ADVERTISEMENT

ಪ್ರಾಧಿಕಾರದ ಅಗತ್ಯ?

ಡಾ.ಎಸ್‌.ವಿದ್ಯಾಶಂಕರ, ಬೆಂಗಳೂರು
Published 29 ಮಾರ್ಚ್ 2015, 19:30 IST
Last Updated 29 ಮಾರ್ಚ್ 2015, 19:30 IST

ಮುಖ್ಯಮಂತ್ರಿಯವರು, 2015–16ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ, ದೇವರ ದಾಸಿಮಯ್ಯ ಪ್ರಾಧಿಕಾರ ರಚನೆಯ ಘೋಷಣೆ ಮಾಡಿರುವರು. ಯಾವುದೇ ಪ್ರಾಧಿಕಾರದ ರಚನೆಯ ಸಂದರ್ಭದಲ್ಲಿ ಅದರ ಕಾರ್ಯವ್ಯಾಪ್ತಿ, ಪ್ರಯೋಜನಗಳ ಮುಂಗಾಣ್ಕೆ ಇರುತ್ತದೆ. ಉದಾಹರಣೆಗೆ ಕೂಡಲಸಂಗಮ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಮಲೆಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರ ಇತ್ಯಾದಿಗಳಿಗೆ ಅವುಗಳದೇ ಆದ ಕರ್ತವ್ಯ, ಜವಾಬ್ದಾರಿಗಳಿವೆ.

ಆದರೆ, ಮುದನೂರಿನ ದೇವರ ದಾಸಿಮಯ್ಯನ ಹೆಸರಿನಲ್ಲಿ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಪ್ರಾಧಿಕಾರ ರಚನೆಯ ಸಾರ್ಥಕತೆ ಏನಿದೆ? ದೇವರ ದಾಸಿಮಯ್ಯ ಮುದನೂರಿನವನಲ್ಲ, ಅವನ ಕಾರ್ಯಕ್ಷೇತ್ರವಾಗಿದ್ದುದು ಪೊಟ್ಟಲಕೆರೆ (ಈಗಿನ ತೆಲಂಗಾಣದ  ಪಟಾನ್‌ಚೆರು). ಅವನು ವಚನಕಾರನಲ್ಲ.

ಮುದನೂರಿನವನು ಜೇಡರ ದಾಸಿಮಯ್ಯ, ವೃತ್ತಿಯಲ್ಲಿ ನೇಕಾರ, ರಾಮನಾಥ ಅಂಕಿತದಲ್ಲಿ ವಚನಗಳನ್ನು ರಚಿಸಿ ಸದ್ಯಕ್ಕೆ ಆದ್ಯ ವಚನಕಾರನೆನ್ನಿಸಿಕೊಂಡವನು. ಅವನ 176 ವಚನಗಳನ್ನು ಸರ್ಕಾರ ಪ್ರಕಟಿಸಿದೆ. ಕನ್ನಡಕ್ಕೆ ಶ್ರೇಷ್ಠ ಮಾದರಿಯ ವಚನಗಳನ್ನು ಬರೆದು ಮುಂದಿನವರಿಗೆ ಪ್ರೇರಣೆ ನೀಡಿದ ಜೇಡರ ದಾಸಿಮಯ್ಯನನ್ನು, ಅವನ ಕೊಡುಗೆಯನ್ನು ನೆನೆಯಲು ಹಲವು ಮಾರ್ಗಗಳಿವೆ. ವಚನಕಾರ ಜೇಡರ ದಾಸಿಮಯ್ಯ ಎಂದು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲವೆಂದು ತೋರುತ್ತದೆ.

ದೇವರ ದಾಸಿಮಯ್ಯನ ಹೆಸರಿನಲ್ಲಿ ಪೀಠ, ಜಯಂತಿ ಮಾಡಲು ಹೊರಟ ಸರ್ಕಾರ ಈಗ ಪ್ರಾಧಿಕಾರ ರಚನೆಯ ಆಲೋಚನೆಯಲ್ಲಿದೆ. ದೇವರ ದಾಸಿಮಯ್ಯ ಪ್ರಾಧಿಕಾರ ರಚನೆಯ ಅಗತ್ಯವಾದರೂ ಏನಿದೆ? ಅದರಿಂದ ಯಾರಿಗೆ ಪ್ರಯೋಜನ? ಇದರ ಉದ್ದೇಶವಾದರೂ ಏನು? ಮತ್ತೊಂದು ಬಿಳಿಯಾನೆಯನ್ನು ಸಾಕಲು ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.