ADVERTISEMENT

ಪೆಚ್ಚಾದ ಪ್ರಸಂಗ!

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:30 IST
Last Updated 14 ಮಾರ್ಚ್ 2017, 19:30 IST

ಇತ್ತೀಚೆಗೆ ವಾರದ ರಜೆ ಇದ್ದುದರಿಂದ ಬೈಕ್ ಸರ್ವಿಸ್‌ಗೆ ಬಿಡಲು ಗ್ಯಾರೇಜ್‌ಗೆ ಹೋಗಿದ್ದೆ. ಅಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಿರಿಯರೊಬ್ಬರು ಕೆಲಸ ಮಾಡುತ್ತಿದ್ದರು. ಹಾಗೇ ಅವರನ್ನು ಮಾತಿಗೆಳೆದು ‘ಏನ್ ಭಯ್ಯಾ ಟಿ.ವಿ.ಯಲ್ಲಿ ಸರಿಗಮಪ ನೋಡುತ್ತೀರಾ’ ಎಂದು ಕೇಳಿದೆ. ಆ ಮಾತಿಗೆ ‘ಹಾ ಜೀ ಗೊತ್ತಾಯಿತು ಬಿಡಿ. ನೀವು ಆ ಹುಡುಗಿ ಹಾಡಿಂದು ಬಗ್ಗೆ ಕೇಳ್‌ತಿದ್ದೀರಾ, ಏನ್ ತಪ್ಪಿದೆ ಹಾಡೋದ್ರಲ್ಲಿ. ಅವಳ ಇಷ್ಟ ಅದು’ ಎಂದರು.

ಹಾಗೆಯೇ ಮಾತು ಮುಂದುವರಿಯಿತು, ಆಗ ನಾನು ‘ಯಾಕೆ ನಿಮ್ಮವರು ಹಾಗೆ ಮಾಡುತ್ತಾರೆ, ಜೀವ ಬೆದರಿಕೆ ಹಾಕುತ್ತಾರೆ. ಅದು ತಪ್ಪಲ್ವ’ ಎಂದೆ. ಅದಕ್ಕವರು ‘ನೀವೇ ನಮ್ಮವರು ನಿಮ್ಮವರು ಎಂದು ಭೇದ ಮಾಡುತ್ತೀರಲ್ಲ. ಆ ರೀತಿಯೇ ಹಿಂದೂ ದೇವರ ಹಾಡು, ಮುಸ್ಲಿಂ ದೇವರ ಹಾಡು ಅಂತ ಅವರೂ ಭೇದ ಮಾಡಿದ್ದಾರಷ್ಟೆ’ ಎಂದರು.

ಆ ಮಾತು ಕೇಳಿ ನನಗೆ ಮುಖಕ್ಕೆ ಹೊಡೆದಂತಾಯಿತು. ಪೆಚ್ಚಾಗಿ ನಿಂತೆ. ‘ಎಲ್ಲಾ ದೇವರೂ ಒಂದೇ ಎಂದು ಅವರಿಗೆ ತಿಳಿದಿಲ್ಲ. ಅಂತಹ ಕೆಲವು ಮಂದಿ ಮಾಡಿರೋ ಕೆಲಸ ಅದು ಅಷ್ಟೆ. ಆ ಮಾತ್ರಕ್ಕೆ ಮುಸ್ಲಿಮರೆಲ್ಲರೂ ಧರ್ಮಾಂಧರು ಅನ್ನೋ ತರ ಕೆಲವು ಮಾಧ್ಯಮಗಳು ತೋರಿಸ್ತವೆ. ಯಾವ್ದೂ ನ್ಯೂಸ್ ಇಲ್ಲ ಅಂತ ನಾಲ್ಕು ದಿನ ಅದ್ನೇ ತೋರಿಸಿದ್ರು. ಇವತ್ತು ಎಲೆಕ್ಷನ್‌ದು ಹಿಡಕೊಂಡಾರೆ. ಅವರು ಅದನ್ನ ಅಷ್ಟು ದೊಡ್ಡ ಸುದ್ದಿ ಮಾಡೋದು ಬೇಕಿತ್ತಾ?’ ಎಂದರು.

ADVERTISEMENT

‘ಇನ್ನು ಬೆದರಿಕೆ ಹಾಕಿದವರು, ಇವಳು ಅಮಾಯಕಿ ಅನ್ನೋ ಕಾರಣಕ್ಕೆ ಹಾಕಿದಾರೆ. ಅದೇ ದೊಡ್ಡ ದೊಡ್ಡವರ ಮೇಲೆ ಹಾಕ್ಲಿ. ಅವರು ಸುಮ್ನೆ ಬಿಡ್ತಾರಾ!’ ಎಂದರು. ಹೌದು, ಯಾರೋ ಕೆಲವರು ಹಾಕಿದ ಬೆದರಿಕೆಗೆ ಇಡೀ ಧರ್ಮದ ಜನರನ್ನು ದೂಷಿಸುವುದು ಎಷ್ಟು ಸರಿ? ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬದಲಾಗಬೇಕಿದೆ. ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲವನ್ನೂ ಜಾತಿ, ಧರ್ಮದ ದೃಷ್ಟಿಕೋನದಲ್ಲಿ ಪ್ರತ್ಯೇಕಿಸಿ ನೋಡುವುದನ್ನು ಬಿಡಬೇಕು. ಆಗ ಮಾತ್ರವೇ ಕಲೆ, ಸಂಗೀತದಂಥ ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳು ಬೆಳೆಯಲು ಸಾಧ್ಯ.
-ಜಯಪ್ರಕಾಶ್ ಬಿರಾದಾರ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.