ADVERTISEMENT

ಪ್ರಯಾಣಿಕರಿಗೆ ಅನನುಕೂಲ ತಪ್ಪಿಸಿ

ಶಿವರಾಜ್ ಮೂಲೆಮನೆ, ಮಸ್ಕಿ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಮೊನ್ನೆ (ಏ. 18) ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸಿಂಧನೂರಿನಿಂದ ಶಿರಾಗೆ ಪ್ರಯಾಣ ಮಾಡುತ್ತಿದ್ದೆ. ಬಸ್ಸು ರಾಂಪುರ ಸಮೀಪ ಬಂದಾಗ ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿತು. ನಿರ್ವಾಹಕರು ಮತ್ತೊಂದು ಬಸ್ಸಿನಲ್ಲಿ ಕಳುಹಿಸುವುದಾಗಿ ತಿಳಿಸಿದರು. 20 ನಿಮಿಷಗಳ ನಂತರ ಬಂದ ಬಸ್ಸಿನ ನಿರ್ವಾಹಕ 5 ಜನರನ್ನು ಮಾತ್ರ ಹತ್ತಿಸಿಕೊಳ್ಳಲು ಸಾಧ್ಯ ಎಂದು ಹೇಳಿ ಸೀಟು ಖಾಲಿ ಇದ್ದರೂ 5 ಜನರನ್ನು ಮಾತ್ರ ಹತ್ತಿಸಿಕೊಂಡು ಹೊರಟೇಬಿಟ್ಟ. ಮತ್ತೆ 30 ನಿಮಿಷಗಳ ನಂತರ ಬಂದ ಬಸ್ಸಿನ ನಿರ್ವಾಹಕ ಕೂಡಾ 5 ಜನರನ್ನು ಮಾತ್ರ ಹತ್ತಿಸಿಕೊಳ್ಳು­ವುದಾಗಿ ತಿಳಿಸಿ ಹೊರಡುವುದರಲ್ಲಿದ್ದ, ನಾವು ಬಿಡದೇ ವಾಗ್ವಾದ ನಡೆಸಿ ಬಸ್ಸು ಏರಿದೆವು.

ಹೀಗೆ ಪ್ರತೀ ಬಸ್ಸಿನವರೂ 5 ಮಂದಿಯನ್ನು ಮಾತ್ರ ಹತ್ತಿಸಿಕೊಂಡು ಹೋದರೆ ಉಳಿದ ಉಳಿದ ಪ್ರಯಾಣಿಕರ ಗತಿ ಏನು? ಮತ್ತೆ ಒಂದೂ ಬಸ್ಸು ಬರದಿದ್ದರೆ ಅವರೆಲ್ಲಾ ಹೇಗೆ ತೆರಳುವುದು? ಅದರಲ್ಲಿದ್ದ ಮಹಿಳೆಯರ ಹಾಗೂ ವಯೋವೃದ್ಧರ ಪಾಡೇನು?

ಸಾರಿಗೆ ನಿಗಮದ  ಮಾನ್ಯ ನಿರ್ದೇಶಕರೇ, ಈ ರೀತಿ ಅನನುಕೂಲ ಉಂಟಾದ ಬಸ್ಸಿನ 5 ಮಂದಿಯನ್ನು ಮಾತ್ರ ಹತ್ತಿಸಿಕೊಂಡು ಹೋಗ­ಬೇಕೆಂಬ ನಿಯಮವಿದೆಯೇ? ಇದ್ದರೆ ಈ ಕೂಡಲೇ ಆ ನಿಯಮವನ್ನು ಪರಿಷ್ಕರಿಸಿ. ಇಂತಹ ನಿಯಮ ಇಲ್ಲದಿದ್ದರೆ; ಆಕಸ್ಮಿಕವಾಗಿ      ಒದಗುವ ತೊಂದರೆ ಸಮಯದಲ್ಲಿ ಪ್ರಯಾಣಿಕ ಸ್ನೇಹಿಯಾಗಿ ವರ್ತಿಸುವಂತೆ  ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.