ADVERTISEMENT

ದಲಿತರು ಮನುಷ್ಯರಲ್ಲವೇ?

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ರಾಜಕಾರಣಿಗಳಿಗೆ ಥಟ್ಟನೆ ನೆನಪಿಗೆ ಬರುವವರು ‘ಸಾಲಿಡ್ ವೋಟ್ ಬ್ಯಾಂಕ್‌’ ಆದ ದಲಿತರು.  ದಲಿತರ ಮನೆಯಲ್ಲಿ ತಿಂಡಿ ತಿಂದೆವು, ಊಟ ಮಾಡಿದೆವೆಂಬ ಖಾತರಿಗೆ ಫೋಟೊ ತೆಗೆಸಿಕೊಂಡು ಬೀಗುವ ರಾಜಕಾರಣಿಗಳಿಗೆ ಮೇಲ್ಜಾತಿ ಅರ್ಬುದ ಬಡಿದಂತಿದೆ. 
 
ನಾಯಕರೇ, ದಲಿತರು, ನಿಮ್ಮ ಹಾಗೆ ಮನುಷ್ಯರಲ್ಲವೇ?  ನಿಮಗೇನು ಕೊಂಬು, ಬಾಲ ಇದೆಯೇ!? ಜಾತ್ಯತೀತ ದೇಶದಲ್ಲಿದ್ದೂ ದಲಿತರೆಂದು ಕರೆದೇಕೆ ಅವರನ್ನು ಅಪಮಾನಿಸುತ್ತೀರಿ?  ಅವರ ಮನೆಯಲ್ಲಿ ನಿಮ್ಮಂತಹ ಜಾತಿಗೇಡಿಗಳು ಉಣ್ಣುವುದೇ ಅವರ ಸೌಭಾಗ್ಯವೇ?
 
ಒಂದು ಹೊತ್ತಿನ ಊಟಕ್ಕೂ ತತ್ವಾರವಿರುವ ಮನೆಗಳಿಗೆ ಹಿಂಡು–ದಂಡು ಕಟ್ಟಿಕೊಂಡು ಪ್ರಚಾರಕ್ಕಾಗಿ ಅಲೆವ ನಿಮಗೆ, ಸಾಲ ಮಾಡಿ ಹೋಟೆಲ್‌ನಿಂದ ತರಿಸಿ ಅತಿಥಿ ಸತ್ಕಾರ ಮಾಡುವ ಸಂಕಷ್ಟಕ್ಕೆ ಅವರನ್ನು ತಳ್ಳುವಿರಿ.  ನೀವು ಅಲ್ಲಿ ತಿಂದು ತೇಗುವುದೇ ದಲಿತೋದ್ಧಾರವೇ?  ಪ್ರಗತಿಪರರಂತೆ ಪೋಸು ಕೊಡುವ ಕೆಲವು ಮಠಾಧೀಶರಿಗೂ ಮೇಲ್ಜಾತಿರೋಗ ಉಲ್ಬಣಿಸಿ ವರ್ಷಗಳೇ ಆಗಿವೆ.  
 
ದಲಿತರೊಡನೆ ಉಣ್ಣುವುದು, ಅವರ ಕೇರಿಗಳಲ್ಲಿ ಪಾದಯಾತ್ರೆ ಮಾಡುವುದರ ಬದಲು ನಿಮ್ಮ ಎ.ಸಿ. ಮಠಗಳಿಗೆ, ನಿಮ್ಮ ಎ.ಸಿ. ಮನೆಗಳಿಗೇ ಅವರನ್ನು ಕರೆಸಿಕೊಂಡು ತಿಂದುಣ್ಣುವುದು ಕೂಡ ಸಮಾನತೆ, ಪ್ರಗತಿಪರತೆಯ ದ್ಯೋತಕ ಎಂದು ನಿಮಗೇಕೆ ಅನ್ನಿಸದು? ಉಣ್ಣುವುದರಿಂದ ಜಾತಿ ಹೋಗದು.  ಅದರ ಬದಲು ದಲಿತರ ಮನೆಯಲ್ಲಿ ಸಂಬಂಧ ಬೆಳೆಸಿ, ಮದುವೆ ಊಟ ಮಾಡಿ. ಆ ಬಳಿಕ ಪೋಸು ಕೊಡಿ.
ಡಾ. ಬಿ.ಎಲ್. ವೇಣು, ಚಿತ್ರದುರ್ಗ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.