ್ಕದಲ್ಲೇ ಅಂಗಡಿ ಮಳಿಗೆಯೊಂದಕ್ಕೆ ಹೊಂದಿಕೊಂಡಂತಿದ್ದ ಮನೆಯಿಂದ, ತೆವಳಿಕೊಂಡು ಬರುತ್ತಿದ್ದ ಅಜ್ಜಿಯೊಂದು ನಿತ್ರಾಣದಿಂದ ಆಯತಪ್ಪಿ ಮನೆ ಮುಂದಿದ್ದ ಚರಂಡಿಗೆ ಬಿತ್ತು. ಕೂಡಲೇ ನಾನು ಬೈಕ್ ನಿಲ್ಲಿಸಿ ಹೋಗಿ ಅಜ್ಜಿಯನ್ನು ಮೇಲೆತ್ತಿ ಕೂರಿಸಿ ನೋಡಿದೆ. ಅಜ್ಜಿಯ ಕೈ ಕಾಲುಗಳಿಗೆ ಬಲವಾಗಿ ಪೆಟ್ಟು ಬಿದ್ದು ರಕ್ತ ಸೋರುತ್ತಿತ್ತು.  ಮುಂದಿನ ಅಂಗಡಿಯಲ್ಲಿದ್ದ ಅಜ್ಜಿಯ ಮಗನನ್ನು ಕರೆದು ತೋರಿಸಿದೆ.

ಬಿದ್ದ ಅವ್ವನನ್ನು ಕಂಡ ಮಗ ನೀರನ್ನೂ ಕುಡಿಸದೆ ‘ನೀನಿನ್ನೂ ಸಾಯದೆ ಯಾಕೆ ಬದುಕಿದ್ದೀಯ. ಬೇಗ ಸಾಯಬಾರದೇ’ ಎಂದು ನಿಷ್ಕರುಣೆಯಿಂದ ನಿಂದಿಸತೊಡಗಿದ. ಅರಿಶಿಣ ಪುಡಿಯನ್ನಾದರೂ ಗಾಯಕ್ಕೆ ಹಾಕಲು ಕೇಳಿದೆ. ‘ಸಾಯಲಿ ಬಿಡಮ್ಮ. ಇವರು ಬದುಕಿ ಏನು ಸಾಧಿಸಬೇಕು? ನಮಗೆ ಸುಮ್ಮನೆ ತೊಂದರೆ ಕೊಡುತ್ತಾರೆ. ನಾವು ಎರಡೊತ್ತೂ ಇವರ ಮುಂದೆಯೇ ಕೂರಲು ಸಾಧ್ಯವೇ’ ಎಂದ.

ತಕ್ಷಣ ನನಗೆ ಸತ್ತಿರುವ ನಮ್ಮಜ್ಜಿ ತಾತನ ನೆನಪಾಗಿ ಕಣ್ಣಲ್ಲಿ ನೀರು ಬಂದಿತು. ತಾಯಿ ತನ್ನ ಮಗುವನ್ನು ಒಂಬತ್ತು ತಿಂಗಳು ಹೊತ್ತು ಹೆರುವಾಗ ಮರು ಜನ್ಮವನ್ನೇ ಪಡೆಯು ತ್ತಾಳೆ. ಬಳಿಕ ತನ್ನೆಲ್ಲಾ ಸಂತೋಷ, ಪ್ರೀತಿಯನ್ನೆಲ್ಲ ತುಂಬಿ ಸಾಕಿ ಸಲಹುತ್ತಾಳೆ. ಅದೇ ತಾಯಿ ಶಕ್ತಿಗುಂದಿ ವೃದ್ಧಾಪ್ಯಕ್ಕೆ ಬಂದಾಗ ಮಕ್ಕಳೇಕೆ ತಾತ್ಸಾರದಿಂದ ಕಾಣುತ್ತಾರೆ?
- ಸುಪ್ರೀತ ರವಿ, ಕುಶಾಲನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.